ಭಾರತೀಯ ಉಪಖಂಡದಲ್ಲಿ ಈ ಬಾರಿ ಮಳೆಗಾಲ ಹಾಗೂ ಚಳಿಗಾಲದ ನಡುವೆ ಬೆಳೆಯುವ ಬೆಳೆಗಳ ಮೇಲೆ ಈ ಬಾರಿ ಪರಿಣಾಮ ಇದೆ ಎಂದು ಕೃಷಿ ತಜ್ಞರು ಕೆಲ ದಿನಗಳ ಹಿಂದೆ ಹೇಳಿದ್ದರು. ಈ ಬಾರಿ ಮಾರ್ಚ್ ಮತ್ತು ಏಪ್ರಿಲ್‌ನಿಂದ ಬಿಸಿಲಿನ ತೀವ್ರತೆಯಿಂದ ಅಥವಾ ಒಮ್ಮೆಲೇ ಸುರಿಯುವ ಮಳೆಯಿಂದ ಕೃಷಿ ಹಾನಿಯಾಗಬಹುದು ಎಂದು ಮಾಹಿತಿ ನೀಡಿದ್ದರು. ಇದಕ್ಕೆ ಪೂರಕವಾಗಿ ಇದೀಗ ಅಂಟಾರ್ಟಿಕಾದಲ್ಲಿನ ವಾತಾವರಣವೂ ಏರಿಳಿತವಾಗುತ್ತಿರುವುದು ಕಂಡುಬಂದಿದೆ. ಈಗ ಅಂಟಾರ್ಟಿಕಾದಲ್ಲಿ -35 ಡಿಗ್ರಿಯಿಂದ -45 ಡಿಗ್ರಿಯವರೆಗೆ ಕಂಡುಬಂದಿದೆ. ಸಾಮಾನ್ಯವಾಗಿ ಇಲ್ಲಿನ ಉಷ್ಣತೆಯ ಮೇಲೆ ಇಲ್ಲಿಯ ಮಳೆಯೂ ಪರಿಣಾಮ ಬೀರುತ್ತದೆ. ಕಳೆದ ಕೆಲವು ಸಮಯಗಳಿಂದ ಇಲ್ಲಿ ಉಷ್ಣತೆಯಲ್ಲಿ ಏರಿಳಿತ ಕಂಡುಬರುತ್ತಿದೆ.
ತಜ್ಞರ ಪ್ರಕಾರ ಈಗ ಸಾಮಾನ್ಯವಾಗಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೇಕಾಗುತ್ತದೆ. ಇದರಿಂದ ಕೊಂಚ ಏರುಪೇರಾಗಿದ್ದರೂ ಕೃಷಿ ಸಹಿಸಿಕೊಳ್ಳುತ್ತದೆ. ಆದರೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ಬೆಳೆಗಳಿಗೆ ಹಾನಿಯಾಗುತ್ತದೆ ಎಂದು ಕೃಷಿ ತಜ್ಞರು ಹೇಳಿದ್ದರು. ಈಚೆಗಿನ ಕೆಲವು ವರ್ಷಗಳಲ್ಲಿ ತಾಪಮಾನವು ವಿಪರೀತ ಏರಿಕೆಯಾಗುತ್ತದೆ. ಏರಿಕೆಯಾದ ತಕ್ಷಣವೇ ಅರಣ್ಯ ಪ್ರದೇಶದಲ್ಲಿ, ಬಯಲು ಪ್ರದೇಶದಲ್ಲಿ ಮಳೆಯಾಗುತ್ತದೆ. ಈ ಮೂಲಕ ವಾತಾವರಣದ ತಾಪಮಾನ ಇಳಿಕೆಯಾಗುತ್ತಿತ್ತು. ಆದರೆ ತಾಪಮಾನ ವಿಪರೀತ ಏರಿಕೆಯಾದರೆ ಸಹಜವಾಗಿಯೇ ವಿಪರೀತ ಗಾಳಿ, ಮಳೆಯಾಗುತ್ತದೆ. ಇದರಿಂದ ಕೃಷಿಗೂ ಹಾನಿಯಾಗುತ್ತದೆ. ಈ ವೈಪರೀತ್ಯ ಕಳೆದ ಕೆಲವು ವರ್ಷಗಳಿಂದ ನಡೆಯುತ್ತದೆ. ಹೀಗೇ ವಿಪರೀತ ತಾಪಮಾನದ ಕಾರಣದಿಂದ ಅಡಿಕೆ ಬೆಳೆಗಾರರಿಗೂ ಸಂಕಷ್ಟ ಇದ್ದರೆ ದ್ವಿದಳ ಧಾನ್ಯ ಬೆಳೆಯುವ ಕೃಷಿಕರಿಗೆ, ಭತ್ತ, ಗೋಧಿ ಬೆಳೆಯುವ ರೈತರಿಗೆ ಸೇರಿದಂತೆ ಬಹುತೇಕ ಎಲ್ಲಾ ರೈತರಿಗೂ ಸಮಸ್ಯೆಯಾಗುತ್ತದೆ.
ಇದೀಗ ಅಂಟಾರ್ಟಿಕಾದಲ್ಲಿನ ವಾತಾವರಣವೂ ಗಂಭೀರ ಸ್ಥಿತಿಯಲ್ಲಿದೆ ಎನ್ನುವುದು ಇನ್ನೊಂದು ಅಧ್ಯಯನ. ಅಂಟಾರ್ಟಿಕಾ ಉಷ್ಣತೆಯು -10 ಡಿಗ್ರಿಯಿಂದ -60 ಡಿಗ್ರಿಯ ಆಸುಪಾನಲ್ಲಿ ಇರುತ್ತದೆ. ಸಾಮಾನ್ಯವಾಗಿ -50 ಡಿಗ್ರಿಯ ಆಸುಪಾಸಿನಲ್ಲಿ ಇದ್ದರೆ ಇಡೀ ಖಂಡದ ವಾತಾವರಣಗಳು ಸರಿಯಾಗೇ ಇರುತ್ತದೆ. ಭೂಮಿಯ ಒಂದು ಭಾಗದಲ್ಲಿ ಉಷ್ಣತೆ ಏರಿಕೆಯಾದಾಗ ಇಲ್ಲಿನ ತಂಪುಗಾಳಿ ಬಿಸಿಗಾಳಿ ಇರುವ ಕಡೆಗೆ ನುಗ್ಗಿ ಮಳೆಗಾಲ ಆರಂಭವಾಗುತ್ತದೆ. ಭೂಮಿಯ ಇನ್ನೊಂದು ಭಾಗದಲ್ಲಿ ಉಷ್ಣತೆಯು ಏರಿಕೆಯಾದಾಗ ಈ ಗಾಳಿಯೂ ಬಿಸಿಗಾಳಿಯ ಕಡೆಗೆ ನುಗ್ಗುತ್ತದೆ. ಹೀಗಾಗಿ ಏಷ್ಯಾದಲ್ಲಿ ಎಪ್ರಿಲ್ ನಿಂದ ಸೆಪ್ಟಂಬರ್ ವರೆಗೆ ಮಳೆಗಾಲ ಇರುತ್ತದೆ.
3,000 ಮೀಟರ್ (9,800 ಅಡಿ) ಎತ್ತರದಲ್ಲಿರುವ ಅಂಟಾರ್ಕ್ಟಿಕ್‌ನ ಡೋಮ್ ಸಿ ನಲ್ಲಿರುವ ಕಾನ್ಕಾರ್ಡಿಯಾ ಸಂಶೋಧನಾ ನೆಲೆಯು ದಾಖಲೆಯ ಪ್ರಕಾರ ಈ ಬಾರಿ -11.5 ಡಿಗ್ರಿ ಸೆಲ್ಸಿಯಸ್ ವರೆಗೆ ಈ ಬಾರಿಗೆ ಇಳಿಕೆಯಾಗಿದೆ ಎಂದು ಪ್ರಾನ್ಸ್ ಹವಾಮಾನ ಶಾಸ್ತ್ರಜ್ಞ ಕಪಿಕಿಯಾನ್ ಟ್ವೀಟ್ ಮಾಡಿದ್ದಾರೆ. ಅಂದರೆ ಪೂರ್ವ ಅಂಟಾರ್ಕ್ಟಿಕಾದಲ್ಲಿ ಇದು ಹೆಚ್ಚಿನ ತಾಪಮಾನವಾಗಿದೆ. ಇದು ಸಾಮಾನ್ಯಕ್ಕಿಂತ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ ಎಂದು ತಜ್ಞರು ಹೇಳುತ್ತಾರೆ.
ಸಾಮಾನ್ಯವಾಗಿ, ದಕ್ಷಿಣ ಬೇಸಿಗೆಯ ಅಂತ್ಯದ ವೇಳೆಗೆ ಇಲ್ಲಿ ತಾಪಮಾನವು ಕುಸಿಯುತ್ತದೆ, ಆದರೆ ಅಂಟಾರ್ಕ್ಟಿಕಾದ ಡುಮಾಂಟ್ ಪ್ರದೇಶದಲ್ಲಿ ಮಾರ್ಚ್‌ನಲ್ಲಿ 4.9 ಡಿಗ್ರಿಯೊಂದಿಗೆ ದಾಖಲೆಯ ತಾಪಮಾನ ದಾಖಲಿಸಿದೆ. ಸಾಮಾನ್ಯವಾಗಿ ಈಗ ತಾಪಮಾನವು ಈಗಾಗಲೇ ಶೂನ್ಯ ಅಥವಾ ಅದಕ್ಕಿಂತಲೂ ಕಡಿಮೆ ಇರುವ ಸಮಯ. ಹೀಗಾಗಿ ಈ ವಾತಾವರಣವು ಈಗ ಐತಿಹಾಸಿಕ ಘಟನೆಯಾಗಿದೆ ಎಂದು ಹವಾಮಾನ ಶಾಸ್ತ್ರಜ್ಞ ಫ್ರಾನ್ಸ್ ಮೆಟಿಯೊದ ಗೇಟನ್ ಹೇಮ್ಸ್ ವಿವರಿಸಿದ್ದಾರೆ.
