ಅಡಿಕೆ ಹಳದಿ ಎಲೆರೋಗ ಹರಡದಂತೆ ತಡೆಯುವ ಯಾವ ವಿಧಾನಗಳೂ ಸದ್ಯ ಇಲ್ಲವಾಗಿದೆ. ಔಷಧಿಯೂ ಇಲ್ಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಗಾರರು ಮಾಡಬೇಕಾದ್ದು ಅಡಿಕೆ ಹಳದಿ ಎಲೆರೋಗ ನಿಯಂತ್ರಣ ಹಾಗೂ ಅಡಿಕೆ ಕೃಷಿಯಲ್ಲಿ ನಿರ್ವಹಣಾ ವಿಧಾನದಲ್ಲಿ ಬದಲಾವಣೆ. ಈ ಬಗ್ಗೆ ಮಾಹಿತಿ ಕಾರ್ಯಕ್ರಮವು ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ವಿಟ್ಲ ಕೇಂದ್ರಿಯ ಸಸ್ಯ ಬೆಳೆಗಳ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನೀರ್ಕಜೆ ಸುಬ್ರಾಯ ಭಟ್ ಅವರ ಕೃಷಿ ತೋಟದಲ್ಲಿ ಶನಿವಾರ ನಡೆಯಿತು.
ಅಡಿಕೆ ಹಳದಿ ಎಲೆ ರೋಗ ನಿರ್ವಹಣಾ ಮಾರ್ಗೋಪಾಯ ಬಗ್ಗೆ ಮಾಹಿತಿ ನೀಡಿದ ವಿಟ್ಲ ಕೇಂದ್ರೀಯ ಸಸ್ಯ ಬೆಳೆಗಳ ಸಂಶೋಧನಾ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ|ಭವಿಷ್ಯ ,ಅಡಿಕೆ ಹಳದಿ ಎಲೆ ರೋಗ ಹರಡದ ಹಾಗೆ ತಡೆಯುವುದು ಇಂದು ಅಡಿಕೆಯಂತಹ ಬೆಳೆಯಲ್ಲಿ ಕಷ್ಟವಾಗಿದೆ. ಆದರೆ ಕೃಷಿಕರ ಪ್ರಯತ್ನದಿಂದ ಪರಿಣಾಮಕಾರಿಯಾಗಿ ಈ ರೋಗವನ್ನು ತಡೆಯಬಹುದು. ಹಳದಿ ಎಲೆ ಬಾಧಿತ ತೋಟಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಬೆಳೆಗಾರರಿಗೂ ಆತಂಕದಿಂದ ದೂರವಾಗಬಹುದು, ಉತ್ತಮ ಇಳುವರಿಯನ್ನೂ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಅಡಿಕೆ ಹಳದಿ ಎಲೆ ಹಳದಿ ರೋಗವು ಯಾವುದೇ ಗಿಡಗಳ ಮೂಲಕ ಹರಡಬಲ್ಲುದು.ಪೈಟೋಪ್ಲಾಸ್ಮಾಕ್ಕೆ ಜೀವಂತ ಸೆಲ್ ಬೇಕು. ರೋಗ ವಾಹಕದಿಂದ ಅದು ಹರಡುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ಆರೋಗ್ಯವಂತ ಅಡಿಕೆ ಮರದಿಂದ ಅಡಿಕೆ ತಂದು ಗಿಡವನ್ನಾಗಿಸಿ ನಾಟಿ ಮಾಡುವುದು ಉತ್ತಮ. ಬೇರೆಡೆಯಿಂದ ಗಿಡಗಳನ್ನು ತಂದು ನಾಟಿ ಮಾಡುವ ಕ್ರಮ ದೂರ ಮಾಡಬೇಕು, ಗಿಡಗಳಿಗೆ ಪೋಷಕಾಂಶಗಳ ಸೂಕ್ತ ನಿರ್ವಹಣೆಯ ಅಗತ್ಯ ಇದ್ದು ಈ ಬಗ್ಗೆಯು ಕೃಷಿಕರು ಗಮನ ಹರಿಸಬೇಕು. ಎಲೆ ಹಳದಿ ರೋಗ ಗುಣಪಡಿಸುವ ಔಷಧ ಇಲ್ಲ. ಮಾರುಕಟ್ಟೆಯಲ್ಲಿ ಔಷಧ ಮಾರಾಟ ಮಾಡಲಾಗುತ್ತಿದ್ದರೂ ಅದಕ್ಕೆ ಯಾವುದೇ ಆಧಾರ ಇಲ್ಲ ಎಂದವರು ಹೇಳಿದರು. ಕೃಷಿಕರ ಜತೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮಾತನಾಡಿ, ಹಳದಿ ಎಲೆ ರೋಗ ಹರಡುವಿಕೆ ವೇಗವಾಗಿ ಹಬ್ಬಿದ್ದು ಈ ಬಗ್ಗೆ ಪ್ರತಿಯೊಬ್ಬರು ಗಂಭೀರವಾಗಿ ಯೋಚಿಸಬೇಕಾದ ಕಾಲಘಟ್ಟದಲ್ಲಿ ಇದ್ದೇವೆ ಎಂದರು. ಮಲೆನಾಡಿನ ತೋಟಗಳಲ್ಲಿ ಅಡಿಕೆ ಕೊಯಿಲು, ಔಷಧ ಸಿಂಪಡಣೆಗೆ ಪೈಬರ್ ದೋಟಿ ಬಳಕೆ ಹೆಚ್ಚಾಗಿದ್ದು