Advertisement
Open ಟಾಕ್

ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?

Share
ದೆಹಲಿಯಲ್ಲಿ ಆಮ್‌ ಆದ್ಮಿ ಸೋಲು ಕಂಡಿತು. ಇಂದು ಅಣ್ಣಾ ಹಜಾರೆ ಬಹಳ ಸುಂದರವಾದ ಮಾತುಗಳನ್ನು ಹೇಳಿದರು, “ವಿಚಾರಗಳು ಮತ್ತು ನಡವಳಿಕೆಗಳು ಶುದ್ಧವಾಗಿರಬೇಕು, ಆಲೋಚನೆಗಳು ಶುದ್ಧವಾಗಿರಬೇಕು, ಜೀವನವು ದೋಷರಹಿತವಾಗಿರಬೇಕು , ತ್ಯಾಗ ಇರಬೇಕು” ಈ ಗುಣಗಳಿದ್ದರೆ ಮತದಾರರು ನಂಬಿಕೆ ಇಡುತ್ತಾರೆ. ……… ಮುಂದೆ ಓದಿ…….
ಒಂದು ಹೋರಾಟವು ರಾಜಕೀಯ ಪಕ್ಷವಾಗಿ, ಹೋರಾಟವಾಗಿ ಉಳಿಯುವುದು, ಉಳಿಸಿಕೊಳ್ಳುವುದು ಸುಲಭ ಅಲ್ಲ. ಒಂದು ವೇಳೆ ಪರಿಶುದ್ಧತೆ ಉಳಿಸಿಕೊಂಡಿದ್ದರೆ ಈ ದೇಶದಲ್ಲಿ ಪರ್ಯಾಯ ರಾಜಕಾರಣವಾಗಿ ಕಾಣುತ್ತಿತ್ತು. ಆದರೆ ಅಹಂಕಾರ ಹಾಗೂ ಅಧಿಕಾರದ ಮದ ಅದನ್ನು ಕೆಡವಿ ಹಾಕಿತು. ಸ್ವಯಂಕೃತ ಅಪರಾಧವು ಒಂದು ಹೋರಾಟವನ್ನುಸದ್ಯ ಅದುವೇ ಮುಗಿಸಿಕೊಂಡಿತು. ಈ ದಾರಿ ಆರಂಭವಾಗಿ ಕೆಲವು ಸಮಯಗಳು ಆಗಿದ್ದವು. ಇಂದು ಹಂತಕ್ಕೆ ಬಂದು ನಿಂತಿದೆ. ಮುಂದೆ ಅದರ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟ ಆರಂಭವಾಗಬಹುದು, ಆಗ ಇನ್ನಷ್ಟು ಸವಾಲುಗಳು ಎದುರಾಗಲಿದೆ. ಈಗಲಾದರೂ ಎಚ್ಚೆತ್ತುಕೊಂಡರೆ ಈ ದೇಶದಲ್ಲಿ ಇನ್ನೊಂದು ರಾಜಕೀಯ ಶಕ್ತಿಯಾಗಿ, ಇನ್ನೊಂದು ಸಮರ್ಥ ವಿಪಕ್ಷವಾಗಿಯೂ ಕೆಲಸ ಮಾಡಲು ಸಾಧ್ಯವಿದೆ.
2011 ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ದೇಶದಲ್ಲಿ ಆರಂಭಿಸಿದವರು ಅಣ್ಣಾ ಹಜಾರೆ. ಒಬ್ಬ ಸಾಮಾಜಿಕ ಕಾರ್ಯಕರ್ತ ಉತ್ತಮ ಚಿಂತನೆಯ ಮೂಲಕ ಹೇಗೆ ಬದಲಾವಣೆ ತರಬಲ್ಲರು ಎನ್ನುವುದಕ್ಕೆ ಮಾದರಿಯೂ ಆಗಿದ್ದರು. ಅಂದು ಹಜಾರೆ ಅವರು  ಗಾಂಧಿ ಮಾರ್ಗದಲ್ಲಿ ಆರಂಭಿಸಿದ ಹೋರಾಟವು ಇಡೀ ದೇಶಕ್ಕೆ ವ್ಯಾಪಿಸಿತು. ಹಳ್ಳಿ ಹಳ್ಳಿಯಲ್ಲೂ ಅಣ್ಣಾ ಹಜಾರೆ ಸ್ಫೂರ್ತಿಯಾಗಿದ್ದರು. ಸಾಮಾಜಿಕ ಹೋರಾಟವು ಕ್ರಾಂತಿಕಾರಿಯಾದ ಹೋರಾಟವಾಗಿ ಇಡೀ ದೇಶದಲ್ಲಿ ದಾಖಲಾಯಿತು. ಆರು ತಿಂಗಳಲ್ಲಿ ಅಣ್ಣಾ ಹಜಾರೆ ಅವರು ಸಾಮಾಜಿಕ ಕಾರ್ಯಕರ್ತನಿಂದ ರಾಷ್ಟ್ರೀಯ ಐಕಾನ್ ಆಗಿ ಬದಲಾದರು. ಮಹಾರಾಷ್ಟ್ರದ ರಾಳೇಗಣ ಸಿದ್ಧಿ ಎಂಬ ಹಳ್ಳಿಯಲ್ಲಿ 13 ದಿನಗಳ ಉಪವಾಸ ಸತ್ಯಾಗ್ರಹದಿಂದ ಚೇತರಿಸಿಕೊಂಡು, ತನ್ನ ಆಂದೋಲನಕ್ಕೆ ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸುತ್ತಿರುವಾಗ, ಅವರು ಎರಡನೇ ಗಾಂಧಿ ಎಂದೂ ಕರೆಯಿಸಿಕೊಂಡರು. ಈ ಹೋರಾಟವು ಸರ್ಕಾರದ ವಿರುದ್ಧ ಅಲ್ಲ, ಆದರೆ ಅದರ ಭ್ರಷ್ಟಾವಾರದ  ವಿರುದ್ಧ ಎಂದು ಅವರು ಹೇಳಿದ್ದರು. 2011 ರಿಂದಲೂ ಜನಲೋಕ್‌ಪಾಲ್‌ ಮಸೂದೆ ಜಾರಿಗಾಗಿ ಒತ್ತಾಯಿಸುತ್ತಿದ್ದರು. ಈ ಹೋರಾಟದಲ್ಲಿದ್ದ ಅರವಿಂದ ಕೇಜ್ರೀವಾಲರೂ ಒಂದು ಭಾಗವಾದರು. ರಾಜಕೀಯ ಪಕ್ಷವಾಗಿ ಈ ಹೋರಾಟವನ್ನು ಮುಂದುವರಿಸಬೇಕು ಎಂದು
ಒಂದು ರಾಜಕೀಯ ಪಕ್ಷವಾಗಿ ಬೆಳೆಯುವ ಬಗ್ಗೆ ಇಂಜಿನಿಯರಿಂಗ್‌ ಪದವೀಧರ ಅರವಿಂದ ಕೇಜ್ರೀವಾಲ್‌ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. 2006 ರಲ್ಲಿ, ಕೇಜ್ರಿವಾಲ್ ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಅಭಿಯಾನದಲ್ಲಿ ಮಾಹಿತಿ ಹಕ್ಕು ಕಾನೂನನ್ನು ಬಳಸಿಕೊಂಡು ಪರಿವರ್ತನ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನುಕೂಡಾ ಪಡೆದರಾಗಿದ್ದರು. ಹೋರಾಟವನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ಅಣ್ಣಾ ಹಜಾರೆ ಅವರಿಗೆ ಹಿತವಿರಲಿಲ್ಲ, ಕಾರಣ ರಾಜಕೀಯದಲ್ಲಿ “ವಿಚಾರಗಳು ಮತ್ತು ನಡವಳಿಕೆಗಳು ಶುದ್ಧವಾಗಿರಲು,ಆಲೋಚನೆಗಳು ಶುದ್ಧವಾಗಿರಲು ಸಾಧ್ಯವೇ” ಎನ್ನುವುದು ಹಜಾರೆ ಅವರ ಕಾಳಜಿಯಾಗಿತ್ತು. ಆದರೆ ಅಂದಿನ ಜೋಶ್‌ನಲ್ಲಿ ಅರವಿಂದ ಕೇಜ್ರೀವಾಲ್‌ ಅಣ್ಣಾ ಹಜಾರೆ ಅವರ ಅಭಿಪ್ರಾಯ, ಸಲಹೆಯನ್ನು ಮೀರಿ “ಆಮ್‌ ಆದ್ಮಿ” ಕಟ್ಟಿದರು.
