Advertisement
ಅನುಕ್ರಮ

ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ

Share

ಭಾರತ ಈಗ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಆರ್ಥಿಕವಾಗಿಯೂ ಮೂರನೇ ಸ್ಥಾನಕ್ಕೆ ಕಣ್ಣಿಟ್ಟಿರುವ ರಾಷ್ಟ್ರ. ಸದ್ಯ, ಅಂದರೆ 2025 ರ ಎಪ್ರಿಲ್-ಮೇ ತಿಂಗಳಲ್ಲಿ, ಪಾಕಿಸ್ಥಾನದ ವಿರುದ್ಧ ಮಾಡಬೇಕಾದ ಯುದ್ಧದಲ್ಲೂ ಅತ್ಯಂತ ಬಲಿಷ್ಟ ರಾಷ್ಟ್ರವೆಂದು ಸಾಬೀತು ಪಡಿಸಿದೆ. ಭಾರತದ ಸ್ವನಿರ್ಮಿತ ಶಸ್ತ್ರಾಸ್ತ್ರಗಳಿಗೆ ಪ್ರಸ್ತುತ ಈ ಯುದ್ಧವೇ ಜಾಹಿರಾತು ಆಗಿ ಸಂಭವಿಸಿರುವುದು ಸಾಧಾರಣದ ಹಿರಿಮೆಯಲ್ಲ. ಸ್ವದೇಶೀ ಉತ್ಪಾದನೆಯಾಗಿರುವ ಬ್ರಹ್ಮೋಸ್ ಕ್ಷಿಪಣಿಗಳು ಕರಾರುವಾಕ್ಕಾಗಿ ಶತ್ರುಗಳ ಅಡಗುದಾಣಗಳ ಮೇಲೆ ಗುರಾಣಿಗಳಾಗಿ ಎರಗಿ ಸರ್ವನಾಶ ಮಾಡಿದ ಸಾಕ್ಷಿಗಳಿವೆ. ಇಂದು ವಿಶ್ವದ ರಾಷ್ಟ್ರಗಳಿಗೆ ನಾವು ಯಾರು ಮತ್ತು ನಮ್ಮ ಚಹರೆ ಏನು ಎಂದು ತಿಳಿಸಲು ನಮ್ಮದೇ ರಾಜತಾಂತ್ರಿಕ ತಂಡಗಳನ್ನು ಕಳಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಪ್ರಾಯೋಗಿಕ ಪ್ರಯೋಜನವನ್ನು ದಾಖಲಿಸಿದ್ದೇವೆ. ಈ ತಂಡಗಳಲ್ಲಿ ವಿರೋಧ ಪಕ್ಷಗಳ ಸಂಸದರನ್ನು ನಾಯಕರಾಗಿಯೂ ನೇಮಿಸಲಾಗಿದೆ. ಇದು ಪ್ರಜಾಪ್ರಭುತ್ವ ತತ್ವಕ್ಕೆ ನೀಡಿದ ಮಹಾಮನ್ನಣೆಯಾಗಿದೆ. ಈ ರಾಜತಾಂತ್ರಿಕ ತಂಡಗಳ ಅಭಿಯಾನಕ್ಕೆ ತಗಲುವ ವೆಚ್ಚ ಅದೆಷ್ಟಿದೆಯೋ ಏನೋ! ಆದರೆ ಅದರಿಂದ ಆಗುವ ಲಾಭವೆಂದರೆ ದೇಶದ ವಿಷಯ ಬಂದಾಗ ಎಲ್ಲರೂ ಒಂದೇ ಇದ್ದಾರೆಂಬ ಭಾವನೆಯ ಪ್ರಸರಣ. ಬಾಹ್ಯ ಶಕ್ತಿಗಳು ಭಾರತದೊಂದಿಗೆ ಸಖ್ಯವನ್ನು ಬೆಳೆಸುವಲ್ಲಿ ಇರುವ ಲಾಭಗಳನ್ನು ಪರಿಗಣಿಸುವುದಲ್ಲದೆ ಪಾಕಿಸ್ಥಾನದ ಮುಖವಾಡ ಕಳಚಿ ಮುಂದಿನ ದಿನಗಳಲ್ಲಿ ನಮ್ಮ ಶತ್ರು ರಾಷ್ಟ್ರವು ಭಯೋತ್ಪಾದನೆಯ ನೆಲೆಯಾಗದಂತೆ ತಡೆಯುವ ತಂತ್ರಗಾರಿಕೆಯಾಗಿದೆ. ಈ ದೃಷ್ಠಿಯಿಂದ ಭಾರತದ ಪ್ರಜಾಪ್ರಭುತ್ವವು ನಿಜ ಅರ್ಥದಲ್ಲಿ ತನ್ನ ಸ್ವರೂಪವನ್ನು ತೆರೆದಿಟ್ಟಿದೆ.

ನಮ್ಮ ರಾಷ್ಟ್ರದ ಹೊರಮೈಯ ದಿರಿಸನ್ನು ಹೀಗೆ ಎಷ್ಟೇ ಸುಂದರಗೊಳಿಸಿದರೂ ನಮ್ಮ ಒಳಮೈಯ ಗಾಯಗಳ ಉರಿ ಕಡಿಮೆಯಾಗುವ ಲಕ್ಷಣ ಕಾಣುವುದಿಲ್ಲ. ಭಯೋತ್ಪಾದನೆಯನ್ನು ಯುದ್ಧವೆಂದೇ ಪರಿಗಣಿಸಿ ಪ್ರತೀಕಾರ ಮಾಡುವುದಾಗಿ ನಮ್ಮ ಪ್ರಧಾನಿಯವರು ಹೇಳಿ ಪಾಕಿಸ್ಥಾನದಲ್ಲಿರುವ ಭಯೋತ್ಪಾದಕರ ಅಡಗುದಾಣಗಳನ್ನು ಹುಡಿಗುಟ್ಟಿದಾಗ ಒಮ್ಮೆ “ನಾವೂ ಸರಕಾರದೊಂದಿಗೆ ಇದ್ದೇವೆ” ಎಂದು ವಿರೋಧ ಪಕ್ಷಗಳ ನಾಯಕರು ಹೇಳಿದಾಗ ಅವರು ಈ ಹಿಂದಿನಂತೆ ಆಕ್ರಮಣದ ಸಾಕ್ಷಿಗಳನ್ನು ಕೇಳುವುದಿಲ್ಲ ಎಂಬ ಅಭಿಪ್ರಾಯ ಜನರಲ್ಲಿ ಮೂಡಿತು. ಅಲ್ಲದೆ ವಿರೋಧ ಪಕ್ಷಗಳ ಕೆಲವು ನಾಯಕರು, ಸಂಸದ ಶಶಿ ತರೂರ್‍ರಂತಹ ಕಾಂಗ್ರೆಸ್ ಮುಂದಾಳುಗಳು, ಮುಕ್ತವಾಗಿ ಸರಕಾರದ ನಿರ್ಧಾರಗಳನ್ನು ಸಮ್ಮತಿಸಿ ದೇಶದ ಏಕತೆಯನ್ನು ಪ್ರತಿಪಾದಿಸುವ ಚಿತ್ರಣ ನೀಡಿದರು. ಆದರೆ ತರೂರ್‍ರವರು ವಿದೇಶಗಳಿಗೆ ಭೇಟಿ ನೀಡುವ ರಾಜತಾಂತ್ರಿಕ ತಂಡದ ನಾಯಕರಾಗಿ ಆಯ್ಕೆಯಾಗುತ್ತಲೇ ಕಾಂಗ್ರೆಸ್ ಪಕ್ಷದ ನಾಯಕರು ಏಕಾಏಕಿಯಾಗಿ ತಮ್ಮ ವರಸೆಯನ್ನು ಬದಲಿಸಿದರು. ಯುದ್ಧದಲ್ಲಿ ಭಾರತಕ್ಕೆ ಆಗಿರುವ ಹಾನಿಯಲ್ಲಿ ವಿಮಾನಗಳ ನಷ್ಟ, ಸೈನಿಕರ ಸಾವು ಇತ್ಯಾದಿಗಳ ಲೆಕ್ಕ ಕೇಳತೊಡಗಿದರು. ಅದೂ ಬಾಲಿಷ ಭಾಷೆಯಲ್ಲಿ “ಏನೋ ಛುಟ್ ಪುಟ್ ಯುದ್ಧ ಮಾಡಿ ನಮ್ಮ ಪಾಕಿಸ್ಥಾನ ಗೆದ್ದಿದ್ದಾರೆ” ಎಂದು ಹೇಳುವಲ್ಲಿಯ ತನಕ ತಮ್ಮೊಳಗಿನ ಕಹಿಯನ್ನು ಉಗುಳಿದ್ದಾರೆ. ಪಾಕಿಸ್ಥಾನದ ಮೇಲೆ ಪ್ರೀತಿ ಮತ್ತು ಭಯೋತ್ಪಾದಕರ ಬಗ್ಗೆ ಅನುಕಂಪ ಇರುವ ಮನೋಭಾವವು ಯುದ್ಧದ ಸಮಯದಲ್ಲಿಯೂ ನಿಯಂತ್ರಣಕ್ಕೆ ಬರುವುದಿಲ್ಲ ಯಾಕೆ? ಇದಕ್ಕೇನು ಕಾರಣವೆಂದು ಹುಡುಕಿದರೆ ಸಿಗುವ ಉತ್ತರ ಒಂದೇ-‘ನಿಜವಾದ ಪ್ರಜಾಪ್ರಭುತ್ವವನ್ನು ನಾವು ಬರಮಾಡಿ ಕೊಂಡಿಲ್ಲ, ಬದಲಿಗೆ ನಮಗೆ ದಕ್ಕಿರುವುದು ಛದ್ಮವೇಷದ ಪ್ರಜಾಪ್ರಭುತ್ವ ಮಾತ್ರ’. ಅದು ತಾತ್ವಿಕವಾಗಿ ಪ್ರಜಾಪ್ರಭುತ್ವವೇ ಆದರೂ ಅದರ ಸಂರಚನೆಯಲ್ಲಿ ಪಾಳೆಗಾರಿಕೆ, ಶ್ರೀಮಂತಿಕೆ, ಭೂಮಾಲಕತ್ವ, ಮತಧರ್ಮ, ಜಾತಿಯ ಪ್ರಾಬಲ್ಯ, ಪರಿವಾರವಾದ ಮುಂತಾದವು ಪ್ರಾಮುಖ್ಯ ಪಡೆದಿವೆ. ಹಾಗಾಗಿ ಸರ್ವಸಮಾನತೆ ಎಂಬುದು ತಾತ್ವಿಕವಾಗಿ ಹೇಳಲಾಗುತ್ತದೆಯೇ ಹೊರತು ಅದರ ವಾಸ್ತವಿಕ ಅನ್ವಯಿಕತೆಯ ನಿರೀಕ್ಷೆಯೇ ಇಲ್ಲವಾಗಿದೆ. ಬಡವರಿಗೆ, ಹಳ್ಳಿಗರಿಗೆ, ದಲಿತರಿಗೆ, ನಿರಕ್ಷಕ ಕುಕ್ಷಿಗಳಿಗೆ, ನಿರುದ್ಯೋಗಿಗಳಿಗೆ ಸಮಾನತೆಯೆಂಬುದು ಮತದಾನದ ಸಂದರ್ಭದಲ್ಲಿ ಮಾತ್ರವೇ ಹೊರತು ಮತ್ತೆಲ್ಲೂ ಕಾಣಿಸುತ್ತಿಲ್ಲ. ಹಾಗಾಗಿ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರಕಾರವು ಧರಿಸಿರುವ ಛದ್ಮವೇಷವನ್ನು ಕಳಚುವವರು ಯಾರೂ ಇಲ್ಲ.
ರಾಜಪ್ರಭುತ್ವ ಅಥವಾ ಸೈನ್ಯ ಪ್ರಭುತ್ವ ಇರುವಲ್ಲಿ ರಾಜಸ್ವ ಅಥವಾ ತೆರಿಗೆ ಹಣವು ದಂಡನಾಯಕರು, ಮಾಂಡಲಿಕರು, ಪಾಳೆಗಾರರು ಮತ್ತು ಸೈನಿಕರ ನಡುವೆ ವಿವಿಧ ಹಂತಗಳಲ್ಲಿ ಹಂಚಿ ಹೋಗುತ್ತದೆ. ಈ ಹಂಚೋಣದ ನಿರ್ಧಾರವು ರಾಜನ ಕೈಯಲ್ಲೇ ಇರುತ್ತದೆ. ಅದರ ಬಗ್ಗೆ ಜನರು ನ್ಯಾಯಾನ್ಯಾಯ ವಿಚಾರಿಸುವಂತಿಲ್ಲ. ಎಲ್ಲವೂ ಮೇಲಿನವರ ಒಪ್ಪಿಗೆಯಿಂದಲೇ ಆಗುತ್ತದೆ. ಇಂತಹ ಒಪ್ಪಿಗೆಯು ರಾಜ ಪ್ರತಿನಿಧಿಗಳು ಪ್ರದರ್ಶಿಸುವ ವೈಯಕ್ತಿಕ ವರ್ಚಸ್ಸು ಮತ್ತು ಧೈರ್ಯ-ಸಾಹಸಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ ಇಬ್ಬರು ಪಾಳೇಗಾರರು ಸಮಾನ ಸಂಪತ್ತನ್ನು ಸೂರೆ ಮಾಡುತ್ತಾರೆಂದಿಲ್ಲ. ಅದು ಅವರವರ ತಾಕತ್ತಿಗೆ ಬಿಟ್ಟದ್ದು. ಹಾಗಾಗಿ ಪ್ರಜೆಗಳು ತಮ್ಮ ಅನುಕೂಲಕ್ಕಾಗಿ ಪ್ರಬಲ ಪಾಳೆಗಾರರನ್ನೇ ಓಲೈಸುತ್ತಾರೆ. ಅರ್ಥಾತ್ ಜನರ ಓಲೈಕೆಯನ್ನು ಪಡೆಯುವುದೇ ಆಡಳಿತದ ವರ್ತುಲಗಳಲ್ಲಿರುವವರ ಸಾಮಥ್ರ್ಯದ ಮಾಪಕವಾಗುತ್ತದೆ. ಇಂದು ನಮ್ಮ ಪ್ರಜಾಪ್ರಭುತ್ವದಲ್ಲಿಯೂ ಆಗುತ್ತಿರುವುದು ಇದೇ.

