ರಾಜ್ಯದಲ್ಲಿ ವಿಪರೀತ ಮಳೆಗೆ ಬೆಳೆಹಾನಿ ಸಂಭವಿಸಿದೆ. ಹೀಗಾಗಿ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿದೆ. ಸರ್ಕಾರವು ಬೆಳೆ ಹಾನಿ ಸಮೀಕ್ಷೆಗೆ ಮುಂದಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಹವಾಮಾನ ವೈಪರಿತ್ಯ ಉಂಟಾಗಿ ಅತಿವೃಷ್ಟಿಯಿಂದ ಈ ಬಾರಿ ರಾಜ್ಯದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರ ಪರಿಹಾರ ನೀಡುವ ಮೂಲಕ ರೈತರಿಗೆ ಆತ್ಮಸ್ಥೈರ್ಯ ನೀಡುವ ಕೆಲಸವನ್ನು ಮಾಡಬೇಕಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್ .ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುಮಾರು 80,000 ಎಕ್ಟರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಯಾಗಿವೆ. ಕೂಡಲೇ ರಾಜ್ಯ ಸರ್ಕಾರ ಪ್ರತಿ ಹಳ್ಳಿ ಹಳ್ಳಿಗಳ ಅತಿವೃಷ್ಟಿ ಹಾನಿಯ ಬಗ್ಗೆ ಮಾಹಿತಿ ಪಡೆದು ರೈತರಿಗೆ ನೆರವಾಗಬೇಕು ಎಂದರು.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಅಪಾರ ಹಾನಿಯಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಬಿಜೆಪಿ ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಳೆದ ವರ್ಷ ಬರ ಪರಿಹಾರ ವಿತರಣೆ ವೇಳೆ ಉಂಟಾದ ಎಡವಟ್ಟುಗಳು ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ. ಬೆಳೆ ಹಾನಿ ಸಮೀಕ್ಷೆಯನ್ನು ಸಮಾರೋಪಾದಿಯಲ್ಲಿ ನಡೆಸಿ, ಒಂದು ವಾರದೊಳಗೆ ಪರಿಹಾರದ ಹಣ ರೈತರ ಕೈಸೇರುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಾರದೊಳಗಡೆ ಪರಿಹಾರ ಹಣ ಕೈಸೇರಿದರೆ, ರೈತರು ದೀಪಾವಳಿ ಹಬ್ಬವನ್ನು ನೆಮ್ಮದಿಯಿಂದ ಆಚರಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.