ಧರ್ಮದ ಮರ್ಮವನ್ನರಿತು ನಮ್ಮ ದೈನಂದಿನ ಜೀವನದಲ್ಲಿ ಆಚರಣೆ ಮಾಡಿದರೆ ಜೀವನ ಪಾವನವಾಗುತ್ತದೆ. ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿಯಿಂದ ಸಾಮಾಜಿಕ ಸಾಮರಸ್ಯ ಮೂಡಿ ಬರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಧರ್ಮಸ್ಥಳದಲ್ಲಿ 52ನೆ ವರ್ಷದ ಪುರಾಣ ವಾಚನ-ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪುರಾಣ ವಾಚನ – ಪ್ರವಚನ ಶ್ರವಣದಿಂದ ಭಗವಂತನ ದರ್ಶನವಾಗಿ ಆಧ್ಯಾತ್ಮಿಕ ಉನ್ನತಿಯನ್ನು ಹೊಂದಬಹುದು. ರಾಮಾಯಣ ಮತ್ತು ಮಹಾಭಾರತ ಅಲ್ಲದೆ ವಿವಿಧ ಪೌರಾಣಿಕ ಪ್ರಸಂಗಗಳನ್ನು ಆಯ್ಕೆ ಮಾಡಿ ಪುರಾಣ ವಾಚನ-ಪ್ರವಚನಕ್ಕೆ ವಿಶೇಷ ಆಕರ್ಷಕ ಆಯಾಮವನ್ನು ರೂಪಿಸುವಲ್ಲಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಪ್ರೇರಣೆಯನ್ನು ಹೆಗ್ಗಡೆಯವರು ಶ್ಲಾಘಿಸಿದರು.
ಪುರಾಣ ವಾಚನ – ಪ್ರವಚನದಿಂದ ಸಮಯದ ಸದುಪಯೋಗವಾಗುವುದಲ್ಲದೆ, ಧರ್ಮಜಾಗೃತಿಯೊಂದಿಗೆ ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳುತ್ತದೆ ಎಂದು ಹೆಗ್ಗಡೆಯವರು ಅಭಿಪ್ರಾಯ ಪಟ್ಟರು.
ಭಾನುವಾರ ಧರ್ಮಸ್ಥಳದ ಕುಮಾರಿ ಸುಪ್ರಿತಾ ವಾಚನ ಮಾಡಿದರು. ಉಜಿರೆ ಅಶೋಕ ಭಟ್ ಪ್ರವಚನ ಮಾಡಿದರು.
63 ದಿನಗಳಲ್ಲಿ ನಡೆದ ಪುರಾಣ ವಾಚನ-ಪ್ರವಚನದಲ್ಲಿ ಭಾಗವಹಿಸಿದ 13 ವಾಚನಕಾರರು ಮತ್ತು 18 ಮಂದಿ ಪ್ರವಚನಕಾರರನ್ನು ಹೆಗ್ಗಡೆಯವರು ಗೌರವಿಸಿ ಅಭಿನಂದಿಸಿದರು.
ಹೇಮಾವತಿ ವೀ. ಹೆಗ್ಗಡೆಯವರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಹಿಸಿದ ಶ್ರೀನಿವಾಸ ರಾವ್ ವಂದಿಸಿದರು.