ಕಾಫಿ ನಾಡು ಚಿಕ್ಕಮಗಳೂರು, ಜಗತ್ತಿನ ಉತ್ಕೃಷ್ಟ ಕಾಫಿ ಬೆಳೆಯುವ ಪ್ರದೇಶಗಳಲ್ಲೊಂದು.ಕೇಂದ್ರ ಸರ್ಕಾರಿ ಸ್ವಾಮ್ಯದ ಕಾಫಿ ಬೋರ್ಡ್ ವತಿಯಿಂದ ಆರಂಭಗೊಂಡಿರುವ ಕಾಫಿ ಮ್ಯೂಸಿಯಂ ಕಾಫಿ ಪ್ರಿಯರನ್ನು, ಬೆಳೆಗಾರರನ್ನು ತನ್ನತ್ತ ಸೆಳೆಯುತ್ತಿದೆ.
ಮಲೆನಾಡ ತವರೂರು ಚಿಕ್ಕಮಗಳೂರಿನ ಜಿಲ್ಲಾ ಪಂಚಾಯತ್ ಕಚೇರಿ ಬಳಿ ಕಾಫಿ ಮ್ಯೂಸಿಯಂ ತೆರೆದಿದ್ದು, ಇಲ್ಲಿ ಚಿಕ್ಕಮಗಳೂರಿಗೆ ಕಾಫಿ ಪರಿಚಯವಾಗಿದ್ದು ಹೇಗೆ ಎಂಬುದರಿಂದ ಹಿಡಿದು ಜಿಲ್ಲೆಯ ಹೆಗ್ಗುರುತಾಗುವ ಮಟ್ಟಿಗೆ ಸಾಧಿಸಿರುವ ಬೆಳವಣಿಗೆ ಕುರಿತು ಆಸಕ್ತಿದಾಯಕ ಮಾಹಿತಿ ಒದಗಿಸುತ್ತಿದೆ. ಇದಷ್ಟೇ ಅಲ್ಲದೆ, ಇಲ್ಲಿ ಕಾಫಿ ಬೀಜ ಸಂಸ್ಕರಿಸುವ ವಿಧಾನಗಳು, ಜಗತ್ತಿನ ವಿವಿಧ ಮಾದರಿಯ ಕಾಫಿಯ ಬಗ್ಗೆಯೂ ಅಮೂಲ್ಯ ಮಾಹಿತಿ ಪಡೆಯಬಹುದಾಗಿದೆ.
ಚಿಕ್ಕಮಗಳೂರು ಕಾಫಿ ಬೋರ್ಡ್ ಉಪನಿರ್ದೇಶಕ ವೆಂಕಟ ರೆಡ್ಡಿ, ಇತರೆ ಭಾಗಗಳಲ್ಲಿನ ಕಾಫಿ ಮ್ಯೂಸಿಯಂಗಿಂತ ಇದು ಭಿನ್ನವಾಗಿದೆ. ಇಲ್ಲಿ ಕಾಫಿ ಬೆಳೆಯುವುದರಿಂದ ಹಿಡಿದು, ವಿವಿಧ ಹಂತಗಳನ್ನು ವಿವರಿಸಲಾಗುತ್ತದೆ ಎಂದು ಹೇಳುತ್ತಾರೆ.
ಕಾಫಿ ಪ್ರಕ್ರಿಯೆ ಕುರಿತ ಮಾಹಿತಿ ಒದಗಿಸುವುದರ ಜತೆಗೆ ಪ್ರವಾಸಿಗರಿಗೆ ಇಲ್ಲಿ ಕಾಫಿಯ ಸ್ವಾದ ಸವಿಯಲು ಅವಕಾಶ ದೊರೆಯುತ್ತದೆ ಎನ್ನುತ್ತಾರೆ ಕಾಫಿ ಮ್ಯೂಸಿಯಂ ಉದ್ಯೋಗಿ ಚಂದನಾ.


