ಅಡಿಕೆ ಹಳದಿ ಎಲೆರೋಗ ವಿಸ್ತರಣೆ ತಡೆಗೆ ಹಾಗೂ ಹಳದಿ ಎಲೆ ರೋಗ ಬಾಧಿತ ಅಡಿಕೆ ಮರಗಳಿಗೆ ಪೋಷಕಾಂಶಗಳ ನಿರ್ವಹಣೆಯ ದೃಷ್ಟಿಯಿಂದ ಅಳವಡಿಕೆ ಮಾಡಿದ್ದ ಪ್ಲಾಸ್ಟಿಕ್ ಹೊದಿಕೆಗಳ ವೀಕ್ಷಣೆ ಹಾಗೂ ಅಧ್ಯಯನ ವರದಿಯ ಬಗ್ಗೆ ಬೆಳೆಗಾರರಿಗೆ ಸಿಪಿಸಿಆರ್‌ಐ ವಿಜ್ಞಾನಿಗಳು ಸೋಮವಾರ ಮಾಹಿತಿ ನೀಡಿದರು.
ಕಳೆದ ಹಲವಾರು ವರ್ಷಗಳಿಂದ ಅಡಿಕೆ ಹಳದಿ ಎಲೆರೋಗ ಬಾಧಿತ ಪ್ರದೇಶಗಳಲ್ಲಿ ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಅಡಿಕೆ ತೋಟದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ ಮಾಡಿತ್ತು. ಐದು ವರ್ಷಗಳ ಹಿಂದೆ ಕಲ್ಮಕಾರಿನ ಒಂದು ತೋಟದಲ್ಲಿ ಹಾಗೂ ಮರ್ಕಂಜದ ಎರಡು ತೋಟ ಹಾಗೂ ಶೃಂಗೇರಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಪೋಷಕಾಂಶಗಳ ನಿರ್ವಹಣೆ ಹಾಗೂ ಇತರ ಅಧ್ಯಯನ ನಡೆಸಿದ್ದರು. ಇದೀಗ ಐದು ವರ್ಷಗಳ ನಂತರ ಈ ಅಧ್ಯಯನ ವರದಿ ಪ್ರಕಾರ ಅಡಿಕೆ ಹಳದಿ ಎಲೆರೋಗ ವಿಸ್ತರಣೆ ಕಡಿಮೆಯಾಗಿದೆ ಹಾಗೂ ಪೋಷಕಾಂಶಗಳು ಮರಗಳಿಗೆ ಸರಿಯಾಗಿ ಲಭ್ಯವಾಗುವುದರಿಂದ ಮರಗಳ ಬೇರು ಆರೋಗ್ಯಯುತವಾಗಿರುವುದು ಕಂಡುಬಂದಿದೆ ಎಂದು ವಿಜ್ಞಾನಿಗಳ ತಂಡ ಕಂಡುಕೊಂಡಿದೆ.
ಇದೀಗ ಈ ಅಧ್ಯಯನದ ಜೊತೆಗೆ ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶದಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿ ಹಾಗೂ ಟಿಶ್ಯೂ ಕಲ್ಚರ್ ಗಿಡಗಳನ್ನೂ ಅಭಿವೃದ್ಧಿ ಮಾಡಲು ಸಿಪಿಸಿಆರ್‌ಐ ವಿಜ್ಞಾನಿಗಳು ಮುಂದೆ ಬಂದಿದ್ದಾರೆ ಎಂದು ಸಿಪಿಸಿಆರ್‌ಐ ನಿರ್ದೇಶಕಿ ಡಾ.ಅನಿತಾ ಕರುಣ್ ತಿಳಿಸಿದ್ದಾರೆ.
ಸೋಮವಾರ ಕಲ್ಮಕಾರಿನ ನವೀನ್ ದಂಬೆಕೋಡಿ ಅವರ ತೋಟ ಹಾಗೂ ಮರ್ಕಂಜದ ಪವಿತ್ರ ಗುಂಡಿ ಅವರ ಅಡಿಕೆ ತೋಟಗಳಿಗೆ ಅಳವಡಿಸಿದ್ದ ಪ್ಲಾಸ್ಟಿಕ್ ಹೊದಿಕೆಗಳನ್ನು ವಿಜ್ಞಾನಿಗಳ ತಂಡ ವೀಕ್ಷಿಸಿದರು. ಸಿಪಿಸಿಆರ್‌ಐ ವಿಜ್ಞಾನಿಗಳ ತಂಡದಲ್ಲಿ ಸಿಪಿಸಿಆರ್‌ಐ ಕಾಸರಗೋಡು ನಿರ್ದೇಶಕಿ ಡಾ.ಅನಿತಾ ಕರುಣ್ , ಸಮಾಜವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಮುರಳೀಧರನ್, ಬೆಳೆಉತ್ಪಾದನಾ ವಿಭಾಗದ ಮುಖ್ಯಸ್ಥ ಡಾ.ರವಿ ಭಟ್, ಬೆಳೆಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಹೆಗಡೆ , ಬೆಳೆ ಉತ್ಪಾದನಾ ವಿಭಾಗದ ವಿಜ್ಞಾನಿ ಡಾ.ಭವಿಷ್ಯ ಇದ್ದರು.
ಈ ಸಂದರ್ಭ ಬೆಳೆಗಾರರೊಂದಿಗೆ ಮಾತುಕತೆ ನಡೆಸಿದ ವಿಜ್ಞಾನಿಗಳ ತಂಡ ಅಡಿಕೆ ಬೆಳೆಗಾರರ ಅಭಿಪ್ರಾಯ ಪಡೆದರು. ಈ ಸಂದರ್ಭ ಕಲ್ಮಕಾರು ಗ್ರಾಪಂ ಅಧ್ಯಕ್ಷ ಉದಯಕುಮಾರ್ ಕೊಪ್ಪಡ್ಕ, ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಸ್ಥಳೀಯರಾದ ಕೆ ಸಿ ಸುಬ್ರಹ್ಮಣ್ಯ ಕೊಪ್ಪಡ್ಕ, , ಕೆಪಿ ಚಂದ್ರಶೇಖರ್ ಕೊಪ್ಪಡ್ಕ, ಬಾಲಕೃಷ್ಣ ಕೊಪ್ಪಡ್ಕ , ಮೋಹನ ಉಳುವಾಲು, ಡ್ಯಾನಿ ಆಲದಾಳು, ನರೇಂದ್ರ ಬಿಳಿಮಲೆ, ಗಂಗಾಧರ ಇಡ್ಯಡ್ಕ, ಮೊದಲಾದವರು ಇದ್ದರು.