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟವು ಜನರ ಸಂಘಟನಾತ್ಮಕ ಶಕ್ತಿಯ ಮೂಲಕ ಜರಗಿತು. ಆ ಸಂಘಟನೆಯನ್ನು ಕಾಂಗ್ರೆಸ್ ಎಂದು ಹೆಸರಿಸಲಾಗಿತ್ತು. ಬ್ರಿಟಿಷರು ಸ್ವಾತಂತ್ರ್ಯವನ್ನು ಭಾರತದ ಜನರಿಗೆ ಕೊಟ್ಟರೂ ಕೂಡಾ ರಾಜಕಾರಣಿಗಳು ಅದನ್ನು ಕಾಂಗ್ರೆಸ್ಸಿಗೆ ಕೊಟ್ಟದ್ದೆಂದು ತಿಳಿದರು. ಹೀಗಾಗಿ ಅಧಿಕಾರವನ್ನು ಬಳಸಿ ಸಂಪತ್ತು ಮಾಡಬಹುದೆಂಬ ಜಾಣ್ಮೆ ಇದ್ದವರು ಮಂತ್ರಿಗಳಾದರು. ಸೇವೆ, ಸಹಕಾರ, ಸರ್ವೋದಯ ಎಂಬ ಮೌಲ್ಯಗಳ ಪ್ರತಿಪಾದನೆಯಲ್ಲಿ ಸುಖ ಕಂಡವರು ಸುದ್ದಿ ಇಲ್ಲದೆ ಸಮಾಧಿಯಾದರು. ಈ ಛದ್ಮವೇಷದ ಪ್ರಜಾಪ್ರಭುತ್ವದಲ್ಲಿ ದಂಡನಾಯಕರಂತಿದ್ದವರು ಮಂತ್ರಿಗಳಾದರು, ಮಾಂಡಲಿಕರಂತಿದ್ದವರು ಆಯೋಗಗಳ ಮತ್ತು ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರುಗಳಾದರು. ಅಧಿಕಾರಶಾಹಿ ವರ್ಗದಲ್ಲಿರುವವರು ಪಾಳೇಗಾರರ ವರ್ತನೆಗಳನ್ನು ತಮ್ಮದಾಗಿಸಿಕೊಂಡರು. ಶಾಂತಿ ಕಾಪಾಡುವ ಪೊಲೀಸರು ರಾಜರ ಸೈನ್ಯದಂತೆ ಬದಲಾದರು. ಹೀಗಾಗಿ ಇಂದಿನ ಪ್ರಜಾಪ್ರಭುತ್ವವೆಂಬುದು ತಪ್ಪಿತಸ್ಥನನ್ನು ಅಧಿಕಾರದಿಂದ ಇಳಿಸಲಾಗದ ದಯನೀಯ ಸ್ಥಿತಿಯಲ್ಲಿದೆ. ಅಭಿವೃದ್ಧಿ ನಿಗಮಗಳು, ಪ್ರಾಧಿಕಾರಗಳು, ಆಯೋಗಗಳು ಹಾಗೂ ಅಕಾಡೆಮಿಗಳಲ್ಲಿ ನಡೆಯುವ ಆರ್ಥಿಕ ಅಪರಾಧಗಳನ್ನು ವಿಚಾರಿಸಿ ದುರುಳರನ್ನು ನೆಲಕ್ಕಿಳಿಸುವ ಸಾಮಥ್ರ್ಯ ನಮ್ಮ ಪ್ರಜೆಗಳಿಗಿಲ್ಲ. ಇತ್ತೀಚೆಗೆ ನ್ಯಾಯಾಲಯಗಳು ಕೂಡಾ ತಮ್ಮ ವರ್ಚಸ್ಸನ್ನು ಕಳೆದುಕೊಂಡಿರುವುದು ಪ್ರಜೆಗಳ ದೌರ್ಬಲ್ಯವನ್ನು ಹೆಚ್ಚಿಸಿದೆ. ಮತ್ತೆ ಪ್ರಜಾಪ್ರಭುತ್ವ ಎಂಬ ಶಬ್ದಕ್ಕೆ ಏನು ಬೆಲೆ?

