ಕೆಲವೊಂದು ಆತ್ಮಹತ್ಯೆಯ ಘಟನೆಗಳ ಸುದ್ದಿಯನ್ನು ಕೇಳುವಾಗ ಕರುಣೆ ಮೂಡುವುದಿಲ್ಲ. ಕೋಪವೇ ಬರುತ್ತದೆ. ಪಾಪ ಕಾಣುವುದಿಲ್ಲ, “ಪಾಪಿಗಳೇ” ಎಂದು ಬೈದು ಬಿಡುತ್ತೇವೆ. ಆದರೆ ಅವರು ಬೈಗಳನ್ನು ಕೇಳಿಸಿಕೊಳ್ಳದಷ್ಟು ದೂರ ಹೋಗಿರುತ್ತಾರೆ. ತಮ್ಮ ಕೃತ್ಯಗಳ ಪರಿಣಾಮಗಳನ್ನು ಅನುಭವಿಸಲು ಯಾರ್ಯಾರನ್ನೋ ಹೊಣೆ ಮಾಡಿ ಸತ್ತಿರುತ್ತಾರೆ. ಸಂಬಂಧಿಗಳು ಸತ್ತವರ ಅಂತ್ಯ ಸಂಸ್ಕಾರ ಮಾಡುತ್ತಾರೆ; ತಿಥಿ ಮಾಡುತ್ತಾರೆ. ಬದುಕುಳಿದ ಬಂಧುಗಳು ಹೊಸ ಹೊಂದಾಣಿಕೆಗಳಿಂದ ಜೀವನ ಸಾಗಿಸುತ್ತಾರೆ.
ಇತ್ತೀಚೆಗೆ ನಡೆದ ಒಂದು ಘಟನೆ ಹೀಗಿದೆ. ಇಂಜಿನಿಯರ್ ಆಗಿ ಉತ್ತಮ ವೇತನದ ನೌಕರಿ ಪಡೆದ ವ್ಯಕ್ತಿ. ಅವನಂತೆಯೇ ಇಂಜಿನಿಯರ್ ಆಗಿ ಸಂಪಾದನೆ ಮಾಡುವ ಹೆಂಡತಿ. ಅವರದು ಅಂತರ್ ಜಾತಿಯ ಪ್ರೇಮವಿವಾಹ. ಜೀವನ ಭದ್ರತೆಗೆ ಕೊರತೆ ಇಲ್ಲದ ಸಂಪಾದನೆ. ಆದರೆ ಬೆಂಗಳೂರಲ್ಲಿ ಸೈಟ್ ಮಾಡುವುದು, ಹೊಸಮನೆ ಕಟ್ಟುವುದು, ಅದಕ್ಕಾಗಿ ದೊಡ್ಡದಾದ ಸಾಲ ಮಾಡುವುದು, ಅದೂ ಸಾಕಾಗದಿರುವುದು ಹೀಗೆ ಬೆಳೆದ ಆಸೆಗಳ ಬೆಟ್ಟವನ್ನು ಏರುತ್ತ ಕಮಿಟ್‍ಮೆಂಟ್‍ಗಳ ಭಾರದಿಂದಾಗಿ ಉಂಟಾದ ಆರ್ಥಿಕ ಕುಸಿತದ ಸೋಲನ್ನು ಎದುರಿಸಲಾಗದೆ ಗಂಡ ಆತ್ಮಹತ್ಯೆಗೆ ಶರಣಾದ. ಇದಾಗಿ ಎರಡು ದಿನಗಳಲ್ಲಿ ಹೆಂಡತಿಯೂ ನಿದ್ರೆಯ ಮಾತ್ರೆಗಳಿಗೆ ಬಲಿಯಾದಳು. ಗತಿಸಿದ ಈ ದಂಪತಿಗಳ ವೃದ್ಧ ಹೆತ್ತವರ ಪಾಲಿಗೆ ಒಂದೂವರೆ ವರ್ಷದ ಎಳೆಯ ಹಸುಳೆ ಉಳಿದಿದೆ! ಅವರು ಅಳುತ್ತಾರೆ; ಸತ್ತಿರುವ ತಮ್ಮ ಮಕ್ಕಳ ವಿವೇಚನಾರಹಿತ ನಿರ್ಧಾರವನ್ನು ಹಳಿಯುತ್ತಾರೆ. ಮತ್ತೆ ತಮ್ಮ ಬಡತನದ ಬದುಕಿಗೆ ಮರಳುತ್ತಾರೆ.
ಇಂತಹ ಘಟನೆಗಳು ಜರುಗಿದಾಗ ಸತ್ತವರಿಗೆ ಸಂತಾಪ ಸೂಚಿಸುವುದರಿಂದಾಚೆಗೆ ಸಮಾಜ ಯೋಚಿಸಬೇಕಾಗಿದೆ. ಆತ್ಮಹತ್ಯೆಗೆ ಶರಣಾದವರಿಬ್ಬರೂ ಇಂಜಿನಿಯರಿಂಗ್ ಪದವೀಧರರು. ಅಂದರೆ ವಿದ್ಯಾವಂತರು. ಜಾತ್ಯತೀತ ಮನೋಭಾವದವರಾಗಿ ಪ್ರೇಮವಿವಾಹವಾದವರು. ಅಂದರೆ ತಮ್ಮ ಜೀವನದ ಬಗ್ಗೆ ತಾವೇ ನಿರ್ಧಾರ ತೆಗೆದುಕೊಂಡವರು. ಆಧುನಿಕ ಜಗತ್ತಿನ ಎಲ್ಲಾ ವೈಜ್ಞಾನಿಕ, ತಾಂತ್ರಿಕ, ವಾಣಿಜ್ಯಿಕ, ವ್ಯಾವಹಾರಿಕ ವಿದ್ಯಮಾನಗಳನ್ನು ಅರಿತವರು. ಅಂದರೆ ಸಾಕಷ್ಟು ವಿದ್ಯಾವಂತರು. ಆದರೂ ಹೀಗೆ ಮಾಡಿಕೊಂಡರು. ಅವರಿಗೆ ವಿದ್ಯೆಯು ವಿವೇಕವನ್ನು ಕೊಡಲಿಲ್ಲವೆ? ತಮ್ಮ ವ್ಯಷ್ಠಿ ಬದುಕು ಸಮಷ್ಠಿಯೊಳಗಡೆಯೇ ಇರಬೇಕೆಂಬ ಪ್ರಜ್ಞೆಯನ್ನು ಹೊಂದಿಲ್ಲವೇ? ಡ್ರೈವಿಂಗ್ ಗೊತ್ತಿಲ್ಲದೆ ವಾಹನವನ್ನು ಚಲಾಯಿಸಲು ಹೋಗಿ ಅಪಘಾತಕ್ಕೆ ಒಳಗಾಗಿ ಸತ್ತಂತಹ ದುರ್ದೈವಿಗಳಾಗುವುದು ಏಕೆ? ಇದು ಅವರ ಇಬ್ಬರ ಸೋಲು ಮಾತ್ರವೇ? ಅಥವಾ ಸಮಾಜಕ್ಕೂ ಇದು ವಿಫಲತೆಯ ಸೂಚನೆಯೆ?
ಇತ್ತೀಚೆಗೆ ಇಂತಹ ಅನೇಕ ಬಗೆಯ ಸೂಚನೆಗಳು ಬರುತ್ತಲೇ ಇವೆ. ‘ಸೊ ಕಾಲ್ಡ್’ ವಿದ್ಯಾವಂತರು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಬಲ್ಲವರೆಂಬಂತೆ ಪೋಷಕರ ಸಲಹೆ ಸೂಚನೆಗಳಿಗೆ ಬೆಲೆ ಇಲ್ಲದಂತೆ ವರ್ತಿಸಬಲ್ಲವರಾಗಿದ್ದಾರೆ. ಇದು ಹೆಣ್ಣು ಮಕ್ಕಳ ಸಂದರ್ಭದಲ್ಲಿ ಗಣನೀಯ ಸಮಸ್ಯೆಯಾಗಿದ್ದರೂ ಆ ಕುರಿತಾಗಿ ಸಮಾಜದಲ್ಲಿ ಅಸಹಾಯಕತೆ ಮತ್ತು ನಿರ್ಲಕ್ಷ್ಯದ ಭಾವವೇ ವ್ಯಾಪಕವಾಗಿದೆ. ಏಕೆಂದರೆ ವಿದ್ಯಾವಂತ ಯುವತಿಯರು ಇಂದು ತಮ್ಮ ಖಾಸಗಿ ಬದುಕಿನ ವಿಚಾರದಲ್ಲಿ ಹೆತ್ತವರೊಡನೆ ಹಾಗೂ ಸಹಪಾಠಿಗಳೊಡನೆ ಸಂವಾದ ಮಾಡುವ ಅಗತ್ಯ ಇದೆಯೆಂದು ಭಾವಿಸುವುದಿಲ್ಲ. ಒಂದು ವೇಳೆ ತಮ್ಮ ಆಸಕ್ತಿಯ ವಿರುದ್ಧ ಅಭಿಪ್ರಾಯ ಬಂದರೆ ತಮ್ಮ ಚಿಂತನೆಯನ್ನು ಪುನರ್ ಪರಿಶೀಲಿಸುವ ವಿಶಾಲ ಹೃದಯವನ್ನು ಅವರು ಹೊಂದಿರುವುದಿಲ್ಲ. ಹಾಗಾಗಿ ಸಂವಾದಕ್ಕೆ ಆಸ್ಪದವಿಲ್ಲದಂತಾಗಿದೆ. ತಮ್ಮ ಪ್ರಿಯತಮನನ್ನು ಆಯ್ಕೆ ಮಾಡಿಕೊಂಡು ದೈಹಿಕ ಸಂಬಂಧಕ್ಕೆ ಅವಕಾಶ ಕೊಟ್ಟು ಭಾವನಾತ್ಮಕ ಒಲವಿನ ಜಾಲದಲ್ಲಿ ಸಿಲುಕಿಕೊಳ್ಳುತ್ತಾರೆ. ಮತ್ತೆ ವಾಸ್ತವಾಂಶಗಳು ಗಮನಕ್ಕೆ ಬಂದು ಹೊಸ ನಿರ್ಧಾರ ತಾಳುವ ಪ್ರಯತ್ನ ನಡೆಸಿದ ಪರಿಣಾಮಗಳು ಘೋರವಾಗಿವೆ. ಕಾಲೇಜ್‍ನಿಂದ ಹಿಂದಿರುಗುತ್ತಿದ್ದ ತನ್ನ ಪ್ರಿಯತಮೆಗೆ ಅಮ್ಮನೇ ಸಂಗಾತಕ್ಕೆ ಬಳಿಯಲ್ಲಿದ್ದರೂ ಆಕೆಯನ್ನು ಹಗಲು ಹೊತ್ತಿನಲ್ಲೇ ಬಟಾಬಯಲಿನಲ್ಲಿ ಕೊಚ್ಚಿ ಕೊಂದ ಘಟನೆ ನಡೆದಿದೆ. ಇನ್ನೊಂದು ಊರಿನಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಪೂರ್ಣ ನೆರವಿತ್ತು ಆಕೆಗೆ ನರ್ಸ್ ಉದ್ಯೋಗ ಸಿಕ್ಕಿದ ಸಂತೃಪ್ತಿಯಲ್ಲಿ ಪೆÇೀಷಕರಿದ್ದರು. ಆದರೆ ಒಂದು ದಿನ ಅವರು ಆಕೆ ಹತ್ಯೆಯಾಗಿರುವ ಸುದ್ದಿಯನ್ನು ಎದುರಿಸಬೇಕಾಯಿತು. ಈ ಘಟನೆಯು ಶಿಕ್ಷಣ ಮತ್ತು ಉದ್ಯೋಗದ ಸ್ವಾತಂತ್ರ್ಯವು ನಮ್ಮ ಯುವ ಜನರನ್ನು ಎಲ್ಲಿಗೆ ತಲುಪಿಸಿದೆ ಎಂಬ ಪ್ರಶ್ನೆ ಹುಟ್ಟು ಹಾಕುತ್ತದೆ. ಇಂತಹ ಘಟನೆಗಳಲ್ಲಿ ಮುಸ್ಲಿಂ ಹುಡುಗರ ಕ್ರೌರ್ಯದ ಕರಿನೆರಳು ಇರುತ್ತದೆ. ಅದನ್ನು ‘ಲವ್ ಜಿಹಾದ್’ ಎಂದು ಖಂಡಿಸಲಾಗುತ್ತದೆ. ಆದರೆ ಅಂತಹ ಕಟುಕರಿಗೆ ಮರುಳಾಗುವ ಮುನ್ನ ಎಚ್ಚರ ವಹಿಸಬೇಕೆಂಬ ಜಾಣ್ಮೆಯನ್ನು ಹೆಣ್ಮಕ್ಕಳಿಗೆ ನೀಡದಷ್ಟು ಮನೆಯ ಸಂಸ್ಕೃತಿ ಮತ್ತು ಶಿಕ್ಷಣ ಸೊರಗಿರುವುದೇಕೆ? ತಂದೆ ತಾಯಿಯ ಬಗ್ಗೆ ಇಟ್ಟುಕೊಳ್ಳದ ನಿಷ್ಠೆಯನ್ನು ಕೆಲವೇ ದಿನಗಳ ಗೆಳೆಯರ ಬಗ್ಗೆ ತೋರುವುದರ ಹಿಂದೆ ಇರುವ ಮಾನಸಿಕ ದಾಸ್ಯಕ್ಕೆ ಮದ್ದಿಲ್ಲವೇಕೆ? ಈ ಕುರಿತಾಗಿ ಶಿಕ್ಷಣದಲ್ಲಿ ಪಠ್ಯಗಳೇ ಇಲ್ಲವೆ? ರಕ್ತ ಸಂಬಂಧಗಳ ಬಂಧುರತೆಯ ಪಾಠಗಳೂ ಬೇಕಲ್ಲವೆ? ಇದು ಸಮಾಜವೇ ಶಿಕ್ಷಣ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಾದ ಹೊಣೆಯನ್ನು ನೆನಪಿಸುತ್ತದಲ್ಲವೆ?
