ಚಂಡಮಾರುತ ಟೌಕ್ಟೇ ಗುಜರಾತ್ ಕರಾವಳಿ ಭಾಗದಲ್ಲಿ ಅಪ್ಪಳಿಸಿದೆ. ಕಳೆದ 4 ದಿನಗಳಿಂದ ಅರಬೀ ಸಮುದ್ರದ ಕರಾವಳಿ ಭಾಗದಲ್ಲಿ ಹಾದು ಹೋದ ಟೌಕ್ಟೇ ಚಂಡಮಾರುತ ಅಬ್ಬರದೊಂದಿಗೆ ಗುಜರಾತ್ ಕರಾವಳಿ ಭಾಗದಲ್ಲಿ ಅಪ್ಪಳಿಸಿದೆ. ಸುಮಾರು 150 ಕಿಮೀ ವೇಗದಲ್ಲಿ ಗಾಳಿಯೊಂದಿಗೆ ಅಬ್ಬರದ ಮಳೆಯೂ ಆರಂಭವಾಗಿದೆ.
ಚಂಡಮಾರುತವು ಗುಜರಾತ್ ಕರಾವಳಿಗೆ ಅಪ್ಪಳಿಸಲು ಆರಂಭವಾಗಿ ಸುಮಾರು 4 ಗಂಟೆಗಳ ಕಾಲ ಅಬ್ಬರವನ್ನು ಪ್ರದರ್ಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸುಮಾರು 155-165 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು ಗುಜರಾತ್ ದಾಟಿ ಮುಂದೆ ಸಾಗಲಿದೆ ಈ ಸಂದರ್ಭ ತನ್ನ ಪ್ರಭಾವನ್ನು ಕಡಿಮೆ ಮಾಡಬಹುದು. ರಾತ್ರಿಯ ಸಮಯದಲ್ಲಿ ಪೋರಬಂದರ್ ಮತ್ತು ಮಹುವಾ ನಡುವೆ ಗುಜರಾತ್ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಅತ್ಯಂತ ತೀವ್ರವಾದ ಚಂಡಮಾರುತ ಇದಾದ ಕಾರಣ ಗುಜರಾತ್ ಸರ್ಕಾರವು ಕರಾವಳಿ ಪ್ರದೇಶದ 18 ಜಿಲ್ಲೆಗಳಿಂದ 2 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.
ಈಗಾಗಲೇ ಗಾಳಿಯ ರಭಸ ಹೆಚ್ಚಿರುವುದರಿಂದ ರಸ್ತೆಗೆ ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಸಂಪರ್ಕಗಳು ಕಡಿತಗೊಂಡಿವೆ. ಮೊಬೈಲ್ ನೆಟ್‌ವರ್ಕ್‌ಗಳು ಸ್ಥಗಿತಗೊಂಡಿವೆ.
ಚಂಡಮಾರುತವು ಕೇರಳದಿಂದಲೇ ಅನಾಹುತ ಸೃಷ್ಟಿ ಮಾಡುತ್ತಲೇ ಬಂದಿದ್ದು ಕರ್ನಾಟಕದ ಉಡುಪಿಯ ಪಡುಬಿದ್ರಿ ಬಳಿ ಬೋಟ್ ಪಲ್ಟಿಯಾದರೆ ಕರಾವಳಿ ಪೂರ್ತಿ ಸಮುದ್ರ ಕೊರತ ಕಂಡುಬಂದಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ತೀವ್ರ ಚಂಡಮಾರುತಕ್ಕೆ ಪ್ರತ್ಯೇಕ ಘಟನೆಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಎರಡು ದೋಣಿಗಳು ಸಮುದ್ರದಲ್ಲಿ ಮುಳುಗಿದ ನಂತರ ಮೂವರು ನಾವಿಕರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಗುಜರಾತ್ ಕರಾವಳಿಯ ಕಡೆಗೆ ಹೋಗುವ ಮೊದಲು ಚಂಡಮಾರುತವು ಮುಂಬೈ ನಗರ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಗಾಳಿ ಮತ್ತು ಭಾರೀ ಮಳೆಯಾಯಿತು.