ಉಳ್ಳಾಲ–ಸೋಮೇಶ್ವರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತದ ಸಮಸ್ಯೆ ಕುರಿತು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಗಂಭೀರವಾಗಿ ಧ್ವನಿಯೆತ್ತಿದ್ದಾರೆ.
ಲೋಕಸಭೆಯ ನಿಯಮ 377ರಡಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಕರಾವಳಿ ತೀರದ ಸಂರಕ್ಷಣೆಗೆ ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕರಾವಳಿಯ ಅರ್ಧ ಭಾಗ ಕೊರೆತಕ್ಕೆ ಒಳಪಡುವ ಆತಂಕ : ಸಂಸದರು ನೀಡಿದ ಮಾಹಿತಿಯ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 36.66 ಕಿ.ಮೀ. ಕರಾವಳಿ ತೀರದ ಪೈಕಿ ಸುಮಾರು 17.74 ಕಿ.ಮೀ. (ಶೇ.48.40) ಭಾಗವು ಕಡಲ್ಕೊರೆತಕ್ಕೆ ಒಳಗಾಗಿದೆ. ಇದು ಕರ್ನಾಟಕ ರಾಜ್ಯದ ಸರಾಸರಿ ಶೇ.24 ಕ್ಕಿಂತ, ರಾಷ್ಟ್ರೀಯ ಸರಾಸರಿ ಶೇ.33.6 ಕ್ಕಿಂತಲೂ ಗಣನೀಯವಾಗಿ ಹೆಚ್ಚಾಗಿದೆ.
ಇದರಿಂದಾಗಿ ಜಿಲ್ಲೆಯ ಕೇವಲ ಶೇ.21.9 ರಷ್ಟು ಕರಾವಳಿ ಮಾತ್ರ ಸದ್ಯಕ್ಕೆ ಸುರಕ್ಷಿತವಾಗಿದೆ, ಇದು ನೆರೆಯ ಜಿಲ್ಲೆಗಳಿಗಿಂತಲೂ ಕಡಿಮೆ ಪ್ರಮಾಣ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹವಾಮಾನ ವೈಪರೀತ್ಯ, ಅಲೆಗಳ ಅಬ್ಬರದಿಂದ ಹೆಚ್ಚುತ್ತಿರುವ ಹಾನಿ : ಮುಂಗಾರು ಸಮಯದಲ್ಲಿ ಉಂಟಾಗುವ ಅಲೆಗಳ ಅಬ್ಬರ, ಬದಲಾಗುತ್ತಿರುವ ಹವಾಮಾನ ವೈಪರೀತ್ಯ ಹಾಗೂ ಕರಾವಳಿಯಲ್ಲಿನ ಕೆಲವು ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಕಡಲ ತೀರವು ನಿರಂತರವಾಗಿ ಸವಕಳಿಗೆ ಒಳಗಾಗುತ್ತಿದೆ. ಈ ಕಾರಣದಿಂದ ಮನೆಗಳು, ರಸ್ತೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಳಗಾಗುತ್ತಿದ್ದು, ಕರಾವಳಿ ಪ್ರದೇಶದ ಭೂಪ್ರದೇಶವೇ ಸಮುದ್ರಪಾಲಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಸದ ಚೌಟ ಅವರ ಪ್ರಕಾರ, ಇದು ಕೇವಲ ಭೌಗೋಳಿಕ ಸಮಸ್ಯೆಯಲ್ಲ; ಸಮುದ್ರವನ್ನೇ ನಂಬಿ ಬದುಕುತ್ತಿರುವ ಮೀನುಗಾರ ಸಮುದಾಯದ ಜೀವನೋಪಾಯಕ್ಕೆ ಎದುರಾಗಿರುವ ದೊಡ್ಡ ಅಪಾಯವಾಗಿದೆ.
ಮುಂಗಾರಿಗೂ ಮೊದಲು ತುರ್ತು ಕ್ರಮ ಅಗತ್ಯ : ಪ್ರತಿ ವರ್ಷವೂ ತೀವ್ರ ಸ್ವರೂಪದ ಕಡಲ್ಕೊರೆತ ಎದುರಿಸುತ್ತಿರುವ ದಕ್ಷಿಣ ಕನ್ನಡಕ್ಕೆ ಈ ಬಾರಿ ಮುಂಗಾರು ಪ್ರವೇಶ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅವರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭೂ ವಿಜ್ಞಾನ ಸಚಿವಾಲಯ ಇವುಗಳ ಪರಸ್ಪರ ಸಮನ್ವಯದೊಂದಿಗೆ ಜಿಲ್ಲೆಗೆ ವಿಶೇಷ ಕರಾವಳಿ ಸಂರಕ್ಷಣಾ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶಾಶ್ವತ ಪರಿಹಾರಕ್ಕೆ ಹಣಕಾಸು ನೆರವು ಬಿಡುಗಡೆ ಆಗಲಿ : ಕರಾವಳಿ ಸಂರಕ್ಷಣೆಗೆ ಮೀಸಲಾಗಿರುವ ಹಣಕಾಸಿನ ನೆರವನ್ನು ತಕ್ಷಣ ಬಿಡುಗಡೆ ಮಾಡಬೇಕು. ಅದರ ಮೂಲಕ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುವ ಜೊತೆಗೆ ಮೀನುಗಾರರ ಬದುಕನ್ನು ಸುರಕ್ಷಿತಗೊಳಿಸಬೇಕು ಎಂದು ಸಂಸದರು ಸದನದಲ್ಲಿ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹಾರಕ್ಕೆ ಕಾರ್ಯೋನ್ಮುಖವಾಗಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿದೆ.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…