ದಿನದಿಂದ ದಿನಕ್ಕೆ ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಯ ಪರ್ವ ಆರಂಭವಾಗಿದ್ದು ಒಂದೇ ದಿನ ಬಾಕಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಲ್ಲಿ ಕೋಟ್ಯಧೀಶ್ವರರೇ ಅಧಿಕ ಮಂದಿ.
ನಾಮಪತ್ರದೊಂದಿಗೆ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿ ವಿವರದ ಅಫಿಡವಿಟ್‌ನಲ್ಲಿ ಮಾಹಿತಿ ಪ್ರಕಾರ ಅಧಿಕ ಮಂದಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಹೊಂದಿದ್ದಾರೆ.
ಬೆಳ್ತಂಗಡಿಯ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ಸ್ವಂತ ಚರಾಸ್ತಿ ಒಟ್ಟು 1,24,46,101 ರೂ. ಹಾಗೂ 1,05,32,500 ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ಒಟ್ಟು 97,55,280 ರೂ. ಚರಾಸ್ತಿ ಇದ್ದು, ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. 1,06,29,074 ರೂ. ಸಾಲ ಹೊಂದಿದ್ದರೆ, ಪತ್ನಿ 5 ಲಕ್ಷ ರೂ. ಸಾಲ ಹೊಂದಿದ್ದಾರೆ. ಬರೋಬ್ಬರಿ 2.20 ಲಕ್ಷ ರೂ.ಗಳ ಐಫೋನ್‌ಅನ್ನು ಇರುವ ಹರೀಶ್ ಪೂಂಜಾ ಇನ್ನೋವಾ ಕ್ರಿಸ್ಟಾ, ಇನ್ನೋವಾ, ಸ್ವಿಫ್ಟ್ ಮೋಟಾರ್ ಕಾರ್ ಗಳನ್ನು ಹೊಂದಿದ್ದಾರೆ. 179 ಗ್ರಾಂ ಮೌಲ್ಯದ ಚಿನ್ನ ಇದ್ದರೆ, ಪತ್ನಿ ಬಳಿ 1419 ಗ್ರಾಂ ಚಿನ್ನ, 6.68 ಲಕ್ಷ ರೂ. ಮೌಲ್ಯದ ವಜ್ರಾಭರಣ, ಪ್ಲಾಟಿನಂ, ಆಭರಣ, 2 ಮಾಣಿಕ್ಯದ ಹರಳುಗಳಿವೆ.
ಮೂಡುಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರು 1,44,11,701 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿಯಲ್ಲಿ 63,27,995 ರೂ. ಮೌಲ್ಯದ ಚರಾಸ್ತಿಯಿದೆ. ಮಿಥುನ್ ರೈ ಸ್ವಂತ ಸ್ಥಿರಾಸ್ತಿಯ ಈಗಿನ ಮಾರುಕಟ್ಟೆ ಮೌಲ್ಯ 1,18,69,000 ರೂ. ಆಗಿದ್ದರೆ, ಅವರ ಪತ್ನಿಯಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ಮಿಥುನ್ ರೈಗೆ 1,16,14,098 ರೂ. ಸಾಲವಿದೆ. ಅವರು ಹುಂಡೈ ಎಲೈಟ್, ಇನ್ನೋವಾ ಸೇರಿ ಎರಡು ವಾಹನಗಳನ್ನು ಹೊಂದಿದ್ದಾರೆ. ಮಿಥುನ್ ರೈ ಬಳಿ 320 ಗ್ರಾಂ ಚಿನ್ನವಿದ್ದರೆ, ಪತ್ನಿ ಬಳಿ 560 ಗ್ರಾಂ ಚಿನ್ನವಿದೆ.