2012 ರಲ್ಲಿ ಆರಂಭವಾದ ಆಮ್‌ ಆದ್ಮಿ ಪಕ್ಷಕ್ಕೆ ಕೇವಲ 13   ವರ್ಷ. ಕೇವಲ 13 ವರ್ಷದಲ್ಲಿ ಒಂದು ದೇಶದಲ್ಲಿ ಅನೇಕ ವರ್ಷಗಳಿಂದಲೂ ಇದ್ದ ಪಕ್ಷಗಳನ್ನೂ ಹಿಂದಿಕ್ಕಿ ದೆಹಲಿಯಲ್ಲಿ ಅಧಿಕಾರ ಅನುಭವಿಸಿ, ಪಕ್ಕದ ರಾಜ್ಯಕ್ಕೂ ವಿಸ್ತರಿಸಿ ತಾನು ಬೆಳೆದ ಕ್ಷೇತ್ರದಲ್ಲಿಯೇ ಆಡಳಿತವನ್ನು ಕಳೆದುಕೊಂಡಿತು. ಈಗ ಅದಕ್ಕೇ ಆತ್ಮ ವಿಮರ್ಶೆಯ ಕಾಲ. ಒಂದು ಸೋಲು ಇಡೀ ಪಕ್ಷದ, ಇಡೀ ವ್ಯವಸ್ಥೆಯ ಸೋಲಲ್ಲ, ಆದರೆ ಎಡವಿರುವುದರ ಬಗ್ಗೆ ಯೋಚಿಸುವುದಕ್ಕೆ ಇದು ಸಕಾಲ.
2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ವಿಧಾನಸಭೆ ಪ್ರವೇಶಮಾಡಿತು. ಅಂದು ಎಎಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾಯಿತು.‌ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾದರು. ಆದರೆ  ಜನಲೋಕಪಾಲ್ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 49 ದಿನಗಳ ನಂತರ ಅವರ ಸರ್ಕಾರ ರಾಜೀನಾಮೆ ನೀಡಿತು. ಮುಂದಿನ 2015 ರ ಚುನಾವಣೆಯಲ್ಲಿ,ಎಎಪಿ ವಿಧಾನಸಭೆಯ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿತು. ಅರವಿಂದ ಕೇಜ್ರಿವಾಲ್ ಮತ್ತೆ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರದ 2020 ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ,ಎಎಪಿ  70 ರಲ್ಲಿ 62 ಸ್ಥಾನಗಳನ್ನು ಗೆದ್ದು ಕೊಂಡಿತ್ತು. ದೆಹಲಿ ಒಂದು ರಾಜ್ಯವಾದರೂ ಸಂಪೂರ್ಣವಾಗಿ ಕೇಂದ್ರದ ಹಿಡಿತದಲ್ಲಿರುವ ರಾಜ್ಯ. ಅಂತಹ ರಾಜ್ಯದಲ್ಲಿ ಕಳೆದ 13  ವರ್ಷಗಳಿಂದ  ಆಡಳಿತದಲ್ಲಿರುವುದು ಎಂದರೆ ಸುಲಭವೂ ಅಲ್ಲ. ಆದರೆ 2025 ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅಧಿಕಾರ ಕಳೆದುಕೊಂಡಿತು.
2012 ರಲ್ಲಿ ಸಾಮಾಜಿಕ ಜಾಲತಾಣಗಳು ಸಕ್ರಿಯವಾದ ಕಾಲ. ಎಎಪಿ ಸೋಶಿಯಲ್‌ ಮೀಡಿಯಾ ಬಳಸಿಕೊಂಡು ದೆಹಲಿಯ ಜನರ ಮನೆ ಮನೆಗೆ ತಲಪಿತು. ಭ್ರಷ್ಟಾಚಾರ ವಿರೋಧ, ಜನಪರವಾದ ಆಡಳಿತ ಎನ್ನುವ ಭರವಸೆಯ ಜೊತೆಗೆ ಉಚಿತಗಳನ್ನೂ ನೀಡಿತು. ಈ ಉಚಿತಗಳನ್ನು ನೀಡುವ ಬಗೆಯನ್ನೂ ಹೇಳಿತು. ಭ್ರಷ್ಟಾಚಾರಗಳು ಕಡಿಮೆಯಾದರೆ ಉಚಿತಗಳು ನೀಡಲು ಸಾಧ್ಯವಿದೆ ಎಂದೂ ಹೇಳಿದರು. ಇದೆಲ್ಲವನ್ನೂ ಆರಂಭದಲ್ಲಿ ನಿಜ ಎನಿಸಿತು. ಭ್ರಷ್ಟಾಚಾರದ ಹೋರಾಟವೂ ಎಎಪಿಗೆ ವರವಾದವು. ಸೋಶಿಯಲ್‌ ಮೀಡಿಯಾದಲ್ಲಿ ಅಂದಿನಿಂದಲೂ ಸಕ್ರಿವಾಗಿದ್ದ ಬಿಜೆಪಿಗೆ ಕೂಡಾ ದೆಹಲಿಯಲ್ಲಿ ಎಎಪಿ ಸೋಶಿಯಲ್‌ ಮೀಡಿಯಾವನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ ಸೋಶಿಯಲ್‌ ಮೀಡಿಯಾದಲ್ಲಿ ಹಿಂದಿದೆ, ಹೀಗಾಗಿ ನಗರ-ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜನರನ್ನು ತಲುಪಲು ಸಾಧ್ಯವೇ ಆಗುತ್ತಿಲ್ಲ, ಸಂಘಟನೆಯೂ ಇತರ ಪಕ್ಷಗಳಂತೆ ಈಗ ಗಟ್ಟಿಯಾಗಿಲ್ಲ.
ದೆಹಲಿ ಗದ್ದುಗೆ ಏರಿದ ಎಎಪಿ ಆರಂಭದಲ್ಲಿ ಕ್ರಾಂತಿಕಾರಕವಾದ ಹೆಜ್ಜೆಗಳನ್ನು ಇರಿಸುತ್ತದೆ ಎಂದು ಭಾವಿಸಿ ಎಲ್ಲರಿಗೂ ನಿರಾಸೆ ಆರಂಭವಾಯಿತು. ಆರೋಗ್ಯ, ಶಿಕ್ಷಣದ ಬಗ್ಗೆ ಆದ್ಯತೆ ನೀಡಿದರೂ ಕ್ರಮೇಣ ಇತರ ಕ್ಷೇತ್ರಗಳಲ್ಲಿ ಎಎಪಿ ನಿಧಾನವಾಗಿ ಸೋಲಲು ಆರಂಭವಾಯಿತು. ಆದರೆ ಸೋಶಿಯಲ್‌ ಮೀಡಿಯಾದ ಕಾರಣದಿಂದ ಈ ಸೋಲುಗಳು ಹೊರಗೆ ಬಾರದಂತೆ ತಡೆದವು. ಅಬ್ಬರದ ಪ್ರಚಾರಗಳು ನೆಗೆಟಿವ್‌ ಫೋಕಸ್‌ ಆಗದಂತೆ ಮಾಡಿದವು. ಕ್ರಮೇಣ ವಿಪಕ್ಷಗಳ ಮೇಲೆ ಟೀಕಾಪ್ರಹಾರ ಶುರುವಾಯ್ತು, ಸ್ವತ: ಅರವಿಂದ ಕೇಜ್ರೀವಾಲರು ಅಭಿವೃದ್ಧಿಯ ಬದಲಾಗಿ ಟೀಕೆಗಳಿಗೇ ಆದ್ಯತೆ ನೀಡಲು ಆರಂಭ ಮಾಡಿದಾಗ ಜನರು ಎಎಪಿ ಮೇಲಿನ ಗೌರವ ಕಡಿಮೆ ಮಾಡಲು ಶುರು ಮಾಡಿದರು. ಆಗ ಎಎಪಿ ಒಳಗಿದ್ದ ಉತ್ತಮವಾದ ಅಭ್ಯರ್ಥಿಗಳು, ಸಂಪನ್ಮೂಲಗಳನ್ನು ಬಳಕೆ ಮಾಡುವ ಬದಲಾಗಿ ತನಗೆ ಬೇಕಾದವರ ತಂಡ ಕಟ್ಟಿಕೊಳ್ಳಲು ಕೇಜ್ರಿವಾಲರು ಮುಂದಾದರು.  ದೆಹಲಿಯನ್ನು ಸರಿಯಾಗಿ ಗಮನಿಸಿದರೆ ಒಂದು ದೊಡ್ಡದಾದ ಮಹಾನಗರ ಪಾಲಿಕೆ. ಅಲ್ಲಿ ಅರಣ್ಯ, ಗ್ರಾಮೀಣಾಭಿವೃದ್ಧಿಯಂತಹ ಖಾತೆಗಳು ಬೇಕಾಗಿಲ್ಲ. ಹೀಗಾಗಿ ಹೆಚ್ಚಿನ ಅನುದಾನಗಳು ಕೂಡಾ ಅಭಿವೃದ್ಧಿಯ ದೃಷ್ಟಿಯಿಂದ ಹರಿಯುವುದಿಲ್ಲ. ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡಲಾಗಿತ್ತು, ಅದು ಯಶಸ್ಸು ಕೂಡಾ ಆಗಿತ್ತು. ಸಾಕಷ್ಟು ಅನುದಾನಗಳೂ ಬೇಕಾಗಿತ್ತು. ಆದರೆ ದೆಹಲಿಯಂತಹ ಪ್ರದೇಶದಲ್ಲಿ ಮದ್ಯದ ಮೂಲಕ ಸರ್ಕಾರದ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಕೇಜ್ರಿವಾಲರು ಆದ್ಯತೆ ನೀಡಿದರು. ಇಲ್ಲಿಂದ ನಂತರ ಸಂಪೂರ್ಣವಾಗಿ ಹಳಿ ತಪ್ಪಿದ ಸರ್ಕಾರವು ಅನಗತ್ಯವಾಗಿ ವಿವಾದಕ್ಕೆ ಸಿಲುಕಿಕೊಂಡಿತು. ಕೇಜ್ರಿವಾಲರ ತಂಡವೇ ದೇಶದ್ರೋಹಿ ಎನ್ನುವಷ್ಟರ ಮಟ್ಟಿಗೆ ಸೋಶಿಯಲ್‌ ಮೀಡಿಯಾದಲ್ಲಿ ಬಿಂಬಿಸಲು ವಿಪಕ್ಷಗಳು ಯಶಸ್ಸುಕಂಡವು. ಕೇಜ್ರೀವಾಲರು ಮತ್ತಷ್ಟು ಟೀಕೆ ಹೆಚ್ಚು ಮಾಡುತ್ತಾ, ತನ್ನದೇ ತಂಡವನ್ನು ಗಟ್ಟಿ ಮಾಡಿದರು. ವಿಪರ್ಯಾಸ ಎಂದರೆ 2011-2012 ರಲ್ಲಿ ಭ್ರಷ್ಟಾಚಾರದ ವಿರುದ್ಧ ಮಾಡಿರುವ ಹೋರಾಟದ ಪಕ್ಷವೇ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿತು. ಸ್ವತ: ಅರವಿಂದ ಕೇಜ್ರೀವಾಲರೇ ಬಂಧನಕ್ಕೆ ಒಳಗಾದರು. ವಿಪಕ್ಷಗಳ ಹುನ್ನಾರ ಎಂದು ಜೈಲಿನ ಒಳಗೇ ಕುಳಿತು ಬೊಬ್ಬೆ ಹೊಡೆದರು. ಸೋಶಿಯಲ್‌ ಮೀಡಿಯಾದಲ್ಲಿ ಬೊಬ್ಬೆ ಹಾಕಿದರು.ನಂತರ ಅಧಿಕಾರಕ್ಕೆ ಬಂದು ಅತಿಶಿ ಅವರು ಅರವಿಂದ ಕೇಜ್ರೀವಾಲರನ್ನು ರಾಮನಿಗೆ ಹೋಲಿಸಿ ಮುಖ್ಯಮಂತ್ರಿ ಖುರ್ಚಿಗೂ ಅವಮಾನ ಮಾಡಿದರು. ಈ ಎಲ್ಲಾ ಬೊಬ್ಬೆಗಳು ಚುನಾವಣೆಯಲ್ಲಿ ಮತದಾರರ ಒಲವು ಪಡೆಯಬಹುದು ಎಂದು ಭಾವಿಸಿದ್ದ ಅರವಿಂದ ಕೇಜ್ರೀವಾಲರಿಗೆ ನಿರಾಸೆಯಾಗಿದೆ.
ಚುನಾವಣಾ ಪ್ರಚಾರದಲ್ಲೂ ಅರವಿಂದ ಕೇಜ್ರೀವಾಲರು ಯಾವುದೇ ಅಭಿವೃದ್ಧಿ ಅಜೆಂಡಾಗಳು ಇಲ್ಲದೆ, ಯಮುನಾ ನದಿಯನ್ನು ಮುಂದೆ ತಂದರು, ವಿಪಕ್ಷಗಳಿಗೆ ನಿಂದಿಸಿದರು, ದೆಹಲಿಯಲ್ಲಿ ನಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಅಹಂಕಾರ ಪಟ್ಟರು. ಮತದಾರರು ಹಾದಿ ತಪ್ಪುತ್ತಿದ್ದ,  ಒಂದು ಹೋರಾಟದಿಂದ ಬಂದಿರುವ ಪಕ್ಷವನ್ನು ಸದ್ಯ ಬದಿಗೆ ಸರಿಸಿದರು.ಆದರೆ ಸುಮಾರು 10 ಕ್ಷೇತ್ರಗಳಲ್ಲಿ ತೀರಾ ಕಡಿಮೆ ಅಂತರದಲ್ಲಿ ಬಿಜೆಪಿ ಗೆಲವು ಸಾಧಿಸಿದೆ. ಆದರೆ ಚುನಾವಣೆಯಲ್ಲಿ ಗೆಲವೇ ಮುಖ್ಯವಾಗಿರುವುದರಿಂದ ಕಡಿಮೆ ಅಂತರವು ಲೆಕ್ಕಕ್ಕಷ್ಟೇ ಸೀಮಿತ.
