ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನವೆಂಬರ್ 17ರಂದು ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿಯೂ ಮಳೆಯ ಲಕ್ಷಣಗಳು ಕಡಿಮೆ ಇದ್ದು, ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಪ್ರಬಲ ವಾಯುಭಾರ ಕುಸಿತದ ಪ್ರಭಾವದಿಂದ ರಾಜ್ಯದ ಕೆಲವು ಭಾಗಗಳಲ್ಲಿ ಚಳಿಯ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು.
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಪ್ರಬಲ ವಾಯುಭಾರ ಕುಸಿತವು ಮುಂದಿನ ಎರಡು ದಿನಗಳಲ್ಲಿ ಅಕ್ವಾನ್ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಮುನ್ಸೂಚನೆಯ ಪ್ರಕಾರ, ಈ ವ್ಯವಸ್ಥೆಯು ನವೆಂಬರ್ 19ರ ಸುಮಾರಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಕಾಕಿನಾಡ ನಡುವಿನ ಕರಾವಳಿ ಭಾಗದಲ್ಲಿ ಭೂ ಪ್ರವೇಶಿಸುವ ಸಾಧ್ಯತೆಗಳಿವೆ. ಬಳಿಕ ಉತ್ತರಾಭಿಮುಖವಾಗಿ ಚಲಿಸುವ ಸಾಧ್ಯತೆ ಇರುವುದರಿಂದ ಕರ್ನಾಟಕದ ಮೇಲೆ ಇದರ ನೇರ ಮಳೆಯ ಪ್ರಭಾವ ಕಡಿಮೆ ಇರಬಹುದು.
ಚಂಡಮಾರುತದ ಚಲನೆಯ ಹಾದಿ ಮತ್ತು ತೀವ್ರತೆಯನ್ನು ಅವಲಂಬಿಸಿ ಹವಾಮಾನದಲ್ಲಿ ಬದಲಾವಣೆಗಳಾಗಬಹುದು. ಹೀಗಾಗಿ ಮುಂದಿನ ದಿನಗಳ ಮುನ್ಸೂಚನೆಯನ್ನು ಗಮನಿಸುವುದು ಅಗತ್ಯ.
ನವೆಂಬರ್ 22ರ ಬಳಿಕ ಚಳಿಯಲ್ಲಿ ಬದಲಾವಣೆ : ಅಕ್ವಾನ್ ಚಂಡಮಾರುತ ಶಿಥಿಲಗೊಂಡ ಬಳಿಕ ನವೆಂಬರ್ 22ರ ನಂತರ ಉತ್ತರ ಭಾರತದ ಕಡೆಯಿಂದ ಬೀಸುವ ಗಾಳಿಯ ಪ್ರಭಾವ ಕಡಿಮೆಯಾಗಿ, ಬಂಗಾಳಕೊಲ್ಲಿಯ ಕಡೆಯಿಂದ ಬೀಸುವ ಗಾಳಿಯ ಪ್ರಭಾವ ಹೆಚ್ಚಾಗುವ ಲಕ್ಷಣಗಳಿವೆ.
ಇದರಿಂದ ದಕ್ಷಿಣ ಒಳನಾಡು, ಕರಾವಳಿಯ ಉತ್ತರ ಕನ್ನಡ ಹೊರತುಪಡಿಸಿದ ಜಿಲ್ಲೆಗಳು ಹಾಗೂ ಮಲೆನಾಡು ಭಾಗಗಳಲ್ಲಿ ಚಳಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡದಲ್ಲಿ ಇದೇ ರೀತಿಯ ಬದಲಾವಣೆ ಕಂಡುಬರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ.
ರೈತರು ಗಮನಿಸಬೇಕಾದ ಅಂಶ : ಸದ್ಯದ ಮುನ್ಸೂಚನೆಯಂತೆ ಕರ್ನಾಟಕದಲ್ಲಿ ವ್ಯಾಪಕ ಮಳೆಯ ನಿರೀಕ್ಷೆ ಕಡಿಮೆ ಇದೆ. ಹೀಗಾಗಿ ಮಳೆಯ ನಿರೀಕ್ಷೆಯಲ್ಲಿರುವ ರೈತರು ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಚಟುವಟಿಕೆಗಳನ್ನು ಯೋಜಿಸಬೇಕು. ಚಂಡಮಾರುತದ ಪಥದಲ್ಲಿ ಬದಲಾವಣೆ ಉಂಟಾದರೆ ರಾಜ್ಯದ ಹವಾಮಾನದಲ್ಲಿಯೂ ವ್ಯತ್ಯಾಸವಾಗಬಹುದು.


