ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಹುತೇಕ ಸದಸ್ಯರೂ ಹಳ್ಳಿಗರು. ಸಹಕಾರಿ ಸಂಘಗಳ ನಿಯಮಗಳನ್ನು ಅಷ್ಟೊಂದು ಅಧ್ಯಯನ ಮಾಡಿದವರು ಹೆಚ್ಚಿನ ಜನರಿಲ್ಲ. ಹಾಗಾಗಿ ಅನೇಕ ನಿಯಮಗಳನ್ನು ಅರ್ಥೈಸಿಕೊಳ್ಳುವುದೂ ಅನೇಕರುಗಳಿಗೆ ಕಷ್ಟವಾಗುತ್ತದೆ. ಸಹಕಾರಿ ಸಂಘ-ಸಾಲ-ಉಳಿತಾಯ ಇಷ್ಟೇ ಆಗಿದೆ.
ಇತ್ತೀಚೆಗೆ ಬಹುತೇಕ ಸಹಕಾರಿ ಸಂಘಗಳೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಾಕಷ್ಟು ಲಾಭ ಗಳಿಸುತ್ತಿವೆ.ಗಳಿಸಿದ ಲಾಭದಲ್ಲಿ ಒಂದು ಭಾಗವನ್ನು ತನ್ನ ಸದಸ್ಯರಿಗೆ ಡಿವಿಡೆಂಟ್ ಮುಖಾಂತರ ಹಂಚುತ್ತಲೂ ಇವೆ.ಆದರೆ ಸದಸ್ಯರಿಗಾಗಿ ಹಂಚಲು ಮೀಸಲಿಟ್ಟ ಡಿವಿಡೆಂಟ್ ಮೊತ್ತದ ಒಂದು ದೊಡ್ಡ ಭಾಗವನ್ನು ಸದಸ್ಯರು ಪಡೆದುಕೊಳ್ಳದೇ ಇರುವುದೂ ಗೋಚರಿಸುತ್ತಿದೆ.
ಕಾಲಕಾಲಕ್ಕೆ ಮರುನಿಗದಿಸಲಾದ ಸದಸ್ಯತನಾ ಶುಲ್ಕವನ್ನು ಪಾವತಿಸದ ಸದಸ್ಯರುಗಳಿಗೆ,ಸುಸ್ತಿ ಸಾಲ ಹೊಂದಿದ ಸದಸ್ಯರುಗಳಿಗೆ ಮತ್ತು ಇದೇ ಮಾದರಿಯಲ್ಲಿ ನಿಗದಿಸಲಾದ ಕಾರಣಗಳಿಗಾಗಿ ಒಂದಷ್ಟು ಸದಸ್ಯರುಗಳ ಡಿವಿಡೆಂಟ್ ಮೊತ್ತ ಸಂದಾಯ ಮಾಡಲು ಸಹಕಾರ ಸಂಘ ನಿರಾಕರಿಸ ಬಹುದು.ಮೃತ ಸದಸ್ಯರುಗಳ ಹೆಸರಿನಲ್ಲಿ ಸಂದಾಯವಾಗ ಬೇಕಿರುವ ಡಿವಿಡೆಂಟ್ ಮೊತ್ತದ ವಿತರಣೆಯಲ್ಲೂ ಒಂದಷ್ಟು ಅಡೆತಡೆಗಳು ಎದುರಾಗ ಬಹುದು.ಆದರೆ ಈ ವರ್ಗದ ಸದಸ್ಯರ ಹೊರತಾಗಿಯೂ ದೊಡ್ಡ ಸಂಖ್ಯೆಯ ಸದಸ್ಯರುಗಳು ಡಿವಿಡೆಂಟ್ ಪಡೆದುಕೊಳ್ಳುತ್ತಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಕಾರಣ ಹುಡುಕುತ್ತಾ ಹೋದಂತೆ ಒಂದಷ್ಟು ವಿಷಯಗಳು ಬೆಳಕಿಗೆ ಬಂದವು.
