ಸಂಸ್ಕೃತಿ ಮತ್ತು ಆಧುನಿಕತೆ

October 10, 2025
1:24 PM

ಸಂಸ್ಕೃತಿ ಮತ್ತು ಆಧುನಿಕತೆ ಎಂಬ ಎರಡು ಪದಗಳು ಪರಸ್ಪರ ವಿರುದ್ಧ ಧ್ರುವಗಳಂತೆಯೇ ಅನಿಸುತ್ತವೆ. ಒಂದು ಕಡೆ, ಸಂಸ್ಕೃತಿ ಎಂದರೆ ಪೀಳಿಗೆಯಿಂದ ಪೀಳಿಗೆಗೆ ಬಂದು ತಲೆಮಾರುಗಳನ್ನು ಕಟ್ಟಿಹಾಕಿರುವ ಮೌಲ್ಯ–ನಂಬಿಕೆ–ಆಚಾರಗಳ ಸಂಕೇತ. ಇನ್ನೊಂದು ಕಡೆ, ಆಧುನಿಕತೆ ಎಂದರೆ ಹೊಸ ಬದಲಾವಣೆಗಳನ್ನು, ವೈಜ್ಞಾನಿಕ ಚಿಂತನೆಗಳನ್ನು, ವೇಗವನ್ನು ಮತ್ತು ಜಾಗತಿಕತೆಯನ್ನು ಪ್ರತಿನಿಧಿಸುವ ಶಕ್ತಿ. ಇವೆರಡರ ನಡುವೆ ತೋರುವ ವೈರುಧ್ಯವು ವಾಸ್ತವದಲ್ಲಿ ಒಂದು ಪೂರಕ ಸಂಬಂಧವೇ ಹೊರತು ಶಾಶ್ವತ ವೈಮನಸ್ಸಲ್ಲ.

Advertisement
Advertisement

ಸಂಸ್ಕೃತಿ ಎಂದರೆ ಕೇವಲ ಹಬ್ಬ–ಜಾತ್ರೆಗಳು, ಸಂಪ್ರದಾಯ–ಪದ್ದತಿಗಳಲ್ಲ. ಅದು ಮಾನವ ಮೌಲ್ಯಗಳ ರೂಪುಗೊಳಿಸುವ ಶಕ್ತಿ. ವೇದಾಂತದಿಂದಲೂ ಇದನ್ನು “ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ” (ಮಹಾಭಾರತ) ಎಂದು ವಿವರಿಸಲಾಗಿದೆ. ಅಂದರೆ, ಸಂಸ್ಕೃತಿ ಧರ್ಮಾಧಾರಿತ ಜೀವನದ ಪ್ರತಿಫಲ. ಇದು ವ್ಯಕ್ತಿಗೆ ವ್ಯಕ್ತಿತ್ವವನ್ನೂ, ಸಮಾಜಕ್ಕೆ ಶಿಸ್ತು– ಸಾಮರಸ್ಯವನ್ನು ನೀಡುತ್ತದೆ.

ಆಧುನಿಕತೆ ಎಂದರೆ ಕಾಲೋಚಿತ ಚಿಂತನೆ. ನಾವಿಂದು ಬಳಸುವ ತಂತ್ರಜ್ಞಾನ, ವೈಜ್ಞಾನಿಕ ಜೀವನಶೈಲಿ, ಆರೋಗ್ಯ–ಶಿಕ್ಷಣ ಕ್ಷೇತ್ರದ ಸುಧಾರಣೆ, ಎಲ್ಲವೂ ಆಧುನಿಕ ಮನೋಭಾವದ ಫಲ. “चरैवेति चरैवेति” “ಚರೈವೇತಿ ಚರೈವೇತಿ” (ಐತರೆಯ ಬ್ರಾಹ್ಮಣ) ಎಂಬ ಮಂತ್ರವು, ನಿತ್ಯ ಚಲನೆ–ಬದಲಾವಣೆ ಅಗತ್ಯವೆಂದು ತೋರ್ಪಡಿಸುತ್ತದೆ. ಆದ್ದರಿಂದ ಆಧುನಿಕತೆ ಎಂಬುದು ನಮ್ಮ ಬದುಕನ್ನು ಸುಲಭಗೊಳಿಸಲು, ಸಮಾಜವನ್ನು ವೇಗವಂತರಾಗಿಸಲು ಅತ್ಯವಶ್ಯ.

ಆದರೆ ಸಂಸ್ಕೃತಿ ಮತ್ತು ಆಧುನಿಕತೆ ವಾಸ್ತವದಲ್ಲಿ ಪರಸ್ಪರ ವಿರುದ್ಧ ಅಲ್ಲ. ವಿರುದ್ಧವಾಗಿರುವುದು ನಮ್ಮ ಅನುಕರಣೆಯ ಪ್ರವೃತ್ತಿ. ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯನನ್ನು ಅಂಧವಾಗಿ ಅನುಸರಿಸುವುದೇ ವಿಕೃತಿ. ಉದಾಹರಣೆಗೆ, ಸಂಸ್ಕೃತಿಯ ಉಡುಗೆಯ ಪ್ರತಿಷ್ಠೆಯನ್ನು ತ್ಯಜಿಸಿ ಕೇವಲ ಫ್ಯಾಷನ್‌ನ ಹೆಸರುಗಳಿಂದ ಬದುಕನ್ನು ರೂಪಿಸುವುದು ಒಂದು ಅತಿರೇಕ. ಆಧುನಿಕತೆಯು ಮೌಲ್ಯಗಳನ್ನು ನಾಶಪಡಿಸಬಾರದು; ಅವುಗಳನ್ನು ಹೊಸ ರೂಪದಲ್ಲಿ ಪುನರ್ಜೀವಗೊಳಿಸಬೇಕು.

ಇದಕ್ಕಾಗಿ ಒಂದು ಸಮತೋಲನದ ಸೂತ್ರ ಇರಬೇಕಾಗಿದೆ.  ಸಂಸ್ಕೃತಿ ಒಂದು ಶಾಶ್ವತ ಆಧಾರ; ಆಧುನಿಕತೆ ಒಂದು ರೂಪಾಂತರಶೀಲ ಶಕ್ತಿ. ಅವೆರಡರ ನಡುವೆ ಸಮತೋಲನ ಸಾಧಿಸುವುದು ಕೇವಲ ತತ್ತ್ವಚಿಂತನೆಯ ವಿಷಯವಲ್ಲ, ಅದು ಸಾಮಾಜಿಕ ಅಗತ್ಯ. ಸಮಾಜವು ಸಂಸ್ಕೃತಿಯನ್ನು ಹಿಡಿದುಕೊಂಡೇ ಆಧುನಿಕತೆಗೆ ಹೊಂದಿಕೊಂಡಾಗ ಮಾತ್ರ ಸಾಂಸ್ಕೃತಿಕ ಚೇತನ ಉಳಿಯುತ್ತದೆ.

ಸಂಸ್ಕೃತಿಯ ಅಂಶಗಳು ಶಾಶ್ವತ – ಧರ್ಮ, ಮೌಲ್ಯ, ನೈತಿಕತೆ, ಕುಟುಂಬದ ಬಂಧ, ಭಾಷೆಯ ಗೌರವಇತ್ಯಾದಿಗಳು .ಅದುವೇ ಆಧುನಿಕತೆಯ ಅಂಶಗಳು ರೂಪಾಂತರಶೀಲ – ತಂತ್ರಜ್ಞಾನ, ಸಂವಹನ, ಜ್ಞಾನ–ವ್ಯವಸ್ಥೆ, ಆರ್ಥಿಕ ಮಾದರಿ. ಇವೆರಡನ್ನು ಸಮನ್ವಯಗೊಳಿಸಿದಾಗಲೇ ಸಮಾಜವು ಆರೋಗ್ಯಕರವಾಗಿ ಬೆಳೆಯುತ್ತದೆ. “यथा नवनीतं दुग्धेन संप्रयुक्तं न भिद्यते” “ಯಥಾ ನವನೀತಂ ದುಗ್ಧೇನ ಸಂಪ್ರಯುಕ್ತಂ ನ ಭಿದ್ಯತೇ” (ಭಾಗವತ), ಎಂಬಂತೆ ಹಾಲು–ತುಪ್ಪ ಸೇರಿ ಒಂದೇ ರೂಪದಲ್ಲಿ ಉಳಿಯುವಂತೆ, ಸಂಸ್ಕೃತಿ–ಆಧುನಿಕತೆ ಕೂಡ ಒಟ್ಟಾಗಿ ಇರಬೇಕು.

