Advertisement
ಸುದ್ದಿಗಳು

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

Share

ಭಾರತದ ನಗರಗಳು ಹವಾಮಾನ ಬದಲಾವಣೆಯ ಅಪಾಯಗಳನ್ನು ದಿನದಿಂದ ದಿನಕ್ಕೆ ಹೆಚ್ಚು ಎದುರಿಸುತ್ತಿವೆ. ಪ್ರವಾಹ, ತೀವ್ರ ಬಿಸಿಗಾಳಿ, ನೀರಿನ ಕೊರತೆ, ಚಂಡಮಾರುತ ಮತ್ತು ನಗರ ಪ್ರವಾಹದಂತಹ ಅಪಾಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ನಗರಗಳು ಇಂತಹ ಬದಲಾವಣೆಗಳಿಗೆ ಎಷ್ಟು ಸಿದ್ಧವಾಗಿವೆ ಎಂಬುದನ್ನು ಅಳೆಯುವ ಪ್ರಯತ್ನವೂ ದೇಶದಲ್ಲಿ ಆರಂಭವಾಗಿತ್ತು.

2021ರಲ್ಲಿ ಸರ್ಕಾರದ ಸಹಯೋಗದಲ್ಲಿ ನಡೆದ Cities Readiness Report ದೇಶದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಪರಿಶೀಲಿಸಿತ್ತು. ಅದರ ಪ್ರಕಾರ  ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ನಗರಗಳ ಸಿದ್ಧತೆ ಇನ್ನೂ ಬಹಳ ಕಡಿಮೆ ಮಟ್ಟದಲ್ಲಿದೆ. ಕೆಲವು ನಗರಗಳಿಗೆ ನಗರ ಪ್ರವಾಹ ದೊಡ್ಡ ಸಮಸ್ಯೆಯಾಗಿದ್ದರೆ, ಕೆಲವು ನಗರಗಳಲ್ಲಿ ತೀವ್ರ ಬಿಸಿ, ಇನ್ನೂ ಕೆಲವು ಕಡೆ ನೀರಿನ ಕೊರತೆ, ಕರಾವಳಿ ನಗರಗಳಲ್ಲಿ ಚಂಡಮಾರುತ ಮತ್ತು ಸಮುದ್ರದ ಅಲೆಗಳ ಅಪಾಯ ಪ್ರಮುಖವಾಗಿದೆ. ಆದರೆ ಆ ಬಳಿಕ ಈ ಹವಾಮಾನ ಅಳತೆ ನಡೆಯಲಿಲ್ಲ.

ನಗರೀಕರಣ ವೇಗವಾಗಿ ನಡೆಯುತ್ತಿರುವುದರಿಂದ ಸಹಜವಾಗಿ ನೀರು ಹೀರಿಕೊಳ್ಳುತ್ತಿದ್ದ ಭೂಪ್ರದೇಶಗಳು ಕಾಂಕ್ರೀಟ್ ಪ್ರದೇಶಗಳಾಗಿ ಬದಲಾಗುತ್ತಿವೆ. ಇದರ ಪರಿಣಾಮವಾಗಿ ಭಾರೀ ಮಳೆಯ ಸಂದರ್ಭದಲ್ಲಿ ನೀರು ವೇಗವಾಗಿ ಹರಿದು ನಗರ ಪ್ರವಾಹದ ಅಪಾಯ ಹೆಚ್ಚುತ್ತಿದೆ. ವಿಶ್ವಬ್ಯಾಂಕ್‌ನ ವಿಶ್ಲೇಷಣೆಯ ಪ್ರಕಾರ ಭಾರತದ ನಗರ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗಕ್ಕಿಂತ ಹೆಚ್ಚು ಜನರು ಪ್ರವಾಹದ ಅಪಾಯಕ್ಕೆ ಒಳಗಾಗಿದ್ದಾರೆ.

