ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು ಹೆಚ್ಚುತ್ತಿದ್ದು, ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಕಾಡುಗಳ ಸ್ಥಿರತೆಯ ಮೇಲೂ ಆತಂಕ ಮೂಡಿಸಿದೆ. ಮಳೆ ಮತ್ತು ತಾಪಮಾನದಲ್ಲಿನ ದೀರ್ಘಕಾಲೀನ ಬದಲಾವಣೆಗಳು ಕಾಡುಗಳ ಬೆಳವಣಿಗೆ, ಪುನರುತ್ಪಾದನೆ, ಜೀವವೈವಿಧ್ಯ ಹಾಗೂ ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಸಂಶೋಧಕರು ತಿಳಿಸಿದ್ದಾರೆ.
ನೀಲಗಿರಿ ಜೀವಗೋಳ ಮೀಸಲು ಪ್ರದೇಶವು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಭಾಗಗಳನ್ನು ಒಳಗೊಂಡಿರುವ ಪಶ್ಚಿಮ ಘಟ್ಟದ ಪ್ರಮುಖ ಪರಿಸರ ಪ್ರದೇಶವಾಗಿದೆ. ಸುಮಾರು ಸುಮಾರು 5,520 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇಲ್ಲಿ ಉಷ್ಣವಲಯದ ಕಾಡುಗಳಿಂದ ಹಿಡಿದು ಶೋಲಾ ಕಾಡು–ಹುಲ್ಲುಗಾವಲು ಪರಿಸರ ವ್ಯವಸ್ಥೆಯವರೆಗೆ ವೈವಿಧ್ಯಮಯ ನೈಸರ್ಗಿಕ ವ್ಯವಸ್ಥೆಗಳಿವೆ. ಇವು ಜೀವವೈವಿಧ್ಯದ ಜೊತೆಗೆ ನೀರಿನ ಸಂಗ್ರಹ ಮತ್ತು ನದಿಗಳ ಹರಿವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ.
ಮಳೆ ಕಡಿಮೆಯಾದರೆ ಕಾಡಿನ ಮೇಲೂ ಪರಿಣಾಮ : ನೀಲಗಿರಿ ಜೀವಗೋಳದ ದೀರ್ಘಕಾಲೀನ ಹವಾಮಾನ ಅಧ್ಯಯನಗಳಲ್ಲಿ ದಕ್ಷಿಣ–ಪಶ್ಚಿಮ ಮುಂಗಾರಿನ ಅವಧಿಯ ಸರಾಸರಿ ಮಳೆಯಲ್ಲಿ ಗಮನಾರ್ಹ ಇಳಿಕೆ ಹಾಗೂ ಮಳೆ ಬೀಳುವ ದಿನಗಳ ಸಂಖ್ಯೆಯಲ್ಲೂ ಕುಸಿತ ಕಂಡುಬಂದಿದೆ. ಇದೇ ಅವಧಿಯಲ್ಲಿ ಪ್ರದೇಶದ ತಾಪಮಾನ ಏರಿಕೆಯ ಪ್ರವೃತ್ತಿಯೂ ದಾಖಲಾಗಿದೆ.