ಇಂದಿನ ಕಾಲಘಟ್ಟದ ಉದಾಹರಣೆ ಕೊಡುವುದಿದ್ದರೆ ಕುಟುಂಬ ವ್ಯವಸ್ಥೆಯಲ್ಲಿ ಪಿತೃಪರಂಪರೆಯ ಗೌರವವನ್ನು ಉಳಿಸಿಕೊಂಡು, ಮಹಿಳೆಯರ ಶಿಕ್ಷಣ–ಸಮಾನುಪಾತ ಹಕ್ಕನ್ನು ಸ್ವೀಕರಿಸಿರುವುದು ಸಮತೋಲನ.ಹಾಗೆಯೇ ಮಾತೃಭಾಷೆಯ ಸಾಂಸ್ಕೃತಿಕ ಬಲವನ್ನು ಕಾಪಾಡಿಕೊಂಡು, ಇಂಗ್ಲಿಷ್ ಎಂಬ ಜಾಗತಿಕ ಭಾಷೆಯನ್ನು ಉಪಯೋಗಿಸುವುದು ಸಮನ್ವಯ.ಆಯುರ್ವೇದದ ಜ್ಞಾನವನ್ನು ಗೌರವಿಸುತ್ತಾ, ಆಧುನಿಕ ವೈದ್ಯಶಾಸ್ತ್ರವನ್ನು ಅಳವಡಿಸುವುದು ಸಮತೋಲನದ ಮಾರ್ಗ.

ಸಂಸ್ಕೃತಿ ಮತ್ತು ಆಧುನಿಕತೆ ಎರಡನ್ನೂ ವಿರೋಧಿಗಳೆಂದು ನೋಡುವುದು ಅಜ್ಞಾನ. ಸಂಸ್ಕೃತಿ ಮತ್ತು ಆಧುನಿಕತೆಗಳು ಸಮಾಜದ ಎರಡು ಚಕ್ರಗಳಂತಿವೆ. ಒಂದನ್ನು ಕೈಬಿಟ್ಟು ಇನ್ನೊಂದನ್ನು ಮಾತ್ರ ಹಿಡಿದರೆ ಗಾಡಿ ಮುನ್ನಡೆಯುವುದಿಲ್ಲ. ಸಂಸ್ಕೃತಿ ಬದ್ಧತೆ ಆಧುನಿಕತೆಯ ಹೆಸರಲ್ಲಿ ವಿಕೃತಿಯಾಗಬಾರದು; ಆಧುನಿಕತೆ ಸಂಸ್ಕೃತಿಯನ್ನು ದಮನಿಸಬಾರದು. ಎರಡರ ಸಹಜ ಸಂಯೋಜನೆಯಲ್ಲೇ ಸಮಗ್ರ ಮಾನವ ಬದುಕಿನ ಸಮತೋಲನ ಅಡಗಿದೆ. ಗೀತೆಯಲ್ಲಿ “योगः कर्मसु कौशलम्” ಯೋಗಂ ಕರ್ಮ ಸುಕೌಶಲಂ (ಗೀತೆ 2.50) ಎಂದಂತೆ, ಸಮನ್ವಯವೇ ನಿಜವಾದ ಯೋಗ. ಹೀಗಾಗಿ, ಸಂಸ್ಕೃತಿ – ಬದುಕಿನ ಆಧಾರ; ಆಧುನಿಕತೆ – ಬದುಕಿನ ಪ್ರಗತಿ. ಇವೆರಡರ ಸಮತೋಲನವೇ ಸಮಗ್ರ ಜೀವನದ ಚೇತನ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ
January 29, 2026
9:31 PM
by: ಮಹೇಶ್ ಪುಚ್ಚಪ್ಪಾಡಿ
ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror