ಕೊಕೋಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವಂತೆಯೇ ಕಂಡರೂ, ಧಾರಣೆ ತೀವ್ರವಾಗಿ ಕುಸಿದಿರುವುದು ಕೊಕೋ ಬೆಳೆಗಾರರಿಗೆ ಸಂಕಷ್ಟ ತಂದಿದೆ. ಕೊರೋನಾ ಹಾಗೂ ಆ ಬಳಿಕ ವರ್ಷದಲ್ಲೂ ಉತ್ತಮ ಧಾರಣೆ ಇತ್ತು. ಕಳೆದ ವರ್ಷ ಕೂಡಾ ಉತ್ತಮ ಬೆಲೆ ಕಂಡಿದ್ದ ಕೊಕೋ, ಈ ಬಾರಿ ಕೊಯ್ಲು ಹಂತದಲ್ಲೇ ನಿರೀಕ್ಷಿತ ದರ ಪಡೆಯಲು ವಿಫಲವಾಗಿದೆ. ಈ ನಡುವೆ ಕೊಕೋ ಇಳುವರಿಯಲ್ಲೂ ಉತ್ತಮ ನಿರೀಕ್ಷೆ ಇದೆ. ಅಡಿಕೆ ಜೊತೆಗೆ ಉಪಬೆಳೆಯೂ ಅಗತ್ಯ ಹೌದು. ಆದರೆ ಈಗ ಧಾರಣೆ ಇಳಿಕೆಯೂ ಮತ್ತೆ ಸಂಕಷ್ಟ ತಂದಿದೆ.
2024ರಲ್ಲಿ ಕಿಲೋಗೆ ₹320ರ ತನಕ ವ್ಯಾಪಾರಗೊಂಡಿದ್ದ ಕೊಕೋ, 2025ರ ಆರಂಭಕ್ಕೆ ₹230ರ ಮಟ್ಟಕ್ಕೆ ಇಳಿದಿದೆ. ಕೆಲ ಮಾರುಕಟ್ಟೆಗಳಲ್ಲಿ ಕಡಿಮೆ ಗುಣಮಟ್ಟದ ಕೊಕೋಗೆ ₹80–110ರಷ್ಟೇ ದರ ಸಿಗುತ್ತಿರುವುದು, ಉತ್ಪಾದನಾ ವೆಚ್ಚವೂ ಮರಳದ ಸ್ಥಿತಿಗೆ ರೈತರನ್ನು ತಳ್ಳಿದೆ.
ಸಾಮಾನ್ಯ ಮಾರುಕಟ್ಟೆ ನಿಯಮದಂತೆ ಬೇಡಿಕೆ ಹೆಚ್ಚಿದರೆ ಬೆಲೆ ಏರಬೇಕು. ಆದರೆ, ಕೊಕೋ ಮಾರುಕಟ್ಟೆಯಲ್ಲಿ ಈ ತತ್ವ ಉಲ್ಟಾ ಆಗಿದೆ.
ಈ ವರ್ಷ ಹವಾಮಾನ ಅನುಕೂಲವಾಗಿದ್ದರಿಂದ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ. ಈ ನಡುವೆಯೇ ಧಾರಣೆ ಕುಸಿತವು ಕೃಷಿಕರಿಗೆ ನಿರಾಸೆ ಮೂಡಿಸಿದೆ. ಕೊಕೋ ಬೆಲೆ ಕುಸಿತದಿಂದ ಉತ್ಪಾದನಾ ವೆಚ್ಚವೂ ಮರಳದ ಸ್ಥಿತಿ ಇದೆ. ಕಾರ್ಮಿಕ ಹಾಗೂ ಸಂಸ್ಕರಣಾ ವೆಚ್ಚ ಹಾಗೂ ಮುಂದಿನ ಬೆಳೆ ನಿರ್ವಹಣೆಗೆ ಹಣದ ಕೊರತೆ ಎದುರಾಗಿದೆ ಎಂದು ಬೆಳೆಗಾರರು ಹೇಳುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಉತ್ಪಾದನೆ ಹೆಚ್ಚಾಗಿರುವುದು ಸಾಮಾನ್ಯವಾಗಿ ಬೆಳೆಗಾರರಿಗೆ ಉತ್ತಮ ಸುದ್ದಿ. ಆದರೆ, ಕೊಕೋದಲ್ಲಿ ರೈತರಿಗೆ ಲಾಭವಾಗದೆ, ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಮೌಲ್ಯವರ್ಧನೆ ಇಲ್ಲ, ಸಂಸ್ಕರಣಾ ಘಟಕಗಳ ಕೊರತೆ, ರಫ್ತು ಮಾರ್ಗಗಳ ಸೀಮಿತತೆ ಇದೆಲ್ಲಾ ಪರಿಣಾಮ ಬೀರಿದೆ. ಕೊಕೋ ಧಾರಣೆ ಕುಸಿತ ಬೆಲೆ ಸಮಸ್ಯೆ ಮಾತ್ರವಲ್ಲ.ಇಂದು ಮಲೆನಾಡಿನಲ್ಲಿ ಉಂಟಾಗಿರುವ ಅಡಿಕೆ ಎಲೆಚುಕ್ಕಿ ರೋಗ ಸಹಿತ ಹವಾಮಾನದ ಸಂಕಷ್ಟದ ನಡುವೆ ಕೊಕೋದಂತಹ ಉಪಬೆಳೆ ವರದಾನವಾಗಿತ್ತು. ಇದು ಗ್ರಾಮೀಣ ಆರ್ಥಿಕತೆಯ ಪುನಶ್ಚೇತನವೂ ಆಗಿತ್ತು. ಆದರೆ ಈಗ ಕೊಕೋ ಧಾರಣೆಯೂ ಕುಸಿತವಾಗಿರುವುದು ಮತ್ತೆ ಸಂಕಷ್ಟಕ್ಕೆ ತಳ್ಳಿದಂತಾಗಿದೆ. ಯಾವುದೇ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿದಾಗ ಬೆಲೆ ಕುಸಿಯುವುದು ರೈತನ ಹಣೆಬರಹ ಅಲ್ಲ, ಅದು ಸರ್ಕಾರದ, ಸಂಸ್ಥೆಗಳ ನೀತಿಯ ಸೋಲು!



