ನಾಡಿನಾದ್ಯಂತ ದಸರಾ ಸಂಭ್ರಮ ಮನೆಮಾಡಿದ್ದು, ಕಾಫಿನಾಡು ಕೊಡಗಿನಲ್ಲಿ ಕಾಫಿ ದಸರಾ ಎಂಬ ವಿಶೇಷ ಉತ್ಸವ ಜನರನ್ನು ಆಕರ್ಷಿಸುತ್ತಿದೆ. ಕಾಫಿ ಬೀಜದಿಂದ ಕೇವಲ ಕಾಫಿ ಪಾನೀಯವಲ್ಲದೆ, ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಆರ್ಥಿಕ ಲಾಭ ಕಂಡುಕೊಳ್ಳಬಹುದು ಎಂಬ ಕುರಿತು ಉತ್ಸವ ಜನರಿಗೆ ಮಾಹಿತಿ ನೀಡಲು ಸಹಕಾರಿಯಾಗಿದೆ.
ಮಡಿಕೇರಿಯಲ್ಲಿ ನಡೆದ ಕಾಫಿ ದಸರಾದಲ್ಲಿ ವೈವಿಧ್ಯಮಯ ಕಾಫಿ ಹಾಗೂ ಪೂರಕ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಸಾರ್ವಜನಿಕರು, ಕಾಫಿ ಪ್ರಿಯರನ್ನು ಆಕರ್ಷಿಸುತ್ತಿದೆ. ಕೊಡಗಿನ ಕಾಫಿ ಸಂಸ್ಕೃತಿ ಮತ್ತು ಅದರ ವೈವಿದ್ಯತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕೊಡಗು ಕಾಫಿ ದಸರಾ ಕಾರ್ಯಕ್ರಮವು ಭಾರೀ ಯಶಸ್ಸು ಕಂಡಿದೆ.
ಕೆಲಸದ ಒತ್ತಡದ ಸಂದರ್ಭದಲ್ಲಿ ಅಥವಾ ಸುದೀರ್ಘ ಪ್ರಯಾಣದಿಂದ ಬಸವಳಿದಾಗ ಒತ್ತಡ ನಿವಾರಣೆಗೆ ಕಾಫಿ ಬಳಕೆ ಸರ್ವೇ ಸಾಮಾನ್ಯ. ಮನೆಯಿಂದ ಹಿಡಿದು ಕಚೇರಿಗಳವರೆಗೆ ಕಾಫಿ ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಕಾಫಿ ಇಲ್ಲದ ದಿನವನ್ನು ಊಹಿಸುವುದು ಕಷ್ಟಸಾಧ್ಯ. ಗ್ರಾಮೀಣ ಪ್ರದೇಶಗಳಿಂದ ಹಿಡಿದು ಮೆಟ್ರೋ ನಗರಗಳಲ್ಲೂ ವೈವಿಧ್ಯಮಯ ಕಾಫಿಗೆ ಜನರು ಮಾರುಹೋಗಿದ್ದಾರೆ.
ಇದುವರೆಗೆ ಕಾಫಿ ಎಂದರೆ ಕೇವಲ ಪಾನೀಯ ಎಂದೇ ಭಾವಿಸಿದ್ದ ಜನರಿಗೆ, ಕಾಫಿಯಿಂದ ತಯಾರಿಸಬಹುದಾದ ವಿವಿಧ ಉತ್ಪನ್ನಗಳನ್ನು ಪರಿಚಯಿಸಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು. ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಮಳೆಯ ನಡುವೆಯೂ ನಡೆದ ಕಾಫಿ ದಸರಾದಲ್ಲಿ ಕಾಫಿ ಬೀಜದಿಂದ ತಯಾರಿಸಿದ ಚಾಕ್ಲೇಟ್, ಕೇಕ್, ಐಸ್ ಕ್ರೀಂ, ಜ್ಯೂಸ್ ಇನ್ನಿತರ ಉತ್ಪನ್ನಗಳು ಜನರನ್ನು ಆಕರ್ಷಿಸಿದವು. ಉತ್ಸವದ 45ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕಾಫಿ ಬಿಸ್ಕೆಟ್, ಪೇಸ್ಟ್ರಿ ಸೇರಿದಂತೆ ಹಲವು ವಿಶಿಷ್ಟ ತಿನಿಸುಗಳು ಜನರನ್ನು ಆಕರ್ಷಿಸಿದವು. ಕಾಫಿ ಕುರಿತು ತಜ್ಜರಿಂದ ಉಪನ್ಯಾಸ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ವೆಂಕಟರಾಜನ್, ಕಾಫಿ ಬೆಳೆಗಾರರು ಎದುರಿಸುತ್ತಿರುವ ಕಾರ್ಮಿಕರ ಕೊರತೆ ಮತ್ತು ವಾತಾವರಣ ಬದಲಾವಣೆ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಕಾಫಿ ಬೆಳೆಗಾರರು ಒಂದೆಡೆ ಸೇರಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಬುಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ, ಕಾಫಿ ದಸರಾದಲ್ಲಿ ಪ್ರದರ್ಶನಕ್ಕಿಟ್ಟಿದ್ದ ವೈವಿದ್ಯಮಯ ಕಾಫಿ ಉತ್ಪನ್ನಗಳನ್ನು ಶ್ಲಾಘಿಸಿದರು. ಮಹಿಳೆಯರು ಈ ಉತ್ಪನ್ನಗಳನ್ನು ತಯಾರಿಸುವುದರ ಮೂಲಕ ಸ್ವಾವಲಂಭಿಗಳಾಗಬಹುದು ಎಂದರು. ಇಡೀ ಕಾರ್ಯಕ್ರಮ ಕಾಫಿಯ ಮಹತ್ವ ಮತ್ತು ಅದರ ಆರ್ಥಿಕ ಲಾಭದ ಬಗ್ಗೆ ಜನರಲ್ಲಿ ಹೊಸ ದೃಷ್ಠಿಕೋನ ಮೂಡುವಂತೆ ಮಾಡಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


