ಹಾರ್ನ್ಬಿಲ್ ಪಕ್ಷಿಗಳ ಸಂರಕ್ಷಣೆಗೆ ಸಮಾಜ, ಸಾರ್ವಜನಿಕರು ಹಾಗೂ ಮಾಧ್ಯಮಗಳ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ. ಅರಣ್ಯ ಇಲಾಖೆ ಮಾತ್ರವಲ್ಲದೆ ಎಲ್ಲರೂ ಕೈಜೋಡಿಸಿ, ಸಮಾಜದಲ್ಲಿ ಪಕ್ಷಿಗಳ ಸಂರಕ್ಷಣೆಯ ಮಹತ್ವವನ್ನು ಮೂಡಿಸಬೇಕಿದೆ ಎಂದು ರಾಜ್ಯ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಾರ್ನ್ಬಿಲ್ ಭವನದಲ್ಲಿ ಆಯೋಜಿಸಲಾದ ಹಾರ್ನ್ಬಿಲ್ ಹಕ್ಕಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಮಕ್ಕಳು ಹಾಗೂ ಸ್ಥಳೀಯ ಸಮುದಾಯಕ್ಕೆ ಹಾರ್ನ್ಬಿಲ್ ಪಕ್ಷಿಗಳ ಜೀವನ ಕ್ರಮ, ವಾಸಸ್ಥಾನ ಮತ್ತು ಸಂರಕ್ಷಣೆಯ ಅಗತ್ಯತೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ದೇಶದಲ್ಲಿ ಕಂಡುಬರುವ ಒಂಬತ್ತು ಪ್ರಭೇದದ ಹಾರ್ನ್ಬಿಲ್ ಪಕ್ಷಿಗಳಲ್ಲಿ ನಾಲ್ಕು ಪ್ರಭೇದಗಳು ದಾಂಡೇಲಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತಿರುವುದು ರಾಜ್ಯಕ್ಕೂ ಈ ಪ್ರದೇಶಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು. ಈ ಜೈವ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ನಿರಂತರ ಜಾಗೃತಿ ಕಾರ್ಯಕ್ರಮಗಳು ಅಗತ್ಯವೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಳಿಯಾಳ ವಿಭಾಗದ ಡಿಎಫ್ಒ ಪ್ರಶಾಂತ್ ಕುಮಾರ್ ಮಾತನಾಡಿ, ನದಿ, ಪರಿಸರ, ಅರಣ್ಯ, ವನ್ಯಜೀವಿ ಹಾಗೂ ಪಕ್ಷಿಗಳ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಲುಪಿಸುವುದೇ ಹಾರ್ನ್ಬಿಲ್ ಹಬ್ಬದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಹಾರ್ನ್ಬಿಲ್ ಹಬ್ಬದ ಮೂಲಕ ಮಕ್ಕಳಲ್ಲಿ ಪ್ರಕೃತಿ ಪ್ರೀತಿ ಬೆಳೆಸುವ ಜೊತೆಗೆ, ಭವಿಷ್ಯದಲ್ಲಿ ಪರಿಸರ ಸಂರಕ್ಷಣೆಗೆ ಬದ್ಧ ನಾಗರಿಕರನ್ನು ರೂಪಿಸುವ ಆಶಯವಿದೆ ಎಂದು ಅವರು ಹೇಳಿದರು.



