ವನ್ಯಜೀವಿಗಳ ದಾಳಿಯಿಂದ ಹಾನಿಗೀಡಾದ ಕೃಷಿ ಬೆಳೆಗಳು ಮತ್ತು ಜಲಾವೃತದಿಂದ ಬಾಧಿತವಾದ ಭತ್ತಕ್ಕೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ನಷ್ಟ ಭರಿಸಲು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ನಿರ್ಧರಿಸಿರುವುದಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ರೈತರು ಸಂತಸ ಹಂಚಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದು, ರೈತರು ಬೆಳೆ ವಿಮಾ ಅಪ್ಲಿಕೇಷನ್ ಮೂಲಕ 72 ಗಂಟೆಗಳ ಒಳಗಾಗಿ ಅಪ್ ಲೋಡ್ ಮಾಡಿ ನಷ್ಟದ ವರದಿ ಮಾಡುವಂತೆ ತಿಳಿಸಿದೆ. ಕಾಡಂಚಿನ ಪ್ರದೇಶದಲ್ಲಿರುವ ಜಮೀನುಗಳಿಗೆ ಕಾಡುಪ್ರಾಣಿಗಳು ದಾಳಿ ನಡೆಸಿ ಬೆಳೆ ನಾಶ ಪಡಿಸಿದ ಸಂದರ್ಭದಲ್ಲಿ ಉಂಟಾಗುವ ನಷ್ಟವನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಟ್ಟಿಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ರೈತ ಅನಗಳ್ಳಿ ಬಸವರಾಜ್ ಹೇಳುತ್ತಾರೆ.
ವನ್ಯಜೀವಿಗಳ ದಾಳಿಯಿಂದ ಬೆಳೆ ಹಾನಿಯಾದರೆ ಅದನ್ನು ಫಸಲ್ ಬಿಮಾ ಯೋಜನೆಯಡಿ ಸೇರಿಸಿರುವುದು ಹರ್ಷದ ಸಂಗತಿ. ಕೇಂದ್ರದ ಈ ನಿರ್ಧಾರದಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ವರದಾನವಾಗಲಿದೆ ಎನ್ನುತ್ತಾರೆ ರೈತ ವೀರಭದ್ರಸ್ವಾಮಿ.
ಕಾಡುಪ್ರಾಣಿಗಳ ದಾಳಿಯಿಂದ ಕಾಡಂಚಿನ ಗ್ರಾಮದಲ್ಲಿ ಬೆಳೆ ನಷ್ಟ ಅನುಭವಿಸಿದರೆ ಅದಕ್ಕೆ ಪರಿಹಾರ ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ರೈತ ಮಲೆಯೂರು ಮಹೇಂದ್ರ ಹೇಳುತ್ತಾರೆ.




