ಕಳೆದ ಕೆಲವು ಸಮಯಗಳಿಂದ ರಬ್ಬರ್ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಧಾರಣೆ ಕುಸಿತದ ಕಾರಣದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಕೇರಳದ ಕೊಟ್ಟಾಯಂನ ಸಂಸದ ಥಾಮಸ್ ಚಾಜಿಕಡನ್ ಸಂಸತ್ತಿನಲ್ಲಿ ರಬ್ಬರ್ ಬೆಳೆಗಾರರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ.ಪ್ರತಿ ಕೆಜಿಗೆ ಕನಿಷ್ಠ ₹ 250 ಬೆಂಬಲ ಬೆಲೆಯನ್ನು ಘೋಷಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಇದೀಗ ರಬ್ಬರ್ ಬೆಳೆಗಾರರ ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಲು ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಕಳೆದ ತಿಂಗಳು ಪ್ರತಿಭಟನೆ ನಡೆದಿದೆ. ರಬ್ಬರ್ ಧಾರಣೆ ಕುಸಿತವಾಗಿರುವ ಕಾರಣದಿಂದ ಅನೇಕ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದು ದೆಹಲಿಯಲ್ಲಿ ಪ್ರತಿಭಟನೆ ನಡೆದಿತ್ತು. ಕೇಋಲ , ತ್ರಿಪುರಾ, ತಮಿಳುನಾಡು ಹಾಗೂ ಕರ್ನಾಟಕವನ್ನು ಒಳಗೊಂದು ರೈತ ಸಂಸ್ಥೆಯು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ರಬ್ಬರ್ ಧಾರಣೆ ಏರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿತ್ತು. ರಬ್ಬರ್ ಆಮದು ಸ್ಥಗಿತಗೊಳಿಸಬೇಕು ಸಹಿತ ಸಹಿತ ಬೇಡಿಕೆಗಳನ್ನು ಮುಂದಿಡಲಾಗಿತ್ತು.
ಇದೀಗ ಕೇರಳದ ಕೊಟ್ಟಾಯಂನ ಸಂಸದ ಥಾಮಸ್ ಚಾಜಿಕಡನ್, ನೈಸರ್ಗಿಕ ರಬ್ಬರ್ ಬೆಳೆಯನ್ನು ಕೃಷಿ ಬೆಳೆ ಎಂದು ಘೋಷಿಸಲು ಮತ್ತು ಪ್ರತಿ ಕೆಜಿಗೆ ಕನಿಷ್ಠ ₹ 250 ಬೆಂಬಲ ಬೆಲೆಯನ್ನು ಘೋಷಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಕೇಂದ್ರ ಸರ್ಕಾರವು ಕೈಗಾರಿಕಾ ಕಚ್ಚಾ ವಸ್ತುವಾದ ಸೆಣಬನ್ನು ಕೃಷಿ ಉತ್ಪನ್ನವೆಂದು ಘೋಷಿಸಿ ಬೆಂಬಲ ಬೆಲೆ ಯೋಜನೆಯಲ್ಲಿ ಹೇಗೆ ಸೇರಿಸಿದೆ, ಅದೇ ಮಾದರಿಯಲ್ಲಿ ರಬ್ಬರ್ ಕೂಡಾ ಸೇರಿಸಬೇಕು ಎಂದು ಒತ್ತಾಯಿಸಿದರು. ನೈಸರ್ಗಿಕ ರಬ್ಬರ್, ಕೃಷಿ ಬೆಳೆ, ಕೈಗಾರಿಕೆಗಳಿಗೆ ಕಚ್ಚಾ ವಸ್ತುವಾಗಿದೆ ಎಂದು ಅವರು ಹೇಳಿದರು.
ರಬ್ಬರ್ ಬೆಳೆಗಾರರು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಉತ್ಪನ್ನ ಪಡೆದರೆ ಮಾತ್ರ ಕೃಷಿಯನ್ನು ಲಾಭದಾಯಕವಾಗಿ ನಡೆಸಬಹುದು ಎಂಬ ಸ್ವಾಮಿನಾಥನ್ ಆಯೋಗದ ವರದಿಯನ್ನು ಉಲ್ಲೇಖಿಸಿದ ಸಂಸದರು, ರಬ್ಬರ್‌ಗೆ ₹250 ಬೆಂಬಲ ಬೆಲೆ ಘೋಷಣೆ ಮಾಡಬೇಕು. ಸದ್ಯ ರಬ್ಬರ್‌ನ ಉತ್ಪಾದನಾ ವೆಚ್ಚವು ಕೆಜಿಗೆ ₹ 172 ರಷ್ಟಿದೆ ಎಂದೂ ಅವರು ಉಲ್ಲೇಖಿಸಿದರು.