ಬಿಸಿಗಾಳಿಯೂ ಈಗ ನಗರ ಸಮಸ್ಯೆ : ನಗರಗಳಲ್ಲಿ ಹಸಿರು ಪ್ರದೇಶ ಕಡಿಮೆಯಾಗುವುದು, ಕಾಂಕ್ರೀಟ್ ಮೇಲ್ಮೈ ಹೆಚ್ಚಾಗುವುದು ಮತ್ತು ವಾಹನ, ಕಟ್ಟಡ ಹಾಗೂ ಕೈಗಾರಿಕೆಗಳಿಂದ ಉಂಟಾಗುವ ಉಷ್ಣತೆ ನಗರಗಳ ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ.  ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ತೀವ್ರ ಬಿಸಿಯ ಪರಿಣಾಮ ಈಗಾಗಲೇ ಕಾರ್ಮಿಕರ ಆರೋಗ್ಯ ಮತ್ತು ಆರ್ಥಿಕತೆಯ ಮೇಲೂ ಬೀರುತ್ತಿದೆ. ಹವಾಮಾನ ಬದಲಾವಣೆ ಮುಂದುವರಿದಂತೆ ನಗರಗಳ ಬಿಸಿ ಒತ್ತಡ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ಇತ್ತೀಚಿನ ಅಧ್ಯಯನಗಳು ಮಳೆಗಾಲದಲ್ಲಿಯೂ ಹೆಚ್ಚಿನ ತಾಪಮಾನ ಮತ್ತು ತೇವಾಂಶ ಸೇರಿ ಅಪಾಯಕಾರಿ ತೇವ-ಬಿಸಿ ಒತ್ತಡ ಉಂಟಾಗಬಹುದು ಎಂದು ಎಚ್ಚರಿಸಿರುವುದು ಮತ್ತೊಂದು ಹೊಸ ಅಪಾಯವನ್ನು ತೋರಿಸುತ್ತದೆ.

2021ರ ಮೌಲ್ಯಮಾಪನ ಏನು ಹೇಳಿತ್ತು? :  126 ನಗರಗಳ ಮೌಲ್ಯಮಾಪನದಲ್ಲಿ ಹಲವು ಪ್ರಮುಖ ಸೂಚಕಗಳನ್ನು ಪರಿಶೀಲಿಸಲಾಗಿತ್ತು. ಅದರ ಪ್ರಕಾರ,  ಕೇವಲ 10 ನಗರಗಳು ತಮ್ಮ ವಿದ್ಯುತ್ ಅಗತ್ಯದ ಶೇ.15ಕ್ಕಿಂತ ಹೆಚ್ಚು ಭಾಗವನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿದ್ದವು. 14 ನಗರಗಳು ತಮ್ಮ ರಸ್ತೆ ಜಾಲದ ಶೇ.35ಕ್ಕಿಂತ ಹೆಚ್ಚು ಭಾಗದಲ್ಲಿ ಮೋಟಾರು ರಹಿತ ಸಾರಿಗೆ ವ್ಯವಸ್ಥೆ ಹೊಂದಿದ್ದವು. 30 ನಗರಗಳು ಹವಾಮಾನ ದುರ್ಬಲತೆ ಮೌಲ್ಯಮಾಪನ ಮತ್ತು ಹಸಿರುಮನೆ ಅನಿಲಗಳ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಿದ್ದವು. 35 ನಗರಗಳು ನಗರ ವಿಪತ್ತು ನಿರ್ವಹಣಾ ಯೋಜನೆ ರೂಪಿಸುವ ಕೆಲಸ ಆರಂಭಿಸಿದ್ದವು. 38 ನಗರಗಳು ನೀರಿನ ಮೂಲಗಳು ಮತ್ತು ಮುಕ್ತ ಪ್ರದೇಶಗಳ ಸಂರಕ್ಷಣೆಗೆ ತಂತ್ರ ಅಥವಾ ಬಜೆಟ್ ರೂಪಿಸಿದ್ದವು. 40 ನಗರಗಳು ಸಂಗ್ರಹವಾಗುವ ತೇವ ತ್ಯಾಜ್ಯದ ಶೇ.100ರಷ್ಟು ಸಂಸ್ಕರಣೆಗೆ ವ್ಯವಸ್ಥೆ ಹೊಂದಿದ್ದವು.

ಈ ಅಂಕಿ-ಅಂಶಗಳ ಪ್ರಕಾರ ಹವಾಮಾನ ಸಿದ್ಧತೆ ಎನ್ನುವುದು ಕೇವಲ ಮರ ನೆಡುವುದು ಅಥವಾ ನಗರ ಸೌಂದರ್ಯ ಅಲ್ಲ. ನೀರು, ಸಾರಿಗೆ, ತ್ಯಾಜ್ಯ, ವಿದ್ಯುತ್, ವಿಪತ್ತು ನಿರ್ವಹಣೆ, ಹಸಿರು ಪ್ರದೇಶ ಮತ್ತು ನಗರ ಯೋಜನೆ ಎಲ್ಲವೂ ಅದರ ಭಾಗ.