ಪ್ರಜಾಪ್ರಭುತ್ವದಲ್ಲಿ ಒಂದು ವಿಪಕ್ಷ ಸರಿಯಾಗಿ ಇದ್ದರೆ ಅಂದರೆ ರಚನಾತ್ಮಕವಾಗಿ ಕೆಲಸ ಮಾಡಿದರೆ ಮಾತ್ರವೇ ಅಭಿವೃದ್ಧಿ ಸಾಧ್ಯವಿದೆ. ಕೆಲವು ಸಮಯಗಳ ಹಿಂದಿನವರೆಗೂ ಕೇರಳ ರಾಜ್ಯದಲ್ಲಿ ಅಂತಹದ್ದೊಂದು ಬೆಳವಣಿಗೆ ಇತ್ತು. ಸದ್ಯ ಈ ದೇಶದ ಎಲ್ಲೂ ರಚನಾತ್ಮಕವಾದ ವಿಪಕ್ಷಗಳು ಇಲ್ಲ. ದೇಶದಲ್ಲಿ ವಿಪಕ್ಷವೇ ಮಾಯವಾಗುತ್ತಿದೆ. ರಾಜ್ಯದಲ್ಲಿ ವಿಪಕ್ಷ ರಚನಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಯಾರು ಬೇಕಾದರೂ ಹೇಳಬಲ್ಲರು. ವಿಪಕ್ಷಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ಗ್ರಾಮೀಣ ಭಾಗದಿಂದ ತೊಡಗಿ ಎಲ್ಲೂ ಕೆಲಸಗಳು ನಡೆಯದು. ಸದ್ಯ ಕೇವಲ ಭಾವನಾತ್ಮಕ ಸಂಗತಿಗಳಿಗೆ ಮಾತ್ರವೇ ವಿಪಕ್ಷಗಳು ಕೆಲಸ ಮಾಡುವುದು ಎನ್ನುವ ಸನ್ನಿವೇಶ ರಾಜ್ಯದಲ್ಲೂ ಇದೆ. ದೇಶದಲ್ಲೂ ಅದೇ ಸ್ಥಿತಿ.
ಇಂತಹ ಸಂದರ್ಭದಲ್ಲಿ ಒಂದು ವಿಪಕ್ಷವಾಗಿ ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ಎಎಪಿ ಮಾಡಿ ತೋರಿಸುವ ಅವಕಾಶ ಈಗ ಇದೆ. ಈ ಮೂಲಕ ದೆಹಲಿಯ ಜನರಿಗೆ ಶುದ್ಧ ಗಾಳಿಯನ್ನು ತರುವ, ಶುದ್ಧ ನೀರನ್ನು ನೀಡುವ ಪ್ರಯತ್ನವನ್ನು ಜಾರಿ ಮಾಡಿಸಬಹುದು. ಹಿಂದೆ ಬಿಜೆಪಿ ವಿಪಕ್ಷವಾಗಿದ್ದಾಗ ಅನೇಕ ಹೋರಾಟಗಳನ್ನು ಮಾಡಿದೆ. ಈ ಹೋರಾಟಗಳಲ್ಲಿ ಅಯೋಧ್ಯೆಯಂತಹ ಭಾವನಾತ್ಮಕ ಸಂಗತಿಗಳೂ ಇದ್ದವು, ಆದರೆ ಬಿಜೆಪಿ ಸಂಘಟನೆ ಮಾಡಿರುವುದೇ ಇಂತಹ ಹೋರಾಟಗಳ ಮೂಲಕ, ಸಮರ್ಥ ವಿಪಕ್ಷವಾಗುವ ಮೂಲಕ. ಆದರೆ ಎಎಪಿ ವಿಪಕ್ಷ ಸ್ಥಾನದಲ್ಲಿ ಇರದೆ ನೇರವಾಗಿ ಆಡಳಿತವನ್ನೇ ಮಾಡಿರುವುದರಿಂದ ಈ ಬಾರಿ ವಿಪಕ್ಷವಾಗಿ ಈ ದೇಶದಲ್ಲಿ ರಚನಾತ್ಮಕವಾಗಿ ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ತೋರಿಸಬಹುದು. ಇದೇ ವೇಳೆ ವ್ಯಕ್ತಿ ಕೇಂದ್ರಿತವಾದ ಆಡಳಿತವು, ವ್ಯಕ್ತಿ ಕೇಂದ್ರಿತವಾಗಿ ಬೆಳೆದ ಪಕ್ಷವು ಹೇಗೆ ಶಿಥಿಲಗೊಳ್ಳುತ್ತದೆ ಎನ್ನುವುದಕ್ಕೂ ದೆಹಲಿಯ ಕೇಜ್ರಿವಾಲ್‌ ಅವರ ಈ ಬಾರಿಯ ಚುನಾವಣೆ ಸಂದೇಶ ನೀಡಿದೆ.
