ಹವಾಮಾನ ವೈಪರೀತ್ಯ ಈ ಬಾರಿ ರಾಜ್ಯದ ಕೃಷಿಕರಿಗೆ ಸಮಸ್ಯೆ ತಂದೊಡ್ಡಿದೆ. ಈ ಬಾರಿ ವಿಪರೀತ ತಾಪಮಾನದ ಕಾರಣದಿಂದ ಹಲವು ಬೆಳೆಗಳು ನಾಶವಾದವು. ಇದೀಗ ಮತ್ತೆ ಮತ್ತೆ ಭಾರೀ ಮಳೆಯಾಗುತ್ತಿರುವುದರಿಂದ ಉಳಿದ ಬೆಳೆಯ ಮೇಲೂ ಪರಿಣಾಮ ಬೀರುತ್ತಿದೆ. ರಾಜ್ಯದ ಬಹುತೇಕ ಎಲ್ಲಾ ಕೃಷಿಯ ಮೇಲೂ ಈಗಿನ ವಾತಾವರಣ ಪರಿಣಾಮ ಬೀರುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಮೂಡಿಗೆರೆ, ಆಲ್ದೂರು, ಆವತಿ ಭಾಗದ ಕೆಲ ತೋಟಗಳಲ್ಲಿ ಮಳೆಯಿಂದ ಕಾಫಿ ಕಾಯಿಗಳು ಉದುರಿಹೋಗಿವೆ. ಫಸಲು ಬಿಟ್ಟಿರುವ ಕಾಫಿ ಹಾಗು ಕಾಳು ಮೆಣಸಿನ ಬಳ್ಳಿಗಳಿಗೆ ಮಳೆಯಿಂದ ಹಾನಿ ಉಂಟಾಗುವ ಸಂಭವವಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುಮಾರು 9 ಮಿಲಿ ಮೀಟರ್ ಮಳೆಯಾಗಿದೆ. ಮಳೆಯಿಂದಾಗಿ ರೈತರು ಬೆಳೆ ಹಾನಿ ನಷ್ಟದ ಭೀತಿ ಎದುರಿಸುತ್ತಿದ್ದಾರೆ.
ಹಾವೇರಿಯಲ್ಲಿ ಸುರಿದ ಭಾರೀ ಮಳೆಗೆ ಗೋವಿನಜೋಳ, ಶೇಂಗಾ, ಹತ್ತಿ, ಸೋಯಾಬೀನ್, ಭತ್ತ, ಮೆಣಸಿನಕಾಯಿ, ಸೌತೆಕಾಯಿ, ಟೊಮೆಟೊ ಸೇರಿದಂತೆ ಹಲವು ಬೆಳೆಗಳು ಮಳೆಯಿಂದಾಗಿ ನೆಲಕಚ್ಚಿವೆ. ಒಂದು ಸಾವಿರ ಹೆಕ್ಟೇರ್ ಜಮೀನಿನಲ್ಲಿದ್ದ ಬೆಳೆ ಹಾನಿಯಾಗಿದೆ.
ಕೋಲಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ತುಂತುರು ಮಳೆಯಾಗುತ್ತಿದೆ. ಕೋಸು, ಟೊಮ್ಯಾಟೊ, ಹೂವು ಬೆಳೆಗಾರರು ಮಳೆಯಿಂದ ಕಂಗಾಲಾಗಿದ್ದಾರೆ. ಆಲೂಗಡ್ಡೆ ಮತ್ತು ಟೊಮ್ಯಾಟೊ ಬೆಳೆಗೆ ಶೀಲಿಂದ್ರದಿಂದ ಬರುವ ಅಂಗಮಾರಿ ರೋಗ ಉಲ್ಬಣವಾಗುವ ಸಾಧ್ಯತೆ ಇದೆ.
ನವಲಗುಂದ ತಾಲೂಕಿನಲ್ಲಿ 250 ಹೆಕ್ಟೇರ್ ಪ್ರದೇಶದ ನೆಲಗಡಲೆ , 4500 ಹೆಕ್ಟೇರ್ ಪ್ರದೇಶದ ಗೋವಿನಜೋಳ ಹಾಗೂ 4,200 ಹೆಕ್ಟೇರ್ ಪ್ರದೇಶದ ಹತ್ತಿ ಸೇರಿ ಒಟ್ಟು 8,950 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಮಳೆಯಿಂದ ಹಾನಿಯಾಗಿದೆ.
ನವಲಗುಂದ ತಾಲೂಕಿನಲ್ಲಿ 15 ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆಯು ಮಳೆಯಿಂದ ಹಾನಿಯಾಗಿದೆ. ಕುಂದಗೋಳ ತಾಲೂಕಿನಲ್ಲಿ 500 ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ಬೆಳೆಯು ಮಳೆಯಿಂದ ಹಾನಿಯಾಗಿದೆ. ಧಾರವಾಡ ತಾಲೂಕಿನಲ್ಲಿ 20 ಹೆಕ್ಟೇರ್ ವಿವಿಧ ತರಕಾರಿ ಬೆಳೆ ಹಾಗೂ 40 ಹೆಕ್ಟೇರ್ ಹೂವಿನ ಬೆಳೆಯು ಮಳೆಯಿಂದ ಹಾನಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಜೂನ್ ಮತ್ತು ಅಕ್ಟೋಬರ ಎರಡು ತಿಂಗಳಲ್ಲಿ ಒಟ್ಟು 34,303.85 ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಮಳೆಯಿಂದ ಹಾನಿಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಅಡಿಕೆಗೆ ಕೊಳೆರೋಗ ಬಾಧಿಸಿ ಇದೀಗ ಅಡಿಕೆ ಮರಗಳೂ ಸಾಯುವ ಸ್ಥಿತಿಗೆ ಬಂದಿದೆ. ಸುಳಿ ಕೊಳೆರೋಗ ಬಾಧಿಸುತ್ತಿದೆ. ಈ ಬಾರಿ ಬೇಸಗೆಯಲ್ಲಿ ವಿಪರೀತ ತಾಪಮಾನದಿಂದ ಅಡಿಕೆ ಇಳುವರಿ ಮೇಲೂ ಪರಿಣಾಮ ಬೀರಿತ್ತು.ಚಿಕ್ಕಮಗಳೂರು ಸೇರಿದಂತೆ ಮಡಿಕೇರಿ, ಹಾಸನ ಪ್ರದೇಶದಲ್ಲಿ ಏಲಕ್ಕಿ ಬೆಳೆಯ ಮೇಲೂ ಈ ಬಾರಿಯ ಮಳೆ ಪರಿಣಾಮ ಬೀರಿದೆ.
The recent weather extremes have posed a significant challenge for farmers in the state. Many crops have been destroyed due to the extreme temperatures, and the persistent rainfall is now impacting the remaining crops. The current climate conditions are adversely affecting nearly all agricultural activities in the state.