ಕಳೆದ ಅನೇಕ ವರ್ಷಗಳಲ್ಲಿ ತೆಂಗಿನ ಕಾಯಿಯ ದರ ಈ ಮಟ್ಟಕ್ಕೆ ಇಳಿಕೆಯಾಗಲಿಲ್ಲ. ಕಡಿಮೆಯಾದರೂ ಮತ್ತೆ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಅನೇಕ ಸಮಯಗಳಿಂದ ತೆಂಗಿನಕಾಯಿ ದರ, ಕೊಬ್ಬರಿ ದರ ಏರಿಕೆ ಕಾಣಲಿಲ್ಲ. ಹೀಗಾಗಿ ತೆಂಗು ಬೆಳೆಗಾರರಿಗೆ ಸಂಕಷ್ಟವಾಗಿದೆ. ತೆಂಗಿನಕಾಯಿ ಮತ್ತು ಕೊಬ್ಬರಿ ಬೆಲೆ ಕುಸಿತದ ಕಾರಣದಿಂದ ಕರ್ನಾಟಕ ಮತ್ತು ಇತರ ದಕ್ಷಿಣದ ರಾಜ್ಯಗಳ ಹಲವಾರು ಭಾಗಗಳಲ್ಲಿ ರೈತರ ಮೇಲೆ ಪರಿಣಾಮ ಬೀರಿದೆ. ಇದೀಗ ಹಲವು ಕಡೆ ಕೃಷಿಕರು ಪ್ರತಿಭಟನೆಯ ಹಾದಿಯಲ್ಲಿದ್ದಾರೆ.
ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಗೊಳಿಸಿ ಪ್ರೋತ್ಸಾಹ ಧನ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಲಾಗಿತ್ತು. ರಾಜ್ಯದ ಸುಮಾರು 13 ಜಿಲ್ಲೆಗಳಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು ಲಕ್ಷಾಂತರ ಕುಟುಂಬಗಳು ಜೀವನೋಪಾಯಕ್ಕಾಗಿ ತೆಂಗು ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಕಳೆದ ವರ್ಷ 19 ಸಾವಿರ ರೂ.ಗಳ ಬೆಲೆಯಿಂದ ಇದ್ದಕ್ಕಿದ್ದಂತೆ ಕೊಬ್ಬರಿಗೆ ಬೆಲೆ 7500 ರೂ.ಗಳಿಗೆ ಕುಸಿದಿದೆ. ಹೀಗಾಗಿ ರೈತ ಸಂಘ ಹಾಗೂ ತೆಂಗು ಬೆಳೆಗಾರರು ಪ್ರತಿಭಟನೆ ಮಾಡಿದ್ದರು. ರಾಜ್ಯದಲ್ಲಿ 6.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಕೃಷಿ ಮಾಡಲಾಗುತ್ತಿದೆ.
ಸದ್ಯ 7500 ರೂಪಾಯಿಗಳಿಗೆ ಕುಸಿತ ಕಂಡಿದ್ದ ಕೊಬ್ಬರಿ ದರ ಕೊಂಚ ಏರಿಕೆಯ ಹಾದಿಯಲ್ಲಿದೆ. ಕಳೆದ ವಾರ ಪ್ರತಿ ಕ್ವಿಂಟಾಲ್ ಕೊಬ್ಬರಿ ದರ ಗರಿಷ್ಠ 9000 ರೂಪಾಯಿ ಮುಟ್ಟಿತ್ತು ಇದೀಗ ಕೊಂಚ ಏರಿಕೆಯ ನಿರೀಕ್ಷೆ ಇದೆ.
ಇದೇ ವೇಳೆ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಕುಸಿಯುತ್ತಿರುವ ಪರಿಣಾಮ ತೆಂಗಿನೆಣ್ಣೆಯ ಬೆಲೆಗಳು 4-5 ವರ್ಷಗಳ ಅಂತರದ ನಂತರ ದಾಖಲೆಯ ಮಟ್ಟಕ್ಕೆ ಕುಸಿದಿವೆ. ಕೇರಳದ ಸಗಟು ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಬೆಲೆ ₹120ಕ್ಕೆ ಇಳಿದಿದ್ದರೆ, ತಮಿಳುನಾಡಿನಲ್ಲಿ ₹103.50 ಇತ್ತು. ಕೊಬ್ಬರಿ ಬೆಲೆಯು ಕೇರಳದಲ್ಲಿ ಪ್ರತಿ ಕೆಜಿಗೆ ₹ 76 ಮತ್ತು ತಮಿಳುನಾಡಿನಲ್ಲಿ ₹ 71 ಕ್ಕೆ ಇಳಿಕೆಯಾಗಿದೆ ಎಂದು ಮಾರುಕಟ್ಟೆ ವಲಯ ಹೇಳಿದೆ.
ಆದರೆ ತೆಂಗು ಕೂಡಾ ದನಗಳ ಮೇವಿನ ನೆಪದಲ್ಲಿ ತೆಂಗಿನ ಎಣ್ಣೆಯನ್ನು ತೆಗೆಯದೆ ಕೊಬ್ಬರಿ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ತಮಿಳುನಾಡಿನಲ್ಲಿ ಬೆಳೆಗಾರರು ಆರೋಪಿಸಿದ್ದಾರೆ. ಕಡಿಮೆ ಬೆಲೆಯ ತೆಂಗಿನಕಾಯಿಯನ್ನು ಆಮದು ಮಾಡಿಕೊಳ್ಳುವುದರಿಂದ ಇಲ್ಲಿನ ತೆಂಗು ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಕೃಷಿಕರು ಆರೋಪಿಸಿದರು.
ತಮಿಳುನಾಡು ₹15ಕ್ಕೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಈಗ ₹5ಕ್ಕೆ ಮಾರಾಟವಾಗಿದೆ. ಜಾನುವಾರುಗಳ ಮೇವಿನ ನೆಪದಲ್ಲಿ ತೆಂಗಿನಕಾಯಿ ಆಮದನ್ನು ಕೇಂದ್ರವು ನಿಷೇಧಿಸಬೇಕು ಎಂದು ತಮಿಳುನಾಡು ತೆಂಗು ಬೆಳೆಗಾರರು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಕೂಡಾ ತೆಂಗಿನ ಕಾಯಿ ದರ 20 ರೂಪಾಯಿಯಿಂದ ಏರಿಕೆ ಕಂಡಿಲ್ಲ.