ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಮತ್ತು ಸಂಶೋಧನಾ ಖಂಡದ ವತಿಯಿಂದ ಗೋಮಯದಿಂದ ತಯಾರಿಸಿದ ಕಾಗದದ ಲೋಕಾರ್ಪಣೆಯನ್ನು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನೆರವೇರಿಸಿದರು.
ಭಾರತೀಯ ಗೋತಳಿಯ ಸಂವರ್ಧನೆ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಕಾಮದುಘಾ ವತಿಯಿಂದ ಗೋಮಯ ಕಾಗದ ತಯಾರಿಸಿರುವುದು ಅತ್ಯಂತ ಅರ್ಥಪೂರ್ಣ. ಶ್ರೀಮಠದಲ್ಲಿ ಇಂಥ ಪರಿಸರಸ್ನೇಹಿ ಕಾಗದದ ಬಳಕೆಯನ್ನು ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದರು. ಇದು ರಾಸಾಯನಿಕ ಮುಕ್ತವಾಗಿರುವುದರಿಂದ ಪರಿಸರ ಸ್ನೇಹಿಯಾಗಿರುವುದು ಮಾತ್ರವಲ್ಲದೇ, ಗೋವಿನ ಉತ್ಪನ್ನಗಳ ಮೌಲ್ಯವರ್ಧನೆಯಲ್ಲೂ ಮಹತ್ವದ ಅಂಶ ಎನಿಸಲಿದೆ. ಶ್ರೀಮಠದ ಭಕ್ತರು ಮತ್ತು ಸಾರ್ವಜನಿಕರು ಇಂಥ ಪ್ರಯೋಗಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಶ್ರೀಗಳು ಆಶಿಸಿದರು.ಗೋಮಯ ಕಾಗದದಲ್ಲಿ ಮುದ್ರಿಸಿದ ವಿವಾಹ ಆಮಂತ್ರಣವನ್ನೂ ಸ್ವಾಮೀಜಿ ಬಿಡುಗಡೆ ಮಾಡಿ ಇದು ಅನುಕರಣೀಯ ಎಂದರು.
ಪರಿಸರ ಸ್ನೇಹಕ್ಕೆ ಒಂದು ಹೆಜ್ಜೆ | ಗೋಮಯದಿಂದ ತಯಾರಾದ ಕಾಗದ ರಾಮಚಂದ್ರಾಪುರ ಮಠದಲ್ಲಿ ಲೋಕಾರ್ಪಣೆ. @Shankaracarya36 ಅವರಿಂದ. #Cowdung used for paper production. First paper released at Ramachandrapur math pic.twitter.com/7buTH4Gf51
— theruralmirror (@ruralmirror) July 25, 2022
ಸಂಪೂರ್ಣ ಪರಿಸರ ಸ್ನೇಹಿ, ರಾಸಾಯನಿಕ ರಹಿತ, ನೈಸರ್ಗಿಕವಾದ ಈ ವಿಶಿಷ್ಟ ಕಾಗದವನ್ನು ಶುದ್ಧ ದೇಸಿ ಗೋವಿನ ಸೆಗಣಿಯಿಂದ ತಯಾರಿಸಲಾಗಿದ್ದು, ಇದೇ ಮೊದಲ ಬಾರಿಗೆ ಇದನ್ನು ಸಿದ್ಧಪಡಿಸಲಾಗಿದೆ ಎಂದು ಈ ಯೋಜನೆ ಬಗ್ಗೆ ವಿವರ ನೀಡಿದ ಕಾಮದುಘಾ ವಿಭಾಗದ ಡಾ.ವೈ.ವಿ.ಕೃಷ್ಣಮೂರ್ತಿ ವಿವರಿಸಿದರು. ಸಾಮಾನ್ಯ ಕಾಗದ ಉತ್ಪಾದನೆಗೆ ಮರ ಹಾಗೂ ನೀರು ವ್ಯಾಪಕವಾಗಿ ಬಳಕೆಯಾಗುವುದರಿಂದ ಪರಿಸರಕ್ಕೆ ಇದು ದೊಡ್ಡ ಹೊರೆಯಾಗಿ ಪರಿಣಿಸುತ್ತಿದೆ. ವಿದೇಶಗಳಲ್ಲಿ ಇಂದು ಇಂಥ ಪರಿಸರ ಸ್ನೇಹಿ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ ಇದ್ದು, ನಾವೂ ಇದರ ಮಹತ್ವ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದರು.