ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶುಕ್ರವಾರದಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶ ಮಾಡಿದೆ. 21 ದಿನಗಳ ಕಾಲ ಈ ಯಾತ್ರೆ ರಾಜ್ಯದಾದ್ಯಂತ 511 ಕಿಲೋ ಮೀಟರ್ ಸಂಚರಿಸಲಿರುವ ಈ ಯಾತ್ರೆಗೆ ಅದ್ದೂರಿ ಸ್ವಾಗತ ದೊರೆತಿದೆ.
ಮೊದಲ ದಿನ ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಿದ್ದಾರೆ. 21 ದಿನಗಳ ಯಾತ್ರೆಯ ಬಳಿಕ ರಾಯಚೂರು ಮೂಲಕ ಭಾರತ್ ಜೋಡೋ ಯಾತ್ರೆ ಮುಂದಿನ ರಾಜ್ಯಕ್ಕೆ ತೆರಳಲಿದೆ.
ಶುಕ್ರವಾರ ರಾಜ್ಯ ಪ್ರವೇಶಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಬಳಿ ಸಿದ್ದರಾಮಯ್ಯ ಅವರು ಬರ ಮಾಡಿಕೊಂಡರು.ಗುಂಡ್ಲುಪೇಟೆಯಲ್ಲಿ ನಡೆದ ಭಾರತ್ ಜೋಡೋ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಿಧಾನ ರಕ್ಷಣೆ ಮಾಡಲು ಭಾರತ್ ಜೋಡೋ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕರ್ನಾಟಕದಲ್ಲಿ ಇನ್ನು 6 ತಿಂಗಳಲ್ಲಿ ಸರ್ಕಾರ ಬದಲಾಗಲಿದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದರು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಜನರು ಈಗ ಆತಂಕದ ಪರಿಸ್ಥಿತಿಯಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಯವರಿಗೆ ದೇಶದಲ್ಲಿ ಶಾಂತಿ, ಸಾಮರಸ್ಯ ಇರಬಾರದು. ಜನರನ್ನು ಇಬ್ಭಾಗ ಮಾಡುವುದೇ ಇವರ ಉದ್ದೇಶ. ಸಂವಿಧಾನ ಉಳಿಸುವ ಕೆಲಸಕ್ಕೆ ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಯ ಆರಂಭದಲ್ಲಿಯೇ ಅರಣ್ಯ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಚರ್ಚೆಯಾಗಿದೆ. ಕರ್ನಾಟಕದ ಗಡಿ ಕೆಕ್ಕನಹಳ್ಳಿ ಬಳಿಯ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಿದ್ದರಾಮಯ್ಯ ಹಾಗೂ ಬೆಂಬಲಿಗರು ಜಮಾಯಿಸಿದ್ದರು. ಮೀಸಲು ಅರಣ್ಯದಲ್ಲಿ ಪಾದಯಾತ್ರೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದ್ದು, ಕಾರಿನಲ್ಲಿ ಮಾತ್ರ ಸಂಚರಿಸಲು ಅನುಮತಿ ನೀಡಿತ್ತು. ಆದರೆ ಸಿದ್ದರಾಮಯ್ಯ ತಮ್ಮ ವಾಹನ ನಿಲ್ಲಿಸಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದ್ದು, ಮಾಜಿ ಸಚಿವರು ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡರಾದ ಮಹದೇವಪ್ಪ, ಕೆ.ಜೆ. ಜಾರ್ಜ್ ಮತ್ತು ಇತರರು ಇದ್ದರು.