ಕರ್ನಾಟಕದ ಬಗ್ಗೆ ನೋಡಿದರೆ ವಿಧಾನಸೌಧ, ವಿಕಾಸಸೌಧ ಮತ್ತು ರಾಜಭವನಗಳನ್ನು ಸೇರಿದಂತೆ ಶಕ್ತಿಕೇಂದ್ರದ ಒಂದು ವರ್ತುಲವಿದೆ. ಒಮ್ಮೆ ಶಾಸಕರಾಗಿ ಅದರಲ್ಲಿ ನುಗ್ಗಿದವರು ಮಾಜಿಗಳಾದ ಬಳಿಕವೂ ಆಗಾಗ ಅಲ್ಲಿಗೆ ಹೋಗಿ ಬರುತ್ತಿರುತ್ತಾರೆ. ಅವರನ್ನು ಬಾಗಿಲ ಭಟರು ತಡೆಯುವುದಿಲ್ಲ. ಎರಡನೇ ವರ್ತುಲದಲ್ಲಿ ಐ.ಎ.ಎಸ್. ಮತ್ತು ಐ.ಪಿ.ಎಸ್. ಅಧಿಕಾರಿಗಳು ಇದ್ದಾರೆ. ಇವರಿಗೆ ತಾಗಿಕೊಂಡೇ ದೊಡ್ಡ ಉದ್ಯಮಿಗಳ ವರ್ತುಲ ಇರುತ್ತದೆ. ಈ ಮೂರು ವಲಯಗಳಲ್ಲಿ ಕಾಫಿ ಹಂಚುವವನೂ ಪ್ರಭಾವಶಾಲಿಯಾಗಿರುತ್ತಾನೆ. ಇವುಗಳಿಂದ ಹೊರಗಿನ ವರ್ತುಲದಲ್ಲಿ ವಿವಿಧ ನಿರೀಕ್ಷೆಗಳನ್ನಿಟ್ಟುಕೊಂಡ ಪ್ರಜಾವರ್ಗ ಇದೆ. ಇದರಲ್ಲೂ ವಿವಿಧ ಹಂತಗಳಿವೆ. ಅರ್ಥಾತ್ ಭಾರತದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಸಮಾನರೂ ಅಲ್ಲ, ರಾಜಕಾರಣವನ್ನು ನಿರ್ಧರಿಸುವ ಪ್ರಭುಗಳೂ ಅಲ್ಲ.

ಎಲ್ಲಿ ಜನಸಾಮಾನ್ಯರಿಗೆ ಸುಲಭದಲ್ಲಿ ಪ್ರವೇಶ ಇಲ್ಲವೋ ಅಲ್ಲಿಂದ ಅನುದಾನಗಳನ್ನು ಪಡೆಯುವುದು ಅವರಿಂದ ಸಾಧ್ಯವಾಗುವುದಿಲ್ಲ. ಬದಲಿಗೆ ಯಾವುದೇ ಸರಕಾರಿ ಸಹಾಯವನ್ನು ಪಡೆಯಲು ಸಾಧ್ಯವಿಲ್ಲವೆಂಬ ತೊಂದರೆಗಳ ಪಟ್ಟಿಯನ್ನು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಅಲ್ಲಿ ನಿಜವಾಗಿ ನಿಯಮಗಳನ್ನು ಮೀರಿ ಅಧಿಕಾರಸ್ಥರು ಹೇಗೆ ಮತ್ತು ಎಷ್ಟು ಅನುದಾನ ಪಡೆಯುತ್ತಾರೆಂದು ತಿಳಿಯಲು ಮಾಹಿತಿ ಹಕ್ಕಿನ ಮೂಲಕವೇ ಪ್ರಯತ್ನಿಸಬೇಕು. ಅಂತಹ ರಿಸ್ಕ್ ತೆಗೆದುಕೊಳ್ಳಬಲ್ಲವರಷ್ಟೇ ಇಂದು ವಿಧಾನಸಭೆಯ ಪಡಸಾಲೆಯಲ್ಲಿ ಜರಗುವ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತಾರೆ. ಮೂಡಾ ಕೇಸ್ ಬೆಳಕಿಗೆ ಬಂದದ್ದು ಅಂತಹವರಿಂದಲೇ. ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ತೆರಿಗೆ ವಸೂಲಿ ಬಾಕಿಯಿಂದಾಗಿ ಆದ ಸಮಸ್ಯೆಗಳನ್ನು ಭದ್ರಾವತಿಯ ಮಹಾಂತೇಶ್ ಎಂಬುವರು ಬಯಲಿಗೆಳೆದಿದ್ದಾರೆ. ಇವರು ಮೇಲಿಂದ ಮೇಲೆ ಫೇಸ್‍ಬುಕ್‍ನಲ್ಲಿ ಇಂತಹ ಗುಪ್ತ ದಾಖಲೆಗಳ ವಿವರಗಳನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದು ಪ್ರಕಟಿಸುತ್ತಾರೆ. ಇತ್ತೀಚೆಗೆ ಅವರು ಸನ್ಮಾನ್ಯ ಖರ್ಗೆಯವರಿಗೆ ಸೇರಿದ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯವರು ಹೇಗೆ ಸರಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆದರು ಎಂಬುದನ್ನು ಆಧಾರ ಸಹಿತ ವಿವರಿಸಿದ್ದಾರೆ. ಸಾಮಾನ್ಯವಾಗಿ ದಲಿತ ಸಮುದಾಯದ ಶೈಕ್ಷಣಿಕ ಸಂಸ್ಥೆಗಳಿಗೆ ಸಿಗದ ಅನುದಾನವು ಖರ್ಗೆ ಕುಟುಂಬದ ಸಂಸ್ಥೆಗಳಿಗೆ ತಲುಪಿದೆ. ಅದಕ್ಕೆ ಮಂತ್ರಿಗಳೇ ಶಿಫಾರಸು ನೀಡಿದ್ದಾರೆ. ಇಂತಹ ಮಾಹಿತಿಗಳನ್ನು ಪ್ರಕಟಿಸುತ್ತಿರುವ ಮಹಾಂತೇಶರ ಲೇಖನಗಳಿಗೆ ಗಮನ ಕೊಡುವವರು ಕಡಿಮೆ ಇದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಹಣದ ದುರುಪಯೋಗದಂತೆಯೇ ಇನ್ನಿತರ ನಿಗಮಗಳಲ್ಲಿ ಭ್ರಷ್ಟಾಚಾರಗಳು ಆಗುತ್ತಿವೆ. ಏಕೆಂದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರತಿಕ್ರಿಯಾತ್ಮಕ ಚಳುವಳಿಗಳು ಸಪ್ಪೆಯಾಗಿರುವುದಷ್ಟೇ ಅಲ್ಲ, ಅವು ಜರಗುವುದೇ ಇಲ್ಲ. ಈ ಬಗೆಯ ಅನಾಸಕ್ತಿ ಮುಂದುವರಿದರೆ ಪ್ರಜಾಪಭುತ್ವವು ಮರುಜೀವ ಪಡೆಯದೆ ರಾಜಾಧಿಪತ್ಯದ ಛಾಯೆಯಾಗಿಯೇ ಅದು ಮುಂದುವರಿಯಲಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ

ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…

38 minutes ago

ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ

ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್‌, ಟಿಎಸ್‌ಎಸ್‌, ತುಮ್ಕೋಸ್‌, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…

1 hour ago

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ

ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…

3 hours ago

ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ

ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…

3 hours ago

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!

ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…

15 hours ago

ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…

1 day ago