ಬಂದರು ಸಂಪರ್ಕಕ್ಕಾಗಿ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ 3 ಸಾವಿರ ಕಿಲೋ ಮೀಟರ್‌ಗಿಂತ ಹೆಚ್ಚಿನ ಹೆದ್ದಾರಿಗಳ ಸುತ್ತಲೂ 25 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. 1 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ಹೆದ್ದಾರಿಗಳ ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದರು.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಆರ್ಥಿಕತೆ ಏರುಗತಿಯಲ್ಲಿ ಸಾಗಿದೆ. ಕಳೆದ 11 ವರ್ಷಗಳಲ್ಲಿ, ಭಾರತ ವಿಶ್ವ ಗುರು, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ದೇಶವಾಗುವತ್ತ ದಾಪುಗಾಲು ಇಟ್ಟಿದೆ, ಅರ್ಥ ವ್ಯವಸ್ಥೆಯ ಸುಧಾರಣೆಗಾಗಿ ಈಗಾಗಲೇ ಹಲವು ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಕ್ಷಿಣ ಏಷ್ಯಾ, ಇಂಡೋನೇಷ್ಯಾ, ಮಲೇಷ್ಯಾ, ಚೀನಾ, ಸಿಂಗಪುರ, ಜಪಾನ್‌ನಿಂದ ಜನರು ಭಗವಾನ್ ಗೌತಮ ಬುದ್ಧನ ಜನ್ಮಸ್ಥಳಕ್ಕೆ ಬರುವ ಕಾರಣದಿಂದ 22 ಸಾವಿರ ಕೋಟಿ ರೂಪಾಯಿಗಳಲ್ಲಿ ಬುದ್ಧ ಸರ್ಕ್ಯೂಟ್ ನಿರ್ಮಾಣ ಮಾಡಲಾಗಿದೆ ಎಂದರು. ಚಾರ್ ಧಾಮ್, ಬದರಿನಾಥ್, ಕೇದಾರನಾಥ್, ಗಂಗೋತ್ರಿ, ಯಮುನೋತ್ರಿ ಸ್ಥಳಗಳಿಗೆ ಬರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಕೇದಾರನಾಥಕ್ಕೆ ರೋಪ್‌ವೇ ಮಾಡಲಾಗುತ್ತಿದೆ. ಕೈಲಾಸ ಮಾನಸರೋವರವನ್ನು ಉತ್ತರಾಖಂಡದ ಪಿಥೋರಗಢಕ್ಕೆ ಸಂಪರ್ಕಿಸುವ ರಸ್ತೆಯ ಕೆಲಸವೂ ಬಹುತೇಕ ಪೂರ್ಣಗೊಂಡಿದೆ. ಶ್ರೀನಗರ ಮತ್ತು ಜಮ್ಮು ನಡುವೆ 36 ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. ದೆಹಲಿಯಿಂದ ಚೆನ್ನೈಗೆ 240 ಕಿಲೋ ಮೀಟರ್ ದೂರ ಕಡಿಮೆ ಮಾಡಲಾಗಿದೆ ಎಂದರು.