ಕಳೆದ ಐದಾರು ವರ್ಷಗಳಿಂದ “ಫಸಲ್ ವಿಮಾ ಯೋಜನೆ “(Phasal Bheema scheme) ಜಾರಿಯಲ್ಲಿದೆ. ಬಹಳ ಅಚ್ಚರಿಯ ಸಂಗತಿ ಎಂದರೆ ವಿಮಾ ಸಂಸ್ಥೆಗಳು(Insurance companies) ಕೃಷಿ ವಿಮಾ ಕ್ಷೇತ್ರದ(Agricultural Insurance Sector) ವಲಯದಲ್ಲಿ ಸರಿಯಾದ ಮಳೆ ಮಾಪನ ಇಲ್ಲದ ಸಂಧರ್ಭದಲ್ಲೂ ವಿಮಾ ಪ್ರಿಮಿಯಂ ಮೊತ್ತ ರೈತರಿಂದ(Farmer) ಪಾವತಿಸಿಕೊಂಡು ರೈತರಿಗೆ ಸರಿಯಾಗಿ ವಿಮೆ ಪರಿಹಾರ ಮೊತ್ತ ನೀಡದೇ ವಂಚಿಸಿದ್ದವು…!! ಮಲೆನಾಡಿನ ಕೆಲವು ಪ್ರದೇಶದ ರೈತರಿಗೆ “ಎಲ್ಲಾ ವಿಮಾ ವರ್ಷದಲ್ಲೂ” ಬೆಳೆ ನಷ್ಟ ಪರಿಹಾರ(Crop loss compensation) ಬಂದಿದ್ದು ಇನ್ನೂ ಕೆಲವು ಪ್ರದೇಶಗಳಲ್ಲಿ ಮಳೆಯಿಂದ(Rain) ಭಾರಿ ಹಾನಿಯಾದಾಗ್ಯೂ(Crop loss) ವಿಮಾ ಪರಿಹಾರ ಮೊತ್ತ ಬಂದಿರುವುದಿಲ್ಲ. ಈ ತರಹದ ಪ್ರಕರಣದಿಂದ ಬಡ ಮದ್ಯಮ ವರ್ಗದ ರೈತರು ವಿಮಾ ಪ್ರಿಮಿಯಂ ಕಟ್ಟುವುದರಿಂದ ಹಿಂದೆಗೆಯುತ್ತಿದ್ದಾರೆ.
ಇದರಲ್ಲಿ ಇನ್ನೊಂದು ಸೋಜಿಗದ ಸಂಗತಿ ಏನೆಂದರೆ ಕೆಲ ಬುದ್ದಿವಂತ “ಸಬ್ಸಿಡಿ ರೈತರು” ಈ ವಿಮಾ ಪರಿಹಾರ ತಮಗೆ ವರ್ಷ ವರ್ಷವೂ ಬರುತ್ತಿರುವುದನ್ನು ಮುಚ್ಚಿಡುತ್ತಿದ್ದರು….!! ತಮಗೆ ವಿಮೆ ಕ್ಲೇಮಾದರೂ ಅದನ್ನು ಮುಚ್ಚಿಟ್ಟು ವಿಮೆ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿ ಬಡ ಸಣ್ಣ ಕೃಷಿಕ ವರ್ಗಕ್ಕೆ ಫಸಲ್ ವಿಮೆಗೆ ಪ್ರಿಮಿಯಂ ಕಟ್ಟುವುದು ದಂಡ ಎಂಬಂತೆ ಬಿಂಬಿಸಿದ್ದರು.
ಹೌದು… ನಿಜಕ್ಕೂ ನಮ್ಮ ಮಲೆನಾಡು ಕರಾವಳಿ ಪ್ರದೇಶದಲ್ಲಿ “ಹವಮಾನ” ಈ ಮೊದಲಿನಂತೆ ಇದ್ದಿದ್ದರೆ “ಬೆಳೆ ವಿಮೆ ಒಂದು ಜೂಜು “ಆಗುತ್ತಿತ್ತು. ಆದರೀಗ ‘”ವ್ಯತಿರಿಕ್ತ ದಿಕ್ಕು ತಪ್ಪಿದ ಹವಾಮಾನದ” ಕಾರಣಕ್ಕೆ ‘ಬೆಳೆ ವಿಮೆ” ರೈತರಿಗೆ ಗ್ಯಾರಂಟಿ ವರಮಾನವಾಗಿದೆ. ” ಈಗ ಬೆಳೆ ವಿಮೆ ಒಂದು ಜೂಜಲ್ಲ”… ಆತ್ಮೀಯ ರೈತ ಬಾಂಧವರೇ…ಈಗ ಬೆಳೆ ವಿಮೆ ಸಾಕಷ್ಟು ಸಂಸ್ಕರಣೆ ಆಗಿದೆ. ಈಗ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಮಳೆಮಾಪನ ಸಾಧನ ಅಳವಡಿಸ ಲಾಗಿದೆ. ವಿಮಾ ಕಂಪನಿಗಳು ವಿಮಾದಾರರಿಗೆ ಅಷ್ಟು ಸುಲಭವಾಗಿ ಕ್ಲೇಮಿನ ವಿಚಾರದಲ್ಲಿ ವಂಚಿಸಲು ಸಾದ್ಯವಿಲ್ಲ.
ಬದಲಾದ ಹವಾಮಾನ: ನಾವು ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಶಿಲೀಂಧ್ರ ಬಾಧೆಯುಂಟಾಗಿದೆ. ಇದು ಯಾವುದೇ ಪ್ರತೌಷಧಕ್ಕೆ ಬಗ್ಗುತ್ತಿಲ್ಲ ಎನ್ನುತ್ತಿದ್ದೇವೆ. ಆದರೆ ನೀವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನಿಸಿದ್ದೀರಾ…?. ಪ್ರತಿ ವರ್ಷವೂ ಮುಂಗಾರು ಪ್ರವೇಶಿಸುವ ದಿನಾಂಕವೂ ನಿರೀಕ್ಷೆಗಿಂತ ಒಂದು ತಿಂಗಳು ಮುಂದುಹೋಗುತ್ತಿದೆ.
ಲಕ್ಷ ದ್ವೀಪ ‘ ವಯ’ ಕೇರಳ ಕರಾವಳಿ ಪ್ರವೇಶಿಸಿದ “ಮಾನ್ ಸೂನ್ ಮಾರುತ” ಗಳು ಕಳೆದ ಒಂದು ದಶಕದಿಂದ ದಿಕ್ಕು ತಪ್ಪಿ ಇನ್ನೆಲ್ಲೋ ಹೋಗುತ್ತಿದೆ. ಮಳೆಯೇ ಬಾರದ ಅರಬ್ ದೇಶಗಳಲ್ಲಿ ಪ್ರವಾಹ ಬಂದಿದೆ…!! ನೆರೆಯ ಚೀನಾ , ನೇಪಾಳ , ದೂರದ ಯೂರೋಪ್… ಹೀಗೆ ಮಳೆ ಮೋಡಗಳು ದೇಶಾಂತರ ಖಂಡಾಂತರವಾಗಿ ಮಳೆಗಾಲ ಎಂದರೆ ಈಗ “ಗಂಡಾಂತರ” ವಾಗಿದೆ….!!
