ತೆಂಗು ಹಾಗೂ ಅಡಿಕೆಗೆ ಸಂಬಂಧಿಸಿದ ನೂತನ ತಂತ್ರಜ್ಞಾನಗಳ ವರ್ಗಾವಣೆಗಾಗಿ 6 ಒಪ್ಪಂದಗಳಿಗೆ ಕಾಸರಗೋಡಿನ ಸಿಪಿಸಿಆರ್‌ಐ ಹಾಗೂ ಕರ್ನಾಟಕದ ರೈತ ಉತ್ಪಾದಕ ಕಂಪನಿ ಮತ್ತು ನರ್ಸರಿ ಜೊತೆ ಒಪ್ಪಂದಕ್ಕೆ (MoA) ಸಹಿ ಹಾಕಲಿದೆ.
ಕಾಸರಗೋಡಿನಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆ ಸಿಪಿಸಿಆರ್‌ಐ ಕಳೆದ ಹವಲು ಸಮಯಗಳಿಂದ ಅಡಿಕೆ, ತೆಂಗು ಕೃಷಿ ಅಭಿವೃಧ್ಧಿ ಕಡೆಗೆ ಕೆಲಸ ಮಾಡುತ್ತಿದೆ. ಇದೀಗ ಕಾಸರಗೋಡು ಸಿಪಿಸಿಆರ್‌ಐ ಸಂಸ್ಥೆಯ ನಿರ್ದೇಶಕ ಡಾ.ಕೆ ಬಿ ಹೆಬ್ಬಾರ್ ನೇತೃತ್ವದಲ್ಲಿ ಕೃಷಿ ಪರವಾದ ಹಲವು ಕೆಲಸ ಕಾರ್ಯಗಳು ನಡೆಯುತ್ತಿದೆ. ವಿಶೇಷವಾಗಿ ತೆಂಗು ಕೃಷಿಯ ಬೆಳವಣಿಗೆ ಹಾಗೂ ತೆಂಗು ಮೌಲ್ಯವರ್ಧನೆಯ ಕಡೆಗೆ ಆಸಕ್ತಿ ವಹಿಸಿದ್ದಾರೆ. ಇದರ ಜೊತೆಗೆ ನೂತನ ತಂತ್ರಜ್ಞಾನಗಳ ವರ್ಗಾವಣೆಯ ಕೆಲಸವೂ ನಡೆಯುತ್ತಿದೆ. ಈ ಮೂಲಕ ರೈತರಿಗೆ ಅತೀ ಹತ್ತಿರದಲ್ಲಿ ತಂತ್ರಜ್ಞಾನಗಳು ಲಭ್ಯವಾಗುವಂತೆ ಮಾಡಲಾಗುತ್ತಿದೆ.
ತಾಜಾ ಕಲ್ಪರಸ ಸಂಗ್ರಹಣೆ, ತೆಂಗಿನ ಸಕ್ಕರೆ ಉತ್ಪಾದನೆಗೆ ಸಂಬಂಧಿಸಿದ ತಂತ್ರಜ್ಞಾನದ ವರ್ಗಾವಣೆಗಾಗಿ ದಾವಣಗೆರೆಯ ತೆಂಗು ರೈತರ ಉತ್ಪಾದಕ ಕಂಪನಿ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಇದರ ಜೊತೆಗೆ ಶತಮಂಗಲ ಅಡಿಕೆ ತಳಿಯ ಸಸಿಗಳನ್ನು ಬೆಳೆಸುವ ತಂತ್ರಜ್ಞಾನವನ್ನು ದಕ್ಷಿಣ ಕನ್ನಡದ ಪುತ್ತೂರಿನ ಕೆಮ್ಮಿಂಜೆಯ ಯಶಸ್ವಿ ನರ್ಸರಿ ಮತ್ತು ಕಾಸರಗೋಡು ಬದಿಯಡ್ಕದ ಇಂಟಿಗ್ರೇಟೆಡ್ ರೂರಲ್ ಅಗ್ರಿ ನರ್ಸರಿ ಜೊತೆ ಒಪ್ಪಂದಗಳಿಗೆ ಸಹಿ ಹಾಕಲಾಗುವುದು.ಕಾರ್ಬೊನೇಟೆಡ್ ತೆಂಗಿನ ನೀರನ್ನು ಸಂರಕ್ಷಿಸಲು ಸಂಬಂಧಿಸಿದ ತಂತ್ರಜ್ಞಾನವನ್ನು ಕಾಸರಗೋಡಿನ ರೆಡ್‌ಹೈವ್ ಜೊತೆ ಒಪ್ಪಂದಕ್ಕೆ ಸಹಿ ಹಾಕುತ್ತಿದೆ. ತೆಂಗಿನ ಚಿಪ್ಸ್ ಉತ್ಪಾದಿಸುವ ತಂತ್ರಜ್ಞಾನವನ್ನು ವರ್ಗಾಯಿಸಲು ಆಂಧ್ರಪ್ರದೇಶದ ಕೊನಸೆಮಾದ ನಾರಿಯಲ್ ಭಾರತ್ ನ್ಯೂಟ್ರಾ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ‘ಕಲ್ಪ ಎಂಟೊಮೊಪಾಥೋಜೆನಿಕ್ ನೆಮಟೋಡ್ಸ್ ಆಕ್ವಾ ಫಾರ್ಮುಲೇಶನ್’ ತಂತ್ರಜ್ಞಾನವನ್ನು ವರ್ಗಾಯಿಸುವ ಸಂಬಂಧ ಕಣ್ಣೂರಿನ ಕೃಷಿ ವಿಜ್ಞಾನ ಕೇಂದ್ರ ಜೊತೆಗೆ ಸಹಿ ಹಾಕಲಾಗುತ್ತದೆ. ಇದೇ ವೇಳೆ ಸಿಪಿಸಿಆರ್‌ಐ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದ ವಿವಿಧ ರಾಜ್ಯಗಳ ಎಂಟು ಉದ್ಯಮಗಳನ್ನು ಇದೇ ವೇಳೆ ಸನ್ಮಾನಿಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್‌ನಿಂದ ಸುಮಾರು 300 ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ.