ರಬ್ಬರ್ ಧಾರಣೆ ಕಳೆದ ಒಂದು ತಿಂಗಳಿನಿಂದ ಗಣನೀಯವಾಗಿ ಇಳಿಕೆ ಕಂಡಿದ್ದು, ಸರ್ಕಾರಗಳು ರಬ್ಬರ್ ಬೆಳೆಗಾರರ ನೆರವಿಗೆ ಬರುವಂತೆ ಬೆಳೆಗಾರರು ಮನವಿ ಮಾಡಿದ್ದಾರೆ.
ಕೇರಳದ ರಬ್ಬರ್ ಬೆಲೆ ಕುಸಿತವು ಮುಂದುವರಿದಿರುವುದರಿಂದ ರಬ್ಬರ್ ರೈತರು ಆತಂಕಕ್ಕೊಳಗಾಗಿದ್ದಾರೆ. ಅದರಲ್ಲೂ ಕೇರಳದಲ್ಲಿ ರಬ್ಬರ್ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಹಾಯ ಮಾಡಲು ದೇಶೀಯ ಮಾರುಕಟ್ಟೆಯಲ್ಲಿಯೇ ರಬ್ಬರ್ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ರಬ್ಬರ್ ಉದ್ಯಮಗಳು ಆಮದುಗಳ ಕಾರಣದಿಂದ ದೇಶೀಯ ಮಾರುಕಟ್ಟೆಯಿಂದ ರಬ್ಬರ್ ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ ರಬ್ಬರ್ ಧಾರಣೆ ಈಗ 170-175 ರೂಪಾಯಿಗೆ ಇಳಿಕೆಯಾಗಿದೆ. ಈ ಕಾರಣದಿಂದ ಈಗ ಬೆಳೆಗಾರರನ್ನು ಚಿಂತೆಗೀಡು ಮಾಡುವಂತಾಗಿದೆ.
ರೈತರಿಗೆ ನೆರವಾಗಲು ದೇಶೀಯ ಮಾರುಕಟ್ಟೆಯಲ್ಲಿ ಉತ್ಪನ್ನ ಖರೀದಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಬೇಕು ಎಂದು ಒಕ್ಕೂಟದ ಸಭೆಯಲ್ಲಿ ಬೆಳೆಗಾರರು ಹೇಳಿದ್ದಾರೆ. ರಬ್ಬರ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಬೆಲೆಯಲ್ಲಿ ₹ 35 ರಿಂದ ₹ 40 ರವರೆಗೆ ಬೆಲೆ ವ್ಯತ್ಯಾಸವಿದೆ. ಇತ್ತೀಚಿನ ದಿನಗಳಲ್ಲಿ ಬೆಲೆ ಕುಸಿತದಿಂದ ರಬ್ಬರ್ ಮಾರುಕಟ್ಟೆ ಬಹುತೇಕ ಸ್ತಬ್ಧಗೊಂಡಿದೆ.