ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಸದ್ಯ ಶಾಲಾ-ಕಾಲೇಜು, ಚಿತ್ರಮಂದಿರ ಸೇರಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಾಸ್ಕ್ ಕಡ್ಡಾಯ ಮಾಡಿದೆ. ಕೋವಿಡ್ ಆರಂಭದಲ್ಲಿಯೇ ನಿಯಂತ್ರಣಾ ಕ್ರಮಗಳ ಕಡೆಗೆ ಹೆಜ್ಜೆ ಇರಿಸಲಾಗಿದೆ.
ಕೋವಿಡ್ ಪರಿಶೀಲನಾ ಸಭೆಯ ನಂತರ ಮಾಧ್ಯಮಳೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು , ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ‘ಚಲನಚಿತ್ರ ಮಂದಿರಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮಾಸ್ಕ್ ಗಳನ್ನು ಕಡ್ಡಾಯಗೊಳಿಸಲಾಗಿದೆ. ಪಬ್, ರೆಸ್ಟೋರೆಂಟ್ ಗಳು ಮತ್ತು ಬಾರ್ ಗಳಲ್ಲಿ ಹೊಸ ವರ್ಷವನ್ನು ಆಚರಿಸಲು ಮಾಸ್ಕ್ ಕಡ್ಡಾಯವಾಗಿರುತ್ತದೆ.ಹೊಸ ವರ್ಷದ ಆಚರಣೆಗಳು ಬೆಳಿಗ್ಗೆ 1 ಗಂಟೆಯೊಳಗೆ ಕೊನೆಗೊಳ್ಳುತ್ತವೆ. ಕೋವಿಡ್ ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಬೆಂಗಳೂರಿಗೆ ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಏರ್ ಪೋರ್ಟ್ ಗಳಲ್ಲಿ ಆರ್ ಟಿಪಿಆರ್ ತಪಾಸಣೆಗೆ ಸೂಚನೆ ನೀಡಲಾಗಿದೆ. ಬೆಂಗಳೂರು ಮತ್ತು ಮಂಗಳೂರು ಏರ್ ಪೋರ್ಟ್ ನಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಸೋಂಕಿತರ ಚಿಕಿತ್ಸೆಗೆ ಎರಡು ಆಸ್ಪತ್ರೆಗೆ ಮೀಸಲಿಡಲಾಗಿದೆ. ರಾಜ್ಯದಲ್ಲಿ ಮತ್ತೆ ಲಸಿಕಾ ಕೇಂದ್ರಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಜಿಲ್ಲಾಮಟ್ಟದಿಂದ ಗ್ರಾಮಪಂಚಾಯತ್ ಮಟ್ಟದಲ್ಲಿ ಲಸಿಕಾ ಕೇಂದ್ರ ಆರಂಭಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದವರು ಕೂಡಲೇ ಲಸಿಕೆ ಹಾಕಿಸಿಕೊಳ್ಳಬೇಕು. ಬೂಸ್ಟರ್ ಡೋಸ್ ಲಸಿಕೆ ಹಾಕಿಕೊಳ್ಳುವಂತೆ ಜನರಿಗೆ ಮನವಿ ಮಾಡಿದ್ದಾರೆ.