ಹೀಟ್ ವೇವ್ ಕಾರಣದಿಂದ 2024 ರಲ್ಲಿ ಭಾರತದಲ್ಲಿ ಆಹಾರ ಪದಾರ್ಥಗಳ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿದ್ದು, ವರ್ಷದ ಎರಡನೇ ತ್ರೈಮಾಸಿಕದಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಗಳು ಶೇಕಡಾ 80 ಕ್ಕಿಂತ ಹೆಚ್ಚು ಏರಿಕೆಯಾಗಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.ಬಾರ್ಸಿಲೋನಾ ಸೂಪರ್‌ಕಂಪ್ಯೂಟಿಂಗ್ ಸೆಂಟರ್‌ನ ಮ್ಯಾಕ್ಸಿಮಿಲಿಯನ್ ಕೋಟ್ಜ್ ನೇತೃತ್ವದಲ್ಲಿ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್, ಪಾಟ್ಸ್‌ಡ್ಯಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್ ಮತ್ತು ಯುಕೆಯ ಫುಡ್ ಫೌಂಡೇಶನ್‌ನ ಸಂಶೋಧಕರನ್ನು ಒಳಗೊಂಡ ಈ ಅಧ್ಯಯನವು 2022 ಮತ್ತು 2024 ರ ನಡುವೆ 18 ದೇಶಗಳಲ್ಲಿ 16 ತೀವ್ರ ಹವಾಮಾನ ಆಧಾರಿತ ಆಹಾರ ಬೆಲೆಗಳ ಏರಿಳಿತಗಳ ಬಗ್ಗೆ ಅಧ್ಯಯನ ನಡೆಸಿತ್ತು.
ಭಾರತದಲ್ಲಿ, ಮೇ ತಿಂಗಳಿನ ಹೀಟ್ ವೇವ್ ನಂತರ 2024 ರ ಎರಡನೇ ತ್ರೈಮಾಸಿಕದಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆಯ ಬೆಲೆ ಶೇಕಡಾ 80 ಕ್ಕಿಂತ ಹೆಚ್ಚು ಜಿಗಿದಿದೆ, ಇದು ವಿಶಿಷ್ಟ ಘಟನೆಯಾಗಿದ್ದು, ಹವಾಮಾನ ಬದಲಾವಣೆಯಿಂದ ಕನಿಷ್ಠ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.2024 ರಲ್ಲಿ ದಾಖಲೆಯ ಅತ್ಯಂತ ತಾಪಮಾನದ ವರ್ಷವಾಗಿತ್ತು ಮತ್ತು ಜಾಗತಿಕ ಸರಾಸರಿ ತಾಪಮಾನವು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿತ್ತು.
ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ಉಷ್ಣತೆಯು ಬೆಳೆ ಇಳುವರಿ ಮತ್ತು ಪೂರೈಕೆ ಸರಪಳಿಗಳ ಮೇಲೆ ತೀವ್ರ ಪರಿಣಾಮ ಬೀರಿತು, ಇದು ಅಗತ್ಯ ತರಕಾರಿಗಳಲ್ಲಿ ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಯಿತು. ಆಹಾರ ಬೆಲೆಗಳ ಮೇಲಿನ ಇಂತಹ ಆಘಾತಗಳು ಅಪೌಷ್ಟಿಕತೆ ಮತ್ತು ದೀರ್ಘಕಾಲದ ಕಾಯಿಲೆಗಳು ಸೇರಿದಂತೆ ಆರೋಗ್ಯದ ಪರಿಣಾಮಗಳನ್ನು ಇನ್ನಷ್ಟು ಹದಗೆಡಿಸಬಹುದು ಮತ್ತು ಆರ್ಥಿಕ ಅಸಮಾನತೆಯನ್ನು ಹೆಚ್ಚಿಸಬಹುದು ಎಂದು ಅಧ್ಯಯನವು ಎಚ್ಚರಿಸಿದೆ.
ಈ ಎಲ್ಲಾ ಘಟನೆಗಳಲ್ಲಿ ಹಲವು ಅಂಶಗಳು, 2020 ಕ್ಕಿಂತ ಮೊದಲಿನ ಎಲ್ಲಾ ಐತಿಹಾಸಿಕ ನಿದರ್ಶನಗಳನ್ನೂ ಮೀರಿವೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಪ್ರಭಾವಿತವಾಗಿವೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ತಾಪಮಾನವು ಬೆಳೆ ಇಳುವರಿ ಮತ್ತು ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರಿತು, ಇದು ಅಗತ್ಯ ತರಕಾರಿಗಳಲ್ಲಿ ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಯಿತು. ಆಹಾರದ ಬೆಲೆ ಏರಿಕೆಯು ಆಹಾರ ಭದ್ರತೆಯ ಮೇಲೆ, ವಿಶೇಷವಾಗಿ ಕಡಿಮೆ ಆದಾಯದ ಕುಟುಂಬಗಳಿಗೆ ನೇರ ಪರಿಣಾಮ ಬೀರುತ್ತದೆ. ಆಹಾರದ ಬೆಲೆ ಏರಿಕೆಯಾದಾಗ, ಕಡಿಮೆ ಆದಾಯದ ಕುಟುಂಬಗಳು ಕಡಿಮೆ ಪೌಷ್ಟಿಕ, ಅಗ್ಗದ ಆಹಾರಗಳನ್ನು ಆಶ್ರಯಿಸಬೇಕಾಗುತ್ತದೆ. ಈ ರೀತಿಯ ಆಹಾರಕ್ರಮಗಳು ಕ್ಯಾನ್ಸರ್, ಮಧುಮೇಹ ಮತ್ತು ಹೃದ್ರೋಗದಂತಹ ಹಲವಾರು ಆರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿವೆ ಎಂದು ಕೋಟ್ಜ್ ಹೇಳಿದರು.
ಫೆಬ್ರವರಿಯಲ್ಲಿ ಬೀಸಿದ ಹೀಟ್ ವೇವ್ ನಂತರ ಘಾನಾ ಮತ್ತು ಐವರಿ ಕೋಸ್ಟ್‌ನಲ್ಲಿ ಜಾಗತಿಕ ಕೋಕೋ ಬೆಲೆಗಳು ಏಪ್ರಿಲ್ 2024 ರ ವೇಳೆಗೆ ಸುಮಾರು 280 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಹೇಳಿದೆ. ಹವಾಮಾನ ಬದಲಾವಣೆಯಿಂದಾಗಿ ತಾಪಮಾನವು 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ, ಹೀಟ್ ವೇವ್ ಮತ್ತು ಬರಗಾಲವು ಅರೇಬಿಕಾ ಕಾಫಿ ಬೆಲೆಯಲ್ಲಿ ಶೇಕಡಾ 55 ರಷ್ಟು ಏರಿಕೆಗೆ ಮತ್ತು ರೋಬಸ್ಟಾ ಬೆಲೆಯಲ್ಲಿ ಶೇಕಡಾ 100 ರಷ್ಟು ಏರಿಕೆಗೆ ಕಾರಣವಾಯಿತು.
ಯುರೋಪಿಯನ್ ಒಕ್ಕೂಟದಲ್ಲಿ, ಸ್ಪೇನ್ ಮತ್ತು ಇಟಲಿಯಲ್ಲಿ ಬರಗಾಲದ ನಂತರ ಜನವರಿ 2024 ರ ವೇಳೆಗೆ ಆಲಿವ್ ಎಣ್ಣೆಯ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇ. 50 ರಷ್ಟು ಏರಿಕೆಯಾಗಿವೆ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಕ್ಯಾಲಿಫೋರ್ನಿಯಾ ಮತ್ತು ಅರಿಜೋನಾದಲ್ಲಿ ಬರಗಾಲದಿಂದಾಗಿ ನವೆಂಬರ್ 2022 ರಲ್ಲಿ ತರಕಾರಿ ಬೆಲೆಗಳು ಶೇಕಡಾ 80 ರಷ್ಟು ಹೆಚ್ಚಾಗಿದೆ.
ಈ ಎಲ್ಲಾ ಕಾರಣದಿಂದ ಇಡೀ ಪ್ರಪಂಚದಲ್ಲಿ ತಾಪಮಾನ ಇಳಿಕೆಯ ಪ್ರಯತ್ನ ನಡೆಯಬೇಕು, ಹವಾಮಾನ ವೈಪರೀತ್ಯ ಕಡಿಮೆಗೊಳಿಸಲು ಪ್ರಯತ್ನ ನಡೆಯಬೇಕು ಎಂದು ಎಚ್ಚರಿಸಲಾಗಿದೆ. ಇಲ್ಲದೇ ಇದ್ದರೆ ಇಂತಹ ಆಹಾರ ಆಘಾತಗಳು ಹೆಚ್ಚಾಗಿ ಸಂಭವಿಸುತ್ತವೆ ಎಂದು ತಂಡವು ಎಚ್ಚರಿಸಿದೆ.