ಮಳೆ ಕಡಿಮೆಯಾಗುವುದು ಮತ್ತು ತಾಪಮಾನ ಏರಿಕೆಯಾಗುವುದು ಕೇವಲ ಕಾಡಿನ ಮರಗಳ ಬೆಳವಣಿಗೆಯನ್ನಷ್ಟೇ ಬದಲಿಸುವುದಿಲ್ಲ. ಮಣ್ಣಿನ ತೇವಾಂಶ, ಸಸ್ಯಗಳ ಪುನರುತ್ಪಾದನೆ, ನೀರಿನ ಹರಿವು ಹಾಗೂ ಕಾಡು ಅವಲಂಬಿತ ಜೀವಿಗಳ ವಾಸಸ್ಥಳದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಶೋಲಾ–ಹುಲ್ಲುಗಾವಲು ವ್ಯವಸ್ಥೆ ಏಕೆ ಮುಖ್ಯ? : ಪಶ್ಚಿಮ ಘಟ್ಟದ ಎತ್ತರ ಪ್ರದೇಶಗಳಲ್ಲಿರುವ ಶೋಲಾ ಕಾಡು–ಹುಲ್ಲುಗಾವಲು ವ್ಯವಸ್ಥೆ ನೀಲಗಿರಿ ಪ್ರದೇಶದ ಪ್ರಮುಖ ಪರಿಸರ ಸಂಪತ್ತಾಗಿದೆ. ಶೋಲಾ ಕಾಡುಗಳು ಮಳೆನೀರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ಹೊಳೆಗಳಿಗೆ ಬಿಡುಗಡೆ ಮಾಡುವುದರಿಂದ ಇವುಗಳನ್ನು ಈ ಪ್ರದೇಶದ ನೈಸರ್ಗಿಕ ನೀರಿನ ಸಂಗ್ರಹ ವ್ಯವಸ್ಥೆ ಎಂದೇ ಪರಿಗಣಿಸಲಾಗುತ್ತದೆ. ಈ ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾದರೆ ಅದರ ಪರಿಣಾಮ ಕಾಡಿನೊಳಗೆ ಮಾತ್ರ ಸೀಮಿತವಾಗುವುದಿಲ್ಲ. ಕೆಳಭಾಗದ ಕೃಷಿ ಪ್ರದೇಶಗಳು, ಕುಡಿಯುವ ನೀರಿನ ಮೂಲಗಳು ಮತ್ತು ನದಿಗಳ ಹರಿವಿನ ಮೇಲೂ ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆಯಿದೆ.
ಕಾಡಿನ ಸ್ವರೂಪ ಬದಲಾಗುವ ಆತಂಕ : ಹವಾಮಾನ ಬದಲಾವಣೆಯ ಪರಿಣಾಮವಾಗಿ ತಾಪಮಾನ ಮತ್ತು ಮಳೆಯ ಮಾದರಿಯಲ್ಲಿ ಬದಲಾವಣೆ ಮುಂದುವರಿದರೆ ವಿವಿಧ ಕಾಡಿನ ಪ್ರಕಾರಗಳ ವ್ಯಾಪ್ತಿಯಲ್ಲೂ ಬದಲಾವಣೆ ಸಂಭವಿಸಬಹುದು ಎಂದು ಹಿಂದಿನ ಮಾದರಿ ಅಧ್ಯಯನಗಳು ಸೂಚಿಸಿವೆ. ನೀಲಗಿರಿ ಜೀವಗೋಳದಲ್ಲಿ ಒಣ ಪ್ರದೇಶದ ಸಸ್ಯವರ್ಗ ವಿಸ್ತರಿಸುವುದು ಹಾಗೂ ಎತ್ತರ ಪ್ರದೇಶದ ಹುಲ್ಲುಗಾವಲು ಕುಗ್ಗುವ ಸಾಧ್ಯತೆಯನ್ನೂ ಅಧ್ಯಯನಗಳು ಸೂಚಿಸಿವೆ. 2000 ರಿಂದ 2023 ರವರೆಗೆ ನೀಲಗಿರಿ ಜೀವಗೋಳದ ಸಸ್ಯವರ್ಗದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ಅಧ್ಯಯನ ಪ್ರದೇಶದ ಸುಮಾರು 29.2% ಭಾಗವು ಅತ್ಯಧಿಕ ಅಥವಾ ಹೆಚ್ಚಿನ ಮಾನವ ಪ್ರಭಾವಿತ ಅರಣ್ಯ ಹಾನಿ ವರ್ಗದಲ್ಲಿದೆ ಎಂದು 2025ರ ಅಧ್ಯಯನವೊಂದು ವರದಿ ಮಾಡಿದೆ.
