ಮಳೆಗಾಲ ಆರಂಭವಾಯಿತು ಅಂದರೆ ಸಾಕು ಎಲ್ಲೆಂದರಲ್ಲಿ ಡೆಂಗ್ಯೂ ಜ್ವರ ಭೀತಿ. ಇದು ಮಾರಣಾಂತಿಕ ಕಾಯಿಲೆ ಅಲ್ಲದಿದ್ರೂ, ಎಚ್ಚರ ತಪ್ಪಿದರೆ ಅಪಾಯವೂ ಖಚಿತ. ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದು ಇದೆ. ಈ ಕಾಯಿಲೆಗೆ ಇಂಥದ್ದೇ ಆದ ನಿರ್ಧಿಷ್ಠ ಲಸಿಕೆ ಅಂತ ಇಂದಿನವರೆಗೆ ಇರಲಿಲ್ಲ. ಆದರೆ ಈಗ ಕೋವಿಶೀಲ್ಡ್ ಲಸಿಕೆ ತಯಾರಿಸುವ ಕಂಪನಿಯಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಶೀಘ್ರದಲ್ಲೇ ಡೆಂಗ್ಯೂಗೆ ಲಸಿಕೆಯನ್ನು ಬಿಡುಗಡೆ ಮಾಡಲಿದೆ.
ಮುಂದಿನ ಒಂದು ವರ್ಷದಲ್ಲಿ ಲಸಿಕೆ ಬಿಡುಗಡೆ ಮಾಡಲಾಗುವುದು, ಇದು ಡೆಂಗ್ಯೂಗೆ ಪರಿಣಾಮಕಾರಿಯಾಗಿರುತ್ತದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಧ್ಯಕ್ಷ ಸೈರಸ್ ಪೂನಾವಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಂಪನಿಯು ಶೀಘ್ರದಲ್ಲೇ ಮಲೇರಿಯಾಕ್ಕೆ ಲಸಿಕೆಯನ್ನು ಪ್ರಾರಂಭಿಸಲಿದೆ. ಈ ಲಸಿಕೆ ಭಾರತದಲ್ಲಿ ಮಾತ್ರವಲ್ಲದೇ ಮಲೇರಿಯಾ ಪ್ರಕರಣಗಳು ಕಂಡುಬರುವ ಆಫ್ರಿಕಾದಲ್ಲಿಯೂ ಸಹಕಾರಿಯಾಗಲಿದೆ ಎಂದರು. ಈ ಬಗ್ಗೆ ಮಾತನಾಡಿದ ಪೂನಾವಾಲಾ, “ಕೋವಿಶೀಲ್ಡ್ ಯಶಸ್ಸಿನ ನಂತರ, SII ವಿಶ್ವದಲ್ಲೇ ಮೊದಲ ಬಾರಿಗೆ ಮಲೇರಿಯಾ ಲಸಿಕೆಯನ್ನು ಪ್ರಾರಂಭಿಸುತ್ತಿದೆ.
ಭಾರತದ ಅನೇಕ ಭಾಗಗಳಲ್ಲಿ ಜನರು ಹೆಚ್ಚಾಗಿ ಮಲೇರಿಯಾ ಸೋಂಕಿಗೆ ಒಳಗಾಗುತ್ತಾರೆ. ಹೀಗಿರುವಾಗ ಎಸ್ಐಐ ಡೆಂಗ್ಯೂಗೆ ಲಸಿಕೆ ಸಿದ್ಧಪಡಿಸುತ್ತಿದೆ ಎಂದು ಅವರು ಹೇಳಿದರು.ಇದು ಸೊಳ್ಳೆಗಳ ಮೂಲಕ ಜನರಿಗೆ ಹರಡುವ ಮತ್ತೊಂದು ವೈರಲ್ ಸೋಂಕು. ಒಂದು ವರ್ಷದಲ್ಲಿ ಡೆಂಗ್ಯೂಗೆ ಲಸಿಕೆ ಸಿದ್ಧವಾಗಲಿದೆ ಎಂದರು. ಮಲೇರಿಯಾ ಮತ್ತು ಡೆಂಗ್ಯೂ ಎರಡೂ ವಾಹಕಗಳಿಂದ ಹರಡುವ ರೋಗಗಳಾಗಿದ್ದು, ಉಷ್ಣವಲಯದ ಮತ್ತು ಉಪೋಷ್ಣವಲಯದ ದೇಶಗಳಲ್ಲಿ ಹರಡುವ ಸಾಧ್ಯತೆಯಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದ ನಂತರ SII ಕೋವಿಶೀಲ್ಡ್ ಲಸಿಕೆಯನ್ನು ಸಹ ತಯಾರಿಸಿತ್ತು ಎಂಬುವುದು ಉಲ್ಲೇಖನೀಯ.
ಅನೇಕ ವರ್ಷಗಳಿಂದ ಸೀರಮ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳು ಡೆಂಗ್ಯೂ ಹಾಗೂ ಮಲೇರಿಯಾ ರೋಗಗಳ ವಿರುದ್ಧ ಹೋರಾಡಲು ಲಸಿಕೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಲಸಿಕೆ ತಯಾರಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಸೀರಮ್ ವಿಜ್ಞಾನಿಗಳು ಡೆಂಗ್ಯೂ ಮತ್ತು ಮಲೇರಿಯಾ ಹಾಗೂ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅವರು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗೆ ಲಸಿಕೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
Source: Digital media