ಕರ್ನಾಟಕ ವಿಧಾನಸಭೆ ಚುನಾವಣೆ ಗೆದ್ದ ಖುಷಿಯಲ್ಲಿರುವ ಕಾಂಗ್ರೆಸ್‌ಗೆ ರಾಜಕೀಯ ತಂತ್ರಗಾರ ಹಾಗೂ ಚುನಾವಣಾ ಚಾಣಕ್ಯ ಎಂದೇ ಕರೆಯಿಸಿಕೊಳ್ಳುವ ಪ್ರಶಾಂತ್ ಕಿಶೋರ್ ಎಚ್ಚರಿಕೆ ನೀಡಿದ್ದಾರೆ, ಗೆದ್ದ ಖುಷಿಯಲ್ಲಿ ಮೈಮರೆತರೆ ಮುಂದೆ ಸಂಕಷ್ಟ ಇದೆ ಎಂದಿದ್ದಾರೆ.
ಬಿಹಾರದಲ್ಲಿ ಜನ್ ಸೂರಜ್ ಯಾತ್ರೆ ನಡೆಸುತ್ತಿರುವ ಪ್ರಶಾಂತ್ ಕಿಶೋರ್ ಮಾತನಾಡಿ, ”ಕರ್ನಾಟಕದ ಫಲಿತಾಂಶ ಮುಂಬರುವ ಲೋಕಸಭೆ ಚುನಾವಣೆಯ ದಿಕ್ಸೂಚಿ ಎನ್ನುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಕರ್ನಾಟಕ ವಿಧಾನಸಭೆ ಗೆದ್ದ ಖುಷಿಯಲ್ಲಿ ಬೀಗಬೇಡಿ” ಎಂದು ಎಚ್ಚರಿಸಿದ್ದಾರೆ.
ದೇಶದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಪ್ರಶಾಂತ್ ಕಿಶೋರ್, ”ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಅಭಿನಂದಿಸುತ್ತೇನೆ. ಆದರೆ, ಇದನ್ನು ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಪರಿಗಣಿಸಬಾರದು. ಗೆದ್ದ ಖುಷಿಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮೈಮರೆಯಬಾರದು” ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
”2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ, 2014ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಕಡಿಮೆ ಸ್ಥಾನ ಗಳಿಸಿತು. ಅಲ್ಲದೇ, 2019ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆದ್ದರೂ, ಕೆಲವೇ ತಿಂಗಳುಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮತ್ತೆ ನೆಲಕಚ್ಚಿತು ಎಂಬುದನ್ನು ಮರೆಯಬಾರದು” ಎಂದು ಪ್ರಶಾಂತ್ ಕಿಶೋರ್ ನೆನಪಿಸಿದ್ದಾರೆ. 2012ರಲ್ಲಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಬಳಿಕ ಎರಡು ನಂತರ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಉತ್ತರಪ್ರದೇಶದ 80 ಸ್ಥಾನಗಳಲ್ಲಿ 73 ಸ್ಥಾನ ಬಾಚಿಕೊಂಡಿತು” ಎಂದು ತಿಳಿಸಿದರು.
ಪ್ರಶಾಂತ್ ಕಿಶೋರ್ ಅವರು 2012ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪ್ರಚಾರ ಕಾರ್ಯಕ್ರಮದ ಪ್ರಮುಖ ತಂತ್ರಗಾರರಾಗಿ ಕೆಲಸ ಮಾಡಿದ ನಂತರ ಪ್ರಸಿದ್ಧಿಯಾಗಿದ್ದರು. ಆ ಬಳಿಕ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ತಂತ್ರಗಾರನಾಗಿದ್ದರು.
ಈ ವೇಳೆ ಬಿಜೆಪಿ ಯಶಸ್ವಿ ಪ್ರಯತ್ನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಅವರಿಗೆ ಬೇಡಿಕೆ ಹೆಚ್ಚಾಯಿತು. ಬಿಜೆಪಿ ವಾರ್ ರೂಂನಿಂದ ಹೊರಬಂದ ಅವರು, ನಂತರ ಬಿಹಾರದಲ್ಲಿ ನಿತೀಶ್ ಕುಮಾರ್, ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್, ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್, ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪರ ಚುನಾವಣಾ ತಂತ್ರಗಾರಿಕೆ ರೂಪಿಸಿದ್ದರು.
2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಬಳಿಕ ಪ್ರಶಾಂತ್ ಕಿಶೋರ್ ಅವರು ಚುನಾವಣಾ ತಂತ್ರಗಾರಿಕೆಗೆ ವಿದಾಯ ಹೇಳಿದ್ದರು. ಆ ಬಳಿಕ ದೇಶಾದ್ಯಂತ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷಕ್ಕೆ ಮರುಜೀವ ನೀಡಲು ಪ್ರಯತ್ನಪಟ್ಟರು. ಆದರೆ, ಪಕ್ಷದಲ್ಲಿ ಅವರ ಮಾತಿಗೆ ಮನ್ನಣೆ ಸಿಗದ ಕಾರಣ, ಬಿಹಾರದಲ್ಲಿ ಜನ್ ಸೂರಜ್ ಯಾತ್ರೆ ಆರಂಭಿಸಿದ್ದಾರೆ.