Advertisement
ಅನುಕ್ರಮ

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?

Share

ನಾವು ಸೋತಿರುವುದು ಜೀವನದಲ್ಲೋ… ಅಥವಾ ಬೇರೊಬ್ಬರ ಬದುಕಿನೊಂದಿಗೆ ಹೋಲಿಸಿಕೊಂಡು, ನಮ್ಮನ್ನೇ ನಾವು ಸೋತವರೆಂದು ಭಾವಿಸಿಕೊಂಡಿದ್ದೇವೋ?  ಈ ಪ್ರಶ್ನೆ ಈಚೆಗೆ ನನ್ನನ್ನು ಬಹಳ ಕಾಡಿತು. ಇದಕ್ಕೆ ಕಾರಣ ಇದೆ.

ಈಚೆಗೆ ಮಿತ್ರನೊಬ್ಬ ತನ್ನ ಬದುಕಿನ ಅನುಭವವನ್ನು ಹೇಳಿಕೊಳ್ಳುತ್ತಿದ್ದ. ಯಾವುದೋ ಒಂದು ಆದರ್ಶವನ್ನು ಮುಂದಿಟ್ಟುಕೊಂಡು, ಯಾರನ್ನೋ ತನ್ನ ಆದರ್ಶ ವ್ಯಕ್ತಿಯನ್ನಾಗಿ ಕಂಡು, ಅವರ ಬದುಕನ್ನು ಅನುಸರಿಸುತ್ತಾ, ತನ್ನನ್ನೂ ಅವರೊಂದಿಗೆ ಹೋಲಿಸಿಕೊಂಡೇ ಮುಂದೆ ಸಾಗುತ್ತಿದ್ದ. ಹೀಗೆ ಹಲವು ವರ್ಷಗಳು ಕಳೆದವು. ಎಲ್ಲೆಲ್ಲಾ ಕೆಲಸ ಮಾಡಿದನೋ ಎಲ್ಲೆಲ್ಲಾ ಅದೇ ಆದರ್ಶ ಪಾಲಿಸಿದ. ಆದರೆ ಜಗತ್ತು ಇಂದು ಆ ಆದರ್ಶಗಳ ಜೊತೆಗಿಲ್ಲ, ಹೇಳುತ್ತದೆಯಷ್ಟೇ… ಆದರೆ ಈ ಬದಲಾವಣೆ ಅವನಿಗೆ ತಿಳಿಯಲಿಲ್ಲ… ಅವಕಾಶವಾದಿ ಸಮಾಜದಲ್ಲಿ ತನ್ನದೇ ನಿಯಮಗಳ ಜೊತೆಗೇ ಇಂದು ಬದುಕಬೇಕು ಎಂಬ ವಾಸ್ತವ ಅವನಿಗೆ ಅರ್ಥವಾಗುವವಾಗ ತಡವಾಗಿತ್ತು. ಆಗ ತಾನೆಲ್ಲೋ ಸೋತಿದ್ದೇನೆ ಅಂದುಕೊಂಡ.  ತಾನು ಬದುಕುತ್ತಿರುವುದು ಬೇರೊಬ್ಬರ ಬದುಕಿನ ಅಳತೆಯಲ್ಲಿ..! ಅಂದರೆ ಯಾರದೋ ಬದುಕಿನ ಆದರ್ಶದ ಜೊತೆ, ಅವರ ಬದುಕಿನ ಜೊತೆ ತನ್ನನ್ನೂ ಹೋಲಿಸಿಕೊಂಡ.

ನಿಜಕ್ಕೂ ಅವನ ನಿರಾಸೆಗೆ, ಸೋಲಿನ ಭಾವನೆಗೆ, ಹತಾಶೆಗೆ, ತನ್ನ ಬಗ್ಗೆಯೇ ಅವನಲ್ಲಿದ್ದ ಅಸಮಾಧಾನಕ್ಕೆ ಕಾರಣ ಅವನು ಅಂದುಕೊಂಡಷ್ಟು ಅವನ ಸಾಮರ್ಥ್ಯದ ಕೊರತೆಯಾಗಿರಲಿಲ್ಲ. ನಿರಂತರ ಹೋಲಿಕೆಯೂ ಅದಕ್ಕೆ ಕಾರಣವಾಗಿತ್ತು. ಸಮಾಜದ ಬದಲಾವಣೆ ಅವನಿಗೆ ತಿಳಿಯಲಿಲ್ಲ ಅಷ್ಟೇ.

