ಹಟ್ಟಿಯಲ್ಲಿ ದನ ಕರು ಹಾಕಿದ ಸಂಭ್ರಮ. ಎರಡನೇಯ ಕರು. ಅದೂ ಹೆಣ್ಣು ಕರು. ಬಣ್ಣವೂ ಕಪ್ಪು ಬಿಳಿ ಚೆಂದದ್ದು.
ದನ ಕರು ಹಾಕಿದೆಯೆಂದರೆ ಮನೆಯಲ್ಲಿ ಖುಷಿಯೋ ಖುಷಿ. ಅದರ ಹೊರತು ಕೆಲಸವೂ ಜಾಸ್ತಿ. ಇತ್ತಿಚೆಗಂತೂ ದನ ಗಬ್ಬದ್ದು ಎನ್ನುವಾಗಲೇ ಮನಸಿನಲ್ಲೇ ಆತಂಕ ಸುರು. ಮನೆಗಳಲ್ಲಿ ದನಗಳಿರುವುದು ಬೆರಳೆಣಿಕೆಯದ್ದು. ಅದರಲ್ಲೂ ಒಂದೇ ಹೆಚ್ಚು. ಹತ್ತು ವರುಷಗಳ ಹಿಂದೆಯವರೆಗೂ ಒಂದೊಂದು ಹಟ್ಟಿಯಲ್ಲೂ ಕಮ್ಮಿಯೆಂದರೆ ಮೂರು ದನಗಳು ಒಂದೆರಡು ಕರುಗಳು ಇದ್ದೇ ಇರುತ್ತಿದ್ದವು. ಮರೆತು ಹೋಗದಂತೆ ವರುಷಕ್ಕೆರಡು ಬಾಣಂತನ ಗ್ಯಾರೆಂಟಿ.
ದನ ಗಬ್ಬದಲ್ಲಿರುವಾಗ ಏನು , ಹೇಗೆ ಉಪಚಾರ ಮಾಡ ಬೇಕೆಂದು ಹೇಳಲು, ಮೇಲ್ವಿಚಾರಣೆ ಮಾಡಲು ಹಿರಿಯರು ಮನೆಯಲ್ಲಿರುತ್ತಿದ್ದರು. ಅವರ ಉಸ್ತುವಾರಿಯಲ್ಲೇ ದನ ಹಾಗೂ ಕರುಗಳ ಆರೈಕೆ ನಡೆಯುತ್ತಿತ್ತು..ಮನೆಯಲ್ಲಿ ಹ್ಯಾಗೆ ಮನೆ ಮಗಳ ಆರೈಕೆ ಮಾಡಲಾಗುತ್ತದೋ ಹಾಗೆಯೇ ಹಟ್ಟಿಯಲ್ಲಿಯೂ . ಕರು ಹಾಕಿದ ಕೂಡಲೇ ಬೆಲ್ಲ , ಎಣ್ಣೆ ಮಿಶ್ರ ಮಾಡಿ ದನಕ್ಕೆ ತಿನ್ನಿಸುವುದರಿಂದ ಸಿಗುವ ಲಾಭ ಅಧಿಕ. ಇದು ಹಿರಿಯರು ಕಂಡು ಕೊಂಡ ಸತ್ಯ.
ಕರು ಹಾಕುವವರೆಗಿನ ಆರೈಕೆ ಒಂದು ರೀತಿಯದಾದರೆ ಕರು ಹುಟ್ಟಿದ ಮೇಲಿನ ಪೋಷಣೆ ಬೇರೆಯೇ ರೀತಿಯಲ್ಲಿ. ಇವೆರಡರ ವ್ಯತ್ಯಾಸ ನಮ್ಮರಿವಿಗೆ ಬರಬೇಕಾದರೆ ಹಿರಿಯರ ಮಾರ್ಗದರ್ಶನ ಬೇಕೇ ಬೇಕು.