ನೀರಿನ ಭದ್ರತೆಗೂ ಎಚ್ಚರಿಕೆ : ನೀಲಗಿರಿ ಜೀವಗೋಳದ ಕಾಡುಗಳು ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಮಾತ್ರವಲ್ಲ, ದಕ್ಷಿಣ ಭಾರತದ ನೀರಿನ ಭದ್ರತೆಗೂ ಪ್ರಮುಖವಾಗಿವೆ. ದೀರ್ಘಕಾಲೀನ ನೀರಿನ ಒತ್ತಡದಿಂದ ನೀಲಗಿರಿ ಜೀವಗೋಳದ ಬಹುಪಾಲು ಪ್ರದೇಶದಲ್ಲಿ ಸಸ್ಯಗಳ ಉತ್ಪಾದಕತೆ ಕುಸಿದಿರುವುದನ್ನೂ ಅಧ್ಯಯನಗಳು ದಾಖಲಿಸಿವೆ.
ಹೀಗಾಗಿ ಪಶ್ಚಿಮ ಘಟ್ಟ ಸಂರಕ್ಷಣೆಯ ಚರ್ಚೆಯನ್ನು ಕೇವಲ ಅರಣ್ಯ ಪ್ರದೇಶದ ಗಡಿ ಅಥವಾ ಅಭಿವೃದ್ಧಿ ಚಟುವಟಿಕೆಗಳ ನಿಯಂತ್ರಣಕ್ಕೆ ಸೀಮಿತಗೊಳಿಸದೆ, ಹವಾಮಾನ ಬದಲಾವಣೆ, ನೀರಿನ ಸಂರಕ್ಷಣೆ, ಕಾಡಿನ ಪುನರುತ್ಪಾದನೆ ಮತ್ತು ಸ್ಥಳೀಯ ಸಮುದಾಯಗಳ ಜೀವನೋಪಾಯವನ್ನು ಒಳಗೊಂಡ ಸಮಗ್ರ ದೃಷ್ಟಿಕೋನದಲ್ಲಿ ನೋಡುವ ಅಗತ್ಯವಿದೆ ಎಂದು ಎಚ್ಚರಿಸಲಾಗಿದೆ.
ಕರ್ನಾಟಕಕ್ಕೂ ನೇರ ಸಂಬಂಧ : ನೀಲಗಿರಿ ಜೀವಗೋಳದ ಪರಿಸರ ವ್ಯವಸ್ಥೆ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿದೆ. ನೀಲಗಿರಿ–ವಯನಾಡು–ನಾಗರಹೊಳೆ–ಬಂಡೀಪುರ ಪ್ರದೇಶಗಳು ಒಂದೇ ದೊಡ್ಡ ಪರಿಸರ ಭೂದೃಶ್ಯದ ಭಾಗವಾಗಿವೆ. ಹೀಗಾಗಿ ನೀಲಗಿರಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಹವಾಮಾನ ಮತ್ತು ಪರಿಸರ ಬದಲಾವಣೆಗಳು ಕರ್ನಾಟಕದ ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಿಗೂ ಪ್ರಮುಖ ಎಚ್ಚರಿಕೆಯ ಸೂಚನೆಯಾಗಿವೆ. ಕಾಡು ಉಳಿಸುವುದು ಎಂದರೆ ಕೇವಲ ಮರಗಳನ್ನು ಉಳಿಸುವುದಲ್ಲ; ನೀರು, ಮಣ್ಣು, ಜೀವವೈವಿಧ್ಯ ಮತ್ತು ಕೃಷಿಯ ಭವಿಷ್ಯವನ್ನು ಉಳಿಸುವುದೂ ಆಗಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Climate change is increasingly putting pressure on the fragile forest ecosystems of the Western Ghats, including the Nilgiri Biosphere Reserve spread across Karnataka, Kerala and Tamil Nadu. Long-term studies indicate declining southwest monsoon rainfall and rainy days, rising temperatures and increasing water stress in the landscape. These changes, combined with human pressures, could alter forest composition, biodiversity, regeneration and water availability. The Shola forest–grassland ecosystem is particularly important because it stores and gradually releases rainwater, supporting streams and downstream ecosystems. Recent research has also identified significant vegetation decline and high levels of anthropogenic forest degradation in parts of the Nilgiri Biosphere Reserve