ನಿಜಕ್ಕೂ ಇದು ಒಬ್ಬನ ಕಥೆಯೇ? ನಮ್ಮಲ್ಲಿ ಎಷ್ಟು ಜನ ಹೀಗೆಯೇ ಬದುಕುತ್ತಿದ್ದೇವೆ?. ಯಾರನ್ನೋ ನೋಡಿ, ಯಾವುದೋ ಆದರ್ಶವನ್ನು ನೋಡಿ ನಮ್ಮ ಬದುಕನ್ನು ಅಳೆಯುತ್ತೇವೆ. ಅವರ ಸಂಪಾದನೆ ನಮ್ಮ ಮಾನದಂಡವಾಗುತ್ತದೆ. ಅವರ ಸಾಧನೆಯೇ ನಮ್ಮ ಗುರಿಯಾಗುತ್ತದೆ. ಅವರ ಬದುಕಿನ ವೇಗ ನಮ್ಮ ಆತಂಕವಾಗುತ್ತದೆ. “ಅವರು ಅಷ್ಟು ದೂರ ಹೋಗಿದ್ದಾರೆ… ನಾನು ಇನ್ನೂ ಇಲ್ಲೇ ಇದ್ದೇನೆ…” ಈ ಒಂದು ಭಾವನೆ ನಿಧಾನವಾಗಿ ನಮ್ಮೊಳಗೆ ಬೇರೂರುತ್ತದೆ. ನಾವು ಬದುಕುತ್ತಿರುವ ಬದುಕನ್ನೇ ಕಡಿಮೆ ಎಂದು ಭಾವಿಸುವಂತೆ ಮಾಡುತ್ತದೆ. ಕೊನೆಗೆ ನಮ್ಮದೇ ಬದುಕಿನ ಬಗ್ಗೆ ನಮಗೆ ಅಸಮಾಧಾನ ಮೂಡುತ್ತದೆ.

ಈ ಪರಿಣಾಮದ ಸೋಲು ಉದ್ಯೋಗದಲ್ಲಿರಬಹುದು. ಪ್ರೀತಿಯಲ್ಲಿ ಇರಬಹುದು. ಕುಟುಂಬದಲ್ಲಿ ಇರಬಹುದು , ವ್ಯವಹಾರದಲ್ಲಿ ಅಥವಾ ಬದುಕಿನ ಮತ್ತಾವುದೋ ಕ್ಷೇತ್ರದಲ್ಲಿರಬಹುದು. ಕೊನೆಗೆ ನಾವು ನಮ್ಮನ್ನೇ ದೂಷಿಸಿಕೊಳ್ಳಲು ಆರಂಭಿಸುತ್ತೇವೆ.

ಆದರೆ ನಿಜಕ್ಕೂ ಜೀವನಕ್ಕೆ ಒಂದೇ ಸೂತ್ರವಿಲ್ಲ. ‘ಈ ರೀತಿ ಮಾಡಿದರೆ ಖಂಡಿತ ಈ ರೀತಿ ಆಗುತ್ತದೆ’ ಎನ್ನುವ ಯಾವ ನಿಯಮಗಳೂ ಜೀವನದಲ್ಲಿಲ್ಲ. ನಮಗೆ ಯಾವ ಸ್ನೇಹ ಸಿಕ್ಕಿತು, ಯಾವ ಶಿಕ್ಷಣ ದೊರಕಿತು, ಯಾವ ಪರಿಸರದಲ್ಲಿ ಬೆಳೆದಿದ್ದೇವೆ, ಯಾರ ಮಾರ್ಗದರ್ಶನ ಸಿಕ್ಕಿತು, ಯಾವ ಅವಕಾಶಗಳು ದೊರಕಿದವು  ಇವೆಲ್ಲವೂ ನಮ್ಮ ಬದುಕಿನ ದಿಕ್ಕಿನ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದಲೇ ಎಲ್ಲರ ಬದುಕಿನ ಪ್ರಯಾಣ ಒಂದೇ ಆಗುವುದಿಲ್ಲ. ಆಗಲು ಸಾಧ್ಯವೂ ಇಲ್ಲ.

ಸಮಸ್ಯೆ ಕೆಲವೊಮ್ಮೆ ನಮ್ಮ ನಿಯಂತ್ರಣದಲ್ಲಿರುವುದಿಲ್ಲ; ನಮ್ಮನ್ನು ಅಳೆಯುತ್ತಿರುವ ಮಾನದಂಡದಲ್ಲಿರುತ್ತದೆ. ಹಾಗೆಂದ ಮಾತ್ರಕ್ಕೆ ಪರಿಶ್ರಮ ಬೇಡ ಎಂದಲ್ಲ. ಪರಿಶ್ರಮ ಬೇಕು. ಪ್ರಯತ್ನ ಬೇಕು. ನಮ್ಮ ಕೈಯಲ್ಲಿರುವುದನ್ನು ಪ್ರಾಮಾಣಿಕವಾಗಿ ಮಾಡಬೇಕು. ಆದರೆ ಪರಿಶ್ರಮದ ಜೊತೆಗೆ ಅವಕಾಶವೂ ಬೇಕು. ಸರಿಯಾದ ಸಮಯವೂ ಬೇಕು. ಮಾರ್ಗದರ್ಶನವೂ ಬೇಕು. ಕೆಲವೊಮ್ಮೆ ಪರಿಸ್ಥಿತಿಯ ಬೆಂಬಲವೂ ಬೇಕು. ಸರಿಯಾದ ಸಮಯದಲ್ಲಿ ಸಿಕ್ಕ ಒಂದು ಅವಕಾಶ ಬದುಕಿನ ದಿಕ್ಕನ್ನೇ ಬದಲಿಸಬಹುದು. ಅದೇ ಅವಕಾಶ ಸಿಗದೆ ಹೋದರೆ ಅರ್ಹತೆ ಇದ್ದರೂ ಪ್ರಯಾಣ ನಿಧಾನವಾಗಬಹುದು. ಹಾಗಾಗಿ ಮತ್ತೊಬ್ಬನ ಫಲಿತಾಂಶವನ್ನು ನೋಡಿ ನಮ್ಮ ಬದುಕನ್ನು ತೀರ್ಮಾನಿಸುವುದು ಸರಿಯಲ್ಲ.

ಕೆಲವು ಸಮಯದ ಹಿಂದೆ ನನಗೂ ತೀರಾ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. ಮುಂದಿನ ದಾರಿ ಏನು ?, ಈಗ ಏನು ಮಾಡಬೇಕು? ಎಂಬ ಯೋಚನೆಗಳು ಮನಸ್ಸಿನಲ್ಲಿ ಓಡಾಡುತ್ತಿದ್ದವು. ಆಗ ನನ್ನ ಆಪ್ತರೊಬ್ಬರು ಹೇಳಿದ ಮಾತು ಇಂದಿಗೂ ನೆನಪಿದೆ. “ಯಾವತ್ತೂ ನಮ್ಮ ನಿಯಂತ್ರಣದಲ್ಲಿಲ್ಲದ ಸಂಗತಿಗಳಿಗಾಗಿ ಯೋಚಿಸುವುದನ್ನು ಬಿಡು. ಅದರ ಮೂಲಕ ಯಾಕೆ ನಿನ್ನನ್ನೇ ನೀನು ಶಿಕ್ಷಿಸಿಕೊಳ್ಳುತ್ತೀಯ? ಅದನ್ನು ನಿಲ್ಲಿಸು.”

ಆ ಮಾತು ಬಹಳ ಸರಳವಾಗಿತ್ತು. ಆದರೆ ಅದರೊಳಗೆ ಸತ್ಯವಿತ್ತು. ನಮ್ಮ ಕೈಯಲ್ಲಿರುವುದನ್ನು ನಾವು ಮಾಡಬೇಕು. ನಮ್ಮ ತಪ್ಪಿದ್ದರೆ ಒಪ್ಪಿಕೊಳ್ಳಬೇಕು. ಸಾಧ್ಯವಿದ್ದರೆ ತಿದ್ದಿಕೊಳ್ಳಬೇಕು. ಆದರೆ ನಮ್ಮ ನಿಯಂತ್ರಣದಲ್ಲಿಲ್ಲದ ಸಂಗತಿಗಳನ್ನು ಯೋಚಿಸಿ ಇಡೀ ದಿನ ವ್ಯರ್ಥ ಮಾಡಿ, ನಮ್ಮನ್ನೇ ಶಿಕ್ಷಿಸಿಕೊಳ್ಳಬಾರದು. ನಮ್ಮ ಯೋಜನೆಗೆ ವಿರುದ್ಧವಾಗಿ ಪರಿಸ್ಥಿತಿ ಬದಲಾಗಬಹುದು. ನಾವು ಎಲ್ಲವನ್ನೂ ಲೆಕ್ಕ ಹಾಕಿಕೊಂಡು ಬದುಕಿದರೂ, ಜೀವನ ತನ್ನದೇ ಲೆಕ್ಕದಲ್ಲಿ ನಡೆಯುತ್ತದೆ. ಹಾಗಿದ್ದಾಗ ಬದಲಾಯಿಸಲಾಗದ ಸಂಗತಿಗಳನ್ನು ಮತ್ತೆ ಮತ್ತೆ ಯೋಚಿಸುತ್ತಾ ನಮ್ಮ ನೆಮ್ಮದಿಯನ್ನು ನಾವೇ ಯಾಕೆ ಕಳೆದುಕೊಳ್ಳಬೇಕು?