ಈಗ ಮಳೆಗಾಲ ನಿರ್ದಿಷ್ಟ ಜಾಗದಲ್ಲಿ , ನಿರ್ದಿಷ್ಟ ಅವಧಿಯಲ್ಲಿ ಹಂತ ಹಂತವಾಗಿ ಬರುತ್ತಿಲ್ಲ…!! ಮಳೆಗಾಲದಲ್ಲಿ ಒಂದು ತಿಂಗಳಲ್ಲಿ ಹಂತ ಹಂತವಾಗಿ ಬರಬೇಕಾದ ಮಳೆ ಸತತ ನಲವತ್ತೆಂಟು ಗಂಟೆಗಳ ಕಾಲ ಬಂದು ಭಾರೀ ಪ್ರವಾಹ ಭೂಕುಸಿತ, ಭೂಸವೆತ ಇತ್ಯಾದಿ ಸಂಭವಿಸಿ ಬಂದ ಮಳೆಯಿಂದ ಭೂ ಪರಿಸರಕ್ಕೆ ಕಿಂಚಿತ್ತೂ ಪ್ರಯೋಜನ ಇಲ್ಲದಾಗಿ ಕೃಷಿ ಬೆಳೆ ನಷ್ಟವಾಗುತ್ತಿದೆ. ಇದೆಲ್ಲಾ “ಎಲ್ ನಿನೋ” ಪರಿಣಾಮ ಎಂದು ವಿಜ್ಞಾನಿಗಳು ತಜ್ಞರು ಅಭಿಪ್ರಾಯವನ್ನು ಪಟ್ಟರೂ ಮಳೆಮಾರುತಗಳನ್ನ ತನ್ನೆಡೆಗೆ ಸೆಳೆದು ಮಳೆಯನ್ನು ಹಿತ ಮಿತವಾಗಿ ಪಡೆವ ನೈಸರ್ಗಿಕ ಪರಿಸರವನ್ನೇ ಮನುಷ್ಯ ಸರ್ವನಾಶವನ್ನ ಮಾಡಿದ ಪರಿಣಾಮ ಈ ಅನಾಹುತ ಎಂಬುದು ಸುಸ್ಪಷ್ಟ.
ಕಳೆದ ಹತ್ತು ವರ್ಷಗಳ ಈಚೆ ನಮ್ಮ ಪರಿಸರದಲ್ಲಿ ನೈಸರ್ಗಿಕವಾಗಿ ಬೆಳೆದು ಫಲ ನೀಡುವ ಕಾಡು ಮಾವಿನ ಹಣ್ಣು, ಮಿಡಿ ಮಾವಿನ ಮರ, ಹಲಸಿನ ಮರ , ಮುಳ್ಳು ಸಂಪಿಗೆ ಇತರೆ ಮರದ ಹಣ್ಣನ್ನ ನೀವು ಗಮನಿಸಿ ನೋಡಿ…’ ಅವೀಗ ‘ ಮೊದಲಿನಂತೆ ಫಸಲು ಬಿಡುತ್ತಿಲ್ಲ..,!? “ಕಾಡು ಮಾವು” ಮೊದಲಿನಂತೆ ಕರಾರುವಾಕ್ಕಾಗಿ ” ಪ್ರತಿ ಎರಡು ವರ್ಷಕ್ಕೆ” ಭರಪೂರ ಮಾವಿನ ಹಣ್ಣು ನೀಡುತ್ತಿಲ್ಲ. ಕಾಡು ಮಾವಿನ ಮರ ಹಣ್ಣು ಬಿಡದೇ “ಐದಾರು” ವರ್ಷಗಳಾಯಿತು…!! ಮಿಡಿ ಮಾವು ಹೂ ಬಿಟ್ಟರೂ ಕಾಯಿ ಕಚ್ಚುತ್ತಿಲ್ಲ…!! ಹಲಸಿನ ಕಾಯಿ ಗಾತ್ರ ಚಿಕ್ಕದಾಗಿದೆ , ರುಚಿ ಕಡಿಮೆ ಯಾಗಿದೆ ಮತ್ತು ಕಾಯಿಗಳ ಸಂಖ್ಯೆ ಕಡಿಮೆಯಾಗಿದೆ…!!