ಒಂದಷ್ಟು ಸದಸ್ಯರು ಸಹಕಾರ ಸಂಘ ಲಾಭ ಗಳಿಸ ಬಲ್ಲದು ಮತ್ತು ಬಂದ ಲಾಭದಲ್ಲಿ ನಮಗೂ ಒಂದು ಭಾಗ ಕೊಡಬಹುದು ಎಂಬ ಕಲ್ಪನೆಯೂ ಇಲ್ಲದವರು.ಡಿವಿಡೆಂಟ್ ಎಂಬ ಪದದ ಅರ್ಥವೇ ಇವರಿಗಾಗಿಲ್ಲ.ಸಹಕಾರ ಸಂಘದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ಡಿವಿಡೆಂಟ್ ಬಗ್ಗೆ ತಿಳಿದು ಕೊಳ್ಳದ ಸದಸ್ಯರುಗಳ ಸಂಖ್ಯೆಯೂ ಸಣ್ಣದೇನಲ್ಲ. ಯಾವ ಸದಸ್ಯರುಗಳಿಗೆ ಲಾಭಾಂಶ ಹಂಚಿಕೆಯಾಗ್ತದೆ ಎಂಬುದು ಬಹುತೇಕ ಸದಸ್ಯರುಗಳಿಗೂ ಗೊತ್ತಿಲ್ಲ.ತಾವೇನೂ ವ್ಯವಹಾರ ಮಾಡಿಲ್ಲ ಆದ್ದರಿಂದ ಸದಸ್ಯರಾಗಿದ್ದರೂ ತಮಗೆ ಲಾಭಾಂಶ ಸಿಗದು ಅಂತ ತಮ್ಮಷ್ಟಕ್ಕೆ ತಾವೇ ಊಹಿಸಿಕೊಂಡವರ ಸಂಖ್ಯೆ ಅಗಾಧವಾದದ್ದು.
ತಮಗೆ ವೈಯಕ್ತಿಕವಾಗಿ ಲಾಭಾಂಶ ಹಂಚಿಕೆಯ ಮಾಹಿತಿ ಬಂದಿಲ್ಲ ಎಂಬ ಕಾರಣಕ್ಕಾಗಿಯೂ ಈ ಬಗ್ಗೆ ವಿಚಾರಿಸದ ಸದಸ್ಯರುಗಳೂ ಇದ್ದರು.ತಾವು ಕಚೇರಿಗೆ ಹೋದಾಗ ಸಿಬ್ಬಂದಿಗಳು ಅವರಾಗಿಯೇ ಕರೆದು ಲಾಭಾಂಶದ ಬಗ್ಗೆ ಹೇಳಿಲ್ಲದ ಕಾರಣ ತಾವು ಲಾಭಾಂಶ ಪಡೆದುಕೊಂಡಿಲ್ಲ ಅಂತ ಒಂದಷ್ಟು ಸದಸ್ಯರ ದೂರು.
ಇವೆಲ್ಲದರ ಜೊತೆಗೆ ಹಳ್ಳಿಗರೇ ಬಹುತೇಕ ಸದಸ್ಯರಾಗಿರುವ ,ಆಧುನಿಕ ವ್ಯವಸ್ಥೆಗಳು ಕನಿಷ್ಟ ಮಟ್ಟದಲ್ಲಿರುವ ಸಂಸ್ಥೆಗಳಿಂದ ಅತ್ಯಾಧುನಿಕ ವ್ಯವಸ್ಥೆಯ,ಸೇವೆಯ ಬೇಡಿಕೆ ಮುಂದಿಡುವವರೂ ಇದ್ದಾರೆ. ಕೊನೆಗೆ ಹೀಗೆ ವರ್ಷಾನುಗಟ್ಟಲೆ ಸದಸ್ಯರು ಪಡೆಯಲು ವಿಫಲರಾದ ಲಾಭಾಂಶ ಮೊತ್ತ ಏನಾಗ್ತದೆ ಎಂಬ ಪ್ರಶ್ನೆ ಇದೆ.ಒಂದು ಹಂತದಲ್ಲಿ ಇಂತಹ ಮೊತ್ತವನ್ನು ಸಂಸ್ಥೆಯ ಕ್ಷೇಮನಿಧಿಗೆ ಸಂಸ್ಥೆ ವರ್ಗಾಯಿಸೀತು.