ಹೆಣ್ಣು ಮಕ್ಕಳಿಬ್ಬರು ಮುಂದೆ ನಿಂತು ತಂದೆಯ ಅಂತ್ಯ ಸಂಸ್ಕಾರ ಕಾರ್ಯವನ್ನು ನೆರವೇರಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಅನಾರೋಗ್ಯದಿಂದ ಗಂಗಾಧರ್ ಎಂಬವರು ಮೃತಪಟ್ಟಿದ್ದು, ಇವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಇಬ್ಬರು ಪುತ್ರಿಯರಾದ ಸವಿತಾ ಮತ್ತು ಲಕ್ಷ್ಮಿ ನೆರವೇರಿಸಿ ಸಮಾಜಕ್ಕೆ ಹೊಸ ಸಂದೇಶ ರವಾನಿಸಿದ್ದಾರೆ.
ತುಮಕೂರಿನ ಚಿಕ್ಕಪೇಟೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮಂಡಳಿಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಗಂಗಾಧರ್ ಎಂಬವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿರಲಿಲ್ಲ. ಜೀವಿತಾವಧಿಯಲ್ಲಿ ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು.
ತಮ್ಮ ತಂದೆಯ ಆಸೆಯಂತೆ ತುಮಕೂರು ನಗರದ ಗಾರ್ಡನ್ ರಸ್ತೆಯ ಚಿತಾಗಾರದಲ್ಲಿ ಇಬ್ಬರು ಹೆಣ್ಣುಮಕ್ಕಳೇ ಅಂತ್ಯಸಂಸ್ಕಾರವನ್ನು ನೆರವೇರಿಸಿ ಎಲ್ಲಾ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಕೇವಲ ಗಂಡು ಮಕ್ಕಳು ಮಾತ್ರ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಲು ಅವಕಾಶ ಇದ್ದು, ಗಂಡು ಮಕ್ಕಳು ಇಲ್ಲದಿದ್ದಲ್ಲಿ ಕುಟುಂಬಸ್ಥರಿಗೆ ಆ ಅವಕಾಶ ಸಿಗುತ್ತಿತ್ತು. ಇದೀಗ ಹೆಣ್ಣುಮಕ್ಕಳೇ ಅಂತಿಮ ವಿಧಿವಿಧಾನ ನೆರವೇರಿಸಿರುವುದು ವಿಶೇಷವಾಗಿದೆ.