ಸ್ವಾತಂತ್ರ್ಯ ಚಳುವಳಿಯ ಬಳಿಕ ಕಾಂಗ್ರೆಸ್‌ ಪಕ್ಷವು ಅನೇಕ ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಜನಪರವಾದ ಕೆಲಸ ಮಾಡಿರುವ ಕಾಂಗ್ರೆಸ್‌ ಅಧಿಕಾರವನ್ನು ಮರಳಿ ಪಡೆಯುತ್ತಲೇ ಇತ್ತು. ಹೀಗಾಗಿ ಬಿಜೆಪಿಗೆ ಕೂಡಾ ಅಧಿಕಾರ ಹಿಡಿಯಲು ಅಷ್ಟೊಂದು ಸುಲಭವಾಗಿರಲಿಲ್ಲ.ಈಗ ಇಡೀ ದೇಶದಲ್ಲಿ ಕೇಸರಿ ಅಲೆ ಇದ್ದರೂ ಅದರ ಹಿಂದೆ ಸಮರ್ಥವಾದ ವಿಪಕ್ಷವಾಗಿ ಕೆಲಸ ಮಾಡಿದ, ಸಮರ್ಥವಾದ ಹೋರಾಟಗಳನ್ನೂ ನಡೆಸಿ ದಾರಿಗಳು ಇವೆ.  ಆದರೆ ಈಗ ಹಾಗಿಲ್ಲ, ಸೋಶಿಯಲ್‌ ಮೀಡಿಯಾ ಕೆಲಸಗಳು ಬಹಳಷ್ಟು ವೇಗವಾಗಿ ಕೆಲಸ ಮಾಡುತ್ತವೆ, ಎಎಪಿ ಹಾಗಾಗಿ ಬಹುಬೇಗನೆ ದೆಹಲಿಯಂತಹ, ಪಂಜಾಬ್‌ನಂತಹ ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಿತು.
ಚುನಾವಣೆಗಳು ಅಂದರೆ ಜನರ ಮತದ ಶಕ್ತಿ. ಕಾಂಗ್ರೆಸ್‌ ಇಡೀ ದೇಶದಲ್ಲಿ ಹೀನಾಯ ಸೋಲು ಕಾಣುತ್ತಿದೆ. ಕೆಲವೇ ಕೆಲವು ಕಡೆ ಆಡಳಿತದಲ್ಲಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ  ಬೃಹತ್‌ ಶಕ್ತಿಯಾಗಿದ್ದ ಬಿಜೆಪಿ ಈ ಬಾರಿ ತನ್ನ ಮಿತ್ರ ಪಕ್ಷಗಳ ಶಕ್ತಿಯನ್ನೂ ಅಧಿಕಾರಕ್ಕೆ ಬಳಸಿಕೊಳ್ಳಬೇಕಾಯಿತು. ಈಗ ಬಿಜೆಪಿ ಮಾತ್ರವೇ ಅಧಿಕಾರ ಅಲ್ಲ, ಮಿತ್ರ ಪಕ್ಷಗಳನ್ನು ಒಳಗೊಂಡ ಆಡಳಿತ. ಹೀಗಾಗಿ ಮೋದಿ ಅವರಿಗೂ ಮೊದಲಿನ ಮಾದರಿಯಲ್ಲಿ ಕೆಲವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿಯೂ ಅಧಿಕಾರದಲ್ಲಿದ್ದ ಬಿಜೆಪಿಯು ತನ್ನದೇ ಆದ ಒಳಜಗಳ ಹಾಗೂ ಕಳಪೆ ಆಡಳಿತ, ಜಾತಿ ರಾಜಕಾರಣದ ಕಾರಣದಿಂದ ಕಳೆದ ಬಾರಿ ಸೋಲು ಕಂಡಿತು.  ಹೀಗಾಗಿ ಅಧಿಕಾರ ಸೋಲು-ಗೆಲುವುಗಳ ಮೂಲಕವೇ ಇರುವುದು. ರಾಜಕೀಯದಲ್ಲಿ ಅಹಂಕಾರವು ಹೇಗೆ ಸರ್ವನಾಶ ಮಾಡುತ್ತದೆ , ಅಧಿಕಾರದಿಂದ ಕೆಳಗಿಳಿಸುತ್ತದೆ ಎನ್ನುವುದಕ್ಕೆ ಈ ಬಾರಿ ದೆಹಲಿಯ ಅರವಿಂದ ಕೇಜ್ರೀವಾಲರು ಉದಾಹರಣೆಯಾಗಿ ಈಗ ನಿಲ್ಲುತ್ತಾರೆ.
