ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ಮೊಟ್ಟೆಯಲ್ಲೂ ಮೋಸ ಮಾಡೋದು ಬಿಟ್ಟಿಲ್ಲ. ಕೋವಿಡ್ ಸಮಯದಿಂದಲೂ ಇವರ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ಗುತ್ತಿದಾರರ ಸಂಘದವರು ಪತ್ರ ಬರೆದರೂ ಪ್ರಧಾನಿ ಮೋದಿಯಿಂದ ಉತ್ತರ ಬರಲಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಅಬ್ಬರದ ಪ್ರಚಾರ ಜೋರಾಗಿದೆ. ಇಂದಿನ ಸಮಾರಂಭಗಳಲ್ಲಿ ಪ್ರಧಾನಿ ಮೋದಿ ಕಾಂಗ್ರಸ್ ವಿರುದ್ಧ ಭ್ರಷ್ಟಾಚಾರದ ಬಾಂಬ್ ಸಿಡಿಸಿದ್ರೆ, ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಸ್ತ್ರವನ್ನೇ ಪ್ರಯೋಗಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮೊಟ್ಟೆಯಲ್ಲೂ ಮೋಸ ಮಾಡೋದು ಬಿಟ್ಟಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಮುಂದುವರಿದು, ಕರ್ನಾಟಕದಲ್ಲಿ ಅರಣ್ಯ ಸಂಪತ್ತು, ಖನಿಜ ಸಂಪತ್ತು ಎಲ್ಲವೂ ಇದೆ. ಇಲ್ಲಿನ ಯುವಕರು ಶಿಕ್ಷಿತರಿದ್ದು ಅವರ ಭವಿಷ್ಯ ಉತ್ತಮವಾಗಿದೆ. ಇಡೀ ವಿಶ್ವದಲ್ಲೇ ಬೆಂಗಳೂರು ಸುಪ್ರಸಿದ್ಧವಾಗಿದೆ, ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ನಾನು ವಿದೇಶಕ್ಕೆ ಹೋದಾಗ ಕರ್ನಾಟಕದ ಯುವಕರು ಐಟಿಯಲ್ಲಿ ಕೆಲಸ ಮಾಡುವವರು ಸಿಕ್ಕಾಗ ಗರ್ವವಾಗುತ್ತೆ. ಆದ್ರೆ ಕರ್ನಾಟಕದಲ್ಲಿರುವ ಸರ್ಕಾರಕ್ಕೆ ಇದರ ಬಗ್ಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.
ಹೆಚ್ಚು ಹಣ ಸಂಪಾದಿಸಬೇಕೆಂದು ಆಸೆ ಇಟ್ಟುಕೊಂಡಿದ್ದ ಸರ್ಕಾರ ಕಳೆದ ಮೂರು ವರ್ಷಗಳ ಹಿಂದೆ ಶಾಸಕರನ್ನ ಖರೀದಿಸಿ ಅಧಿಕಾರಕ್ಕೆ ಬಂತು. ಆರಂಭದಲ್ಲೇ ನಿಯತ್ತಾಗಿರಲಿಲ್ಲ. ಎಲ್ಲರದಲ್ಲೂ ಮೋಸ ಮಾಡಿದ ಸರ್ಕಾರ ಅದು. ಕೊನೆಗೆ ಮೊಟ್ಟೆಯಲ್ಲೂ ಮೋಸ ಮಾಡೋದು ಬಿಡಲಿಲ್ಲ. ಇಡೀ ದೇಶಕ್ಕೆ ಗೊತ್ತು ಇದು 40 ಪರ್ಸೆಂಟ್ ಸರ್ಕಾರ. ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದ್ರು, ಜಿಎಸ್‌ಟಿ ತಂದರು. ಸರ್ಕಾರಿ ಹುದ್ದೆಗಳಿಗೆ ರೇಟ್ ಫಿಕ್ಸ್ ಮಾಡಿದ್ರು, ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಸರ್ಕಾರ 1.5 ಲಕ್ಷ ಕೋಟಿ ರೂ.ಗಳನ್ನ ಲೂಟಿ ಮಾಡಿದೆ ಎಂದು ಕಿಡಿ ಕಾರಿದ್ದಾರೆ.
ಬಿಜೆಪಿ ಲೂಟಿ ಮಾಡಿದ 1.5 ಲಕ್ಷ ಕೋಟಿ ಇದ್ದಿದ್ದರೆ, ಆ ಹಣದಲ್ಲಿ 100 ಏಮ್ಸ್ ಆಸ್ಪತ್ರೆ ನಿರ್ಮಾಣ ಆಗುತ್ತಿತ್ತು. 2,250 ಕಿಮೀ 6 ಪಥದ ಎಕ್ಸ್ಪ್ರೆಸ್ ವೇ ಆಗುತ್ತಿತ್ತು. 100ಕ್ಕೂ ಹೆಚ್ಚು ಇಎಸ್‌ಐ ಆಸ್ಪತ್ರೆ ನಿರ್ಮಿಸಬಹುದಿತ್ತು. 30 ಸಾವಿರ ಸ್ಮಾರ್ಟ್‌ಕ್ಲಾಸ್ ನಿರ್ಮಾಣ ಮಾಡಬಹುದಿತ್ತು. ಇವರು ಲೂಟಿ ಮಾಡಿದ ಹಣದಿಂದ 30 ಲಕ್ಷ ಮನೆ ನಿರ್ಮಿಸಬಹುದಿತ್ತು ಎಂದು ಹೇಳಿದ್ದಾರೆ.