ಕೇವಲ ಬಡವರ ಪಾಲಿನ ಹಸಿವು ನೀಗಿಸುತ್ತಿದ್ದ ಹಲಸಿಗೆ ಈಗ ಅಂತರಾಷ್ಟ್ರೀಯ ಮನ್ನಣೆ. ಹಲಸು ಯಥೇಚ್ಚವಾಗಿ ಬೆಳೆಯುವ ಹಣ್ಣಾಗಿ, ವಾಣಿಜ್ಯ ಬೆಳೆಯಾಗಿ ಪರಿವರ್ತಿತವಾಗುತ್ತಿರುವುದು ಖುಷಿಯ ವಿಚಾರ. ಇದಕ್ಕೆ ಮೂಲ ಕಾರಣ ಅಲ್ಲಲ್ಲಿ ಆಯೋಜನೆಗೊಳ್ಳುತ್ತಿರುವ ಹಲಸಿನ ಮೇಳಗಳು.
ಚಂದ್ರ, ಭೈರಸಂದ್ರ, ಲಾಲ್ ಬಾಗ್ ಮಧುರ, ರುದ್ರಾಕ್ಷಿ, ಸರ್ವಋತು ಅಷ್ಟೇ ಅಲ್ಲ ಅಂಟು ರಹಿತ ಹಲಸಿನ ಸಾಲುಗಳು. ಇನ್ನೇನು ಅಲ್ಲೇ ಬಿಸಿ ಬಿಸಿಯಾಗಿ ಎಣ್ಣೆಯಲ್ಲಿ ತಯಾರಾಗೋ ಹಲಸಿನ ತಿಂಡಿ ತಿನಿಸುಗಳು. ಇದೆಲ್ಲವನ್ನೂ ಕಂಡು ಖರೀದಿಗೆ ಮುಗಿಬಿದ್ದ ಗ್ರಾಹಕರು. ಈ ಎಲ್ಲ ದೃಶ್ಯ ಕಂಡುಬಂದಿದ್ದು ಸಾಂಸ್ಕೃತಿಕ ನಗರಿ ಮೈಸೂರುನಲ್ಲಿ ನಡೆದ ಹಲಸಿನ ಮೇಳದಲ್ಲಿ.
ಚಂದ್ರ ಹಲಸು ಆಕರ್ಷಣೆ: ಇನ್ನು ವಿವಿಧ ತಳಿಯ ಹಲಸಿನ ಹಣ್ಣಿನ ಮಾರಾಟವೂ ನಡೆಯಿತು. ರಾಜ್ಯದ ಅನೇಕ ಜಿಲ್ಲೆಗಳಿಂದ ಮೈಸೂರಿಗೆ ಬಂದಿದ್ದ ರೈತರು, ಮಹಿಳಾ ಗುಂಪುಗಳು ಹಲಸಿನ ಪದಾರ್ಥ, ಸಿರಿಧಾನ್ಯ, ಕರಕುಶಲ ವಸ್ತುಗಳು, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಿದರು.
ಇದರ ಜೊತೆಗೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ವಿಶೇಷವಾದ ಚಂದ್ರ ಹಲಸು ಹಬ್ಬಕ್ಕೆ ಬಂದಂತಹ ಜನರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಹೀಗೆ ಮೈಸೂರಿನಲ್ಲಿ ನಡೆದ ಹಲಸು ಹಬ್ಬವು ಆಹಾರ ಪ್ರಿಯರ ಬಾಯಿ ರುಚಿ ಹೆಚ್ಚಿಸಿತ್ತು.