ರಸ್ತೆಯ ಗುಂಡಿಗಳನ್ನು ಮುಚ್ಚಲು ಕೈಗಾರಿಕಾ ತ್ಯಾಜ್ಯಗಳನ್ನು ಸಂಸ್ಕರಿಸಿ ಅದರ ಮೂಲಕ ಸಿದ್ಧಪಡಿಸಿದ ಮಿಶ್ರಣವನ್ನು ಅಳವಡಿಕೆ ಮಾಡುವ ತಂತ್ರಜ್ಞಾನವೊಂದು ಈಗ ಬಳಕೆ ಬರುತ್ತಿದೆ. ಇಕೋಫಿಕ್ಸ್ ಎನ್ನುವ ಹೆಸರಿನ ಮೂಲಕ ಮಹಾನಗರಗಳಲ್ಲಿ ಈಗಾಗಲೇ ಅಳವಡಿಕೆಯಾಗಿದ್ದು, ಪುತ್ತೂರಿನಂತಹ ಪ್ರದೇಶಗಳಲ್ಲೂ ಈಗ ಪ್ರಯತ್ನ ನಡೆಯುತ್ತಿದೆ. ಗ್ರಾಮೀಣ ಭಾಗದ ರಸ್ತೆಗಳಿಗೂ ಈ ಪ್ರಯತ್ನ ನಡೆಯಬೇಕಿದೆ. ಒಂದು ವೇಳೆ ಯಶಸ್ವಿಯಾದರೆ ಇಂತಹ ಮಹತ್ವದ ತಂತ್ರಜ್ಞಾನವೊಂದು ಗ್ರಾಮೀಣ ಭಾಗಕ್ಕೂ ತಲುಪಲಿದೆ.
ಮಳೆ ನೀರು ರಸ್ತೆಯಲ್ಲಿ ತುಂಬಿದ್ದರೂ ಅದರ ಮೇಲೆಯೇ ರಸ್ತೆ ಗುಂಡಿ ಮುಚ್ಚಲು ಬಳಕೆ ಮಾಡಬಹುದಾದ ಇಕೋಫಿಕ್ಸ್ ಎಂಬುದು ಬಳಕೆಗೆ ಸಿದ್ಧವಾಗಿರುವ ರಸ್ತೆ ಗುಂಡಿ ದುರಸ್ತಿ ಮಿಶ್ರಣ.ಇದನ್ನು ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ (CSIR-CRRI) ಹಾಗೂ ರಾಮುಕಾ ಗ್ಲೋಬಲ್ ಸರ್ವೀಸಸ್ ಎಂಬ ಸ್ಟಾರ್ಟ್ಅಪ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಈ ತಂತ್ರಜ್ಞಾನವನ್ನು ದೆಹಲಿ, ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಪ್ರಯೋಗ ಮಾಡಲಾಗಿದೆ. ಇಕೋಫಿಕ್ಸ್ ಮೂಲಕ ದುರಸ್ತಿ ಮಾಡಿದ ತಕ್ಷಣ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬಹುದಾಗಿದೆ. ಇಕೋಫಿಕ್ಸ್ ಬಳಸಿದ ಸ್ಥಳಗಳ ನಿರ್ವಹಣೆಗೆ ಈ ಸಂಸ್ಥೆಗಳು 2.5 ವರ್ಷಗಳ ಯಾವುದೇ ನಿರ್ವಹಣೆ ಅಗತ್ಯ ಇಲ್ಲ ಎಂದು ಪ್ರಾಯೋಗಿಕ ಪರೀಕ್ಷೆಯ ವೇಳೆ ಸಂಸ್ಥೆಗಳು ಹೇಳಿವೆ.
ಈ ತಂತ್ರಜ್ಞಾನವನ್ನು ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಹಿರಿಯ ಪ್ರಧಾನ ವಿಜ್ಞಾನಿ ಮತ್ತು ವಿಭಾಗದ ಮುಖ್ಯಸ್ಥ ಸತೀಶ್ ಪಾಂಡೆ ಹೆಚ್ಚಿನ ಅಧ್ಯಯನ ಮಾಡಿದ್ದರು. ಸಂಸ್ಕರಿಸಿದ ಕೈಗಾರಿಕಾ ತ್ಯಾಜ್ಯದ ಬಳಕೆ ಇಲ್ಲಿದೆ. ಕೈಗಾರಿಕಾ ತ್ಯಾಜ್ಯಗಳನ್ನು ವಿವಿಧ ಮಾದರಿಯಲ್ಲಿ ಸಂಸ್ಕರಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ಗುಣಮಟ್ಟವೂ ಇರಲಿದೆ. ಇಕೋಫಿಕ್ಸ್ ಅನ್ನು ರಸ್ತೆ ನೀರು ತುಂಬಿದ ಪರಿಸ್ಥಿತಿಗಳಲ್ಲಿ ಕೂಡಾ ಬಳಕೆ ಮಾಡಲು ಸಾಧ್ಯವಿದೆ. ಸಾಮಾನ್ಯವಾಗಿ ಇದುವರೆಗಿನ ಸಾಂಪ್ರದಾಯಿಕ ವಿಧಾನದಲ್ಲಿ ನೀರು ಅಥವಾ ರಸ್ತೆ ಗುಂಡಿಯನ್ನು ಸ್ವಚ್ಛ ಮಾಡಿ ಆ ಬಳಿಕ ಪ್ರಾರಂಭಿಕ ಕೋಟ್ ಹಾಕಿದ ಬಳಿಕವೇ ಡಾಮರು ಎರೆಯಬೇಕಾಗಿತ್ತು. ಆದರೆ ಈ ಇಕೋಫಿಕ್ಸ್ ಅಂತಹ ಯಾವುದೇ ವಿಧಾನಗಳ ಅಗತ್ಯ ಇಲ್ಲದೆಯೇ ನೀರು ತುಂಬಿರುವ ರಸ್ತೆಯ ಗುಂಡಿಗೆ ಅಳವಡಿಕೆ ಮಾಡಲು ಸಾಧ್ಯವಾಗುತ್ತಿದೆ. ಇದರಲ್ಲಿ ಕಬ್ಭಿಣ ಮತ್ತು ಉಕ್ಕಿನ ಕೈಗಾರಿಕೆಗಳಿಂದ ಬರುವ ಕೈಗಾರಿಕಾ ತ್ಯಾಜ್ಯಗಳ ಸಂಸ್ಕರಿಸಿದ ಅಂಶಗಳು ವಿಶೇಷವಾಗಿ ಇರುವುದರಿಂದ ರಸ್ತೆಗಳು ಹೆಚ್ಚು ಕಾಲ ಬಾಳ್ವಿಕೆಯೂ ಬರಲಿದೆ.
ಬೆಂಗಳೂರಿನಲ್ಲಿಯೂ ಈ ವಿಧಾನದ ಅಳವಡಿಕೆ ಮಾಡಲಾಗಿದೆ.ಬಿಬಿಎಂಪಿ ಪೈಲಟ್ ಪ್ರಾಜೆಕ್ಟ್ ಆಗಿ ನಗರದ ಕೆಲವು ರಸ್ತೆಗಳಿಗೆ ಅಳವಡಿಕೆ ಮಾಡಿದೆ.ಇದೀಗ ಪುತ್ತೂರಿನಂತಹ ಪ್ರದೇಶದಲ್ಲೂ ಅಳವಡಿಕೆಯಾಗಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಬಹಳ ಆಸಕ್ತಿಯಿಂದ ಹೊಸತಂತ್ರಜ್ಞಾನವನ್ನು ಪುತ್ತೂರಿನಂತಹ ಪ್ರದೇಶಕ್ಕೂ ಅಳವಡಿಕೆ ಮಾಡಲು ಉತ್ಸಾಹ ತೋರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಶ: ಮೊದಲ ಬಾರಿಗೆ ಈ ಪ್ರಯೋಗ ನಡೆಯುತ್ತಿದೆ. ಯಶಸ್ವಿಯಾದರೆ ಮಲೆನಾಡು ಭಾಗದ ರಸ್ತೆಗಳಿಗೆ ಹೆಚ್ಚು ಅನುಕೂಲವಾಗಬಹುದು.