ಹಬ್ಬವೆಂದರೆ ದೀಪಾವಳಿ. ಈ ಹಬ್ಬ ಇಷ್ಟದ ಹಬ್ಬ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ಜೀವಗಳಿಗೂ ನೆಚ್ಚಿನ ಹಬ್ಬ. ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೆಲವೆಡೆ ಹದಿನೈದು ದಿನಗಳ ಕಾಲವೂ ಆಚರಣೆಗಳಿವೆ.
ಈ ಹಬ್ಬದಲ್ಲಿ ಏನುಂಟು ಏನಿಲ್ಲ. ಲಕ್ಷ್ಮೀ ಪೂಜೆ, ತುಳಸಿ ಪೂಜೆ, ಬಲಿಯೇಂದ್ರ ಪೂಜೆ ಹಸುಗಳ ಪೂಜೆ. ಪೂಜೆಗಳು ಮಾತ್ರವಲ್ಲ ತಿಂಡಿಗಳ ಸಮಾಗಮನವೂ ಕೂಡ.
ದೀಪಾವಳಿ ಹಬ್ಬದ ಆರಂಭವಾಗುವುದು ಅಭ್ಯಂಗದೊಂದಿಗೆ. ಮುಂಜಾನೆಯೇ ದೇವರ ಕೋಣೆಯಲ್ಲಿ ರಂಗೋಲಿ ಬರೆದು ಮಣೆ ಇಡಬೇಕು. ಆಮೇಲೆ ದೇವರಿಗೆ ನಮಸ್ಕರಿಸಿ ಎಣ್ಣೆಯನ್ನು ತಲೆಯಿಂದ ಕಾಲಿನವರೆಗೆ ಹಚ್ಚಿ ಬಿಸಿ ಬಿಸಿ ನೀರಿನಲ್ಲಿ ಮೈ ತಿಕ್ಕಿತಿಕ್ಕಿ ಸ್ನಾನ ಮಾಡುವುದು ಖುಷಿಯ ಅನುಭವ. ಆಮೇಲೆ ಮನೆಯ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಪದ್ಧತಿ. ಆ ದಿನ ಬೆಳಗಿನ ತಿಂಡಿಗೆ ಕುಂಬಳಕಾಯಿ ದೋಸೆ ವಿಶೇಷ.
ಇನ್ನೂ ದೀಪಾವಳಿ ಬೆಳಕಿನ ಹಬ್ಬ ತಾನೇ. ದೀಪಗಳದ್ದೇ ಕಾರುಬಾರು. ಮುಸ್ಸಂಜೆ ಹೊತ್ತಾಯಿತೆಂದರೆ ಮನೆಯ ಸುತ್ತಮುತ್ತಲೆಲ್ಲಾ ಹಚ್ಚಿಡುವ ದೀಪಗಳು. ಬಲಿ ಚಕ್ರವರ್ತಿ ಹಬ್ಬದ ಮೂರು ದಿನಗಳು ತನ್ನ ರಾಜ್ಯದಲ್ಲಿ ಸಂಚರಿಸಿ ಜನರ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಂಬಿಕೆ . ಹಾಗಾಗಿ ಪ್ರತಿ ಮನೆಮನೆಗಳಲ್ಲೂ ದೀಪ ರಂಗೋಲಿ ಗಳನಿಟ್ಟು ಜನರಿಗೆ ಬಲಿಚಕ್ರವರ್ತಿ ಯನ್ನು ಸ್ವಾಗತಿಸುವ ಸಂತೋಷ.
ಮಣ್ಣಿನ ಹಣತೆಗಳು ಹೊಮ್ಮಿಸುವ ಪ್ರಶಾಂತವಾದ ಬೆಳಕುಗಳು ಮನಸಿಗೆ ನೆಮ್ಮದಿಯನ್ನು ಕೊಡುತ್ತವೆ. ದೀಪದಿಂದ ದೀಪ ಹಚ್ಚುತ್ತಾ ಸಂತಸವು ಎಲ್ಲೆಡೆ ಬೆಳಕಿನಂತೆ ಪಸರಿಸಲಿ ಎಂಬ ಘನ ಧ್ಯೇಯವನ್ನು ಸೂಚಿಸುತ್ತದೆ. ಈ ನಿರ್ಮಲ ಬೆಳಕಿನ ಮುಂದೆ ಗಿಜಿಗಿಜಿ ಎಂದು ಜಗಮಗಿಸುವ ವಿದ್ಯುತ್ ದೀಪಗಳು ತೀರಾ ಕೃತಕವೆನಿಸುತ್ತವೆ.