ಕರಾವಳಿ ತೋಟಗಳಲ್ಲಿಯು ಇದರ ಬಳಕೆ ಪ್ರಾರಂಭಗೊಂಡಿದೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ಕಾರ್ಯಕ್ರಮವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದ ಪ್ರಗತಿಪರ ಕೃಷಿಕ ನೀರ್ಕಜೆ ಸುಬ್ರಾಯ ಭಟ್, ಅಡಿಕೆಗೆ ಬಾಧಿಸಿರುವ ಹಳದಿ ರೋಗದ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡುವ ಪ್ರಯತ್ನ ಉತ್ತಮವಾದದು. ಜತೆಗೆ ಕಾರ್ಬನ್ ಪೈಬರ್ ದೋಟಿಯ ಬಗ್ಗೆ ತಿಳಿದುಕೊಳ್ಳಲು ಈ ಕಾರ್ಯಕ್ರಮ ಅವಕಾಶ ನೀಡಿದ್ದು ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಬೇಕು ಎಂದರು.
ಇದೇ ವೇಳೆ ಫೈಬರ್ ದೋಟಿಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.ಪೈಬರ್ ದೋಟಿ ಕುರಿತಂತೆ ಸಾಯ ಎಂಟರ್ಪ್ರೈಸಸ್ ಮಾರುಕಟ್ಟೆ ಅಧಿಕಾರಿ ಪದ್ಮನಾಭ ಮಾಹಿತಿ ನೀಡಿ, ಬಳಕೆಯ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಸಭಾಧ್ಯಕ್ಷತೆ ವಹಿಸಿದ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿದರು.
ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ , ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿದರು. ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಕೇಶವಮೂರ್ತಿ ಕಾವಿನಮೂಲೆ, ಗೋಪಾಲಕೃಷ್ಣ ಭಟ್ ಮನವಳಿಕೆ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಕುಂಡಡ್ಕ, ವೀಣಾ ಸರಸ್ವತಿ ನೀರ್ಕಜೆ, ಶ್ಯಾಮ್ ಕಿಶೋರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರೇಕ್ಷಿತಾ ಪ್ರಾರ್ಥಿಸಿದರು. ಶಶಿಕುಮಾರ್ ಬಿ.ಎನ್. ಅಭಿನಂದನಾ ನುಡಿಗಳನ್ನಾಡಿದರು. ಕೆನರಾ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಸಿಂಧೂ ಎನ್.ಎಸ್. ನಿರೂಪಿಸಿದರು. ಕಿರಣ್ ಪ್ರಸಾದ್ ಕುಂಡಡ್ಕ ವಂದಿಸಿದರು.
ಮಾಹಿತಿ ಕಾರ್ಯಕ್ರಮದ ಬಳಿಕ ಅಡಿಕೆ ತೋಟದಲ್ಲಿ ಪೈಬರ್ ದೋಟಿ ಬಳಕೆ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಕೃಷಿಕರು ಹಾಗೂ ಮುಕ್ಕೂರು ಚಿಣ್ಣರ ಸಂಭ್ರಮದ ಬೇಸಗೆ ಶಿಬಿರಾರ್ಥಿಗಳು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಕಾರ್ಯಾಗಾರದಲ್ಲಿ ಯುವಕ ಮಂಡಲದ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ರವಿ ಕುಂಡಡ್ಕ, ರಕ್ಷಿತ್ ಗೌಡ ಕಾನಾವು, ವೆಂಕಟರಮಣ, ರಾಮಚಂದ್ರ ಚೆನ್ನಾವರ ಮೊದಲಾದವರು ಸಹಕರಿಸಿದರು.