ಪುಟ್ಟ ಕರು ಅಮ್ಮ ಪ್ರೀತಿಯಿಂದ ನೆಕ್ಕುತ್ತಿದ್ದಂತೆ , ಅಮ್ಮನ ಸ್ಪರ್ಶವಾಗುತ್ತಿದ್ದಂತೆ ತನ್ನ ಪುಟ್ಟ ಕಾಲನ್ನು ಊರಲು ಪ್ರಯತ್ನಿಸುತ್ತದೆ. ಹಳ್ಳಿ ಜಾತಿಯ ದನ ಕರುಗಳಾದರೆ ತುಂಬಾ ಚುರುಕಾಗಿರುತ್ತದೆ. ಅವಾಗಿಯೇ ಎದ್ದು ಹಾಲು ಕುಡಿದು ಬಿಡುತ್ತದೆ. ಕೆಲವೊಂದು ಬಾರಿ ನಮ್ಮ ಸಹಾಯವೂ ಬೇಕಾಗುತ್ತದೆ. ಪುಟ್ಟ ಕರುಗಳ ಕಾಲುಗಳು ಬಲವಾಗಿರುವುದಿಲ್ಲ. ಪರಿಸ್ಥಿತಿಗೆ ಹೊಂದಿಕೊಳ್ಳಲು ಸ್ವಲ್ಪ ನಮ್ಮ ಸಹಾಯ ಬೇಕಾಗುತ್ತದೆ. ಅವಾಗಿಯೇ ಹಾಲು ಕುಡಿಯಲು ಆರಂಭಿಸುವವರೆಗೆ ನಾವು ಜೊತೆಯಾಗುವ ಅನಿವಾರ್ಯತೆ ಇದೆ.
ಮನೆಯಲ್ಲಿ ಅತ್ತೆಯವರು ಯಾವಾಗಲೂ ಈ ವಿಷಯದ ಬಗ್ಗೆ ನೆನಪು ಮಾಡಿಕೊಳ್ಳುತ್ತಾರೆ. ಮೇಯಲು ಬಿಟ್ಟ ದನಗಳು ಗುಡ್ಡದಲ್ಲಿಯೇ ಕರು ಹಾಕಿಬಿಡುತ್ತಿದ್ದುವು. ಎಂದಿನಂತೆ ಸಂಜೆ ಹಟ್ಟಿಗೆ ವಾಪಸ್ ಬರುವಾಗ ದನ ಕರುವಿನೊಂದಿಗೆ ಬರುತ್ತಿದ್ದುವು. ! ಈಗ ಆ ಬಗ್ಗೆ ಹೇಳುವುದು ಕೇಳುವಾಗಲೇ ಆಶ್ಚರ್ಯವೆನಿಸುತ್ತದೆ. ಸದ್ಯ ಮೇಯಲು ಗುಡ್ಡೆಗೆ ಬಿಡುವುದು ದೂರದ ಮಾತು, ಹಟ್ಟಿಯಲ್ಲಿದ್ದ ದನಗಳು ಬೆಳಿಗ್ಗೆ ಏಳುವಾಗ ಇರುತ್ತದೋ ಇಲ್ಲವೋ ಎಂಬುದು ಕಹಿಸತ್ಯ. ನಾವು ಭಾರತೀಯರು ದನವನ್ನು ಗೋಮಾತೆ ಎನ್ನುತ್ತೇವೆ. ಆಕೆ ನಮ್ಮ ಪಾಲಿಗೆ ಎಲ್ಲವನ್ನೂ ಕೊಡುವ ಕಾಮಧೇನು.
ಆಕೆಯ ಸಗಣಿಯನ್ನು ಗೋಮಯ ಅನ್ನುತ್ತೇವೆ, ಗೋಮೂತ್ರ ಎಲ್ಲವೂ ಶ್ರೇಷ್ಠವಾದುದೇ. ಇವುಗಳೆರಡನ್ನೂ ಕೂಡ ನಾವು ತೀರ್ಥವೆಂದು ಭಕ್ತಿಯಿಂದ ಸೇವಿಸುತ್ತೇವೆ, ಈ ವಿಷಯದಲ್ಲಾಗಲಿ ಯಾವ ಸಂಶಯವೂ ಮನದಲ್ಲಿ ಮೂಡದು.
ನಮ್ಮ ಬದುಕಿನಲ್ಲಿ ನಮ್ಮವಳೇ ಆಗಿದ್ದ ಗೋಮಾತೆಯ ಈಗ ವಾಣಿಜ್ಯ ಉದ್ದೇಶವೇ ಪ್ರಮುಖವಾಗಿ ಸಾಕಲ್ಪಡುತ್ತಿರುವುದು ನಂಬಲು ಕಷ್ಟವಾದ ಕಹಿ ಸತ್ಯ. ಅದರಲ್ಲೂ ಹಾಲು ಎಷ್ಟು ದಿನ ಕೊಡುತ್ತಾಳೋ ಅಷ್ಟು ದಿನ ನಮಗವಳು ಬೇಕು. ಯಾವಾಗ ಹಾಲು ಕೊಡುವುದು ನಿಲ್ಲಿಸುತ್ತಾಳೋ ಅವಾಗ ಮನೆಯಿಂದಲೇ ಗೇಟ್ ಪಾಸ್ . ಇದು ಸದ್ಯದ ಒಪ್ಪಿಕೊಳ್ಳಲೇ ಬೇಕಾದ ಕಹಿ ಸತ್ಯ……..
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…