ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುದೀರ್ಘ ಯಾತ್ರೆಯಲ್ಲಿ ಇದುವರೆಗೆ ಸಂಘವು ಮಾಡಿದ್ದು ಹಾಗೂ ಮಾಡುವುದು ದೇಶ ಭಕ್ತರನ್ನು ನಿರ್ಮಾಣ ಮಾಡುವುದು , ಸಂಸ್ಕಾರ ನೀಡುವುದು , ವ್ಯಕ್ತಿ ನಿರ್ಮಾಣ ಮಾಡುವುದು. ಸಂಘ ಕಾರ್ಯದಲ್ಲಿ ಮಂಗಳೂರು ವಿಭಾಗದಲ್ಲಿ ಸುಳ್ಯದ ಕೊಡುಗೆ ಮಹತ್ವದ್ದು. ಇದೀಗ ಸಂಘಕ್ಕೆ 100 ವರ್ಷ ತುಂಬುವ ಹೊತ್ತಿಗೆ ಇನ್ನೊಂದು ಮಹತ್ವದ ಕಾರ್ಯ ನಡೆಯಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ದ ಮಾ ರವೀಂದ್ರ ಹೇಳಿದರು.
ಅವರು ಸುಳ್ಯದಲ್ಲಿ ನಡೆದ ಸಂಕೋಲೆ-ಸಂಗ್ರಾಮ-ಸ್ತಾತಂತ್ರ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು. ಸಂಘದ ಹಿರಿಯರು 97 ವರ್ಷಗಳ ಹಿಂದಿನ ಕನಸುಗಳನ್ನು ನೆನಪು ಮಾಡಿಕೊಳ್ಳಬೇಕಾದ ಸಮಯ ಈಗ ಬಂದಿದೆ. ದೇಶವು ಅನೇಕ ಸಮಯಗಳಿಂದ ಗುಲಾಮಗಿರಿಯಿಂದ ಇತ್ತು. ಅದರಿಂದ ಹೊರಬರಲು ಅನೇಕ ಹೋರಾಟ ನಡೆದಿತ್ತು. ಆಗ ಸಂಘ ಸ್ಥಾಪಕ ಡಾ.ಹೆಡಗೇವಾರ್ ಅವರು ಸಾಮಾನ್ಯ ಸೂತ್ರ ರಚಿಸಿದರು. ಸಾಮಾನ್ಯ ವ್ಯಕ್ತಿ ಕೂಡಾ ದೇಶ ಭಕ್ತನಾಗಬೇಕು, ಚಾರಿತ್ರ್ಯವಂತನಾಗಬೇಕು, ದೇಶಭಕ್ತನಾಗಬೇಕು, ಸಮಾಜಮುಖಿಯಾಗಿರಬೇಕು. ಅಂತಹ ಸಾಮಾನ್ಯ ಜನರೂ ಎದ್ದು ನಿಂತಾಗ ಸಮಾಜದ ಪರಿವರ್ತನೆ ಎಂದು ಡಾ.ಹೆಡಗೇವಾರ್ ಯೋಚಿಸಿದರು. ಹೀಗಾಗಿ ಒಟ್ಟು ಸೇರುವ ಕೆಲಸ ನಡೆಯಿತು. ಅದು ಶಾಖೆ ಎಂದಾಯಿತು. ಅಂದು 800 ಶಾಖೆ ಆರಂಭವಾಯಿತು, ಆ ನಂತರ 18000 ಶಾಖೆ ರಚನೆಯಾಯಿತು. ಈಗ 48000 ಶಾಖೆಗಳು ಇವೆ, 25000 ಮಿಲನ್ ಇದೆ. ಈ ಮಹಾಯಾತ್ರೆಯಲ್ಲಿ ದೇಶ ವಿಭಜನೆ, ತುರ್ತುಪರಿಸ್ಥಿತಿ , ರಾಮಜನ್ಮಭೂಮಿ ಮೊದಲಾದ ಆಂದೋಲನಗಳೂ ನಡೆದವು ಎಂದು ದ ಮಾ ರವೀಂದ್ರ ಹೇಳಿದರು.
ಈ 97 ವರ್ಷಗಳ ಯಾತ್ರೆಯಲ್ಲಿ ವ್ಯಕ್ತಿ ನಿರ್ಮಾಣ ಕಾರ್ಯ ಮಾಡಿರುವ ಸಂಘವು ಈಗ ದೇಶ ಆಯಕಟ್ಟಿನ ಜಾಗದಲ್ಲಿ ಅಂತಹ ಜನಗಳು ಇದ್ದಾರೆ. ಅದರ ಪರಿಣಾಮವಾಗಿ ಹಿಂದುತ್ವದ ಆಧಾರದ ಮೇಲೆ ಕೆಲಸಗಳು ಸಾಗುತ್ತಿವೆ. ಪರಿಸ್ಥಿತಿ ನಿರಪೇಕ್ಷ, ವ್ಯಕ್ತಿ ನಿರಪೇಕ್ಷವಾಗಿಯೇ ಅದು ನಡೆಯುತ್ತಿದೆ ಎಂದರು.ಸುಮಾರು ನಾಲ್ಕು ತಲೆಮಾರು ಕಳೆದಿದೆ. ಸಂಘ ಕಾರ್ಯ ಅಬಾಧಿತವಾಗಿ ನಡೆಯುತ್ತಿದೆ.
ಸಂಘ ಕಾರ್ಯದಲ್ಲಿ ಇದುವರೆಗೂ ಸುಳ್ಯದ ಕೊಡುಗೆ ದೊಡ್ಡದಿದೆ. ತುರ್ತು ಪರಿಸ್ಥಿತಿ ಸಂದರ್ಭ ಸಾವಿರಾರು ಮಂದಿ ಕೆಲಸ ಮಾಡಿದ್ದಾರೆ. 1992 ರ ಹೊತ್ತಿನಲ್ಲಿಯೇ ನೂರಾರು ಶಾಖೆಗಳು ಸುಳ್ಯದಲ್ಲಿತ್ತು. 2013 ರಲ್ಲಿ ಮಂಗಳೂರಿನ ಕೆಂಜಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಸುಳ್ಯ ಅಂದಿನಿಂದಲೇ ಪ್ರಯೋಗ ಶಾಲೆಯಾಗಿತ್ತು. 1996-97 ರಲ್ಲಿ ಸಂಘದ ಅಂದಿನ ಹಿರಿಯ ಪ್ರಚಾರಕ ನ.ಕೃಷ್ಣಪ್ಪ ಅವರು ಎಲ್ ಕೆ ಅಡ್ವಾಣಿ ಅವರ ಮೂಲಕ ಚುನಾವಣಾ ಇಲಾಖೆಗೆ ತಿಳಿಸಿ ಆ ಚುನಾವಣೆಯಲ್ಲಿ ಯಾವುದೇ ಪೋಸ್ಟರ್ ಅಂಟಿಸದೆ, ಸಾರ್ವಜನಿಕ ಸಭೆ ಮಾಡದೆ, ಚುನಾವಣಾ ಖರ್ಷು 25 ಸಾವಿರ ದಾಟದೆ ಕೆಲಸ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಅಂದು 37 ಸಾವಿರ ಚುನಾವಣಾ ಖರ್ಚು ಆಗಿತ್ತು, ಅಂದು ಶೇಕಡಾ 53 ಮತ ಪಡೆದು ಸಂಘದ ಕಾರ್ಯಕರ್ತ ಗೆಲುವು ಕಂಡಿದ್ದರು. ಹೀಗೇ ಅನೇಕ ದಾಖಲೆಗಳಿಗೆ ಸುಳ್ಯ ಹೆಸರಾಗಿತ್ತು.
ಇದೀಗ 3 ವರ್ಷಗಳ ನಂತರ ಸಂಘಕ್ಕೆ 100 ವರ್ಷ ತುಂಬುದ ಹೊತ್ತಿನಲ್ಲಿ ಹೊಸದೊಂದು ದಾಖಲೆಯಾಗಬೇಕು. ಪ್ರತೀ ಹಿಂದೂ ಮನೆಯಿಂದ ಒಬ್ಬರು ಸಂಘದಲ್ಲಿ ಇರಬೇಕು. ಅದಕ್ಕಾಗಿ ದೇಶಮಟ್ಟದಲ್ಲಿಯೇ ಕೆಲಸವಾಗುತ್ತಿದೆ. ಈ ಬಾರಿ ಸರಸಂಘಚಾಲಕರಿಂದ ತೊಡಗಿ ಘಟ ನಾಯಕನವರೆಗೆ ಮನೆ ಸಂಪರ್ಕ ಮಾಡುತ್ತಾರೆ. ಶಾಖೆ ಹಾಗೂ ಸಂಪರ್ಕ ಸಂಘದ ಎರಡು ಕಣ್ಣುಗಳು ಇದ್ದಂತೆ. ಸಂಘಟನಾ ಶ್ರೇಣಿ , ಜಾಗರಣ ಶ್ರೇಣಿ, ಗತಿವಿಧಿಗಳ ಮೂಲಕ ಕೆಲಸ ನಡೆಯುತ್ತದೆ. ಪ್ರತೀ ಮಂಡಲದಲ್ಲಿ ತಿಂಗಳಿಗೊಮ್ಮೆ ಸೇರಬೇಕು ಎಂಬುದು ಕಡ್ಡಾಯವಾಗಬೇಕು. ಈ ಮೂಲಕ ಸುಳ್ಯದಲ್ಲಿ ಮತ್ತೊಂದು ದೊಡ್ಡ ದಾಖಲೆ ಮಾಡಬೇಕು ಎಂದರು. ಸಂಘದ ಕೆಲಸ ಸಂಸ್ಕಾರ ನೀಡುವುದು , ದೇಶ ಭಕ್ತರನ್ನು ಸೃಷ್ಟಿಸುವುದು. ಇಂದು ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಯೋಗ, ಸಂಸ್ಕೃತ, ಭಗವದ್ಗೀತೆ, ಕುಟುಂಬ ಪದ್ದತಿ ವಿಷಯದಲ್ಲಿ ಭಾರತದ ಕಡೆಗೆ ನೋಡುತ್ತಿದೆ. ಭಾರತವು ಸಂಘಪರಿವಾರದ ಕಡೆ ನೋಡುತ್ತಿದೆ, ಸಂಘವು ಶಕ್ತಿಯ ಕಡೆಗೆ ನೋಡುತ್ತಿದೆ, ಹೀಗಾಗಿ ಸುಳ್ಯವೂ ಈ ಬಾರಿ ಅತಿ ಮುಖ್ಯವಾದ ಶಕ್ತಿ ಸ್ಥಾನವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದು ಗು ಲಕ್ಷ್ಮಣ ಪುಸ್ತಕ ಬಿಡುಗಡೆ ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್, ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರು , ಬರಹಗಾರ ಶಿವರಾಮ ಗೌಡ ಕುಂಞೇಟಿ, ಸಚಿವ ಅಂಗಾರ ಉಪಸ್ಥಿತರಿದ್ದರು.