ಹವಾಮಾನ ಅಳತೆ ನಿಂತರೆ ಸಮಸ್ಯೆ ಕಾಣುವುದೇ ಹೇಗೆ? : ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಒಂದು ಬಾರಿ ನಗರಗಳ ಸಿದ್ಧತೆಯನ್ನು ಅಳೆಯುವುದು ಸಾಕಾಗುವುದಿಲ್ಲ. ಉದಾಹರಣೆಗೆ, 2021ರಲ್ಲಿ ಒಂದು ನಗರಕ್ಕೆ 30% ಸಿದ್ಧತೆ ಇದ್ದರೆ, 2026ರಲ್ಲಿ ಅದು 50% ಆಗಿದೆಯೇ ಅಥವಾ 20%ಕ್ಕೆ ಇಳಿದಿದೆಯೇ ಎಂಬುದನ್ನು ತಿಳಿಯಲು ನಿರಂತರ ಮತ್ತು ಹೋಲಿಕೆ ಮಾಡಬಹುದಾದ ಸೂಚ್ಯಂಕ ಬೇಕಾಗುತ್ತದೆ.

ಯಾವ ನಗರ ಉತ್ತಮವಾಗಿ ಕೆಲಸ ಮಾಡುತ್ತಿದೆ, ಯಾವ ನಗರಕ್ಕೆ ಹೆಚ್ಚು ಹಣ ಬೇಕು, ಯಾವ ಕ್ಷೇತ್ರದಲ್ಲಿ ಕೊರತೆಯಿದೆ, ಯಾವ ಯೋಜನೆ ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿಯಲು ಇಂತಹ ಮಾಹಿತಿ ಅಗತ್ಯ. ಇದು ಕೇವಲ ಸಂಶೋಧನೆಯ ವಿಷಯವಲ್ಲ. ಹವಾಮಾನ ಹಣಕಾಸು ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸಲು ಕೂಡ ಇಂತಹ ಮೌಲ್ಯಮಾಪನ ಮುಖ್ಯ.

ನಗರಗಳ ಭವಿಷ್ಯಕ್ಕೆ ಹಣವೂ ಬೇಕು:  ಭಾರತದ ನಗರ ಜನಸಂಖ್ಯೆ ಮುಂದಿನ ದಶಕಗಳಲ್ಲಿ ವೇಗವಾಗಿ ಹೆಚ್ಚುವ ನಿರೀಕ್ಷೆಯಿದೆ. ಹೀಗಾಗಿ ಹೊಸ ರಸ್ತೆ, ಕಟ್ಟಡ, ನೀರು ಸರಬರಾಜು, ಒಳಚರಂಡಿ, ಸಾರ್ವಜನಿಕ ಸಾರಿಗೆ ಮತ್ತು ವಸತಿ ನಿರ್ಮಾಣದ ಸಂದರ್ಭದಲ್ಲಿ ಹವಾಮಾನ ಅಪಾಯಗಳನ್ನು ಮೊದಲಿನಿಂದಲೇ ಪರಿಗಣಿಸುವುದು ಅಗತ್ಯ.

ವಿಶ್ವಬ್ಯಾಂಕ್‌ನ 2025ರ ವರದಿ ಪ್ರಕಾರ, ಭಾರತದಲ್ಲಿ ಹವಾಮಾನ-ಸಹಿಷ್ಣು ಮತ್ತು ಕಡಿಮೆ-ಕಾರ್ಬನ್ ನಗರ ಮೂಲಸೌಕರ್ಯಕ್ಕಾಗಿ 2050 ಮತ್ತು 2070ರ ಅವಧಿಯಲ್ಲಿ ಭಾರಿ ಪ್ರಮಾಣದ ಹೂಡಿಕೆ ಅಗತ್ಯವಿದೆ.  ಹೀಗಾಗಿ ಹವಾಮಾನ ಸಿದ್ಧತೆಯನ್ನು ಅಳೆಯುವುದು ಮಾತ್ರವಲ್ಲ, ಆ ಅಳತೆಯ ಆಧಾರದ ಮೇಲೆ ಹಣ ಹಂಚಿಕೆ ಮಾಡುವುದು ಮುಂದಿನ ದೊಡ್ಡ ಸವಾಲು.

ನಗರಗಳ ಸಮಸ್ಯೆ ಗ್ರಾಮಗಳಿಗೂ ಬರುತ್ತದೆ : ಇದು ಕೇವಲ ನಗರಗಳ ವಿಷಯ ಎಂದು ನೋಡಲು ಸಾಧ್ಯವಿಲ್ಲ. ನಗರಗಳಲ್ಲಿ ಮಳೆನೀರು ಹರಿಯುವ ವ್ಯವಸ್ಥೆ ವಿಫಲವಾದರೆ ಗ್ರಾಮೀಣ ಪ್ರದೇಶಗಳಿಗೂ ಪರಿಣಾಮ ಬೀರುತ್ತದೆ. ನಗರಗಳ ನೀರಿನ ಬೇಡಿಕೆ ಹೆಚ್ಚಿದರೆ ಸುತ್ತಮುತ್ತಲಿನ ಜಲ ಸಂಪನ್ಮೂಲಗಳ ಮೇಲೂ ಒತ್ತಡ ಬೀಳುತ್ತದೆ. ನಗರ ವಿಸ್ತರಣೆ ಕೃಷಿಭೂಮಿ ಮತ್ತು ನೈಸರ್ಗಿಕ ಜಲಮೂಲಗಳನ್ನು ಕಡಿಮೆ ಮಾಡಿದರೆ ಗ್ರಾಮೀಣ ಪ್ರದೇಶಗಳ ನೀರು ಹಿಡಿದಿಡುವ ಸಾಮರ್ಥ್ಯವೂ ಕುಸಿಯಬಹುದು. ಹೀಗಾಗಿ ನಗರ ಹವಾಮಾನ ಸಿದ್ಧತೆ ಎಂದರೆ ಗ್ರಾಮೀಣ ಪರಿಸರದ ಮೇಲೂ ಪರಿಣಾಮ ಬೀರುವ ಯೋಜನೆ.

ಕರ್ನಾಟಕಕ್ಕೂ-ಗ್ರಾಮೀಣ ಭಾಗವೂ ಗಮನಿಸಬೇಕಾಶ ಅಂಶ : ಬೆಂಗಳೂರು ಸೇರಿದಂತೆ ಕರ್ನಾಟಕದ ನಗರಗಳು ನಗರ ಪ್ರವಾಹ, ನೀರಿನ ಕೊರತೆ, ತೀವ್ರ ಬಿಸಿ ಮತ್ತು ವೇಗದ ನಗರ ವಿಸ್ತರಣೆಯಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ.  ವಿಶ್ವಬ್ಯಾಂಕ್ ಅಧ್ಯಯನದಲ್ಲಿಯೂ ಬೆಂಗಳೂರು, ಹೈದರಾಬಾದ್ ಮತ್ತು ಇಂದೋರ್‌ನಂತಹ ನಗರಗಳ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ನಗರೀಕರಣದಿಂದ ಪ್ರವಾಹದ ಅಪಾಯ ಹೆಚ್ಚುತ್ತಿರುವುದನ್ನು ಗುರುತಿಸಲಾಗಿದೆ.

ಕರ್ನಾಟಕದ ಇತರ ನಗರಗಳಲ್ಲೂ ಮಳೆನೀರು ನಿರ್ವಹಣೆ, ಕೆರೆ-ಕಟ್ಟೆಗಳ ಸಂರಕ್ಷಣೆ, ಹಸಿರು ಪ್ರದೇಶ, ನಗರ ಬಿಸಿ ಮತ್ತು ಕುಡಿಯುವ ನೀರುಗಳನ್ನು ಪ್ರತ್ಯೇಕ ಸಮಸ್ಯೆಗಳಾಗಿ ನೋಡುವ ಬದಲು ಹವಾಮಾನ ಸಿದ್ಧತೆಯ ಒಂದೇ ಚೌಕಟ್ಟಿನಲ್ಲಿ ನೋಡುವ ಅಗತ್ಯವಿದೆ.

ಹವಾಮಾನ ಸಿದ್ಧತೆಗೂ ‘ರಿಪೋರ್ಟ್ ಕಾರ್ಡ್’ ಬೇಕು : ಶಾಲೆ ಅಥವಾ ಕಾಲೇಜಿನಲ್ಲಿ ವಿದ್ಯಾರ್ಥಿಯ ಪ್ರಗತಿ ತಿಳಿಯಲು ವರ್ಷದಿಂದ ವರ್ಷಕ್ಕೆ ಅಂಕಗಳನ್ನು ನೋಡುತ್ತೇವೆ. ಅದೇ ರೀತಿ ನಗರಗಳ ಹವಾಮಾನ ಸಿದ್ಧತೆಯನ್ನೂ ಪ್ರತಿ ವರ್ಷ ಅಳೆಯುವ ‘ಕ್ಲೈಮೇಟ್ ರಿಪೋರ್ಟ್ ಕಾರ್ಡ್’ ಅಗತ್ಯ. ಯಾವ ನಗರದಲ್ಲಿ ಎಷ್ಟು ಹಸಿರು ಪ್ರದೇಶ ಹೆಚ್ಚಿದೆ?,  ಎಷ್ಟು ಮಳೆನೀರು ಸಂಗ್ರಹಿಸಲಾಗುತ್ತಿದೆ?, ಎಷ್ಟು ಕೆರೆಗಳು ಉಳಿದಿವೆ?, ನಗರ ಪ್ರವಾಹ ಎಷ್ಟು ಕಡಿಮೆಯಾಗಿದೆ?, ಬಿಸಿಗಾಳಿಯ ಸಂದರ್ಭದಲ್ಲಿ ಎಷ್ಟು ಜನರಿಗೆ ರಕ್ಷಣೆ ಸಿಗುತ್ತಿದೆ?, ವಿಪತ್ತು ಎಚ್ಚರಿಕೆ ಎಷ್ಟು ವೇಗವಾಗಿ ತಲುಪುತ್ತಿದೆ? ಇಂತಹ ಪ್ರಶ್ನೆಗಳಿಗೆ ಅಂಕಿ-ಅಂಶದ ಉತ್ತರ ಸಿಗಬೇಕು.

ಹವಾಮಾನ ಬದಲಾವಣೆಯ ಅಪಾಯವನ್ನು ಅಳೆಯುವುದನ್ನು ನಿಲ್ಲಿಸಿದರೆ, ನಗರಗಳು ನಿಜವಾಗಿಯೂ ಸಿದ್ಧವಾಗುತ್ತಿವೆಯೇ ಅಥವಾ ಕೇವಲ ಸಿದ್ಧವಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿವೆಯೇ ಎಂಬುದು ತಿಳಿಯುವುದಿಲ್ಲ.

ಗ್ರಾಮೀಣ ಭಾಗದಲ್ಲೂ ವೆದರ್‌ ರೀಡಿಂಗ್‌ ಬೇಕು : ಪಶ್ಚಿಮ ಘಟ್ಟ ಸೇರಿದಂತೆ ರಾಜ್ಯದಲ್ಲಿ, ದೇಶದಲ್ಲಿ ಹವಾಮಾನ ಬದಲಾವಣೆಯಾಗುತ್ತಿದೆ. ಇದು ಗ್ರಾಮೀಣ ಭಾಗದಲ್ಲಿ ಕೂಡಾ ದೊಡ್ಡ ಹೊಡೆತ ನೀಡುತ್ತಿದೆ. ಕೃಷಿಗೆ ವಿಪರೀತ ಹಾನಿಯಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬನೂ ಅಥವಾ ಗ್ರಾಮದಲ್ಲಿ ಕನಿಷ್ಟ 10 ಮಂದಿ ಕೃಷಿಕರು ವೆದರ್‌ ರೀಡಿಂಗ್‌ ಕಡ್ಡಾಯವಾಗಿ ಮಾಡಬೇಕು. ಈ ಮೂಲಕ ಹವಾಮಾನ ಮಾಹಿತಿಯನ್ನು ಖಾಸಗಿಯಾಗಿಯೂ ದಾಖಲಿಸುವ ಮೂಲಕ ಭವಿಷ್ಯದ ಕೃಷಿಯನ್ನು, ಗ್ರಾಮೀಣ ಭಾಗದಲ್ಲಿಯೂ , ಹಳ್ಳಿಯಲ್ಲೂ ಹವಾಮಾನ ಬದಲಾವಣೆಯ ಎಚ್ಚರಿಕೆಯನ್ನು ವಹಿಸಬೇಕಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

7 hours ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

7 hours ago

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ತಮಿಳುನಾಡು ಮೂರು ಹೊಸ ಆನೆ…

18 hours ago

ಹವಾಮಾನ ವರದಿ | 29-08-2026 | ಕರ್ನಾಟಕದಲ್ಲಿ ಸೆಪ್ಟೆಂಬರ್‌ ಆರಂಭದಲ್ಲಿ ಮಳೆ ಚುರುಕಾಗುವ ಲಕ್ಷಣ…?

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿ ಭಾಗದಲ್ಲಿ ಮಧ್ಯಮ ಸ್ತರದ ತಿರುವಿಕೆ ಉಂಟಾಗಿದ್ದು, ಇದರ ಪ್ರಭಾವದಿಂದ…

18 hours ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್

ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ…

2 days ago

ಕರ್ನಾಟಕದ 101 ತಾಲ್ಲೂಕುಗಳು ಬರಪೀಡಿತ : ಇನ್ನೂ 3 ತಾಲ್ಲೂಕುಗಳ ಮೇಲೂ ಬರದ ಛಾಯೆ

ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 89 ತೀವ್ರ ಹಾಗೂ 12…

2 days ago