ಕೃಷಿಯಲ್ಲಿ ಯಶಸ್ಸು ಕಷ್ಟ ಅಲ್ಲ. ಸುಲಭವೂ ಅಲ್ಲ. ಕೃಷಿ ಯಶಸ್ಸಿನಲ್ಲಿ ಕೃಷಿಕನ ಯೋಚನೆ ಎಷ್ಟು ಮುಖ್ಯವೋ ಅಷ್ಟೇ ಕೃಷಿ ಕಾರ್ಮಿಕರ ಪಾತ್ರವೂ ಬಹುಮುಖ್ಯ. ಇಲ್ಲೊಬ್ಬ ಕೃಷಿ ಕಾರ್ಮಿಕ ಯೋಚನೆ ಕೃಷಿಯ ದಿಕ್ಕನ್ನು ಬದಲಾಯಿಸಲು ಕಾರಣವಾದೀತು. ತಾನು ಬೆಳೆಯುವುದರ ಜೊತೆಗೆ ಕೃಷಿಯನ್ನೂ, ಕೃಷಿಕರನ್ನೂ ಬೆಳೆಸಿದ್ದಾರೆ. ಇವರ ಬದುಕು ಒಂದು ಯಶೋಗಾಥೆ…
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರದ ವಿಠಲ ಗೌಡ ತೆಂಗಿನ ಕಾಯಿ ಕೀಳುವ ಉದ್ಯೋಗ ಮಾಡುತ್ತಾರೆ. ತೆಂಗಿನ ಕಾಯಿ ಕೀಳುವ ಉದ್ಯೋಗದಲ್ಲಿ ಹೆಮ್ಮೆ ಇರುವ ವಿಠಲ ಗೌಡರು ಈ ಉದ್ಯೋಗದ ಮೂಲಕ ಭೂಮಿ ಖರೀದಿ ಮಾಡಿದ್ದಾರೆ, 4 ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮಾಡಿಸಿದ್ದಾರೆ, ಕಾರು, ಬೈಕ್ ಖರೀದಿ ಮಾಡಿದ್ದಾರೆ. ಇಷ್ಟೇ ಅಲ್ಲ, ತೆಂಗಿನ ಕಾಯಿ ಕೀಳುವ ತರಬೇತಿ ನೀಡಲೂ ಹೋಗುತ್ತಾರೆ. ಕೃಷಿ ಸಂಸ್ಥೆಗಳಲ್ಲಿ ಕೆಲವು ಕಡೆ ವಿಶೇಷ ತರಬೇತುದಾರರಾಗಿ ಹೋಗುತ್ತಾರೆ. ಈಗ ಇವರನ್ನು ಕೃಷಿ ಟೆಕ್ನೀಶಿಯನ್ ಎನ್ನುವ ಮೂಲಕ ಉದ್ಯೋಗದ ಸ್ಥಿತಿಯನ್ನು ಉನ್ನತೀಕರಣ ಮಾಡಬೇಕು.
ಮುರುಳ್ಯ ಗ್ರಾಮದಲ್ಲಿರುವ ವಿಠಲ ಗೌಡ ಅವರು 2013 ರಲ್ಲಿ ತೆಂಗಿನ ಕಾಯಿ ಕೀಳುವ ಕೆಲಸ ಆರಂಭಿಸಿದರು ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಪಡೆದು ಕೆಲಸಕ್ಕೆ ಇಳಿಸಿದ್ದರು. ಕಳೆದ 10 ವರ್ಷದಲ್ಲಿ ಸುಮಾರು 90 ಸಾವಿರ ಮರದಿಂದ ತೆಂಗಿನ ಕಾಯಿ ತೆಗೆದಿದ್ದಾರೆ. ಸುಮಾರು 30 ಲಕ್ಷದಷ್ಟು ಸಂಪಾದನೆ ಮಾಡಿದ್ದಾರೆ.
