ಹವಾಮಾನ ವೈಪರೀತ್ಯದ ಕಾರಣದಿಂದ ನಾಶವಾಗುವ ಕೃಷಿಗೆ ಪರಿಹಾರವಾಗಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಾಗಿತ್ತು. 2016 ರಲ್ಲಿ ಈ ಯೋಜನೆ ಘೋಷಿಲಾಗಿತ್ತು. ಅಂದಿನಿಂದ ದೇಶದ ಎಲ್ಲಾ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಅಡಿಕೆ ಸೇರಿದಂತೆ ಎಲ್ಲಾ ಬೆಳೆಗಳಿಗೂ ಈ ಯೋಜನೆ ವಿಸ್ತರಣೆಯಾಗಿತ್ತು. ಅಡಿಕೆಗೆ ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ಜಾರಿಯಲ್ಲಿದೆ. ಈ ಬಾರಿ ಜೂನ್ ಅಂತ್ಯವಾದರೂ ಈ ಯೋಜನೆ ಜಾರಿಯಾಗಿಲ್ಲ. ಇದೀಗ ಅಡಿಕೆ ಹೊರತುಪಡಿಸಿ ಇತರ 36 ಬೆಳೆಗಳಿಗೆ ಫಸಲ್ ಭೀಮಾ ಯೋಜನೆಗೆ ಚಾಲನೆ ದೊರೆತಿದೆ. ಈ ಬಾರಿ ಅಡಿಕೆಯನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ…? ಎಂಬ ವರದಿಗಳು ಕೇಳಿಬಂದಿದೆ.ಇದುವರೆಗೂ ಈ ಬಗ್ಗೆ ಯಾವುದೇ ಸ್ಪಷ್ಟನೆಗಳು ಬಂದಿಲ್ಲ.
2016 ರಲ್ಲಿ ಈ ಯೋಜನೆ ಜಾರಿಯಾದರೂ ಅನೇಕ ಸಂದೇಹಗಳು ಇದ್ದವು. ಆರಂಭದಲ್ಲಿ ಸಾಲಗಾರ ರೈತರಿಗೆ ಬೆಳೆ ವಿಮೆ ಕಡ್ಡಾಯ ಎಂದು ಇದ್ದರೂ ನಂತರ ವಿಮೆ ಹಣ ಪಾವತಿ ರೈತರಿಗೆ ಕಡ್ಡಾಯವೂ ಇರಲಿಲ್ಲ. ಹೀಗಾಗಿ ಬಹುತೇಕ ಕೃಷಿಕರು ಈ ಬಗ್ಗೆ ಯೋಚನೆ ಮಾಡಿರಲಿಲ್ಲ. ಅದಾದ ಬಳಿಕ ಸಹಕಾರಿ ಸಂಘಗಳಿಗೂ ಈ ಯೋಜನೆ ಜಾರಿ ಮಾಡಲು ಸರ್ಕಾರದಿಂದ ಸೂಚನೆ ಬಂದಿತ್ತು. ಅಂದಿನಿಂದ ಗ್ರಾಮೀಣ ಭಾಗದ ರೈತರಿಗೂ ಬೆಳೆ ವಿಮೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕಳೆದ ವರ್ಷದವರೆಗೂ ಹವಾಮಾನ ಆಧರಿತ ವಿಮಾ ಯೋಜನೆ ಹಾಗೂ ಫಸಲು ವಿಮಾ ಯೋಜನೆ ಎರಡೂ ಕೂಡಾ ಜಾರಿಯಲ್ಲಿತ್ತು. ಆದರೆ ಈ ಬಾರಿ ಫಸಲು ವಿಮಾ ಯೋಜನೆ ಮಾತ್ರಾ ಜಾರಿಯಾಗುವ ಸೂಚನೆ ಸರ್ಕಾರದಿಂದ ಬಂದಿದೆ. ಸಹಕಾರಿ ಸಂಘಗಳಿಗೆ ಜೂ.20 ರಂದು ಸುತ್ತೋಲೆ ಬಂದಿದ್ದು ಅದರಲ್ಲಿ ಫಸಲು ವಿಮಾ ಯೋಜನೆ ಜಾರಿಯ ಮಾಹಿತಿ ನೀಡಲಾಗಿದೆ. ಈ ಸುತ್ತೋಲೆ ಪ್ರಕಾರ 36 ಬೆಳೆಗಳಿಗೆ ಫಸಲ್ ಭೀಮಾ ಯೋಜನೆಯ ಪ್ರಕಾರ ಪ್ರೀಮಿಯಂ ಕಟ್ಟಲು ಸೂಚನೆ ಇರುತ್ತದೆ. ಈ ಪಟ್ಟಿಯಲ್ಲಿ ಅಡಿಕೆ ಹೊರತುಪಡಿಸಲಾಗಿದೆ.
ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯವು ಈ ಯೋಜನೆಯ ನಿರ್ವಹಣೆ ಮಾಡುತ್ತಿದ್ದು, ಕರ್ನಾಟಕ ಸೇರಿದಂತೆ ಭಾರತದ ಎಲ್ಲ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಆಯಾ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಜಾರಿ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ನಿರ್ವಹಣೆ ಮಾಡುವ ಈ ಯೋಜನೆಗೆ ವಿಮಾ ಕಂಪನಿಗಳು ನೆರವಾಗುತ್ತವೆ. ಹಾಗೂ
ರೈತರಿಗೆ ಕಡಿಮೆ ಬೆಲೆಗೆ ಬೆಳೆ ವಿಮೆ ಒದಗಿಸುವುದು ಹಾಗೂ ಬೆಳೆ ಹಾನಿಗೆ ಪರಿಹಾರವೂ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೆಳೆಯನ್ನು ಆಧರಿಸಿ ಪ್ರೀಮಿಯಂ ಕಂತು ನಿಗದಿಯಾಗುತ್ತದೆ ಮತ್ತು ಇದನ್ನು ಬೀಜ ಬಿತ್ತನೆಗೂ ಮೊದಲೇ ಮಾಡಬೇಕು. ಬಳಿಕ ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಲೀ ಅಥವಾ ನೈಸರ್ಗಿಕ ಅವಘಡಗಳಿಂದಾಗಲೀ ಬೆಳೆ ಹಾನಿ ಸಂಭವಿಸಿದರೆ ರೈತರು ವಿಮೆ ಮಾಡಿದ ಮೊತ್ತವನ್ನು ಇನ್ಶೂರೆನ್ಸ್ ಕಂಪನಿಯಿ೦ದ ಪಡೆಯುತ್ತಾರೆ.
ವಿಮೆ ಮಾಡಿಸಿದ ರೈತರು ಮೊದಲಿಗೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ಬೆಳೆ ಸಮೀಕ್ಷೆ ಆಪ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು. ಪ್ರಕೃತಿ ವಿಕೋಪದಿಂದ ಬೆಳೆ ಹಾಳಾದಾಗ ರೈತರು ಯಾವ ವಿಮಾ ಕಂಪನಿಗಳಿಗೆ ಬೆಳೆ ವಿಮೆ ಮಾಡಿಸಿದ್ದಾರೋ ಆ ವಿಮಾ ಕಂಪನಿಗೆ 72 ಗಂಟೆಯೊಳಗೆ ಕರೆ ಮಾಡಬೇಕು.ನಂತರ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾಳಾದ ಕುರಿತು ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ಬಳಿಕ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ ಮಾಡುತ್ತಾರೆ.
ಹವಾಮಾನ ಆಧರಿತ ವಿಮಾ ಯೋಜನೆಯು ಆಯಾ ವರ್ಷದ ಹವಾಮಾನವನ್ನು ಆಧರಿಸಿ ಇಡೀ ಗ್ರಾಮಕ್ಕೆ ವಿಮಾ ಕಂಪನಿ ಹಣ ಪಾವತಿ ಮಾಡುತ್ತದೆ. ಆ ಊರಿನ ಮಳೆ ಹಾಗೂ ಬಿಸಿಲಿನ ಆಧಾರದಲ್ಲಿ ಪ್ರತೀ ಗ್ರಾಮಗಳಿಗೆ ಪರಿಹಾರ ಹಣ ನಿಗದಿಯಾಗುತ್ತದೆ. ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತವಾದ ವಿಮೆ ಲಭ್ಯವಾಗುವುದರಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿಗಳು ಗ್ರಾಮಕ್ಕೆ ಬರುತ್ತಿದ್ದವು. ಆ ಹಣಗಳು ಗ್ರಾಮದಲ್ಲಿ ವಿಮೆ ಪಾವತಿ ಮಾಡಿದ ಕೃಷಿಕರ ಖಾತೆಗಳಿಗೆ ಜಮಾವಣೆಯಾಗುತ್ತಿದ್ದವು. ಕೃಷಿಕರ ಸಂಕಷ್ಟಕ್ಕೆ ಸಾಂತ್ವನ ನೀಡುತ್ತಿದ್ದವು. ಈ ವಿಮೆಗೆ ಜೂನ್ ಅಂತ್ಯದೊಳಗೆ ಪ್ರೀಮಿಯಂ ಪಾವತಿ ಮುಗಿಯಬೇಕು. ಆದರೆ ಇನ್ನೂ ಈ ಬಗೆಗೆ ಯಾವುದೇ ಆದೇಶ,ಸೂಚನೆ ರಾಜ್ಯ ಸರಕಾರದಿಂದ ಬಂದಿಲ್ಲ. ಆದರೆ ಫಸಲು ಭೀಮಾ ಯೋಜನೆ ಅನುಷ್ಟಾನಕ್ಕೆ ಸೂಚನೆ ಬಂದಿದೆ. ಅದರಲ್ಲಿ 36 ಬೆಳೆಗಳ ಪಟ್ಟಿ ಇದೆ . ಅಡಿಕೆ , ಕಾಳುಮೆಣಸು ಸೇರಿದಂತೆ ಕೆಲವು ಬೆಳೆಗಳನ್ನು ಕೈಬಿಡಲಾಗಿದೆ.
ಈಗಿನ ಪ್ರಕಾರ ಫಸಲು ವಿಮಾ ಯೋಜನೆ ಮಾತ್ರ ಅನುಷ್ಟಾನಿಸಲಾಗುತ್ತದೆ .ಅದೂ ಒಂದು ವರ್ಷಕ್ಕೆ ಸೀಮಿತವಾಗಿ ಎಂದು ಮಾಹಿತಿ ಇದೆ.
ಕಳೆದ ಎರಡು ವರ್ಷಗಳಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಈ ವಿಮೆ ಉಪಯುಕ್ತವಾಗಿತ್ತು. ಭಾರೀ ಮಳೆಯ ಕಾರಣದಿಂದ ಅಡಿಕೆ ಬೆಳೆ ನಾಶವಾಗಿತ್ತು. ಈ ಸಂದರ್ಭದಲ್ಲಿ ಈ ವಿಮೆ ಪರಿಹಾರದ ರೂಪದಲ್ಲಿ ಅಡಿಕೆ ಬೆಳೆಗಾರರಿಗೆ ನೆರವಾಗಿತ್ತು. ಒಂದು ಹೆಕ್ಟೇರ್ ಅಡಿಕೆ ಬೆಳೆ ವಿಮೆಗೆ ರೈತರು ರೂ.6400,ರಾಜ್ಯ ಸರ್ಕಾರ 75% ಮತ್ತು ಕೇಂದ್ರ ಸರ್ಕಾರ 25% ಒಟ್ಟು ಮೊತ್ತ ರೂ 65,202 ಪಾವತಿಸುತ್ತದೆ.ರೈತರ ಆಪತ್ತಿಗೆ ಸರಕಾರ ತಂದ ಬೆಳೆ ವಿಮಾ ಯೋಜನೆ ನೆರವಾಗಿತ್ತು. ಇದೀಗ ಸರ್ಕಾರ ಅಡಿಕೆಯನ್ನು ಕೈಬಿಟ್ಟಿರುವುದು ಅಡಿಕೆ ಬೆಳೆಗಾರರ ಗಮನಕ್ಕೆ ಇನ್ನಷ್ಟೇ ಬರಬೇಕಿದೆ.
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…