ವಾಸ್ತವಿಕವಾಗಿ ಈ ಪ್ರಪಂಚದಲ್ಲಿ ಯಾರೂ ಏಕಾಂಗಿಗಳಲ್ಲ. ನಮಗೆ ಯಾವುದೇ ಸ್ವಂತ ನಿರ್ಧಾರಗಳ ಸಮರ್ಪಕತೆಯನ್ನು ಚರ್ಚಿಸಿ ತೀರ್ಮಾನಿಸಲು ಆತ್ಮೀಯರೆಂಬವರು ಇದ್ದೇ ಇರುತ್ತಾರೆ. ಆದರೆ ಜನರಿಗೆ ತಮ್ಮ ನಿರ್ಧಾರಗಳಿಗೆ ವಿರುದ್ಧವಾಗಿ ಹೇಳುವರೇನೋ ಅಥವಾ ಅಪಮಾನಿಸುವರೇನೋ ಅಥವಾ ತಮ್ಮ ಗುಟ್ಟನ್ನು ಬಯಲುಗೊಳಿಸುವರೇನೋ ಎಂಬ ಆತಂಕ ಹೊಂದಿರುತ್ತಾರೆ. ಹಾಗಾಗಿ ನಮ್ಮ ತರುಣ ತರುಣಿಯರು ತಮ್ಮ ಪ್ರೇಮ ಸಂಬಂಧವನ್ನು ಗುಪ್ತವಾಗಿಡಲು ಬಯಸುತ್ತಾರೆ. ತಮ್ಮ ಆರ್ಥಿಕ ವ್ಯವಹಾರಗಳನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿಡುತ್ತಾರೆ. ಈ ಗುಟ್ಟು ಗಂಡ ಹೆಂಡತಿಯ ನಡುವೆಯೂ ಸಾಕಲ್ಪಡುವುದುಂಟು. ಅಂತಹ ಸಂದರ್ಭದಲ್ಲಿ ತಾನು ಮೂಗಿನವರೆಗೆ ಸಾಲದಲ್ಲಿ ಮುಳುಗಿದ್ದರೂ ಸಮಸ್ಯೆಯನ್ನು ಹೆಂಡತಿಯಿಂದ ಬಚ್ಚಿಟ್ಟ ಗಂಡನಿಗೆ ಆತ್ಮಹತ್ಯೆಯೊಂದೇ ತಪ್ಪಿಸಿಕೊಳ್ಳುವ ಮಾರ್ಗವಾಗಿ ಗೋಚರಿಸುತ್ತದೆ. ಅದರ ಬದಲು ಕೊನೆಯ ಕ್ಷಣದಲಾದರೂ ಹೆಂಡತಿಯಲ್ಲಿ ಹೇಳಿದರೆ ಏನಾದರೊಂದು ಪರಿಹಾರದ ಮಾರ್ಗ ಗೋಚರಿಸಲು ಸಾಧ್ಯವಿದೆ. ಆದರೆ ಅಂತಹ ಯತ್ನ ಮಾಡುವ ಆತ್ಮವಿಶ್ವಾಸ ಗಂಡನಲ್ಲಿ ಉಳಿದಿರುವುದಿಲ್ಲ. ಪ್ರೇಮಿಕೆಗೆ ತನ್ನ ಪ್ರೇಮಿಯು ಮೋಸ ಮಾಡುತ್ತಾನೆಂದು ತಿಳಿಯುವ ಹೊತ್ತಿಗೆ ತಾನು ಇನ್ನು ಹೆತ್ತವರಲ್ಲಿ ಹೇಳುವುದು ನಿರರ್ಥಕವೆಂಬ ತೀರ್ಮಾನಕ್ಕೆ ಬಂದಿರುತ್ತಾಳೆ. ಹಾಗಾಗಿ ಆಕೆ ತನ್ನ ಬದುಕು ಹಾಗೂ ಸಾವನ್ನು ಪ್ರೇಮಿಯ ಕೈಯಲ್ಲಿ ಕೊಟ್ಟಿರುತ್ತಾಳೆ. ಆತ ಆಕೆಯನ್ನು ಕೊಲ್ಲುವುದೇ ಸರಿಯೆಂದು ತೀರ್ಮಾನಿಸಿದ್ದಕ್ಕೆ ಪುರಾವೆಯಾಗಿ ನರ್ಸಾಗಿದ್ದು ಕೊಲೆಯಾದ ಸ್ವಾತಿಯ ಪ್ರಕರಣದಲ್ಲಿ ಸಿಗುತ್ತದೆ.
ಇವು ಕೇವಲ ಎರಡು ಉದಾಹರಣೆಗಳಷ್ಟೇ. ಅತ್ಮಹತ್ಯೆಗೆ ಕಾರಣವಾಗುವ ವೈವಿದ್ಯಮಯ ಸಂಗತಿಗಳಿರುತ್ತವೆ. ಆದರೆ ಯಾವುದೇ ಇಕ್ಕಟ್ಟಿನ ಸ್ಥಿತಿ ಬಂದಾಗ ಪರಿಹರಿಸುವುದಕ್ಕೆ ನಾವಿದ್ದೇವೆ ಎಂಬ ಹೆತ್ತವರನ್ನು ಆತ್ಮೀಯತೆಯ ವರ್ತುಲದಲ್ಲೇ ಇರಿಸಿಕೊಳ್ಳಬೇಕು. ಇಂತಹ ಭರವಸೆಗಳನ್ನು ಹೆತ್ತವರು ಮಕ್ಕಳಿಗೆ ಕುಟುಂಬದಲ್ಲಿ ಆಗಿಂದಾಗ ಕೊಡುತ್ತಿರಬೇಕು. ಇದು ಹೆತ್ತವರು ಮಕ್ಕಳಿಗೆ ಮಾತ್ರವಲ್ಲ, ಬೆಳೆದು ನಿಂತ ಬಳಿಕ ಮಕ್ಕಳು ತಮ್ಮ ಹೆತ್ತವರಿಗೂ ನೀಡಬೇಕಾದ ಭರವಸೆಯಾಗಿದೆ. ಅದೇ ರೀತಿ ಗಂಡ ಹೆಂಡತಿಯ ನಡುವೆಯೂ ಆತ್ಮವಿಶ್ವಾಸ ತುಂಬುವ ಮಾತುಕತೆ ನಡೆಯುತ್ತಿರಬೇಕು. ಇದು ಆತ್ಮಹತ್ಯೆಯಂತಹ ಪ್ರಸಂಗ ಬರಬಹುದೆಂಬ ನಿರೀಕ್ಷೆಯಿಂದ ಅಲ್ಲ, ಬದುಕಿನ ಯಶಸ್ಸಿಗಾಗಿಯೂ ಇಂತಹ ಭರವಸೆಗಳ ವಿನಿಮಯ ಜರಗುತ್ತಿರಬೇಕು. ಆಗ ಯಾರೂ ತಮ್ಮ ಅಪೇಕ್ಷೆಗಳು ಸಾಕೆನ್ನಿಸದಷ್ಟು ಎತ್ತರಕ್ಕೇರುವುದಿಲ್ಲ. ಅಲ್ಲದೆ ತಮಗೆ ಜೀವನವೇ ಸಾಕೆನ್ನಿಸುವ ಸಾವಿನ ನಿರ್ಧಾರಗಳಿಗೆ ಬರಬೇಕಾಗಿಲ್ಲ.
ಚಂದ್ರಶೇಖರ ದಾಮ್ಲೆ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel