ಹವಾಮಾನ ಆಧಾರಿತ ಬೆಳೆ ವಿಮೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಡುಗಡೆಯಾಗಿದೆ. ಇನ್ನೂ ಕೆಲವು ಗ್ರಾಮಗಳ ಕೃಷಿಕರ ಖಾತೆಗೆ ಜಮಾ ಆಗಲು ಬಾಕಿ ಇದೆ. ಅಡಿಕೆ-ಕಾಳುಮೆಣಸು ಬೆಳೆಗಳಿಗೆ ಪ್ರತ್ಯೇಕವಾಗಿ ಜಮಾ ಆಗುತ್ತದೆ. ಈ ಬಾರಿಯ ಹವಾಮಾನ ಕೈ ಕೊಟ್ಟಿರುವುದು ಎಲ್ಲಾ ಕೃಷಿಕರಿಗೂ ತಿಳಿದೇ ಇದೆ. ಹೀಗಾಗಿ ಬೆಳೆ ವಿಮೆಯೂ ಬರಲೇ ಬೇಕಾಗಿತ್ತು. ಈಗ ಬಿಡುಗಡೆಯಾಗಿರುವ ವಿಮಾ ಹಣದ ಬಗ್ಗೆ ಅನೇಕ ತಕರಾರರುಗಳು ಇವೆ. ಇದನ್ನು ಬಗೆಹರಿಸಿ ಅಡಿಕೆ ಬೆಳೆಗಾರರಿಗೆ ನ್ಯಾಯ ಸಿಗಲು ಏನು ಮಾಡಬಹುದು ಅದಕ್ಕೆ ಅಗತ್ಯವಾದ ಹೆಜ್ಜೆಗಳು ಅಗತ್ಯ ಇದೆ. ಈಗ, ವಿಮೆಯ ಮೂಲಕ ಬಂದಿರುವ ಹಣ ಕಡಿಮೆಯಾಗಿದೆ, ಕಳೆದ ವರ್ಷದಷ್ಟು ಬಂದಿಲ್ಲ ಇತ್ಯಾದಿ ಇರುವ ಅಸಮಾಧಾನ. ವಿಮಾ ಕಂಪನಿಗೆ ಲಾಭವಾಗಿದೆ ಇತ್ಯಾದಿಗಳೂ ಸೇರಿವೆ. ಈ ಬಾರಿ ನಿಜಕ್ಕೂ ಅಡಿಕೆ ಬೆಳೆಗಾರರಿಗೆ ನಷ್ಟವಾಗಿದೆ. ಈ ಸಮಯದಲ್ಲಿ ಹೆಚ್ಚಿನ ಪರಿಹಾರ ಬೇಕಾಗಿತ್ತು.
ಈಗ ಅಡಿಕೆ ಬೆಳೆಗಾರರು ಮುಂದಿನ ವರ್ಷ ಈ ಯೋಜನೆ ಇರಬಹುದೇ..? ಇಲ್ಲವಾಗಬಹುದೇ..? ಎಂದು ಯೋಚಿಸುವುದು ಕೂಡಾ ಆಗಬೇಕು. ಮುಂದಿನ ವರ್ಷ ಈ ಯೋಜನೆ ಸರಿಯಾಗಿ ಜಾರಿಯಾಗಬೇಕಾದರೆ ಈಗಲೇ ಏನೆಲ್ಲಾ ಮಾಡಬೇಕು ಅದಕ್ಕೆ ಮೊದಲ ಆದ್ಯತೆಯ ನೆಲೆಯಲ್ಲಿ ಕೆಲಸ ಆಗಬೇಕು. ಈ ಬಾರಿ ಬೆಳೆ ವಿಮೆ ತಡವಾಗುತ್ತದೆ, ಅಥವಾ ಬಾರದೇ ಇರುವ ಸಾಧ್ಯತೆ ಇದೆ ಎಂದು ಕಳೆದ ಸಲವೇ ಮುನ್ಸೂಚನೆ ಇತ್ತು, ಆಗಸ್ಟ್ ಹೊತ್ತಿಗೂ ಅನುಮಾನ ಇತ್ತು. ಆದರೆ ಈಗ ಅದಕ್ಕೆ ಕಾರಣ ತಿಳಿಯಿತು, ಪಂಚಾಯತ್ ಮಟ್ಟದಲ್ಲಿ ಇರುವ ಮಳೆ ಮಾಪನಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಹವಾಮಾನದ ಯಾವ ದಾಖಲೆಗಳೂ ಸರಿಯಾಗಿ ನಿರ್ವಹಣೆ ಇಲ್ಲ. ಎಲ್ಲವೂ ಅಟೋಮ್ಯಾಟಿಕ್ ಆಗಿ ದಾಖಲಾಗುವ ಈ ಸಮಯದಲ್ಲಿ ಯಾಕೆ ಇಲಾಖೆಗಳು ಹವಾಮಾನದ ದಾಖಲೆ ಇರಿಸಿಕೊಂಡಿಲ್ಲ.
