ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಗ್ರಾಮ ಪಂಚಾಯತ್‍ಗಳು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್ ಕೆ ಸೂಚಿಸಿದರು.
ಅವರು ಸೋಮವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೀರು ಸದಾ ಪೂರೈಕೆ ಇರುವಂತೆ ಗಮನಹರಿಸಬೇಕು. ಅಗತ್ಯ ಬಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅವರು ಸೂಚಿಸಿದರು. ನೀರು ಸರಬರಾಜು ಪೈಪ್‍ಲೈನ್ ಅಳವಡಿಸಲು ಲೋಕೋಪಯೋಗಿ ರಸ್ತೆಗಳ ಕತ್ತರಿಸುವ ಅಗತ್ಯವಿದ್ದರೆ ಸಂಬಂಧಪಟ್ಟ ಇಲಾಖೆಯು ಸಮನ್ವಯದೊಂದಿಗೆ ತ್ವರಿತವಾಗಿ ಕಾಮಗಾರಿ ನಡೆಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರು ಕಾಮಗಾರಿಯಲ್ಲಿ ವಿಳಂಬ ಮಾಡುವುದನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದರು. ಗ್ರಾಮ ಪಂಚಾಯತ್‍ಗಳು ಹೊಸ ಬೋರ್‍ವೆಲ್‍ಗಳು ಅಗತ್ಯ ವಿದ್ದರೆ ತಮ್ಮ ಸ್ವಂತ ನಿಧಿಯಿಂದ ಕೊರೆಯಬಹುದಾಗಿದೆ. ಹಾಲಿ ಬೋರ್‍ವೆಲ್‍ಗಳ ಪುನಶ್ಚೇತನವನ್ನು ಜಿಲ್ಲಾ ಪಂಚಾಯತ್‍ನಿಂದ ಮಾಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಜಲಜೀವನ್ ಮಿಷನ್ ಸೇರಿದಂತೆ ವಿವಿಧ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ, ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಂಜಿನಿಯರಿಂಗ್ ಇಲಾಖೆ ಇ.ಇ ರಘುನಾಥ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಇ.ಇ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು