ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ, ಪಟಾಕಿಗಳ ಬದಲಿಗೆ ಹಣತೆ ಬೆಳಗಿಸಿ ದೀಪಾವಳಿ ಆಚರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ದೀಪಾವಳಿ ಬೆಳಕಿನ ಹಬ್ಬವು ಪಟಾಕಿಗಳ ಅಜಾಗರೂಕ ಬಳಕೆಯಿಂದ ಮಕ್ಕಳ ಪಾಲಿಗೆ ಕತ್ತಲೆಯಾಗದಂತೆ ಪೋಷಕರು ಮತ್ತು ಸಾರ್ವಜನಿಕರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ಎಚ್.ಆರ್. ಮನವಿ ಮಾಡಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಬಹುದಾದ ಅವಘಡಗಳನ್ನು ತಡೆಯಲು ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಹಬ್ಬದ ಸಂಭ್ರಮದಲ್ಲಿ ಮಕ್ಕಳ ಕಣ್ಣು ಮತ್ತು ಮುಖದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಪಟಾಕಿ ಅಪಾಯಕಾರಿ, ಹಣತೆ ಬೆಳಗಿಸಿ ಹಬ್ಬ ಆಚರಿಸಿ : ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿದು ಮಕ್ಕಳು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಹಾಗೂ ಮುಖಕ್ಕೆ ಗಂಭೀರ ಗಾಯ ಮಾಡಿಕೊಳ್ಳುವ ಘಟನೆಗಳು ವರದಿಯಾಗುತ್ತಿವೆ. ಪಟಾಕಿಗಳಿಂದ ಪರಿಸರ ಮಾಲಿನ್ಯ, ಹೊಗೆ ಮತ್ತು ಕಸದ ಸಮಸ್ಯೆ ಉಂಟಾಗುವುದರ ಜೊತೆಗೆ ಜೀವಕ್ಕೂ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಡಾ. ತಿಮ್ಮಯ್ಯ ಎಚ್ಚರಿಸಿದ್ದಾರೆ.
ಆದ್ದರಿಂದ ಅಪಾಯಕಾರಿ ಸಿಡಿಮದ್ದುಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ತ್ಯಜಿಸುವುದು ಸೂಕ್ತ. ಅನಿವಾರ್ಯವಾದರೆ ಸಿಡಿಯದ ಸುರುಸುರುಬತ್ತಿಗಳನ್ನು ಮಾತ್ರ ದೊಡ್ಡವರ ನೇರ ಮೇಲ್ವಿಚಾರಣೆಯಲ್ಲಿ ಎಚ್ಚರಿಕೆಯಿಂದ ಬಳಸಬೇಕು. ಪಟಾಕಿಗಳ ಬದಲಿಗೆ ಮನೆಗಳಲ್ಲಿ ಹಣತೆಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಆಚರಿಸುವಂತೆ ಅವರು ಕರೆ ನೀಡಿದ್ದಾರೆ.
ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಸಿದ್ಧತೆ : ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿದು ಗಾಯಗೊಂಡ ಪ್ರಕರಣಗಳು ವರದಿಯಾದರೆ ತಕ್ಷಣ ಚಿಕಿತ್ಸೆ ಒದಗಿಸಲು ಜಿಲ್ಲೆಯ ಆರೋಗ್ಯ ಇಲಾಖೆಯು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿಯನ್ನು ಸನ್ನದ್ಧವಾಗಿರಿಸಲಾಗಿದೆ.
ವೆನ್‌ಲಾಕ್‌ನಲ್ಲಿ ನೇತ್ರ ಚಿಕಿತ್ಸೆಗೆ ವ್ಯವಸ್ಥೆ: ಪಟಾಕಿ ಅವಘಡದಿಂದ ಕಣ್ಣಿಗೆ ಗಂಭೀರ ಗಾಯಗಳಾದರೆ ತ್ವರಿತವಾಗಿ ಸೂಕ್ತ ಚಿಕಿತ್ಸೆ ಒದಗಿಸಲು ಮಂಗಳೂರಿನ ವೆನ್‌ಲಾಕ್ ಜಿಲ್ಲಾಸ್ಪತ್ರೆಯ ನೇತ್ರ ತಜ್ಞರ ವಿಭಾಗವನ್ನು ಸಜ್ಜುಗೊಳಿಸಲಾಗಿದೆ.
ಇದರೊಂದಿಗೆ ಪಟಾಕಿ ಅವಘಡದಿಂದ ಗಾಯಗೊಂಡು ಬರುವ ಯಾವುದೇ ರೋಗಿಗೆ ವಿಳಂಬ ಮಾಡದೆ ತುರ್ತು ಚಿಕಿತ್ಸೆ ನೀಡುವಂತೆ ಜಿಲ್ಲೆಯ ಎಲ್ಲ ಖಾಸಗಿ ನರ್ಸಿಂಗ್ ಹೋಂ ಹಾಗೂ ಆಸ್ಪತ್ರೆಗಳಿಗೂ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಗಾಯಗಳಿಂದ ಶಾಶ್ವತ ದೃಷ್ಟಿದೋಷ ಅಥವಾ ಅಂಗವೈಕಲ್ಯ ಉಂಟಾಗದಂತೆ ವಿಶೇಷ ಮುತುವರ್ಜಿ ವಹಿಸಲು ಸೂಚಿಸಲಾಗಿದೆ ಎಂದು ಡಾ. ತಿಮ್ಮಯ್ಯ ಎಚ್.ಆರ್. ತಿಳಿಸಿದ್ದಾರೆ.
Dakshina Kannada District Health and Family Welfare Officer Dr. Thimmaiah H.R. has urged parents and the public to take precautions to protect children from firecracker-related injuries during Deepavali. He warned that careless use of fireworks can cause serious eye and facial injuries, including permanent vision loss. Government hospitals, including the ophthalmology department at Wenlock District Hospital in Mangaluru, have been prepared to provide emergency treatment. Private hospitals and nursing homes have also been instructed to provide immediate medical care to firecracker injury victims.
ಸಾಗುವಳಿ ಚೀಟಿ ಪಡೆಯಲು ರೈತರಿಗೆ ಅರಣ್ಯ ಇಲಾಖೆಯಿಂದ ಎನ್‌ಒಸಿ ನೀಡುವ ಕುರಿತು ಜಂಟಿ…
ರಾಜ್ಯದ ವಿವಿಧ ಭಾಗಗಳಿಂದ ಸಂಗ್ರಹಿಸಿದ 63 ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ನಿಗದಿತ ಶೇ.20ಕ್ಕಿಂತ…
ಸಾಂಪ್ರದಾಯಿಕ ರಸಗೊಬ್ಬರಗಳ ಅಸಮರ್ಪಕ ಬಳಕೆಯಿಂದ ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲದ ಗುಣಮಟ್ಟದ ಮೇಲೆ…
ಬರಪೀಡಿತ ರೈತರಿಗೆ ತಲಾ ₹5,000 ಪರಿಹಾರ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಯಾದಗಿರಿ…
2008–09ರಲ್ಲಿ ಅಡಿಕೆಯ ಪರ್ಯಾಯ ಬಳಕೆಗಳ ಸಂಶೋಧನೆಗಾಗಿ ಮಂಗಳೂರಿನ ARDF ಸಂಸ್ಥೆಗೆ ₹1 ಕೋಟಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ನವೆಂಬರ್ 8ರವರೆಗೆ…