ಈಚೆಗೆ ಎಲೆಚುಕ್ಕಿ ರೋಗ ತೀವ್ರತೆ ಪಡೆದಾಗ ಅದರ ಅಧ್ಯಯನಕ್ಕಾಗಿ ಮಳೆ-ತಾಪಮಾನ ಹಾಗೂ ತೇವಾಂಶದ ದಾಖಲೆ ಬೇಕಾಗಿತ್ತು. ಯಾವ ಹವಾಮಾನದಲ್ಲಿ ಹೆಚ್ಚು ಕಡಿಮೆಯಾಗುತ್ತದೆ ಎನ್ನುವ ಅಧ್ಯಯನ ವಿಜ್ಞಾನಿಗಳಿಗೆ ಬೇಕಾಗಿತ್ತು. ಆದರೆ ಎಲ್ಲೂ ಈ ಮಾಹಿತಿ ಅಧಿಕೃತವಾಗಿ ಸಿಕ್ಕಿಲ್ಲ. ಆಗ ಕೃಷಿಕರ ಮಳೆ ಡಾಟಾವನ್ನು , ಹವಾಮಾನದ ಡಾಟಾವನ್ನು ಕೃಷಿಕರ ಮಳೆ ಗುಂಪಿನ ಮೂಲಕ ಸೇರಿಕೊಂಡು ಒಬ್ಬರು ಸಿಬಂದಿ ಅದನ್ನು ಗಮನಿಸಿ ಅಧ್ಯಯನಕ್ಕೆ ನೀಡಿದ್ದರು. ಅದಾಗಿ ಈಗ ಅಟೊಮ್ಯಟಿಕ್ ಹವಾಮಾನ ದಾಖಲೆಯ ವ್ಯವಸ್ಥೆಯನ್ನು ಸಿಪಿಸಿಆರ್‌ಐ ಮಾಡುತ್ತಿದೆ. ಅದು ಎಲೆಚುಕ್ಕಿಯ ಮುಂದಿನ ಹಂತದ ಅಧ್ಯಯನಕ್ಕೆ.
ಹೀಗಿರುವಾಗ ಇಲಾಖೆಗಳ ಬಳಿ ಹವಾಮಾನದ ದಾಖಲೆ ಇಲ್ಲ ಎಂದು ಆಗಸ್ಟ್ ಸಮಯದಲ್ಲಿಯೇ ಬೆಳಕಿಗೆ ಬಂದಿದೆ. ಈಗ ಮಾಡಬೇಕಾದ ಕೆಲಸ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಹಕಾರಿ ಸಂಘಗಳು ತಮ್ಮ ಪಂಚಾಯತ್ ಮಟ್ಟದಲ್ಲಿ ಮಳೆ ಮಾಪಕಗಳು ಸರಿಯಾಗಿ ಕೆಲಸ ಮಾಡುತ್ತದೆಯೇ ಎಂದು ಖುದ್ದಾಗಿ ಹೋಗಿ ನೋಡಬೇಕು. ಸರಿ ಇಲ್ಲವಾದರೆ ಅದನ್ನು ಇಲಾಖೆಯಲ್ಲಿ ಪ್ರಶ್ನಿಸಬೇಕು. ಈ ಕಾರಣದಿಂದಲೇ ನಮ್ಮ ಗ್ರಾಮದ ಅಡಿಕೆ ಬೆಳೆಗಾರರಿಗೆ ಸರಿಯಾಗಿ ಬೆಳೆ ವಿಮೆ ಪಾವತಿಯಾಗಿಲ್ಲ ಎಂದು ಒತ್ತಾಯಿಸಬೇಕು, ಸರಿಪಡಿಸಬೇಕು. ಈ ಮಳೆ ಡಾಟಾ ಮುಂದಿನ ಎಲ್ಲಾ ಕೃಷಿ ಕಾರ್ಯಗಳಿಗೂ ಅನುಕೂಲವಾಗುತ್ತದೆ. ಈ ಕೆಲಸವನ್ನು ಆಯಾ ಸಹಕಾರಿ ಸಂಘಗಳು ಹಾಗೂ ಪಂಚಾಯತ್ ಸದಸ್ಯರು ಮಾಡಿದರೆ ಮುಂದಿನ ವರ್ಷದಿಂದ ಕೃಷಿಕರಿಗೆ ಸರಿಯಾದ ನ್ಯಾಯ ಸಿಗಲು ಸಾಧ್ಯವಿದೆ.
ಈಗಾಗಲೇ ಯಾವ ಪಂಚಾಯತ್ ಮಟ್ಟದಲ್ಲಿ ಮಳೆ ದಾಖಲೆಗಳು ಸರಿಯಾದ ನಿರ್ವಹಣೆಯಾಗಿಲ್ಲ ಎಂಬುದನ್ನು ಗಮನಿಸಿ ಸರಾಸರಿ ತಾಪಮಾನ-ಹವಾಮಾನವನ್ನು ಸ್ಥಳೀಯವಾಗಿ ಕೃಷಿಕರೇ ಸಂಗ್ರಹಿಸುವ ಮಳೆ ದಾಖಲೆಗಳನ್ನು ತುಲನೆ ಮಾಡಿ ಇಲಾಖೆಗಳ ಮೂಲಕ ವಿಮಾ ಕಂಪನಿಯ ಗಮನಕ್ಕೆ ತಂದು ಒತ್ತಾಯ ಮಾಡಬಹುದು. ಏಕೆಂದರೆ ಈ ವಿಮಾ ಹಣ ವಿತರಣೆಯ ಅವಧಿ ಇನ್ನೂ ಒಂದು ತಿಂಗಳ ಇರಲಿದೆ. ಒಮ್ಮೆ ಈ ಕಡತ ಕ್ಲೋಸ್ ಆದರೆ ಮುಂದೆ ಯಾವುದೇ ಪರಿಹಾರ, ವಿಮಾ ಹಣ ವಿತರಣೆ ಇರುವುದಿಲ್ಲ. ಹೀಗಾಗಿ ಈಗಲೇ ಒತ್ತಾಯಗಳು ನಡೆಯಬೇಕು.
ಈ ಹವಾಮಾನ ಆಧಾರಿತ ಬೆಳೆ ವಿಮೆಯ ಕತೆ ಇಲ್ಲಿ ಮಾತ್ರವಲ್ಲ ದೇಶದ ಎಲ್ಲಾ ಕಡೆಯಲ್ಲೂ ಇದೇ ಸಮಸ್ಯೆ. ಹವಾಮಾನ ದಾಖಲೆಗಳ ನಿರ್ವಹಣೆ ಸರಿಯಾಗಿ ಆಗದೇ ಇದ್ದರೆ ಪರಿಹಾರ ವಿತರಣೆಯಲ್ಲೂ ವ್ಯತ್ಯಾಸವಾಗುತ್ತದೆ. ದೇಶದ ಹಲವು ಕಡೆಗಳಲ್ಲಿ ಈ ಸಮಸ್ಯೆ ಆಗಿದೆ, ಆಗುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

