ಆಮ್ ಆದ್ಮಿ ಪಕ್ಷ (ಎಎಪಿ)ದ ನಾಯಕ ಹಾಗೂ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸೋಮವಾರ ಸಂಜೆ ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ. 8 ವರ್ಷಗಳ ಹಿಂದಿನ ಮುಗಿದ ಪ್ರಕರಣದಲ್ಲಿ ಇದೀಗ ರಾಜಕೀಯ ಪ್ರೇರಿತವಾಗಿ ಬಂಧಿಸಲಾಗಿದೆ ಎಂದು ಎಎಪಿ ಹೇಳಿದೆ.
ಸುಮಾರು 8 ವರ್ಷಗಳ ಹಿಂದಿನ ಕೇಸ್ ಇದಾಗಿದ್ದು ಸತ್ಯೇಂದ್ರ ಜೈನ್ ಅವರು ಅಧಿಕಾರಿಯಾಗಿದ್ದಾಗ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಸತ್ಯೇಂದ್ರ ಜೈನ್ ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಎಪಿ ಮುಖಂಡರು, ಹಿಮಾಚಲ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಮಾಡಲಾಗಿದೆ ಎಂದು ಹೇಳಿದೆ.ಜೈನ್ ಅವರನ್ನು ಹಿಮಾಚಲ ಪ್ರದೇಶ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಏಳು ಬಾರಿ ಇಡಿ ಮುಂದೆ ಹಾಜರಾಗಿದ್ದರು, ಸಿಬಿಐ ಅವರಿಗೆ ಕ್ಲೀನ್ ಚಿಟ್ ನೀಡಿದೆ, ಆದರೆ ಇದೀಗ ರಾಜಕೀಯ ಪ್ರೇರಿತವಾಗಿ ಬಂಧಿಸಲಾಗಿದೆ ಎಂದು ಎಎಪಿ ಹೇಳಿದೆ.
ಈ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ ಎಎಪಿ ಮುಖಂಡ ಮನೀಶ್ ಸಿಸೋಡಿಯಾ, ‘ಸತ್ಯೇಂದ್ರ ಜೈನ್ ವಿರುದ್ಧ ಎಂಟು ವರ್ಷಗಳಿಂದ ಈ ಪ್ರಕರಣ ನಡೆಯುತ್ತಿದೆ. ಇದು ನಕಲಿಯಾಗಿದ್ದು ಈವರೆಗೆ ಹಲವು ಬಾರಿ ಇಡಿ ಕರೆ ಮಾಡಿದೆ. ಆದರೂ ಈ ಪ್ರಕರಣದಲ್ಲಿ ಏನೂ ಸಿಗದ ಕಾರಣ ಕೆಲ ದಿನಗಳಿಂದ ಇಡಿ ಕರೆ ಮಾಡುವುದನ್ನು ನಿಲ್ಲಿಸಿತ್ತು. ಈಗ ಮತ್ತೆ ಶುರುವಾಗಿದೆ. ಏಕೆಂದರೆ ಅವರು ಹಿಮಾಚಲ ಪ್ರದೇಶ ಚುನಾವಣೆಯ ಉಸ್ತುವಾರಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.