ಈಗ ಬೆಳೆವಿಮೆಯ ತುರ್ತಿನಲ್ಲಿ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ. ತಡರಾತ್ರಿಯವರೆಗೂ ಇದೇ ಕೆಲಸದಲ್ಲಿ ಸಿಬಂದಿಗಳು ನಿರತರಾಗಿದ್ದಾರೆ. ಬೆಳೆಗಾರರ, ಕೃಷಿಕರ ಹಿತಕ್ಕಾಗಿ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಸಿಬಂದಿಗಳು ಕೆಲಸ ಮಾಡುತ್ತಿದ್ದಾರೆ. ಜೂ.30 ಬೆಳೆ ವಿಮೆ ಮಾಡಿಸಲು ಕೊನೆಯ ದಿನವಾದರೆ ಸಹಕಾರಿ ಸಂಘಗಳು ಮುಂದಿನ 15 ದಿನಗಳ ಒಳಗಾಗಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲು ಕಾಲಾವಕಾಶ ಇದೆ.
ಇಂತಹದ್ದೊಂದು ಮಾಹಿತಿ ಕ್ಲಬ್ ಹೌಸ್ ಸಂವಾದಲ್ಲಿ ಶುಕ್ರವಾರ ಲಭ್ಯವಾಗಿದೆ.
Agriculuturist ಬಳಗದ ವತಿಯಿಂದ ಕಳೆದ ಕೆಲವು ದಿನಗಳಿಂದ ಕ್ಲಬ್ ಹೌಸ್ ನಲ್ಲಿ ಕೃಷಿ ವಿಚಾರವಾಗಿ ವಿಚಾರವಿನಿಮಯ ನಡೆಯುತ್ತಿದೆ. ಇದಕ್ಕೆ ಆಯಾ ಕ್ಷೇತ್ರದ ಪ್ರಮುಖರು ಮಾಹಿತಿ ನೀಡುತ್ತಿದ್ದಾರೆ. ಶುಕ್ರವಾರ ಬೆಳೆವಿಮಯ ಅಗತ್ಯತೆ, ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಸಂವಾದ ನಡೆಯಿತು.ವಿವಿಧ ಸಹಕಾರಿ ಸಂಘಗಳ ಸಿಇಒ ಹಾಗೂ ಅಧ್ಯಕ್ಷರುಗಳು , ನಿರ್ದೇಶಕರು , ಸಿ ಎಸ್ ಸಿ ಕೇಂದ್ರದ ಪ್ರಮುಖರು, ಕೃಷಿಕರು ಹಾಗೂ ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಭಾಗವಹಿಸಿದ್ದರು.
ಬೆಳೆ ವಿಮೆಯ ಅಗತ್ಯತೆಯ ಬಗ್ಗೆ ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಅವರು ಮಾಹಿತಿ ನೀಡಿದರು. ಈ ಸಂದರ್ಭ ಸಹಕಾರಿ ಸಂಘಗಳಲ್ಲಿನ ಸಮಸ್ಯೆಯ ಬಗ್ಗೆಯೂ ಮಾತುಕತೆ ನಡೆಸಲಾಯಿತು.
ಸರಕಾರ ಇದೇ ಜೂನ್ 30 ರ ಒಳಗಾಗಿ ಬೆಳೆ ವಿಮೆ ಮಾಡಿಸಬೇಕೆಂದು ಗಡುವು ನೀಡಿರುತ್ತದೆ .ಇದರ ಜೊತೆ ಎಲ್ಲಾ ಬೆಳೆ ವಿಮೆ ಪಾವತಿ ಯನ್ನು ಕೂಡ ಸಂಬಂಧಪಟ್ಟ ವಿಮಾ ಕಂಪೆನಿಗೆ ನಮ್ಮ ಸಂಘದಿಂದ ಜೂನ್ 30 ರ ಒಳಗೆ ಅಪ್ ಲೋಡ್ ಮಾಡಬೇಕೆಂದು ಕೂಡಾ ಗಡುವು ನೀಡಿದೆ, ಆದರೆ ಈ ಬಾರಿಯ ನಿಯಮದಂತೆ ಪ್ರತೀ ಸರ್ವೆ ನಂಬರ್ ದಾಖಲು ಮಾಡಬೇಕಾದ್ದರಿಂದ ತಡವಾಗುತ್ತಿದೆ, ನೆಟ್ವರ್ಕ್ ಸಮಸ್ಯೆ ಕೂಡಾ ಇರುವುರಿಂದ ಅಪ್ ಲೋಡ್ ಆಗದೇ ಇರುವುದು ಗೊಂದಲಕ್ಕೆ ಕಾರಣವಾಗಿತ್ತು.
ಇಂತಹ ಯಾವುದೇ ಗೊಂದಲಗಳು ಅಗತ್ಯವಿಲ್ಲ, ಸಹಕಾರಿ ಸಂಘಗಳು ಜೂನ್ 30 ರ ಒಳಗೆ ಬೆಳೆ ವಿಮೆ ಅರ್ಜಿ ಪಡೆದು ಮುಂದಿನ 15 ದಿನಗಳ ಒಳಗಾಗಿ ಅಪ್ ಲೋಡ್ ಮಾಡಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಾಶ್ ಅವರು ಮಾಹಿತಿ ನೀಡಿದರು.