ಅರಬೀ ಸಮುದ್ರದಲ್ಲಿ ಎದ್ದಿರುವ ಟೌಕ್ಟೇ ಚಂಡಮಾರುತವು ಬಲಗೊಳ್ಳುತ್ತಿದೆ. ವಾಯುಭಾರ ಕುಸಿತದ ಪ್ರಮಾಣ ಹೆಚ್ಚಾಗಿದ್ದು ಕೇರಳದಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ 5 ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಎಲರ್ಟ್ ಘೋಷಣೆ ಮಾಡಲಾಗಿದ್ದು ಕೊಟ್ಟಾಯಂ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಈಗಿನ ಪ್ರಕಾರ ಮಹಾರಾಷ್ಟ್ರ, ಗುಜರಾತ್, ಕೇರಳದಲ್ಲಿ ಭಾರಿ ಮಳೆಯಾಗಲಿದ್ದು ಗೋವಾ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಈಗಿನ ಪ್ರಕಾರ ಚಂಡಮಾರುತವು ಭಾರತದ ಕರಾವಳಿ ತೀರದ ಮೂಲಕ ಕರಾಚಿಯ ಕಡೆಗೆ ಹಾದುಹೋಗಲಿದೆ. ಭಾರತದಲ್ಲಿ ಟೌಕ್ಟೇ ಚಂಡಮಾರುತದ ಪರಿಣಾಮಗಳನ್ನು ನಿಭಾಯಿಸಲು 53 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ತಂಡಗಳನ್ನು ಮೀಸಲಿರಿಸಲಾಗಿದ್ದು 24 ತಂಡಗಳು ಈಗಾಗಲೇ ಸಜ್ಜಾಗಿವೆ.
ಅರಬೀ ಸಮುದ್ರ ಮತ್ತು ಲಕ್ಷದ್ವೀಪಗಳ ನಡುವೆ ರೂಪುಗೊಂಡ ಟೌಕ್ಟೇ ಚಂಡಮಾರುತವು ಭಾನುವಾರ ತೀವ್ರಗೊಳ್ಳಲಿದೆ. ಮಹಾರಾಷ್ಟ್ರ, ಗುಜರಾತ್, ಕೇರಳದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳದ ಐದು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವಿಕೆಯನ್ನು ಈಗ ಅಂದಾಜಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಪಟ್ಟಂತಿಟ್ಟ , ಆಲಪ್ಪುಳ, ಮತ್ತು ಎರ್ನಾಕುಲಂನಲ್ಲಿ ಶುಕ್ರವಾರ ಭಾರಿ ಮಳೆಯಾಗಲಿದ್ದು ರೆಡ್ ಎಲರ್ಟ್ ಘೋಷಣೆ ಮಾಡಲಾಗಿದೆ.
ಸೈಕ್ಲೋನಿಕ್ ರಚನೆ ಪ್ರಕಾರ ಮುಂದಿನ 12 ಗಂಟೆಗಳಲ್ಲಿ ವಾಯುಭಾರ ಕುಸಿತದ ತೀವ್ರತೆ ಹೆಚ್ಚಾಗುತ್ತದೆ. ಇದು ಉತ್ತರ-ಈಶಾನ್ಯ ದಿಕ್ಕಿನಲ್ಲಿ ಇಂದು ಸಂಜೆಯವರೆಗೆ ಸಾಗಿ ನಂತರ ಉತ್ತರ-ವಾಯುವ್ಯ ದಿಕ್ಕಿಗೆ ಸಾಗಿ ಮೇ 18 ರ ಬೆಳಿಗ್ಗೆ ಗುಜರಾತ್ ಕರಾವಳಿಯ ಸಮೀಪ ತಲುಪುತ್ತದೆ ಭಾರತೀಯ ಹವಾಮಾನದ ಮಾಹಿತಿ ತಿಳಿಸಿದೆ.
ಕೇರಳದಲ್ಲಿ ಕೊಟ್ಟಾಯಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಪಾಲಕ್ಕಾಡ್, ಕೋಝಿಕೋಡ್ ಮತ್ತು ವಯನಾಡಗಳಲ್ಲಿ ಆರೆಂಜ್ ಎಲರ್ಟ್ ಘೋಷಣೆ ಮಾಡಲಾಗಿದ್ದು ತಿರುವನಂತಪುರಂ, ಕೊಲ್ಲಂ, ಪಟ್ಟಂತಿಟ್ಟ , ಆಲಪ್ಪುಳ, ಮತ್ತು ಎರ್ನಾಕುಲಂನಲ್ಲಿ ಶುಕ್ರವಾರ ಭಾರಿ ಮಳೆಯಾಗಲಿದ್ದು ರೆಡ್ ಎಲರ್ಟ್ ಘೋಷಣೆ ಮಾಡಲಾಗಿದೆ. ಅರಬೀಸಮುದ್ರದ ಮೇಲೆ ಟೌಕ್ಟೇ ಚಂಡಮಾರುತ ಇರುವುದರಿಂದ ಮಹಾರಾಷ್ಟ್ರದ ಸಿಂಧುದುರ್ಗ್ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಮುಂಬೈ, ಗೋವಾ ಮತ್ತು ದಕ್ಷಿಣ ಕೊಂಕಣ ಪ್ರದೇಶದ ಕೆಲವು ಸ್ಥಳಗಳು ಮತ್ತು ಗುಜರಾತ್‌ಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಭಾನುವಾರ ಚಂಡಮಾರುತದ ತೀವ್ರತೆಯ ನಂತರ, ಟೌಕ್ಟೇ ಚಂಡಮಾರುತವು ಉತ್ತರ-ವಾಯುವ್ಯ ದಿಕ್ಕಿನಲ್ಲಿ ಗುಜರಾತ್ ಮತ್ತು ಪಾಕಿಸ್ತಾನ ಕರಾವಳಿಗೆ ಚಲಿಸುವ ಸಾಧ್ಯತೆಯಿದೆ.
ಕರ್ನಾಟಕದ ಕರಾವಳಿ ತೀರ ಹಾಗೂ ಆಸುಪಾಸಿನ ಭಾಗಗಳಲ್ಲೂ ಉತ್ತಮ ಮಳೆಯಾಗಬಹುದು , ಭಾರೀ ಗಾಳಿ ಮಳೆಯ ಬಗ್ಗೆ ಈಗಿನ ಪ್ರಕಾರ ಯಾವುದೇ ಮಾಹಿತಿಗಳಿಲ್ಲ.