ಭೂವಿಜ್ಞಾನಿ ಜೊನಾಥನ್ ವಿಲ್ಲೆ ಟ್ವೀಟ್ ಮಾಡಿ, ಇಲ್ಲಿ ಸಾರ್ವಕಾಲಿಕ ದಾಖಲೆಯ ತಾಪಮಾನವನ್ನು 1.5 ಡಿಗ್ರಿಯನ್ನು ಮುರಿದಿದೆ. ಇದು ಪೆಸಿಫಿಕ್ ವಾಯುವ್ಯ 2021 ಹೀಟ್ ವೇವ್ ರೀತಿಯ ಘಟನೆಯಾಗಿದೆ ಎಂದ ಅವರು ಎಂದಿಗೂ ಈ ರೀತಿ ಸಂಭವಿಸಬಾರದು ಎಂದು ಹೇಳಿದ್ದಾರೆ.
1979 ರ ನಂತರ ಮೊದಲ ಬಾರಿಗೆ ಫೆಬ್ರವರಿ ಅಂತ್ಯದಲ್ಲಿ ಅಂಟಾರ್ಕ್ಟಿಕಾದ ಸಮುದ್ರದ ಮಂಜುಗಡ್ಡೆಯು ಎರಡು ಮಿಲಿಯನ್ ಚದರ ಕಿಲೋಮೀಟರ್ (772,204 ಚದರ ಮೈಲಿಗಳು) ಗಿಂತ ಕಡಿಮೆಯಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ನಲ್ಲಿನ ರಾಷ್ಟ್ರೀಯ ಸ್ನೋ ಮತ್ತು ಐಸ್ ಡೇಟಾ ಸೆಂಟರ್ ಹೇಳಿದೆ. ಇದೀಗ ವಾತಾವರಣದ ಏರುಪೇರು ಇಲ್ಲಿನ ಮಳೆಯ ಮೇಲೂ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.
1982 ರಲ್ಲಿ ಅಂಟಾರ್ಟಿಕಾದಲ್ಲಿ 19.8 ಡಿಗ್ರಿಯ ವಾತಾವರಣ ಇದ್ದಾಗ ಈ ಆ ವರ್ಷ ಮಳೆಯ ಕೊರತೆ ವಿಪರೀತ ಕಂಡುಬಂದಿತ್ತು ಎಂದು ಮಳೆ ಮಾಹಿತಿ ದಾಖಲೆಗಾರ ಪಿಜಿಎಸ್‌ಎನ್ ಪ್ರಸಾದ್ ಅವರು ಮಾಹಿತಿ ನೀಡುತ್ತಾರೆ. 1983 ರಲ್ಲಿ ಅಂಟಾರ್ಟಿಕಾದಲ್ಲಿ -89 ಡಿಗ್ರಿಗೆ ಉಷ್ಣತೆ ತಲುಪಿದಾಗ ಮಳೆ ದಾಖಲೆಯ ಪ್ರಕಾರ ವಿಪರೀತ ಮಳೆಯಾಗಿತ್ತು.
ಪಿಜಿಎಸ್‌ಎನ್ ಪ್ರಸಾದ್ ಅವರ ದಾಖಲೆಯ ಪ್ರಕಾರ 1982 ನವೆಂಬರ್ 16 ರಿಂದ 1983 ಮೇ 4 ರ ತನಕ ಮಳೆ ಇರಲಿಲ್ಲ. 1983 ರಲ್ಲಿ ನೈರುತ್ಯ ಮುಂಗಾರು ಬಹಳ ತಡವಾಗಿ ಜೂನ್ 16 ರಂದು ಆರಂಭ. ಅದೇ ವರ್ಷ ಜುಲೈ 19 ರಿಂದ 24 ರ ತನಕ 859 ಮಿ.ಮೀ.ದಾಖಲಾಗಿತ್ತು. ಬೇಸಗೆಯಲ್ಲಿ ನೀರಿಗೆ ಬಹಳಷ್ಟು ಹಾಹಾಕಾರ ಉಂಟಾಗಿತ್ತು.
ಈ ಬಾರಿ ಅಂಟಾರ್ಟಿಕಾದಲ್ಲಿ ಕನಿಷ್ಟ ಉಷ್ಣತೆ ದಾಖಲಾಗಿದೆ. ಹೀಗಾಗಿ ಇಲ್ಲಿ ಅದರ ಪ್ರಭಾವ ಎಷ್ಟು ಎಂಬುದು ಪ್ರಕೃತಿ ವಿಸ್ಮಯವಾಗಿದೆ, ಕುತೂಹಲವಿದೆ.