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ 12,78,23,822 ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದರೆ ಅವರ ಪತ್ನಿಯಲ್ಲಿ 6,22,45,078 ರೂ. ಚರಾಸ್ತಿಯಿದೆ. ಅಲ್ಲದೆ ಕಾಮತ್ 11,53, 39,000 ರೂ. ಹಾಗೂ ಪತ್ನಿ 8,82,12,500 ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಜೊತೆಗೆ ವೇದವ್ಯಾಸ ಕಾಮತ್ ಅವರು 4,92,67,504 ರೂ. ಸಾಲ ಹೊಂದಿದ್ದು, ಪತ್ನಿ ಮೇಲೆ 91,77,143 ರೂ ಸಾಲವಿದೆ ಎಂದು ಅಫಿದಾವಿತ್‌ನಲ್ಲಿ ತಿಳಿಸಿದ್ದಾರೆ. ಕಾಮತ್ ಬಳಿ 200 ಗ್ರಾಂ ಚಿನ್ನಾಭರಣವಿದ್ದರೆ, ಪತ್ನಿ ಬಳಿ 1.30 ಕೆಜಿ ಚಿನ್ನ ಹಾಗೂ 2.44 ಲಕ್ಷ ರೂ. ಮೌಲ್ಯದ ಬೆಳ್ಳಿಯಿದೆ. ಆದರೆ ವೇದವ್ಯಾಸ ಕಾಮತ್ ತಮ್ಮ ಹೆಸರಿನಲ್ಲಿ ಯಾವುದೇ ವಾಹನವಿಲ್ಲವೆಂದು ಘೋಷಿಸಿದ್ದಾರೆ.
ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಬಳಿ ಒಟ್ಟು 1,67,41,755 ರೂ. ಚರಾಸ್ತಿ ಇದ್ದರೆ, ಪತ್ನಿ ಹೆಸರಿನಲ್ಲಿ 33,49,475 ರೂ. ಮೌಲ್ಯದ ಚರಾಸ್ತಿಯಿದೆ. ರಕ್ಷಿತ್ ಹೆಸರಿನಲ್ಲಿ 1,74,81,664 ರೂ. ಮೌಲ್ಯದ ಸ್ಥಿರಾಸ್ತಿಯಿದ್ದು, ಪತ್ನಿ ಹೆಸರಿನಲ್ಲಿ ಸ್ಥಿರಾಸ್ತಿಯಿಲ್ಲ. ರಕ್ಷಿತ್ ಮೇಲೆ 1,13,60,714 ರೂ. ಸಾಲವಿದ್ದರೆ, ಅವರ ಪತ್ನಿ ಯಾವುದೇ ಸಾಲ ಹೊಂದಿಲ್ಲ. ರಕ್ಷಿತ್ ಶಿವರಾಮ್ 100 ಗ್ರಾಂ ಚಿನ್ನ ಹೊಂದಿದ್ದರೆ, ಅವರ ಪತ್ನಿ ಬಳಿ 500 ಗ್ರಾಂ ಚಿನ್ನವಿದ್ದರೆ 1000 ಗ್ರಾಂ ಬೆಳ್ಳಿಯ ಸಾಮಾಗ್ರಿಗಳಿವೆ.
ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ 1,82,000 ರೂ. ಚರಾಸ್ತಿ ಹೊಂದಿದ್ದರೆ, ಪತ್ನಿ ಹೆಸರಿನಲ್ಲಿ 20,56,032 ರು. ಮೌಲ್ಯದ ಚರಾಸ್ತಿ ಇದೆ. 1,02,00,000 ರೂ. ಮೌಲ್ಯದ ಸ್ಥಿರಾಸ್ತಿ ಇದ್ದರೆ, ಪತ್ನಿ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿಯಿಲ್ಲ. ಅಲ್ಲದೆ 74,19,538 ರೂ. ಸಾಲವಿದ್ದರೆ, ಪತ್ನಿ ಹೆಸರಿನಲ್ಲಿ ಯಾವುದೇ ಸಾಲವಿಲ್ಲ. 54 ವರ್ಷದ ಅವರು 2016ರಲ್ಲಿ ಎಸೆಸೆಲ್ಸಿ ಉತ್ತೀರ್ಣರಾಗಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ 2,37,57,284 ರೂ. ಆಸ್ತಿ ಹೊಂದಿದ್ದಾರೆ. ಅವರಲ್ಲಿ 3,09,80,736 ರೂ. ಚರಾಸ್ತಿ ಹಾಗೂ ಪತ್ನಿಯಲ್ಲಿ 1,10,26,125 ರೂ. ಚರಾಸ್ತಿಯಿದೆ. ರಾಜೇಶ್ ನಾಯ್ಕ್ ರಲ್ಲಿ 69,45,784 ರೂ. ಸ್ವಯಾರ್ಜಿತ ಸ್ಥಿರಾಸ್ತಿಯಿದ್ದರೆ, 5,90,000 ರೂ. ಸ್ಥಿರಾಸ್ತಿಯಿದೆ. 