ಇಂತಹ ಬಲಿಷ್ಠ ಆಳ ಬೇರು ಬಿಟ್ಟ ಕಾಡು ಜಾತಿಯ ಮರಗಳೇ ಹವಾಮಾನ ವೈಪರೀತ್ಯಗಳಿಂದ “ಥಂಡ” ಹೊಡೆದಿವೆ...!! ಅಂತಹದ್ದರಲ್ಲಿ ಮನುಷ್ಯ “ಕೃತಕವಾಗಿ” ಭೂಮಿ “ಧಂಡಿಸಿ” ಕೃಷಿ ಮಾಡಿ ಬೆಳೆದ ಅಡಿಕೆ , ಕಾಳುಮೆಣಸು ಕಾಫಿಯಂತಹ ತೋಟಗಾರಿಕೆ ಬೆಳೆ ಈ ಋತುಮಾನದ ವೈಪರೀತ್ಯದಲ್ಲಿ ಉಳಿಯುತ್ತದೆಯಾ.?
ಇದೆಲ್ಲಾ ನಮ್ಮ ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ವಿದ್ಯುತ್ ಯೋಜನೆಗಾಗಿ ಮರ ಕಡಿದು ಬೃಹತ್ ಆಣೆಕಟ್ಟು ಕಟ್ಟಿದ ಮತ್ತು ಎಂಪಿಎಂ ರಾಕ್ಷಸನ ಹಾವಳಿಯ ದುಷ್ಪರಿಣಾಮ. ನಿಜ… ಇನ್ಮೇಲೆ ನಮ್ಮ ಮಲೆನಾಡು ಕರಾವಳಿಯಲ್ಲಿ ನಿಯಮಿತವಾಗಿ ಮಳೆ ಬಾರದು. ಮಳೆ ಬಂದರೆ ಅತಿವೃಷ್ಟಿ .. ಬರದಿದ್ದರೆ ಅನಾವೃಷ್ಟಿ. ಇದೆಲ್ಲಾ ಸದ್ಯಕ್ಕೆ ಸರಿಯಾಗೋಲ್ಲ.. ಪ್ರತಿ ವರ್ಷವೂ ರೈತರು ಗದ್ದೆ ಬೇಸಾಯ ಮಾಡಲು ಆರಂಭಿಸಲು ಸಿದ್ದವಾಗಿ ಬೀಜ ಬಿತ್ತಲು ಅನುವಾಗಲು ಭೂಮಿ ಉತ್ತಲು ಯೋಜಿಸುವಾಗ ಮಳೆ ಇಲ್ಲ..!!
ಆದರೆ ಗದ್ದೆ ಕೊಯ್ಲು ಮಾಡುವಾಗ ಅಕಾಲಿಕವಾಗಿ ಮಳೆ ಬಂದು ಬೆಳೆ ಹಾನಿ. ಇನ್ಮೇಲೆ ಮಳೆಗಾಲದಲ್ಲಿ ಎರಡೇ ಎರಡು ಸಾದ್ಯತೆ ಇರುವುದು. ಒಂದು “ಅತಿ ಮಳೆ ” ಇನ್ನೊಂದು “ಬರಗಾಲ”..!! ಈ ಎರಡೂ ವಿಚಾರಕ್ಕೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಪರಿಹಾರ ಇದೆ.