ಇದಕ್ಕೆ ಸಾಮಾಜಿಕ ಮಾಧ್ಯಮ ಮತ್ತೊಂದು ಆಯಾಮವನ್ನು ಇಂದು ಸೇರಿಸಿದೆ. ಯಾರದ್ದೋ ಒಂದು ಸ್ಟೇಟಸ್, ಒಂದು ಫೋಟೋ, ಒಂದು ಸಾಧನೆಯ ಸುದ್ದಿ ನೋಡುತ್ತೇವೆ. ಅದನ್ನೇ ನಮ್ಮ ಇಡೀ ಬದುಕಿನೊಂದಿಗೆ ಹೋಲಿಸಿಕೊಳ್ಳುತ್ತೇವೆ. ಆದರೆ ನಾವು ನೋಡುವುದು ಅವರ ಬದುಕಿನ ಒಂದು ಭಾಗ ಮಾತ್ರ. ಅವರ ಹೋರಾಟ ನಮಗೆ ಕಾಣುವುದಿಲ್ಲ. ವೈಫಲ್ಯಗಳು ಕಾಣುವುದಿಲ್ಲ. ಭಯಗಳು ಕಾಣುವುದಿಲ್ಲ. ಅವರ ಹಿಂದೆ ನಡೆದಿರುವ ಪ್ರಯತ್ನಗಳು ಕಾಣುವುದಿಲ್ಲ. ನಮಗೆ ಕಾಣುವುದು ಅವರ ಬದುಕಿನ ಒಂದು ಚಿತ್ರ ಮಾತ್ರ. ಯಶಸ್ಸಿ ಭಾಗ ಮಾತ್ರಾ. ಹೀಗಿರುವಾಗ ಅವರ ಯಶಸ್ಸಿನೊಂದಿಗೆ ನಮ್ಮ ಬದುಕನ್ನು ಹೋಲಿಸುವುದು ನಮ್ಮ ಮೇಲೆಯೇ ನಾವು ಮಾಡುವ ಅನ್ಯಾಯ.

ನಮ್ಮ ಬದುಕಿನ ಪ್ರತಿಯೊಂದು ನಿರ್ಧಾರಕ್ಕೂ ಎಲ್ಲರಿಂದ ಒಪ್ಪಿಗೆ ಪಡೆಯಬೇಕಿಲ್ಲ. ನಾವು ಮಾಡಿದ್ದು ಸರಿಯೋ ತಪ್ಪೋ ಎಂದು ಪ್ರತಿಯೊಬ್ಬರಿಗೂ ವಿವರಣೆಯನ್ನೂ ನೀಡಬೇಕಿಲ್ಲ. ಅರ್ಥ ಮಾಡಿಕೊಳ್ಳುವವರು ಅರ್ಥ ಮಾಡಿಕೊಳ್ಳಲಿ. ಅರ್ಥ ಮಾಡಿಕೊಳ್ಳದವರು ಬಿಟ್ಟುಬಿಡಲಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಜವಾಬ್ದಾರಿ ನಮ್ಮದು. ಆದರೆ ಎಲ್ಲರ ನಿರೀಕ್ಷೆಗಳನ್ನು ಪೂರೈಸುವ ಜವಾಬ್ದಾರಿ ನಮ್ಮದಲ್ಲ. ಬಹುಶಃ ಜೀವನದ ದೊಡ್ಡ ತಿರುವು ಎಂದರೆ ಹೊಸ ದಾರಿ ಸಿಕ್ಕಾಗ ಮಾತ್ರ ಅಲ್ಲ. ತಪ್ಪು ದಾರಿಯಲ್ಲಿ ಓಡುತ್ತಿರುವುದನ್ನು ಅರಿತು ನಿಂತಾಗಲೂ ಒಂದು ತಿರುವು ಆರಂಭವಾಗುತ್ತದೆ.

‘ಅವನು ಏನು ಸಾಧಿಸಿದ?’ ಎನ್ನುವುದಕ್ಕಿಂತ, ‘ನಾನು ನಿನ್ನೆಗಿಂತ ಇಂದು ಏನು ಕಲಿತೆ?’ ಎಂದು ಕೇಳಿಕೊಳ್ಳಲು ಆರಂಭಿಸಿದಾಗ ಬದುಕಿನ ಅರ್ಥವೇ ಬದಲಾಗುತ್ತದೆ. ಮತ್ತೊಬ್ಬರು ಎಲ್ಲಿಗೆ ತಲುಪಿದ್ದಾರೆ ಎಂಬುದು ಅವರ ವಿಚಾರ. ನಾವು ಎಲ್ಲಿಗೆ ಹೋಗಬೇಕು ಎಂಬುದನ್ನು ನಾವು ನಿರ್ಧರಿಸಬೇಕು. ಜೀವನವೆಂದರೆ ಪ್ರತಿದಿನ ನಮ್ಮನ್ನು ನಾವು ಸಾಬೀತುಪಡಿಸಿಕೊಳ್ಳುವ ಪರೀಕ್ಷೆಯಲ್ಲ. ನಮ್ಮಿಂದ ಸಾಧ್ಯವಾದಷ್ಟು ಮಾಡೋಣ. ಬದಲಾಯಿಸಬಹುದಾದದ್ದನ್ನು ಬದಲಿಸೋಣ. ಬದಲಾಯಿಸಲಾಗದದ್ದನ್ನು ಬಿಟ್ಟುಬಿಡೋಣ. ಕೆಲವೊಮ್ಮೆ ನಮ್ಮ ಕೈಯಲ್ಲಿರುವುದು ಗೆಲ್ಲುವುದಲ್ಲ… ನಮ್ಮನ್ನು ನಾವು ಕಳೆದುಕೊಳ್ಳದಿರುವುದು. ಇದು ನಮ್ಮ ಜೀವನ.

ಇನ್ನಾದರೂ ಸ್ವಲ್ಪ ನಮಗಾಗಿ ಬದುಕೋಣ. ಯಾಕೆಂದರೆ ಕೆಲವೊಮ್ಮೆ ಬದುಕಿನ ದೊಡ್ಡ ತಿರುವು ಮುಂದೆ ಓಡುವುದರಿಂದ ಬರುವುದಿಲ್ಲ. ನಾವು ಯಾರಂತೆ ಆಗಬೇಕು ಎಂಬುದನ್ನು ಬಿಟ್ಟು, ನಾವು ನಿಜವಾಗಿ ಯಾರಾಗಬೇಕು ಎಂಬುದನ್ನು ಅರಿತುಕೊಂಡಾಗ ಬರುತ್ತದೆ. ಅನೇಕ ಸಲ ಆದರ್ಶಗಳೂ ಹಾಗೇ. ಬಹುಶಃ ಇಷ್ಟು ದಿನ ನಾವು ಓಡಿದ್ದು ಬದುಕನ್ನು ಗೆಲ್ಲಲು ಅಲ್ಲ. ಬೇರೊಬ್ಬರ ಬದುಕಿನ ಹಿಂದೆ ಓಡುತ್ತಾ, ನಮ್ಮ ಬದುಕನ್ನು ಕಳೆದುಕೊಳ್ಳುತ್ತಿದ್ದೆವು. ಈಗ ಸ್ವಲ್ಪ ನಿಲ್ಲೋಣ.

ನಮ್ಮ ದಾರಿ ನಿಧಾನವಾಗಿರಬಹುದು. ನಮ್ಮ ಹೆಜ್ಜೆಗಳು ಚಿಕ್ಕದಾಗಿರಬಹುದು. ನಮ್ಮ ಪ್ರಯಾಣ ಇನ್ನೂ ಪೂರ್ಣವಾಗಿರದೇ ಇರಬಹುದು. ಆದರೆ ಅದು ನಮ್ಮದು. ಅದೇ ಸಾಕು. ಹೀಗಾಗಿ ಹೋಲಿಕೆ ನಿಂತಾಗಲೇ ಬದುಕಿನ ನಿಜವಾದ ತಿರುವು ಆರಂಭವಾಗುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್

ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…

8 hours ago

ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ

ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…

8 hours ago

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ

ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸಿ,…

22 hours ago

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

24 hours ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

1 day ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

1 day ago