3.27 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ. ಫಾರ್ಚುನರ್ ಕಾರು, ಲ್ಯಾಂಡ್ ರೋವರ್ ಕಾರು ಹೊಂದಿದ್ದರೆ, 2 ಕೆಜಿ ಬೆಳ್ಳಿ, 110 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಪತ್ನಿಯಲ್ಲಿ 1 ಕೆ.ಜಿ. ಬಂಗಾರ, 17 ಲಕ್ಷ ರೂ. ಮೌಲ್ಯದ ವಜ್ರಾಭರಣವಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಂಗಳವಾರ ಕಾರ್ಕಳದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.ನಾಮಪತ್ರದೊಂದಿಗೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿರುವ ಅವರ ಕೈಯಲ್ಲಿ 10,500 ರು. ನಗದು ಮತ್ತು ಬ್ಯಾಂಕುಗಳಲ್ಲಿ 2,63,500 ರು ಠೇವಣಿ ಬಿಟ್ಟರೇ ಬೇರೆ ಯಾವುದೇ ಚರಾಸ್ತಿ ಅಥವಾ ಸ್ಥಿರಾಸ್ತಿ, ಸ್ವಂತ ವಾಹನ ಅಥವಾ ಸಾಲ ಇಲ್ಲ ಎಂದು ಉಲ್ಲೇಖಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಮೇಲೆ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಮುಖವಾಗಿ ಸೌಹಾರ್ದಕ್ಕೆ ಧಕ್ಕೆ ಉಂಟಿ ಮಾಡಿದ ಒಟ್ಟು 7 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆಯಾದಗಿರಿ ಠಾಣೆ (ಪ್ರಚೋದನಾಕಾರಿ ಭಾಷಣ ಮತ್ತು ಸಶಸ್ತ್ರ ಕಾಯ್ದೆ ಉಲ್ಲಂಘನೆ), ಶೃಂಗೇರಿ ಠಾಣೆ (ಮಾನನಷ್ಟ ಮೊಕದ್ದಮೆ), ಬೆಂಗಳೂರು ಹೈಗ್ರೌಂಡ್ಸ್ ಠಾಣೆ (ಪ್ರಚೋದನಾಕಾರಿ ಭಾಷಣ, ಜೀವ ಬೆದರಿಕೆ, ಧರ್ಮಗಳ ನಡುವೆ ದ್ವೇಷ ಭಾವನೆ, ಧಾರ್ಮಿಕ ಭಾವನೆಗೆ ಧಕ್ಕೆ), ಬಬಲೇಶ್ವರ ಠಾಣೆ (ದಾರ್ಮಿಕ ಭಾವನೆಗೆ ಧಕ್ಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ), ಬಾಗಲಕೋಟೆಯ ನವಸಾಗರ ಠಾಣೆ (ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಪ್ರಚೋದನೆ, ಕೋಮು ಗಲಭೆ, ಜೀವ ಬೆದರಿಕೆ), ಜೇವರ್ಗಿ ಠಾಣೆ (ಧಾರ್ಮಿಕ ಭಾವನೆಗೆ ಧಕ್ಕೆ, ಪ್ರಚೋದನೆ, ಕೋಮು ಗಲಭೆ, ಜೀವ ಬೆದರಿಕೆ), ಮುರುಡೇಶ್ವರ ಠಾಣೆ (ಮತೀಯ ಭಾವನೆಗೆ ಧಕ್ಕೆ, ಪ್ರಚೋದನಕಾರಿ ಹೇಳಿಕೆ, ಅವಹೇಳನ, ಆದೇಶ ಉಲ್ಲಂಘನೆ) ಪ್ರಕರಣಗಳನ್ನು ಪ್ರಮೋದ್ ಮುತಾಲಿಕ್ ಅವರು ಎದುರಿಸುತ್ತಿದ್ದಾರೆ.