ಆರಂಭದಲ್ಲಿ ಅಡಿಕೆಗೆ ಔಷಧಿ ಸಿಂಪಡಣೆ ಮಾಡುವ ಕೆಲಸ ಮಾಡುತ್ತಿದ್ದ ವಿಠಲ ಗೌಡರು, ನಂತರ ಮಳೆಗಾಲದ ಮಳೆಯ ಸಂದರ್ಭ ಕೆಲಸ ಮಾಡಲು ಮಳೆ ಅಡ್ಡಿಯಾಗುತ್ತಿದ್ದಾಗ ತೆಂಗಿನ ಕಾಯಿ ಕೀಳುವ ಕಡೆಗೆ ಮನಸ್ಸು ಮಾಡಿದ್ದರು. ನಂತರ ತರಬೇತಿ ಪಡೆದು ಮರ ಏರುವ ಸಾಧನದ ಮೂಲಕ ತೆಂಗಿನ ಕಾಯಿ ಕೀಳುವ ಉದ್ಯೋಗ ಆರಂಭ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ, ಮಂಗಳೂರು ಮೊದಲಾದ ಕಡೆಗಳಲ್ಲಿ ಕೃಷಿ ತೋಟದಲ್ಲಿ ತೆಂಗಿನ ಕಾಯಿ ಕೀಳಲು ಹೋಗುತ್ತಿದ್ದರು, ಈಚೆಗೆ ಕೆಲವು ಸಮಯಗಳಿಂದ ಸುಮಾರು 35 ಕಿಮೀ ಆಸುಪಾಸಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಮರಕ್ಕೆ 16 ರೂಪಾಯಿಗೆ ತೆಂಗಿನ ಕಾಯಿ ಕೀಳಲು ಆರಂಭಿಸಿದ ವಿಠಲ ಗೌಡರು ಈಗಲೂ ರೈತ ಸ್ನೇಹಿ ದರದಲ್ಲಿ ತೆಂಗಿನ ಕಾಯಿ ಕೀಳುತ್ತಿದ್ದಾರೆ. ಅಂದು 25 ರೂಪಾಯಿ ಒಂದು ಮರದಿಂದ ತೆಂಗಿನ ಕಾಯಿ ಕೀಳು ದರ ಇದ್ದಾಗ ವಿಠಲ ಗೌಡ 16 ರೂಪಾಯಿಗೆ ತೆಂಗಿನ ಕಾಯಿ ಕೀಳುತ್ತಿದ್ದರು. ಈಗಲೂ ಅಂತಹದ್ದೇ ಮಾದರಿ ಅನುಸರಿಸುತ್ತಿದ್ದಾರೆ. ಅಂದಾಜು ರೇಟಲ್ಲಿ ಕಾಯಿ ತೆಗೆಯುತ್ತಾರೆ. ಇದಕ್ಕೆ ಕಾರಣ ಇದೆ, ಕೃಷಿಕನಿಗೂ ಏನಾದರೂ ಅದರಲ್ಲಿ ಉಳಿದರೆ ಮಾತ್ರವೇ ಆತ ಇನ್ನೊಂದು ಗಿಡ ನೆಡಲು ಸಾಧ್ಯ ಎನ್ನುವ ಮನೋಭಾವವನ್ನು ವಿಠಲ ಗೌಡರು ಹೊಂದಿದ್ದಾರೆ. ದುಡಿಯುವವರು ಹಾಗೂ ಕೃಷಿಕರ ನಡುವೆ ಸಮನ್ವಯತೆ ಬೇಕು, ಅತೀ ಹೆಚ್ಚು ರೇಟಲ್ಲಿ ತೆಂಗಿನ ಕಾಯಿ ತೆಗೆಯಲು ಆರಂಭಿಸಿದರೆ ಕೃಷಿಕ ಇನ್ನೊಂದು ಬೆಳೆ ಬೆಳೆಯಲಾರ ಎನ್ನುತ್ತಾರೆ ವಿಠಲ ಗೌಡರು. ಕೃಷಿಕರಿಗೆ ಹೊರೆಯಾಗದಂತೆ ಹಣ ಪಡೆಯಬೇಕು, ತೆಗೆದುಕೊಂಡ ಹಣಕ್ಕೆ ಪ್ರತಿಫಲವಾಗಿ ದುಡಿಯಬೇಕು ಎನ್ನುವುದು ವಿಠಲ ಗೌಡರ ಕಾಳಜಿ.
ವಿಠಲ ಗೌಡ ಅವರೊಂದಿಗಿನ ಮಾತುಕತೆಯ ಆಡಿಯೋ ಇಲ್ಲಿದೆ….