ಸ್ಥಳೀಯವಾಗಿ ಬೆಳೆಯುವ ಚೆಂಡುಹೂಗಳನ್ನು ಅಲಂಕಾರಕ್ಕಾಗಿ ಬಳಸುವುದು ಹಿಂದಿನಿಂದ ಬಂದ ಪದ್ಧತಿ. ಸೆಗಣಿಯ ಉಂಡೆ ಮಾಡಿ ಅದರ ಮಧ್ಯ ದಲ್ಲಿ ಚೆಂಡು ಹೂಗಳನ್ನು ಇಟ್ಟು ತುಳಸಿ ಕಟ್ಟೆಯ ಸುತ್ತಲೂ ಇಡುತ್ತಿದ್ದುದು ಬಾಲ್ಯದ ನೆನಪುಗಳು. ಬಣ್ಣ ಬಣ್ಣದ ಎಲೆಗಳು, ಇನ್ನಿತರ ಹೂಗಳನ್ನು ಬಳಸಿ ಮಾಡುವ ರಂಗೋಲಿ ಮನಸಿಗಷ್ಟೇ ಅಲ್ಲ ಕಣ್ಣಿಗೂ ಅಂದ. ಅವುಗಳ ಮಧ್ಯೆ ಇಡುವ ದೀಪಗಳು.
ಹಬ್ಬ ಹರಿದಿನಗಳಲ್ಲಿ ಮನೆಮನೆಗಳಲ್ಲಿ ಸಂಭ್ರಮದ ವಾತಾವರಣ. ಅಲ್ಲಲ್ಲಿ ದೀಪ ಹಚ್ಚಿ ನಕ್ಷತ್ರ ಕಡ್ಡಿ ಉರಿಸಿ ಪಡುತ್ತಿದ್ದ ಸಂತೋಷ ಇಂದು ಊರಿಡೀ ಪಸರಿಸಿದೆ. ದೀಪಾವಳಿಯ ಸಮಯದಲ್ಲಿ ಆಗುವ ಶಬ್ದ ಮಾಲಿನ್ಯ, ವಾಯುಮಾಲಿನ್ಯ ಗಳ ಅಗಾಧತೆಯನ್ನು ಕಂಡರೆ ಮನಸು ಭಾರವಾಗುತ್ತದೆ. ಪಟಾಕಿ, ರಾಕೆಟ್ ಗಳ ಹಾವಳಿಯಿಂದ ಕೈಕಾಲು ,ಮುಖ ಸುಟ್ಟು ಕೊಂಡು ಕಣ್ಣುಗಳನ್ನು ಕಳೆದು ಕೊಳ್ಳುವ ಮಕ್ಕಳೆಷ್ಟೋ.!!!?
ದೀಪಾವಳಿ ಇಂದು ನಮ್ಮ ದೇಶದ ಆಚರಣೆಯಾಗಿ ಉಳಿದಿಲ್ಲ. ವಿಶ್ವದೆಲ್ಲೆಡೆ ಸಂಭ್ರಮ ದಿಂದ ಇದಿರು ನೋಡುವ ಹಬ್ಬ. ಅಮೆರಿಕಾ , ಬ್ರಿಟನ್, ರಷ್ಯಾ, ಜಪಾನ್ ಅರಬ್ ದೇಶಗಳಲ್ಲೂ ಆಚರಿಸುತ್ತಾರೆ. ಅಮೇರಿಕಾದ ಶ್ವೇತ ಭವನದಲ್ಲೂ ದೀಪಾವಳಿಯ ಬೆಳಕಿನ ರಂಗು ಮಿನುಗುತ್ತಿದೆ. ದೇಶ, ಗಡಿ, ಭಾಷೆಗಳನ್ನು ಮೀರಿ ನಿಲ್ಲುವ ಹಬ್ಬ ದೀಪಾವಳಿ. ಜಾತಿ ಮತಗಳ ಹಂಗಿಲ್ಲದೆ ದೀಪ ಹಚ್ಚಿ ಸಿಹಿ ಉಣ್ಣುವ ಹಬ್ಬ. ದೀಪಾವಳಿ ಖುಷಿ ಖುಷಿಯಾಗಿರಲಿ….ಕೊರೊನಾದಿಂದ ಆತಂಕ ಗೊಂಡಿರುವ ಮನಸುಗಳು ತಿಳಿಯಾಗಲಿ, ಕೊರೊನಾ ಸೋಂಕು ನಿವಾರಣೆಯಾಗಲಿ.
ನಗುವೇ ತುಂಬಿರಲಿ….
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…