ರೈತ ಬಾಂಧವರೆ… ದಯಮಾಡಿ ಗಮನಿಸಿ ಆಲೋಚಿಸಿ.. ಸರ್ಕಾರ ಅಡಿಕೆಗೆ ” ಎಲೆಚುಕ್ಕಿ ರೋಗ” ಬಂದರೆ ಖಂಡಿತವಾಗಿಯೂ ನ್ಯಾಯಯುತ ಪರಿಹಾರ ಕೊಡೋಲ್ಲ.. ಆ ಬಗ್ಗೆ ಆಸೆ ಬೇಡ.. ಎಲೆಚುಕ್ಕಿ ಗೆ ಔಷಧ ಕಂಡು ಹಿಡಿಯೋಲ್ಲ. ಏಕೆಂದರೆ ಎಲೆಚುಕ್ಕಿ ಎಂಬ ಸಾಮಾನ್ಯ ಶಿಲೀಂಧ್ರ ಇಷ್ಟು ಅನಾಹುತ ಮಾಡಲು “ಸಹಕಾರ” ನೀಡುತ್ತಿರುವುದು ಈ ಬದಲಾವಣೆ ಆದ “ಋತುಮಾನಗಳು”. ಈ ಏರುಪೇರಾದ ಋತುಮಾನವನ್ನ ಮನುಷ್ಯ ಸರಿಪಡಿಸಲು ಸಾದ್ಯವೇ ಇಲ್ಲ. ಈ ಋತುಮಾನ ಸರಿಯಾಗದೇ ಎಲೆಚುಕ್ಕಿ ಶಿಲೀಂಧ್ರ ನಾಶವಾಗೋಲ್ಲ ಅಥವಾ ನಿಯಂತ್ರಣಕ್ಕೆ ಬರೋಲ್ಲ. ಇದೆಲ್ಲಾ ಪ್ರೊಪಿಕೊನೋಜಾಲೋ , ಹೆಕ್ಸಕೊನೋಜಾಲೋ ಔಷಧ ಸಿಂಪಡಣೆಯಿಂದ ನಿಯಂತ್ರಣ ವಾಗುವ ಸಮಸ್ಯೆ ಖಂಡಿತಾ ಅಲ್ಲ.
ನಮ್ಮ ಪರಿಸರದಲ್ಲಿ ಹವಾಮಾನ ಸರಿ ಇದ್ದಿದ್ದರೆ ಎಲ್ಲವೂ “ದಬಾಯಿಸಿ” ಹೋಗ್ತಿತ್ತು. ಅದಕ್ಕೆ ಸರಿಯಾಗಿ ಮಲೆನಾಡು ಕರಾವಳಿಯ ರೈತರು ಬೇಸಾಯಕ್ಕೆ ಸಾಂಪ್ರದಾಯಿಕ ಕೊಟ್ಟಿಗೆ ಗೊಬ್ಬರವನ್ನು ಬಳಸುತ್ತಿಲ್ಲ. ಕುಂಬದ್ರೋಣ ಮಳೆಗೆ ಅಡಿಕೆ ತೋಟಕ್ಕೆ ಹಾಕಿದ ಪ್ರೆಸ್ ಮಡ್ ಕೆಮಿಕಲ್ ಹಾಕಿ ಬೇಸಾಯ ಮಾಡಿದ “ಸಾರ ಆಹಾರಗಳು” ತೊಳದು ಹಳ್ಳ ಸೇರುತ್ತಿದೆ…!! ಹೊಟ್ಟೆಗಿಲ್ಲದ ಅಡಿಕೆ ಮರ ಸುಲಭವಾಗಿ ಎಲೆಚುಕ್ಕಿ ಶಿಲೀಂಧ್ರ ಕ್ಕೆ “ಸೋಗೆ ಬಗ್ಗಿಸಿ” ಶರಣಾಗುತ್ತಿದೆ…!! ಅಸಹಜ ನಿಸರ್ಗ ವಿದ್ಯಮಾನ ಅದಕ್ಕೆ ಸರಿಯಾದ ರೈತರ ಬೇಸಾಯ ಕ್ರಮ ಎಲೆಚುಕ್ಕಿ ಶಿಲೀಂಧ್ರದ ಕೈಮೇಲಾಗಲು ಕಾರಣವಾಗಿದೆ.
ರೈತರ ದುರಾದೃಷ್ಟಕ್ಕೆ ಎಲೆಚುಕ್ಕಿ ರೋಗದಿಂದ ಸಂಪೂರ್ಣ ತೋಟ ಹಾಳಾದರೂ ಸರ್ಕಾರ ರೈತರಿಗೆ ಪರಿಹಾರ ಕೊಡೋಲ್ಲ, ಸಾಲ ಮನ್ನ ಮಾಡೋಲ್ಲ, ಪರ್ಯಾಯ ಬೆಳೆ ಬೆಳೆಯಲು ಸರ್ಕಾರ ರೈತರಿಗೆ “ಸಹಾಯ ಧನ ” ನೀಡೋಲ್ಲ.