ಪ್ರಜಾಪ್ರಭುತ್ವ ದೇಶದಲ್ಲಿ ರಚನಾತ್ಮಕವಾದ ವಿಪಕ್ಷ ಇರಬೇಕು. ಇಡೀ ದೇಶದಲ್ಲಿ ಒಂದೇ ಪಕ್ಷ ಇರುವುದು ಯಾವತ್ತೂ ಅಪಾಯಕಾರಿ. ಆಡಳಿತ ಒಂದೇ ಪಕ್ಷವೇ ಮತ್ತೆ ಮತ್ತೆ ಬರಲಿ, ಅದು ಜನರ ತೀರ್ಮಾನ. ಆದರೆ ಸಮರ್ಥವಾದ ವಿಪಕ್ಷ ಇರುವುದು ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗಿನ ಜನರ, ಮತದಾರರ ದೃಷ್ಟಿಯಿಂದ, ಆಡಳಿತದ ದೃಷ್ಟಿಯಿಂದ ಉತ್ತಮವಾಗಿದೆ.  ವಿಪಕ್ಷ ಎನ್ನುವುದು ಕೇವಲ ಟೀಕೆಗಾಗಿ ಅಲ್ಲ, ಕೇವಲ ವಿರೋಧಕ್ಕಾಗಿ ಅಲ್ಲ, ಜನಪರವಾದ ಆಡಳಿತ ನಡೆಸುವಂತೆ ಮಾಡಿಸಲು ಕೂಡಾ ವಿಪಕ್ಷದ ಜವಾಬ್ದಾರಿ ಇದೆ. ಅದಕ್ಕಾಗಿಯೇ ವಿಪಕ್ಷ ಸ್ಥಾನ ದೊಡ್ಡದು, ಅದಕ್ಕೊಂದು ಗೌರವವೂ ಇದೆ. ಅಂತಹದ್ದೊಂದು ಜವಾಬ್ದಾರಿಯನ್ನು ಈ ಬಾರಿ ಎಎಪಿ ದೆಹಲಿಯಲ್ಲಿ ಮಾಡಿ ತೋರಿಸಲಿ. ದೆಹಲಿಯನ್ನು ಅಭಿವೃದ್ಧಿಯ ಪಥದಲ್ಲಿ ಬಿಜೆಪಿ ಮುನ್ನಡೆಸಲಿ.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ದುಬೈಯಿಂದ ಅಡಿಕೆ ಕಳ್ಳಸಾಗಾಣಿಕೆ ದಂಧೆ | 1.47 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ | 6 ಮಂದಿ ಬಂಧನ |

ದುಬೈಯಿಂದ ಒಣಖರ್ಜೂರ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣವನ್ನು ಡಿಆರ್‌ಐ ಪತ್ತೆ ಮಾಡಿದೆ.26.32…

4 hours ago

ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು

ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…

16 hours ago

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ  ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…

16 hours ago

ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ

ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…

16 hours ago

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…

16 hours ago

15000 ಶಿಕ್ಷಕರ ಶೀಘ್ರ ನೇಮಕ | ಶಿಕ್ಷಣ ಸಚಿವ ಮಧು ಬಂಗಾರಪ್ಪ

ಹದಿನೈದು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಮತ್ತು…

16 hours ago