ಆರಂಭದಲ್ಲಿ ತೀರಾ ಕಷ್ಟದ ಬದುಕು ಸಾಗಿಸುತ್ತಿದ್ದ ವಿಠಲ ಗೌಡರು, ಮನೆಯಲ್ಲಿ ಯಾವ ವಸ್ತುಗಳು ಇರಲಿಲ್ಲ. ಇದೇ ಕಾಯಕದಿಂದ ಮನೆಗೆ ಅಗತ್ಯ ಇರುವ ಸಾಮಾಗ್ರಿಗಳು, ಮಕ್ಕಳ ವಿದ್ಯಾಭ್ಯಾಸ, ಮನೆಯ ಕೃಷಿ ಅಭಿವೃದ್ಧಿ ಇತ್ಯಾದಿಗಳನ್ನು ಮಾಡಿದ್ದೇನೆ ಎನ್ನುವ ವಿಠಲ ಗೌಡರು, ಈ ಕಾಯಕದಿಂದಲೇ ಕಾರು, ಬೈಕ್ , ಭೂಮಿ ಕೂಡಾ ಖರೀದಿ ಮಾಡಿದ್ದಾರೆ.
ಕೃಷಿ ಬೆಳವಣಿಗೆಗೆ ಮೊದಲು ನೀರಿನ ಸಮಸ್ಯೆ ಇತ್ತು. ದುಡಿದ ಹಣದಲ್ಲಿ ಕೊಳವೆಬಾವಿ ತೆಗದ ನಂತರ ನೀರಿನ ಮೂಲ ಲಭ್ಯವಾಯಿತು, ನಂತರ ಕೃಷಿ ಬೆಳವಣಿಗೆ ಸಾಧ್ಯವಾಯಿತು. ಸುಮಾರು 200-300 ಅಡಿಕೆ ಗಿಡಗಳು ಇವೆ. ಅದರ ಬೆಳವಣಿಗೆಯೂ ಆಗುತ್ತಿದೆ. ಇದೆಲ್ಲವೂ ಸಾದ್ಯವಾಗಿದ್ದು ದುಡಿತದ ಕಾರಣದಿಂದ ಎನ್ನುತ್ತಾರೆ ವಿಠಲ ಗೌಡ. ಈಗ ಯಾವ ಸಾಲವೂ ಇಲ್ಲದೆ ಚೆನ್ನಾದ ಬದುಕು ಸಾಗಿಸುತ್ತೇನೆ ಎಂದು ಸಂತೃಪ್ತರಾಗುತ್ತಾರೆ.
ನಾನು ಕೃಷಿ ಕಾರ್ಮಿಕನಾದರೂ, ಕೃಷಿಕರ ಪರ ಮಾತನಾಡುತ್ತೇನೆ. ಕೃಷಿ ನಿರ್ವಹಣೆ ವೆಚ್ಚವನ್ನು ಗಮನಿಸಬೇಕು. ಕೃಷಿಕರು ಕಾಯಿ ಕೀಳುವುದಕ್ಕೆ ಮಾತ್ರವಲ್ಲ, ಸಾಗಾಟ, ಸಿಪ್ಪೆ ತೆಗೆಯಲು, ಲೋಡಿಂಗ್ ಇತ್ಯತಾದಿಗಳಿಗೂ ಹಣ ನೀಡಬೇಕು. ಆಗ ಉಳಿತಾಯವಾಗುವ ಹಣದ ಬಗ್ಗೆಯೂ ಗಮನಿಸಿಕೊಳ್ಳಬೇಕು ಎನ್ನುತ್ತಾರೆ ವಿಠಲ ಗೌಡ.
ಕೃಷಿ ಕಾರ್ಮಿಕರು ಕೆಟ್ಟ ಚಟಗಳನ್ನು, ಕುಡಿತವನ್ನು ಇರಿಸಿಕೊಳ್ಳುವುದೇ ಬದುಕಿನಲ್ಲಿ ಹಿನ್ನಡೆಯಾಗಲು ಕಾರಣ. ಕೆಲಸದಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆಯೇ ಯಶಸ್ಸಿನ ಮೂಲ ಎಂದು ಕೃಷಿಕ ಕಾರ್ಮಿಕನೊಬ್ಬ ತನ್ನ ಬದುಕಿನ ಯಶಸ್ಸಿನ ಸೂತ್ರವನ್ನು ಹಂಚಿಕೊಳ್ಳುತ್ತಾರೆ.