ಅಡಿಕೆ ಮರದ ಸೋಗೆಯ ಮೇಲೆ ಎಲೆಚುಕ್ಕಿ ರೋಗದ ” ಶಿಲೀಂಧ್ರ..” ಅಡಿಕೆ ಮರದ ” ಕೊನೆಯ” ಮೇಲೆ “ಮಂಗ” ; ಅಡಿಕೆ ಮರದ ಬುಡದಲ್ಲಿ “ಕಾಡು ಕೋಣ” ಗಳು… ಒಟ್ಟಿನಲ್ಲಿ ಅಡಿಕೆ ಬೆಳೆಗಾರರ ಪರಿಸ್ಥಿತಿ ಅತ್ತ “ಧರಿ” ಇತ್ತ “ಪುಲಿ” ಎತ್ತ ಸಾಗಲಿ ನಾ….!? ಹೀಗಿರುವಾಗ ಅಡಿಕೆ ತೋಟ , ಫಸಲನ್ನು ರೈತ ಉಳಿಸಿಕೊಳ್ಳಲು ಹೇಗೆ ಸಾಧ್ಯ..? ಅಡಿಕೆ ಗೆ ಪರ್ಯಾಯ ಬೆಳೆಯನ್ನು ರೈತ ಹೇಗೆ ರೂಪಿಸಿಕೊಳ್ಳಲು ಸಾಧ್ಯ..?
ಲಕ್ಷಾಂತರ ಎಕರೆ ಅಡಿಕೆ ತೋಟ ಇರುವ ಮಲೆನಾಡಿನಲ್ಲಿ ರೋಗ ಸಮೀಕ್ಷೆ ಮಾಡಲು ತೋಟಗಾರಿಕೆ ಇಲಾಖೆಯಲ್ಲಿ ಇರುವ ಅಧಿಕಾರಿಗಳು ಮೂರು ಮತ್ತೊಂದು ಜನ…!! ಅಡಿಕೆ ಗೆ ಸದ್ಯ ಮಲೆನಾಡಿನ ಭಾಗದಲ್ಲಿ ಯಾವುದೇ ಪರ್ಯಾಯ ಬೆಳೆಗಳು ಇಲ್ಲ.. ಮುಖ್ಯ ಬೆಳೆ ಅಡಿಕೆ ನಷ್ಟವಾದರೆ ಅಡಿಕೆ ನೆರಳಲ್ಲಿ ಬೆಳೆವ ಪರ್ಯಾಯ ಬೆಳೆಗಳೂ ನೆಲಕಚ್ಚಲಿದೆ…!! ಆದ್ದರಿಂದ ಅಡಿಕೆ ಬೆಳೆಗಾರ ಉಳಿಯಲು ಅಡಿಕೆ ಬೆಳೆಗಾರರು ಕಡ್ಡಾಯವಾಗಿ ” ಬೆಳೆ ವಿಮೆ ” ಮಾಡಿಸಬೇಕು.. ಬಡ ಮದ್ಯಮ ವರ್ಗದ ರೈತರು ಎಕರೆ ಯ ವಿಮಾ ಮೊತ್ತ “ಮೂರು ಸಾವಿರ ರೂಪಾಯಿ “ವಿಮೆ ಕ್ಲೇಮ್ ಆಗದಿದ್ದರೆ ” ಎಂಬ “ಮೂರು ಸಾವಿರ ರೂಪಾಯಿ” ಯ ಉಳಿಸುವ ಆಸೆಗೆ ವಿಮಾ ಕ್ಲೇಮಾಗುತ್ತಿದ್ದ ಸುಮಾರು “ಐವತ್ತು ಸಾವಿರ” ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.! ಪಾಪ ಈ ತುಟ್ಟಿ ಕಾಲದಲ್ಲಿ ರೈತರು ವಿಮಾ ಪ್ರಿಮಿಯಂ ಮೊತ್ತ ಉಳಿಸಲು ಹೋಗಿ ದೊಡ್ಡ ವಿಮಾ ಪರಿಹಾರದ ಮೊತ್ತ ಪಡೆಯಲು ಸೋಲುತ್ತಿದ್ದಾರೆ.
ದುರಂತ ಎಂದರೆ ನೀವು ಸಮೀಕ್ಷೆ ಮಾಡಿ ನೋಡಿ ಬಹುತೇಕ “ದೊಡ್ಡ ಬೆಳೆಗಾರರೆಲ್ಲರೂ” ಪ್ರತಿ ವರ್ಷವೂ ಬೆಳೆ ವಿಮೆ ಕ್ಲೇಮ್ ಪಡೆದುಕೊಳ್ಳುತ್ತಿದ್ದಾರೆ. ಅರ್ಧ ಎಕರೆ, ಒಂದು ಎಕರೆ , ಎರಡು ಎಕರೆಯ ಸಣ್ಣ ಬೆಳೆಗಾರರಿಗೆ ಈ ವಿಮಾ ಪ್ರಿಮಿಯಮ್ ಮೊತ್ತ ಅಧಿಕ ಎನಿಸಿ… ಬೆಳೆ ವಿಮೆ ಕ್ಲೇಮ್ ಆಗೋಲ್ಲ ಎಂಬ ತಪ್ಪು ತಿಳಿವಳಿಕೆಯಿಂದ ಬೆಳೆ ವಿಮೆಗೆ ಒಳ ಪಡುತ್ತಿಲ್ಲ. ಈ ಸಣ್ಣ ಮದ್ಯಮ ಪ್ರಮಾಣದ ಅಡಿಕೆ ಬೆಳೆಗಾರರಲ್ಲಿ ಮುಕ್ಕಾಲು ಪಾಲು ರೈತರು ಬೆಳೆ ವಿಮೆಗೆ ಒಳಪಡುತ್ತಿಲ್ಲ. ಈ ಸಣ್ಣ ಮಧ್ಯಮ ವರ್ಗದ ಬಹುತೇಕ ಎಲ್ಲಾ ರೈತರು ಸಹಕಾರಿ ಸಂಘಗಳಲ್ಲಿ ಸಾಲ ಪಡೆದರೂ ಅಲ್ಲಿ ಬೆಳೆ ವಿಮೆ ಮಾಡಿಸುತ್ತಿಲ್ಲ. ಹೀಗಾಗಬಾರದು…
ಸಣ್ಣ ಅತಿಸಣ್ಣ ರೈತರು ಬೆಳೆವಿಮೆ ಮಾಡಿಸುವುದು ಈ ಕಾಲದ ಅತ್ಯುತ್ತಮ ನಿರ್ಧಾರವಾಗಿರುತ್ತದೆ. ರೈತ ಬಾಂಧವರು ಈ ವಿಮಾ ಪ್ರಿಮಿಯಂ ಮೊತ್ತವನ್ನು ಸುಗ್ಗಿಯಲ್ಲೇ ಎತ್ತಿಟ್ಟುಕೊಂಡು ವಿಮೆ ಕಟ್ಟುವ ಸಂಧರ್ಭದಲ್ಲಿ ಕಟ್ಟಿ ಬೆಳೆ ವಿಮೆ ಮಾಡಿಸಿಕೊಳ್ಳುವುದು ಉತ್ತಮ. ಅಡಿಕೆ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಯ ” ಉತ್ಪತ್ತಿ ” ಗಿಂತ ಅಡಿಕೆ “ಬೆಳೆ ವಿಮೆಯೇ” ಅತ್ಯುತ್ತಮ ” ಗ್ಯಾರಂಟಿ ಉತ್ಪತ್ತಿ ….. ” ಸರ್ಕಾರ ರೂಪಿಸಿದ ಬೆಳೆ ವಿಮೆ ಸರ್ಕಾರ ರೈತರಿಗೆ ಕೊಡುವ ಅತ್ಯುತ್ತಮ ” ದೊಡ್ಡ ಪರಿಹಾರ…!!” ಜನ ಸಾಮಾನ್ಯ ರೈತರಿಗೆ ಇದೊಂದೇ ಹಣ ಸರ್ಕಾರದಿಂದ ಸಿಗಲು ಸಾದ್ಯ.
ಅಕಸ್ಮಾತ್ತಾಗಿ ವಿಮಾ ಕಂಪನಿಗಳು ಅಡಿಕೆ ಬೆಳೆಗಾರರಿಗೆ ಟೋಪಿ ಹಾಕಿ ಮಲ್ಯ, ನೀರವ್ ಮೋದಿ ತರ ವಿದೇಶಕ್ಕೆ ಹಾರಿ ಹೋಗದಿದ್ದರೆ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರಿಗೆ “ಬೆಳೆ ವಿಮೆ” ಯೇ ಅತ್ಯುತ್ತಮ. ಆದರೆ ವಿಮಾ ಕಂಪನಿಗಳು ರೈತರಿಗೆ “ನಾಮ” ಹಾಕಿ ಹೋಗುವ ಸಾಧ್ಯತೆ ಕಡಿಮೆ ಎನಿಸುತ್ತದೆ. ಏಕೆಂದರೆ ಅವುಗಳಿಗೆ ನಮ್ಮ ಮಲೆನಾಡಿನ ಕೆಲಪ್ರದೇಶಗಳು, ಕರಾವಳಿಯ ಪ್ರದೇಶಗಳು ಮಾತ್ರ “ಪ್ರತಿ ವಿಮಾ ವರ್ಷವೂ” ಪರಿಹಾರ ಕೊಡಬೇಕಾದೀತು. ಉಳಿದ ಬಯಲು ಸೀಮೆಯ ಪ್ರದೇಶದ ಕೃಷಿಕರು ಅವರಿಗೆ ಅನ್ನ ಪ್ರಿಮಿಯಂದಾತರು..
ಮಲೆನಾಡಿನ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣ ಕನ್ನಡ ಮತ್ತು ಮಂಗಳೂರು ಪ್ರದೇಶದ ರೈತರು ಬೆಳೆ ವಿಮೆಗೆ ಒಳಪಡಲೇಬೇಕು. ನಮ್ಮ ಭಾಗದ ಅಡಿಕೆ ಬೆಳೆಗಾರರು ಮಳೆಯಿಂದ ಕೊಳೆ, ಎಲೆಚುಕ್ಕಿ ರೋಗ, ಮಂಗನ ಕಾಟದಿಂದ ಆಗುವ ಬೆಳೆ ನಷ್ಟ, ದಾಸ್ತಾನು ಇಟ್ಟು ಹೆಚ್ಚು ಬೆಲೆಗೆ ಮಾರಲಾಗದ ಸಣ್ಣ ಬೆಳೆಗಾರನ ಅಸಾಹಯಕತೆ ಮತ್ತು ಇತರೆ ಸಮಸ್ಯೆಗೆ “ಬೆಳೆ ವಿಮೆಯೇ ” ದೊಡ್ಡ ಪರಿಹಾರ…
ದಯಮಾಡಿ ಮೂರು ಸಾವಿರ ಆರು ಸಾವಿರಕ್ಕೆ ಮುಖ ನೋಡಬೇಡಿ, ನಮ್ಮ ಮಲೆನಾಡಿನಲ್ಲಿ ವಿಮೆ ಕ್ಲೇಮ್ ಆಗುವ ಅನಾಹುತಕಾರಿ ಮಳೆ ಬಂದೇ ಬರುತ್ತದೆ. ಧೈರ್ಯ ಮಾಡಿ ಬೆಳೆ ವಿಮೆ ಮಾಡಿಸಿ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…